ಕೊಪ್ಪಳ ಹಾಲಿ ಸಂಸದ ಕರಡಿ ಸಂಗಣ್ಣಗೆ ಟಿಕೆಟ್ ಮಿಸ್; ಸಂಸದನ ಮನೆಯಲ್ಲಿ ಬೆಂಬಲಿಗರಿಂದ ಸಭೆ, ಮುಂದಿನ ನಡೆ ಬಗ್ಗೆ ಚರ್ಚೆ
ಕೊಪ್ಪಳದ ಹಾಲಿ ಬಿಜೆಪಿ ಸಂಸದ ಕರಡಿ ಸಂಗಣ್ಣಗೆ ಟಿಕೆಟ್ ಮಿಸ್ ಆಗಿದೆ. ಇದು ಕರಡಿ ಸಂಗಣ್ಣ ಬೆಂಬಲಿಗರ ಆಕ್ರೋಶಕ್ಕೆ ಕಾರಣವಾಗಿದೆ. ಒಂದಡೆ ಕೆಲ ಕಾರ್ಯಕರ್ತರು ಕಣ್ಣೀರು ಹಾಕಿದ್ದಾರೆ, ಇನ್ನು ಕೆಲ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸದ್ಯ ಇಂದು ಕರಡಿ ಸಂಗಣ್ಣ ಅವರ ಮನೆಯಲ್ಲಿ ಬೆಂಬಲಿಗರಿಂದ ಸಭೆ ನಡೆಯಲಿದ್ದು ಮುಂದಿನ ನಡೆ ಬಗ್ಗೆ ಚರ್ಚೆಯಾಗಲಿದೆ.
ಕೊಪ್ಪಳ, ಮಾರ್ಚ್.14: ಲೋಕಸಭಾ ಚುನಾವಣೆಯಲ್ಲಿ (Lok Sabha Election) ಗೆದ್ದು ಮತ್ತೊಮ್ಮೆ ಅಧಿಕಾರ ಹಿಡಿಯಬೇಕು ಅನ್ನೋ ಉದ್ದೇಶದಿಂದ ಬಿಜೆಪಿ (BJP) ಅಳೆದು ತೂಗಿ ಟಿಕೆಟ್ ಘೋಷಣೆ ಮಾಡಿದೆ. ಬಿಎಸ್ ಯಡಿಯೂರಪ್ಪನವರ ಕಟ್ಟಾ ಬೆಂಬಲಿಗರಾಗಿದ್ದ ಕೊಪ್ಪಳದ ಹಾಲಿ ಬಿಜೆಪಿ ಸಂಸದ ಕರಡಿ ಸಂಗಣ್ಣಗೆ (Karadi Sanganna) ಟಿಕೆಟ್ ಮಿಸ್ ಆಗಿದೆ. ಅಮಿತ್ ಶಾ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದ ಡಾ. ಕೆ ಬಸವರಾಜ್ಗೆ ಟಿಕೆಟ್ ಸಿಕ್ಕಿದೆ. ಇದು ಕರಡಿ ಸಂಗಣ್ಣ ಬೆಂಬಲಿಗರ ಆಕ್ರೋಶಕ್ಕೆ ಕಾರಣವಾಗಿದೆ. ಟಿಕೆಟ್ ಸಿಗದೇ ಇದ್ದಿದ್ದಕ್ಕೆ ಸಂಗಣ್ಣ ಬೆಂಬಲಿಗರು ಮುನಿಸಿಕೊಂಡಿದ್ದಾರೆ. ಹೀಗಾಗಿ ಇಂದು ಮಧ್ಯಾಹ್ನ ಸಭೆ ನಡೆಸಲು ಬೆಂಬಲಿಗರು ಮುಂದಾಗಿದ್ದಾರೆ.
ಕೊಪ್ಪಳ ಲೋಕಸಭಾ ಸಧಸ್ಯರಾಗಿ ಕಳೆದ ಹತ್ತು ವರ್ಷಗಳಿಂದ ಕರಡಿ ಸಂಗಣ್ಣ ಸೇವೆ ಸಲ್ಲಿಸುತ್ತಿದ್ದಾರೆ. ಮೂರನೇ ಬಾರಿ ಕೂಡಾ ಕೊಪ್ಪಳ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಸಿಗುತ್ತದೆ ಎಂಬ ಭರವಸೆಯಲ್ಲಿದ್ದರು. ಆದರೆ ಬಿಜೆಪಿ ಹೈ ಕಮಾಂಡ್ ಶಾಕ್ ಕೊಟ್ಟಿದೆ. ಇದಕ್ಕೆ ಸಂಗಣ್ಣ ಬೆಂಬಲಿಗರು ಆಕ್ರೋಶಗೊಂಡಿದ್ದು ಇಂದು ಕರಡಿ ಸಂಗಣ್ಣ ಮನೆಯಲ್ಲಿ ಸಭೆ ಸೇರಿ, ಚರ್ಚಿಸಲು ಮುಂದಾಗಿದ್ದಾರೆ. ಬಿಜೆಪಿ ಅಭ್ಯರ್ಥಿ ಬದಲಾಯಿಸಬೇಕು. ಹಾಲಿ ಸಂಸದ ಕರಡಿ ಸಂಗಣ್ಣ ಅವರಿಗೇನೆ ಟಿಕೆಟ್ ನೀಡಬೇಕು ಅಂತ ಬೆಂಬಲಿಗರು ಆಗ್ರಹಿಸುತ್ತಿದ್ದಾರೆ. ಇಂದು ನಡೆಯಲಿರುವ ಸಭೆಯಲ್ಲಿ ಮುಂದಿನ ನಡೆ ಬಗ್ಗೆ ನಿರ್ಧಾರವಾಗುವ ಸಾಧ್ಯತೆ ಇದೆ. ಕರಡಿ ಸಂಗಣ್ಣ ಕಣದಲ್ಲಿ ಇರಲೇಬೇಕು ಅಂತ ಬೆಂಬಲಿಗರು ಆಗ್ರಹಿಸಿದ್ದಾರೆ. ಹೀಗಾಗಿ ಪಕ್ಷದಲ್ಲೇ ಇರಬೇಕಾ, ಬೇಡ್ವಾ, ಸ್ಪರ್ಧಿಸಬೇಕಾ, ಬೇಡ್ವಾ ಅನ್ನೋ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯುವ ಸಾಧ್ಯತೆ ಇದೆ.
ಆಪ್ತರ ಮುಂದೆ ನೋವು ತೋಡಿಕೊಂಡ ಕರಡಿ ಸಂಗಣ್ಣ
ಇನ್ನು ಮತ್ತೊಂದೆಡೆ ಕೊಪ್ಪಳ BJP ಟಿಕೆಟ್ ಕೈತಪ್ಪಿದ್ದಕ್ಕೆ ಕರಡಿ ಸಂಗಣ್ಣ ಬೇಸರಗೊಂಡಿದ್ದಾರೆ. ಆಪ್ತರ ಮುಂದೆ ನೋವು ತೋಡಿಕೊಂಡಿದ್ದಾರೆ. ಕಳೆದ 10 ವರ್ಷದಲ್ಲಿ ಚೆನ್ನಾಗಿ ಕೆಲಸವನ್ನ ಮಾಡಿದ್ದೇನೆ. ಕ್ಷೇತ್ರದಲ್ಲಿ ಜನ, ಕಾರ್ಯಕರ್ತರ ಜೊತೆ ಸಂಪರ್ಕ ಇತ್ತು. ನಿನ್ನೆ ಮುಂಜಾನೆವರೆಗೂ ನನಗೇ ಟಿಕೆಟ್ ಅನ್ನುತ್ತಿದ್ದರು. ಆದರೆ, ದಿಢೀರನೇ ನನಗೆ ಟಿಕೆಟ್ ಕಟ್ ಮಾಡಿದ್ದಾರೆ. ಜನರ ಸಂಪರ್ಕ ಇಲ್ಲದಿರುವವರಿಗೆ ಟಿಕೆಟ್ ನೀಡಿದ್ದಾರೆ. ಯಾವ ಮಾನದಂಡ ಅನುಸರಿಸಿದ್ದಾರೆ ಅಂತ ಕರಡಿ ಸಂಗಣ್ಣ ಆಕ್ರೋಶ ಹೊರ ಹಾಕಿದ್ದಾರೆ. ಟಿಕೆಟ್ ಕೈತಪ್ಪಿದ್ದಕ್ಕೆ ಆಪ್ತರ ಬಳಿ ಕರಡಿ ಸಂಗಣ್ಣ ನೋವು ತೋಡಿಕೊಂಡಿದ್ದಾರೆ.
ಇದನ್ನೂ ಓದಿ: ಕರ್ನಾಟಕ ಬಿಜೆಪಿ ಅಭ್ಯರ್ಥಿಗಳ ಪಟ್ಟಿ: ಕೆಲವು ಕ್ಷೇತ್ರಗಳಲ್ಲಿ ಅಸಮಾಧಾನ ಸ್ಫೋಟ; ಎಲ್ಲೆಲ್ಲಿ?
ಕರಡಿ ಸಂಗಣ್ಣ ಬದಲಾಗಿ, ವೈದ್ಯರಾಗಿರುವ ಡಾ. ಕೆ ಬಸವರಾಜ್ ಅವರಿಗೆ ಕೊಪ್ಪಳ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಘೋಷಣೆಯಾಗಿದೆ. ನಿನ್ನೆ ಸಂಗಣ್ಣ ಕರಡಿಗೆ ಟಿಕೆಟ್ ಮಿಸ್ ಆಗಿರುವ ಸುದ್ದಿ ತಿಳಿಯುತ್ತಿದ್ದಂತೆ, ಕೊಪ್ಪಳ ನಗರದಲ್ಲಿರುವ ಅವರ ನಿವಾಸಕ್ಕೆ ಆಗಮಿಸಿದ ಸಂಗಣ್ಣ ಬೆಂಬಲಿಗರು, ಬಿಜೆಪಿ ನಾಯಕರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ರು. ಕರಡಿ ಸಂಗಣ್ಣರನ್ನು ನೋಡಿ ಕಣ್ಣೀರು ಹಾಕಿದ್ರು. ಪಕ್ಷದಿಂದ ನಿಮಗೆ ಅನ್ಯಾಯವಾಯ್ತು ಅಂತ ಆಕ್ರೋಶ ವ್ಯಕ್ತಪಡಿಸಿದ್ರು. ಜೊತೆಗೆ ಕೆಲವರು ಸೇರಿಕೊಂಡು ಬಿಜೆಪಿ ಟಿಕೆಟ್ ಮಾರಾಟ ಮಾಡಿದ್ದಾರೆ. ಕಾಂಗ್ರೆಸ್ ಗೆಲ್ಲಬೇಕು ಅಂತ ಯಾರಿಗೂ ಗೊತ್ತಿರದ ಡಾ. ಕೆ ಬಸವರಾಜ್ ಅವರಿಗೆ ಟಿಕೆಟ್ ನೀಡಿದ್ದಾರೆ. ನಾವು ಬಿಜೆಪಿ ಕಾರ್ಯಕರ್ತರು, ಆದ್ರೆ ಈ ಬಾರಿ ಬಿಜೆಪಿಗೆ ಮತ ಹಾಕಬೇಡಿ ಅಂತ ಹೇಳ್ತೇವೆ. ಇನ್ನು ಕೂಡಾ ಸಮಯವಿದೆ, ಅಭ್ಯರ್ಥಿಯನ್ನು ಬದಲಾಯಿಸಿ, ಕರಡಿ ಸಂಗಣ್ಣ ಅವರಿಗೆ ಟಿಕೆಟ್ ನೀಡಬೇಕು ಅಂತ ಆಗ್ರಹಿಸಿದ್ರು.
ದಾವಣಗೆರೆ ಜಿಲ್ಲಾ ಬಿಜೆಪಿಯಲ್ಲಿ ಹೆಚ್ಚಿದ ಬಂಡಾಯದ ಬಿಸಿ
ಇನ್ನು ಮತ್ತೊಂದೆಡೆ ಸಂಸದ ಜಿಎಂ ಸಿದ್ದೇಶ್ವರ್ ಪತ್ನಿ ಗಾಯತ್ರಿಗೆ ಲೋಕಸಭಾ ಟಿಕೆಟ್ ಸಿಕ್ಕ ಹಿನ್ನಲೆ ದಾವಣಗೆರೆ ಜಿಲ್ಲಾ ಬಿಜೆಪಿಯಲ್ಲಿ ಬಂಡಾಯದ ಬಿಸಿ ಹೆಚ್ಚಿದೆ. ಮಾಜಿ ಸಚಿವ ಎಂಪಿ ರೇಣುಕಾಚಾರ್ಯ, ಎಸ್.ಎ. ರವೀಂದ್ರನಾಥ್ ಟೀಮ್ ಅಸಮಾಧಾನಗೊಂಡಿದೆ. ಜಿಎಂ ಸಿದ್ದೇಶ್ವರ್ ಗೆ ಹಾಗೂ ಅವರ ಕುಟುಂಬಕ್ಕೆ ಟಿಕೇಟ್ ನೀಡದಂತೆ ರೇಣುಕಾ ಟೀಮ್ ವರಿಷ್ಠರಿಗೆ ಒತ್ತಾಯಿಸಿತ್ತು. ಟಿಕೇಟ್ ಆಕಾಂಕ್ಷಿ ಡಾ.ರವಿಕುಮಾರ್, ಮಾಜಿ ಸಚಿವ ರವೀಂದ್ರನಾಥ್ ಲೋಕಿಕೆರೆ ನಾಗರಾಜ್ ಸೇರಿದಂತೆ ಹಲವರಲ್ಲಿ ಅಸಮಾಧಾನ ಭುಗಿಲೆದ್ದಿದೆ. ಇಂದು ಬೆಳಗ್ಗೆ 12 ಗಂಟೆಗೆ ಮಾಜಿ ಸಚಿವ ಎಸ್.ಎ. ರವೀಂದ್ರನಾಥ್ ಮನೆಯಲ್ಲಿ ಅಸಮಾಧಾನಿತರ ಸಭೆ ನಡೆಯಲಿದೆ. ಮುಂದಿನ ನಿರ್ಧಾರದ ಬಗ್ಗೆ ಚರ್ಚೆ ನಡೆಯಲಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 8:51 am, Thu, 14 March 24