
ಕೊಪ್ಪಳ, ಜೂನ್ 17: ಜಿಲ್ಲೆಯಲ್ಲಿ ಇದೀಗ ಉತ್ಸವಗಳ ವಾರ್ ಜೋರಾಗಿದೆ. ಒಂದು ಕಡೆ ಜಿಲ್ಲಾಡಳಿತ ಮತ್ತು ಸರ್ಕಾರದ ನಿರ್ಧಾರಕ್ಕೂ ಮುನ್ನವೇ ಬಿಜೆಪಿ ಶಾಸಕ ಜನಾರ್ದನ ರೆಡ್ಡಿ (Janardhana Reddy) ಆನೆಗೊಂದಿ ಉತ್ಸವದ ತಿಂಗಳನ್ನು ಘೋಷಣೆ ಮಾಡಿದ್ದು, ಸದ್ಯ ರಾಜಕೀಯ ಸಂಚಲನ ಮೂಡಿಸಿದ್ದಾರೆ. ಮತ್ತೊಂದು ಕಡೆ, ಜಿಲ್ಲೆಯ ಹೆಮ್ಮೆಯ ಕನಕಗಿರಿ ಉತ್ಸವಕ್ಕೆ ಸಿಎಂ ಬದಲಾವಣೆಯ ಗ್ರಹಣ ಹಿಡಿದಿದ್ದು, ಜನರಲ್ಲಿ ತೀವ್ರ ನಿರಾಶೆ ಮೂಡಿಸಿದೆ.
ಐತಿಹಾಸಿಕ ಹಿನ್ನೆಲೆಯುಳ್ಳ ಆನೆಗೊಂದಿ ಉತ್ಸವದ ವಿಚಾರದಲ್ಲಿ ಜಿಲ್ಲಾಡಳಿತಕ್ಕೂ ಮುನ್ನವೇ ಬಿಜೆಪಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಅಖಾಡಕ್ಕೆ ಧುಮುಕಿದ್ದಾರೆ. ಜಿಲ್ಲಾಡಳಿತ ಅಧಿಕೃತವಾಗಿ ದಿನಾಂಕ ಪ್ರಕಟಿಸುವ ಮುನ್ನವೇ, ಬರುವ ಅಕ್ಟೋಬರ್ ತಿಂಗಳಿನಲ್ಲಿ ಆನೆಗೊಂದಿ ಉತ್ಸವ ಫಿಕ್ಸ್ ಎಂದು ಅವರು ಬಹಿರಂಗವಾಗಿ ಘೋಷಿಸಿದ್ದಾರೆ. ಇದು ಈಗ ಜಿಲ್ಲಾಡಳಿತ ಹಾಗೂ ಆಡಳಿತ ಪಕ್ಷದ ನಾಯಕರ ಕೆಂಗಣ್ಣಿಗೆ ಗುರಿಯಾಗಿದ್ದು, ಕೊಪ್ಪಳದಲ್ಲಿ ಹೊಸದೊಂದು ಉತ್ಸವ ವಾರ್‌ಗೆ ನಾಂದಿ ಹಾಡಿದೆ.
ಇದನ್ನೂ ಓದಿ: ಕೊಪ್ಪಳದಲ್ಲಿ ಪತ್ತೆಯಾದ ಶಿವಲಿಂಗಕ್ಕೂ ಸಿಎಂ ಡಿಕೆ ಶಿವಕುಮಾರ್ಗೂ ಲಿಂಕ್: ಉದ್ಯಮಿ ಕನಸಲ್ಲಿ ಕಂಡಿದ್ದೇನು?
ಈಗಾಗಲೇ 3 ಕೋಟಿ ರೂ ಅನುದಾನ ಬಂದಿದ್ದು, 3 ಕೋಟಿಗೆ ನಾನು ಬೇಡಿಕೆ ಇಟ್ಟಿದ್ದೇನೆ ಎನ್ನುತ್ತಾರೆ ರೆಡ್ಡಿ. ಕನಕಗಿರಿ ಉತ್ಸವ ಘೋಷಣೆಯಾದ ಬಳಿಕ ಮುಂದೂಡಲಾಗಿತ್ತು, ಅದೇ ಕಾರಣಕ್ಕೆ ಜಿಲ್ಲಾಡಳಿತ ಆನೆಗೊಂದಿ ಉತ್ಸವ ದಿನಾಂಕ ಘೋಷಣೆ ಮಾಡಿಲ್ಲ, ಆದರೆ ರೆಡ್ಡಿ ಅಕ್ಟೋಬರ್ನಲ್ಲಿ ಉತ್ಸವ ಫಿಕ್ಸ್ ಎನ್ನುತ್ತಿದ್ದಾರೆ.
ಇದು ಆನೆಗೊಂದಿ ಕಥೆಯಾದರೆ, ಇತ್ತ ಕನಕಗಿರಿ ಉತ್ಸವಕ್ಕೆ ಮಾತ್ರ ರಾಜಕೀಯದ ಗ್ರಹಣ ಹಿಡಿದಿದೆ. ಕಳೆದ ಮೇ 16 ಮತ್ತು 17ರಂದೇ ಅದ್ಧೂರಿಯಾಗಿ ನಡೆಯಬೇಕಿದ್ದ ಕನಕಗಿರಿ ಉತ್ಸವ, ರಾಜ್ಯದಲ್ಲಿ ನಡೆದ ಸಿಎಂ ಬದಲಾವಣೆ ಹಾಗೂ ರಾಜಕೀಯ ಏರುಪೇರು ಹಿನ್ನೆಲೆ ದಿಢೀರ್ ಮುಂದೂಡಲ್ಪಟ್ಟಿತ್ತು. ಆದರೆ ಸುಮಾರು ತಿಂಗಳು ಕಳೆದರೂ ಈವರೆಗೆ ಉತ್ಸವದ ನೆನಪು ಇಲ್ಲದಂತಾಗಿದೆ.
ಸದ್ಯದ ಪರಿಸ್ಥಿತಿ ನೋಡಿದರೆ ಈ ವರ್ಷ ಕನಕಗಿರಿ ಉತ್ಸವ ನಡೆಯುತ್ತದೆಯಾ ಇಲ್ಲವಾ ಎನ್ನುವ ದೊಡ್ಡ ಅನುಮಾನ ಸಾರ್ವಜನಿಕರಲ್ಲಿ ಮೂಡಿದೆ. ರಾಜಕೀಯ ನಾಯಕರ ಈ ಜಿದ್ದಾಜಿದ್ದಿ ಮತ್ತು ಸರ್ಕಾರದ ನಿರ್ಲಕ್ಷ್ಯಕ್ಕೆ ಕೊಪ್ಪಳದ ಜನತೆ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಒಂದು ಕಡೆ ಕ್ರೆಡಿಟ್ ವಾರ್, ಮತ್ತೊಂದು ಕಡೆ ನಿರ್ಲಕ್ಷ್ಯ. ಸಿಎಂ ಬದಲಾವಣೆ ನೆಪದಲ್ಲಿ ನಮ್ಮ ಜಿಲ್ಲೆಯ ಸಾಂಸ್ಕೃತಿಕ ಉತ್ಸವಗಳನ್ನು ಬಲಿ ಕೊಡಬೇಡಿ, ಕೂಡಲೇ ಕನಕಗಿರಿ ಉತ್ಸವದ ದಿನಾಂಕ ಪ್ರಕಟಿಸಿ, ಉತ್ಸವ ಮಾಡಲೇಬೇಕು ಎಂದು ಜಿಲ್ಲೆಯ ಜನತೆ ಸರ್ಕಾರ ಹಾಗೂ ಜಿಲ್ಲಾಡಳಿತಕ್ಕೆ ಒತ್ತಾಯಿಸುತ್ತಿದ್ದಾರೆ.
ಇದನ್ನೂ ಓದಿ: ಅಂಜನಾದ್ರಿ ಆಂಜನೇಯನಿಗೆ ಸಮರ್ಪಿಸಿದ್ದ ಬಂಗಾರ ವಿವಾದಕ್ಕೆ ತೆರೆ, ಜನಾರ್ದನ ರೆಡ್ಡಿ ನಿರಾಳ
ಒಟ್ಟಿನಲ್ಲಿ, ರಾಜಕೀಯ ನಾಯಕರ ಪ್ರತಿಷ್ಠೆಯ ನಡುವೆ ಕೊಪ್ಪಳದ ಆನೆಗೊಂದಿ ಉತ್ಸವದ ದಿನಾಂಕ ವಿವಾದಕ್ಕೆ ಸಿಲುಕಿದ್ದರೆ, ಇತ್ತ ಕನಕಗಿರಿ ಉತ್ಸವದ ಭವಿಷ್ಯವೇ ಮಂಕಾಗಿದೆ. ಸರ್ಕಾರ ಮತ್ತು ಜಿಲ್ಲಾಡಳಿತ ಈ ಗೊಂದಲಗಳಿಗೆ ತೆರೆ ಎಳೆದು, ಜಿಲ್ಲೆಯ ಸಾಂಸ್ಕೃತಿಕ ವೈಭವವನ್ನು ಎತ್ತಿಹಿಡಿಯುತ್ತಾ ಅನ್ನೋದನ್ನ ಕಾದು ನೋಡಬೇಕಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.