Sign In

By signing in or creating an account, you agree with Associated Broadcasting Company's Terms & Conditions and Privacy Policy.

Koppal News: ಲಾರಿಗೆ ಕಾರು ಡಿಕ್ಕಿ: ಸ್ಥಳದಲ್ಲಿಯೇ 6 ಜನ ದುರ್ಮರಣ: ಮೃತರ ಕುಟುಂಬಕ್ಕೆ ತಲಾ 2 ಲಕ್ಷ ರೂ. ಪರಿಹಾರ ಘೋಷಿಸಿದ ಸಿಎಂ ಸಿದ್ಧರಾಮಯ್ಯ

ಲಾರಿ ಮತ್ತು ಕಾರು ನಡುವೆ ಅಪಘಾತ ಉಂಟಾಗಿದ್ದು, ಸ್ಥಳದಲ್ಲಿಯೇ ಆರು ಜನ ದುರ್ಮರಣ ಹೊಂದಿರುವಂತಹ ಘಟನೆ ಜಿಲ್ಲೆಯ ಕುಷ್ಟಗಿ ತಾಲೂಕಿನ ಕಲಕೇರಿ ಬಳಿ ನಡಿದೆ.

Koppal News: ಲಾರಿಗೆ ಕಾರು ಡಿಕ್ಕಿ: ಸ್ಥಳದಲ್ಲಿಯೇ 6 ಜನ ದುರ್ಮರಣ: ಮೃತರ ಕುಟುಂಬಕ್ಕೆ ತಲಾ 2 ಲಕ್ಷ ರೂ. ಪರಿಹಾರ ಘೋಷಿಸಿದ ಸಿಎಂ ಸಿದ್ಧರಾಮಯ್ಯ
ಸಾಂದರ್ಭಿಕ ಚಿತ್ರ
Follow us
ಗಂಗಾಧರ​ ಬ. ಸಾಬೋಜಿ
|

Updated on:May 28, 2023 | 9:22 PM

ಕೊಪ್ಪಳ: ಲಾರಿ ಮತ್ತು ಕಾರು ನಡುವೆ ಅಪಘಾತ (Accident) ಉಂಟಾಗಿದ್ದು, ಸ್ಥಳದಲ್ಲಿಯೇ ಆರು ಜನ ದುರ್ಮರಣ ಹೊಂದಿರುವಂತಹ ಘಟನೆ ಜಿಲ್ಲೆಯ ಕುಷ್ಟಗಿ ತಾಲೂಕಿನ ಕಲಕೇರಿ ಬಳಿ ನಡಿದೆ. ಕಾರಿನ ಟೈರ್​ ಸ್ಫೋಟಗೊಂಡು ಎದುರಿಗೆ ಬರುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದವರು ಮೃತಪಟ್ಟಿದ್ದಾರೆ. ರಾಜಪ್ಪ ಬನಗೋಡಿ, ರಾಘವೇಂದ್ರ, ಅಕ್ಷಯ ಶಿವಶರಣ, ಜಯಶ್ರೀ, ರಾಖಿ ಮತ್ತು ರಶ್ಮಿಕಾ ಮೃತ ದುರ್ದೈವಿಗಳು. ಮೃತದೇಹಗಳನ್ನು ಹೊರತೆಗೆಯಲು ಹರಸಾಹಸ ಪಡಲಾಗುತ್ತಿದೆ. ಕುಷ್ಟಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ದಾಖಲಾಗಿದೆ.

ಡಿಕ್ಕಿಯ ರಭಸಕ್ಕೆ ಇಂಡಿಕಾ ಕಾರು ನಜ್ಜುಗುಜ್ಜಾಗಿದೆ. ವಿಜಯಪುರದಿಂದ ಬೆಂಗಳೂರಿಗೆ ಹೊರಟಿದ್ದಾಗ ಭೀಕರ ಅಪಘಾತ ಸಂಭವಿಸಿದೆ.

2 ಲಕ್ಷ ಪರಿಹಾರ ಘೋಷಿಸಿದ ಸಿಎಂ

ಅಪಘಾತದಲ್ಲಿ ಮೃತಪಟ್ಟವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರ ಸಂತಾಪ ಸೂಚಿಸಿದ್ದು, ಮೃತರ ಕುಟುಂಬಕ್ಕೆ ತಲಾ 2 ಲಕ್ಷ ರೂ ಪರಿಹಾರ ಘೋಷಣೆ ಮಾಡಿದ್ದಾರೆ. ಟ್ವಿಟ್​ ಮೂಲಕ ಸಂತಾಪ ಸೂಚಿಸಿರವ ಸಿಎಂ ಸಿದ್ದರಾಮಯ್ಯ ಕೊಪ್ಪಳ ಜಿಲ್ಲೆಯ ಕುಷ್ಟಗಿ ಬಳಿ ಸಂಭವಿಸಿದ ಭೀಕರ ಅಪಘಾತದಲ್ಲಿ ಎಳೆಯ ಮಕ್ಕಳು ಸೇರಿದಂತೆ 6 ಮಂದಿ ಸಾವಿಗೀಡಾದ ಸುದ್ದಿ ತಿಳಿದು ಎದೆ ನಲುಗಿತು. ಮೃತರ ಆತ್ಮಕ್ಕೆ ಶಾಂತಿ ಕೋರುತ್ತೇನೆ ಎಂದಿದ್ದಾರೆ.

ಸಾವಿನಲ್ಲೂ ಒಂದಾದ ದಂಪತಿ

ವಿಜಯಪುರ: ಸಾವಿನಲ್ಲೂ ದಂಪತಿ ಒಂದಾಗಿರುವಂತಹ ಘಟನೆ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಡೋಣೂರ ಗ್ರಾಮದಲ್ಲಿ ನಡೆದಿದೆ. ರಾಮಪ್ಪ ಟಕ್ಕಳಕಿ ಹಾಗೂ ಶಾಂತವ್ವ ಟಕ್ಕಳಕಿ ಮೃತ ದಂಪತಿಗಳು.  ಅನಾರೋಗ್ಯದಿಂದ ಇಂದು ಬೆಳಗ್ಗೆ ಶಾಂತವ್ವ ಮೃತಪಟ್ಟಿದ್ದು, ಪತ್ನಿ ಸಾವಿನ ಸುದ್ದಿ ತಿಳಿದು ಹೃದಯಾಘಾತದಿಂದ ಪತಿ ರಾಮಪ್ಪ ಕೂಡ ಮೃತಪಟ್ಟಿದ್ದಾರೆ. ಕುಟುಂಬಸ್ಥರು ಒಟ್ಟಿಗೆ ದಂಪತಿ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ.

ಇದನ್ನೂ ಓದಿ: CISF ಅಧಿಕಾರಿಗಳ ಕಾರ್ಯಾಚರಣೆ: ವಿದೇಶಕ್ಕೆ ಸ್ಮಗಲ್ ಮಾಡಲು ಯತ್ನಿಸುತ್ತಿದ್ದ ವಜ್ರ ವಶ

ಕಾರು ಬೈಕ್ ಮುಖಾಮುಖಿ ಡಿಕ್ಕಿ: ಸವಾರ ಮೃತ

ಮಡಿಕೇರಿ‌: ಕಾರು ಮತ್ತು ಬೈಕ್ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಬೈಕ್‌ ಸವಾರ ಸ್ಥಳದಲ್ಲೇ‌ ಸಾವನ್ನಪ್ಪಿದ್ದಾರೆ. ಮಡಿಕೇರಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಘಟನೆ ಸಂಭವಿಸಿದೆ. ಧನಂಜಯ್ (50) ಮೃತ ಬೈಕ್​ ಸವಾರ. ಮದೆನಾಡುವಿನಿಂದ ಮಡಿಕೇರಿಗೆ ಧನಂಜಯ್ ತೆರಳುತ್ತಿದ್ದು, ತಿರುವಿನಲ್ಲಿ ಓವರ್ ಟೇಕ್ ಮಾಡುವ ಯತ್ನದಲ್ಲಿ ಅಪಘಾತ ಸಂಭವಿಸಿದೆ. ಅಪಘಾತದ ದೃಶ್ಯ ಕಾರು ಪ್ರಯಾಣಿಕನ ಮೊಬೈಲ್‌ನಲ್ಲಿ ಸೆರೆ ಆಗಿದ್ದು, ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಚಾಕುವಿನಿಂದ ಇರಿದು ಸ್ನೇಹಿತನ ಕೊಲೆ: ಆರೋಪಿ ಬಂಧನ

ಬೆಂಗಳೂರು: ಚಾಕುವಿನಿಂದ ಇರಿದು ಸ್ನೇಹಿತನ ಕೊಲೆ ಮಾಡಿದ್ದ ಆರೋಪಿಯನ್ನು ಕಾಡುಗೋಡಿ ಠಾಣೆಯ ಪೊಲೀಸರಿಂದ ಬಂಧಿಸಲಾಗಿದೆ. ಉತ್ತರಪ್ರದೇಶ ಮೂಲದ ಮನೋಹರ್ ವರ್ಮಾ ಬಂಧಿತ ಆರೋಪಿ. ನಿನ್ನೆ ರಾತ್ರಿ ಸಾದರಮಂಗಲದ ಬಾಡಿಗೆ ಮನೆಯಲ್ಲಿ ಚಾಕುವಿನಿಂದ ಇರಿದು ವೀರೇಂದ್ರ ಕುಮಾರ್‌(29)ನನ್ನು ಕೊಂದಿದ್ದ. ಪೇಂಟರ್ ಆಗಿದ್ದ ವೀರೇಂದ್ರಕುಮಾರ್‌ ಕಾಡುಗೋಡಿಯಲ್ಲಿ ನೆಲೆಸಿದ್ದ. ಕಾಡುಗೋಡಿ ಪೊಲೀಸ್ ಠಾಣೆಯಲ್ಲಿ‌ ಕೊಲೆ ಪ್ರಕರಣ ದಾಖಲಾಗಿತ್ತು.

ಇದನ್ನೂ ಓದಿ: Anekal: ಕುಖ್ಯಾತ ದರೋಡೆ ಗ್ಯಾಂಗ್ ಪೋಲಿಸ್​ ಬಲೆಗೆ; ಮಾರಕಾಸ್ತ್ರಗಳೊಂದಿಗೆ ಹೊಂಚು ಹಾಕುವ ವೇಳೆ ಅರೆಸ್ಟ್

ಸಮುದ್ರದ ಸುಳಿಗೆ ಸಿಲುಕಿ ಮುಳುಗುತ್ತಿದ್ದ ಇಬ್ಬರ ರಕ್ಷಣೆ

ಕಾರವಾರ: ಸಮುದ್ರದ ಸುಳಿಗೆ ಸಿಲುಕಿ ಮುಳುಗುತ್ತಿದ್ದ ಇಬ್ಬರು ಬಾಲಕರನ್ನು ಲೈಫ್ ಗಾರ್ಡ್ ಸಿಬ್ಬಂದಿಗಳು ರಕ್ಷಣೆ ಮಾಡಿದ್ದಾರೆ. ಉತ್ತರಕನ್ನಡ ಜಿಲ್ಲೆಯ ಗೋಕರ್ಣದ ಮುಖ್ಯ ಕಡಲ ತೀರದಲ್ಲಿ ಇಂದು ಮಧ್ಯಾಹ್ನ ಘಟನೆ ನಡೆದಿದೆ. ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಅಯಾನ್ ಖಾನ್ (13), ಸುಭಾನ್ ಖಾನ್ (12) ರಕ್ಷಣೆಗೊಳಗಾದ ಬಾಲಕರು.

ಕುಟುಂಬ ಸಮೇತರಾಗಿ ಗೋಕರ್ಣಕ್ಕೆ ಪ್ರವಾಸಕ್ಕೆ ಬಂದಿದ್ದರು. ಸಮುದ್ರದಲ್ಲಿ ಈಜಾಡಲು ತೆರಳಿದಾಗ ಇಬ್ಬರು ಬಾಲಕರು ಸುಳಿಗೆ ಸಿಲುಕಿದ್ದರು. ಈ ವೇಳೆ ಲೈಫ್ ಗಾರ್ಡ್ ಸಿಬ್ಬಂದಿ ಮೋಹನ್ ಅಂಬಿಗ, ಶಿವಪ್ರಸಾದ ಅಂಬಿಗ, ಲೋಕೇಶ್ ಹರಿಕಂತ್ರ, ಬೀಚ್ ಸೂಪರ್‌ವೈಸರ್ ರವಿ ನಾಯ್ಕ್ ಮತ್ತು ಪ್ರವಾಸಿ ಮಿತ್ರ ರಾಜೇಶ್ ಅಂಬಿಗ ಹಾಗೂ ಛಾಯಾಗ್ರಾಹಕ ಸಿಬ್ಬಂದಿ ಮಂಜುನಾಥ್ ಪಟಗಾರ, ಮಂಜುನಾಥ್ ಗೌಡ, ಮಹೇಶ್ ಪಟಗಾರ ಸಹಾಯದಿಂದ ರಕ್ಷಣೆ ಮಾಡಲಾಗಿದೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 7:53 pm, Sun, 28 May 23