7ನೇ ತರಗತಿ ಪಾಸಾದರೂ ಕೊಪ್ಪಳ ಜಿಲ್ಲೆಯ 7 ಸಾವಿರ ಮಕ್ಕಳಿಗೆ ಓದಲು, ಬರೆಯಲು ಬರುತ್ತಿಲ್ಲ!
ಕೊಪ್ಪಳ ಜಿಲ್ಲೆಯಲ್ಲಿ 7ನೇ ತರಗತಿ ಪೂರ್ಣಗೊಳಿಸಿದ 7000ಕ್ಕೂ ಹೆಚ್ಚು ಮಕ್ಕಳಿಗೆ ಓದಲು ಬರೆಯಲು ಬಾರದಿರುವ ಆತಂಕಕಾರಿ ಸಂಗತಿ ಬಹಿರಂಗವಾಗಿದೆ. ಶಿಕ್ಷಕರ ಕೊರತೆ ಮತ್ತು ಮಕ್ಕಳ ಹಾಜರಾತಿ ಕೊರತೆಯನ್ನು ಕಾರಣವೆಂದು ಹೇಳಲಾಗುತ್ತಿದೆ. ಶಿಕ್ಷಣ ಇಲಾಖೆ ಪರಿಹಾರ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಜನವರಿಯಲ್ಲಿ ಎಫ್ಎಲ್ಎನ್ ಪರೀಕ್ಷೆ ನಡೆಸಲಾಗುವುದು ಮತ್ತು ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಒತ್ತು ನೀಡಲಾಗುವುದು ಎಂದು ಇಲಾಖೆ ತಿಳಿಸಿದೆ.
ಕೊಪ್ಪಳ, ಡಿಸೆಂಬರ್ 18: ಸರ್ಕಾರಿ ಶಾಲೆಯಲ್ಲಿ (Government School) ಓದುತ್ತಿರುವ ಮಕ್ಕಳಿಗೆ ಸರ್ಕಾರ ಹತ್ತಾರು ಸೌಲಭ್ಯಗಳನ್ನು ನೀಡುತ್ತಿದೆ. ಪ್ರತಿ ವರ್ಷ ಸಾವಿರಾರು ಕೋಟಿ ರೂಪಾಯಿ ಹಣವನ್ನು ಖರ್ಚು ಮಾಡುತ್ತಿದೆ. ಆದರೆ, ಕೊಪ್ಪಳ (Koppal) ಜಿಲ್ಲೆಯಲ್ಲಿ ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ 7 ಸಾವಿರ ಮಕ್ಕಳಿಗೆ 7ನೇ ತರಗತಿ ಪೂರ್ಣಗೊಳಿಸಿದ ನಂತರವೂ, ಓದಲು ಬರೆಯಲು ಬರುತ್ತಿಲ್ಲ. ಗಣಿತದ ಸರಳ ಲೆಕ್ಕಗಳನ್ನೂ ಕೂಡ ಮಾಡಲು ಬರುತ್ತಿಲ್ಲ. ಇಂತಹದೊಂದು ಆತಂಕಕಾರಿ ವಿಷಯವನ್ನು ಸ್ವತಃ ಶಿಕ್ಷಣ ಇಲಾಖೆಯ ಅಧಿಕಾರಿಗಳೇ ಬಹಿರಂಗಪಡಿಸಿದ್ದಾರೆ.
ಕಲ್ಯಾಣ ಕರ್ನಾಟಕದ ಜಿಲ್ಲೆಗಳು ಸದ್ಯ ಶೈಕ್ಷಣಿಕವಾಗಿ ಹಿಂದುಳಿದಿವೆ. ಎಸ್ಎಸ್ಎಲ್ಸಿ, ಪಿಯುಸಿ ಫಲಿತಾಂಶ ಪ್ರಕಟವಾದಾಗ ಕೊಪ್ಪಳ ಸೇರಿದಂತೆ ಕಲ್ಯಾಣ ಕರ್ನಾಟಕದ ಜಿಲ್ಲೆಗಳ ಫಲಿತಾಂಶವನ್ನು ಮೇಲಿನಿಂದ ನೋಡುವ ಬದಲು ಕೆಳಗಿನಿಂದ ನೋಡುವದೇ ರೂಢಿಯಾಗಿ ಬಿಟ್ಟಿದೆ. ಇಂತಹ ಸಮಯದಲ್ಲಿ ಇದೀಗ ಮತ್ತೊಂದು ಆತಂಕಕಾರಿ ಅಂಶ ಬಯಲಾಗಿದೆ.
ಎಸ್ಎಸ್ಎಲ್ಸಿಯಲ್ಲಿ ಮಕ್ಕಳ ಫಲಿತಾಂಶ ಕಡಿಮೆಯಾಗುತ್ತಿರುವುದು ಏಕೆ ಎಂದು ಪ್ರೌಢ ಶಾಲೆಯ ಶಿಕ್ಷಕರನ್ನು ಶಿಕ್ಷಣ ಇಲಾಖೆ ಪ್ರಶ್ನಿಸಿದೆ. ಆಗ, ಶಿಕ್ಷಕರು “ಪ್ರಾಥಮಿಕದಿಂದ ಪ್ರೌಢಶಾಲೆಗೆ ಬರುವ ಅನೇಕ ಮಕ್ಕಳಿಗೆ ಓದಲು, ಬರೆಯಲು ಬರುತ್ತಿಲ್ಲ” ಎಂದು ಉತ್ತರ ನೀಡಿದ್ದಾರೆ. ಕೂಡಲೆ ಎಚ್ಚೆತ್ತ ಕೊಪ್ಪಳ ಜಿಲ್ಲೆಯ ಶಿಕ್ಷಣ ಇಲಾಖೆ ಈ ಬಗ್ಗೆ ಮಾಹಿತಿ ಸಂಗ್ರಹಿಸುವಂತೆ ಪ್ರೌಢಶಾಲೆ ಶಿಕ್ಷಕರಿಗೆ ತಿಳಿಸಿತ್ತು.
ಅದರಂತೆ, ಇದೇ ವರ್ಷ ಜೂನ್, ಜುಲೈ ತಿಂಗಳಲ್ಲಿ ಪ್ರೌಢಶಾಲೆ ಶಿಕ್ಷಕರು ಮಕ್ಕಳ ಶೈಕ್ಷಣಿಕ ಪ್ರಗತಿಯನ್ನು ಪರಿಶೀಲಿಸಿದಾಗ ಜಿಲ್ಲೆಯಲ್ಲಿ “ಏಳು ಸಾವಿರಕ್ಕೂ ಅಧಿಕ ಮಕ್ಕಳಿಗೆ ಓದಲು, ಬರೆಯಲು ಬರುವುದಿಲ್ಲ. ಗಣಿತದ ಸರಳ ಲೆಕ್ಕ ಮಾಡಲು ಬರುವುದಿಲ್ಲ” ಎಂಬ ಅಂಶ ಅರಿತುಕೊಂಡಿದ್ದಾರೆ.
ಇದನ್ನೂ ಓದಿ: ಗೃಹಲಕ್ಷ್ಮಿ ಯೋಜನೆಯಂತೆ ವಿದ್ಯಾರ್ಥಿ ವೇತನ: ಇಂಗ್ಲೆಂಡ್ಗೆ ಕರ್ನಾಟಕ ಸ್ಫೂರ್ತಿ ಆಯ್ತಾ?
ಮಕ್ಕಳು ಸರಿಯಾಗಿ ಶಾಲೆಗೆ ಬಾರದೆ ಇರುವುದು, ಶಾಲೆಗಳಲ್ಲಿ ಶಿಕ್ಷಕರ ಕೊರತೆ ಸೇರಿದಂತೆ ಕೆಲ ಸಮಸ್ಯೆಗಳಿಂದ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಹಿನ್ನಡೆಯಾಗಿದೆ ಅಂತ ಹೇಳಲಾಗುತ್ತಿದೆ. ಆದರೆ, ಈ ವರ್ಷ ಹೊಸದಾಗಿ ಅತಿಥಿ ಶಿಕ್ಷಕರನ್ನು ಭರ್ತಿ ಮಾಡಲಾಗಿದೆ. ಜೊತೆಗೆ ಎಲ್ಲ ರೀತಿಯ ಸೌಲಭ್ಯಗಳನ್ನು ನೀಡಲಾಗಿದೆ. ಹೀಗಾಗಿ, ಮಕ್ಕಳ ಶೈಕ್ಷಣಿಕ ಪ್ರಗತಿ ಸುಧಾರಣೆಯಾಗುವಂತೆ ನೋಡಿಕೊಳ್ಳಬೇಕು ಅಂತ ಜಿಲ್ಲೆಯ ಎಲ್ಲ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕರಿಗೆ ಕೊಪ್ಪಳ ಡಿಡಿಪಿಐ ಶ್ರೀಶೈಲ್ ಬಿರಾದರ್ ಸೂಚನೆ ನೀಡಿದ್ದಾರೆ.
ಜೊತೆಗೆ ಬರುವ ಜನವರಿಯಲ್ಲಿ ಎಫ್ಎಲ್ಎನ್ ಪರೀಕ್ಷೆ (ಫಂಡಮೆಂಟಲ್ ಲಿಟರಸಿ ಆ್ಯಂಡ್ ನ್ಯೂಮರಸಿ) ಪರಿಶೀಲನೆ ಮಾಡುವುದಾಗಿ ಇಲಾಖೆ ತಿಳಿಸಿದೆ. ಮಕ್ಕಳಿಗೆ ಓದು, ಬರಹ ಬಾರದೆ ಇದ್ದರೇ ಆಯಾ ಶಾಲೆಯ ಮುಖ್ಯೋಪಾಧ್ಯಾಯರ ವಾರ್ಷಿಕ ಬಡ್ತಿಯನ್ನು ತಡೆಹಿಡಿಯುತ್ತೇವೆ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ. ಪ್ರತಿಯೊಂದು ಮಗುವಿನ ಹಾಜರಾತಿ ಸರಿಯಾಗಿ ಇರುವಂತೆ ನೋಡಕೊಳ್ಳಬೇಕು. ಪ್ರತಿನಿತ್ಯ ಅವರಿಗೆ ಹೋಮ್ ವರ್ಕ್ ನೀಡಬೇಕು, ಅದನ್ನು ಪ್ರತಿದಿನ ಚೆಕ್ ಮಾಡಬೇಕು. ಮಕ್ಕಳ ಶೈಕ್ಷಣಿಕ ಅಭಿವೃದ್ದಿಗೆ ಎಲ್ಲರೂ ಶ್ರಮಿಸಬೇಕು ಅಂತ ಸೂಚನೆ ನೀಡಿದ್ದಾರೆ.
ಏಳನೇ ತರಗತಿ ಪಾಸಾದರೂ ಸಾವಿರಾರು ಮಕ್ಕಳಿಗೆ ಓದಲು ಬರೆಯಲು ಬಾರದೆ ಇರುವುದು ದುರ್ದೈವದ ಸಂಗತಿಯಾಗಿದೆ. ಇದನ್ನು ಕೊಪ್ಪಳ ಜಿಲ್ಲಾ ಶಿಕ್ಷಣ ಇಲಾಖೆ ಗಂಭೀರವಾಗಿ ಪರಿಗಣಿಸಿದೆ. ಹೀಗಾಗಿ ಪ್ರಾಥಮಿಕ ಶಾಲೆಯ ಶಿಕ್ಷಕರು ಇನ್ನುಷ್ಟು ಶ್ರಮವಹಿಸಿ ಮಕ್ಕಳ ಶೈಕ್ಷಣಿಕ ಅಭಿವೃದ್ದಿಗೆ ಶ್ರಮ ವಹಿಸಬೇಕಿದೆ. ಜೊತೆಗೆ ಪೋಷಕರು ಕೂಡ ಮಕ್ಕಳನ್ನು ಶಾಲೆಗೆ ಸರಿಯಾಗಿ ಕಳುಹಿಸಬೇಕು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:12 am, Wed, 18 December 24