AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಮಸ್ಯೆಯ ಸುಳಿಯಲ್ಲಿ ಪದವೀಧರ ಶಾಲಾ ಶಿಕ್ಷಕರ ನೇಮಕಾತಿ, ತೊಂದರೆಗೆ ಸಿಲುಕಿದ ಸಾವಿರಾರು ಮಹಿಳಾ ಅಭ್ಯರ್ಥಿಗಳು -ಸರ್ಕಾರದಿಂದಲೂ ಸ್ಪಂದನೆಯಿಲ್ಲ

ನೀವು ವಿವಾಹಿತರು ಅಂತ ಹೇಳಿದ್ದೀರಿ. ಆದ್ರೆ ತಂದೆಯ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಲಗತ್ತೀಸಿದ್ದೀರಿ ಅಂತ ಅಧಿಕಾರಿಗಳು ಆಕ್ಷೇಪ ವ್ಯಕ್ತಪಡಿಸಿದ್ದರು. ನಂತರ ಇವರು ಹೈಕೋರ್ಟ್ ಮೆಟ್ಟಿಲೇರಿದ್ದರು. ಹೈಕೋರ್ಟ್ ಏಕ ಸಧಸ್ಯ ಪೀಠ, 2023 ರ ಜನವರಿ 30 ರಂದು, ತಂದೆಯ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಪರಿಗಣಿಸಿ, ಮೆರಿಟ್ ಆಧಾರದ ಮೇಲೆ ಆಯ್ಕೆ ಪಟ್ಟಿಯನ್ನು ಪ್ರಕಟಿಸಬೇಕು ಅಂತ ಹೇಳಿತ್ತಂತೆ.

ಸಮಸ್ಯೆಯ ಸುಳಿಯಲ್ಲಿ ಪದವೀಧರ ಶಾಲಾ ಶಿಕ್ಷಕರ ನೇಮಕಾತಿ, ತೊಂದರೆಗೆ ಸಿಲುಕಿದ ಸಾವಿರಾರು ಮಹಿಳಾ ಅಭ್ಯರ್ಥಿಗಳು -ಸರ್ಕಾರದಿಂದಲೂ ಸ್ಪಂದನೆಯಿಲ್ಲ
ಸಮಸ್ಯೆಯ ಸುಳಿಯಲ್ಲಿ ಪದವೀಧರ ಶಾಲಾ ಶಿಕ್ಷಕರ ನೇಮಕಾತಿ
ಸಂಜಯ್ಯಾ ಚಿಕ್ಕಮಠ
| Updated By: ಸಾಧು ಶ್ರೀನಾಥ್​|

Updated on: Nov 08, 2023 | 2:03 PM

Share

ಅವರೆಲ್ಲಾ ಶಿಕ್ಷಕರಾಗಬೇಕು ಅಂತ ಕನಸು ಕಂಡಿದ್ದರು. ಅದಕ್ಕಾಗಿ ವರ್ಷಾನುಗಟ್ಟಲೆ ಓದಿದ್ದರು. ಶಿಕ್ಷಕರ (school teacher) ಆಯ್ಕೆಗೆ ಅರ್ಜಿ ಕರೆದಾಗ ಅರ್ಜಿ ಹಾಕಿದ್ದ ಅವರೆಲ್ಲಾ ಉತ್ತಮ ಅಂಕಗಳನ್ನು ಕೂಡಾ ಪಡೆದಿದ್ದರು. ಆದ್ರೆ ಅರ್ಜಿ ಸಲ್ಲಿಸುವಾಗ ಮಾಡಿರೋ ಅದೊಂದು ಕೆಲಸದಿಂದ ಇದೀಗ 1200 ಮಹಿಳಾ ಅಭ್ಯರ್ಥಿಗಳು ತೊಂದರೆಗೆ ಸಿಲುಕಿದ್ದಾರೆ. ಹೀಗಾಗಿ ನಮ್ಮ ಸಮಸ್ಯೆಯನ್ನು ಸರ್ಕಾರ ಬಗೆಹರಿಸಬೇಕು ಅಂತ ಆಗ್ರಹಿಸುತ್ತಿದ್ದಾರೆ. ಇದರಿಂದ ಕೊಪ್ಪಳ ನಗರ ಮತ್ತು ವಿವಿಧ ಗ್ರಾಮಗಳ ಅಭ್ಯರ್ಥಿಗಳಿಗೆ ಮುಂದೇನು ಅನ್ನೋ ಚಿಂತೆ ಕಾಡುತ್ತಿದೆ. ಭವಿಷ್ಯತ್ತಿನ ಬಗ್ಗೆ ಹತ್ತಾರು ಕನಸು ಕಂಡಿದ್ದ ಇವರಿಗೆ ಸರ್ಕಾರದ (karnataka government) ನಿರ್ಧಾರ ದೊಡ್ಡ ಶಾಕ್ ನೀಡಿದ್ದು, ತಮಗಾದ ಅನ್ಯಾಯಕ್ಕೆ ನ್ಯಾಯ ನೀಡಬೇಕು ಅಂತ ಕಚೇರಿಯಿಂದ ಕಚೇರಿಗೆ ಅಲೆಯುತ್ತಿದ್ದಾರೆ. ಹತ್ತಾರು ಸಚಿವರಿಗೆ (Siddaramaiah) ಮನವಿ ಮಾಡಿದ್ದಾರೆ. ಆದ್ರೆ ಯಾರಿಂದಲೂ ಕೂಡಾ ಸೂಕ್ತ ಸ್ಪಂದನೆ ಸಿಗ್ತಾಯಿಲ್ಲವಂತೆ. ಹೀಗಾಗಿ ತಮಗೆ ನ್ಯಾಯ ದೊರಕಿಸಿಕೊಡಬೇಕು ಅಂತ ಆಗ್ರಹಿಸುತ್ತಿದ್ದಾರೆ.

ಅಷ್ಟಕ್ಕೂ ಇವರ ಸಮಸ್ಯೆಗೆ ಕಾರಣವಾಗಿದ್ದು ತಂದೆಯ ಜಾತಿ ಮತ್ತು ಆದಾಯ ಪ್ರಮಾಣ ಪತ್ರ. ಹೌದು 2022 ರಲ್ಲಿ ಸರ್ಕಾರ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ಹುದ್ದೆಗೆ ಅರ್ಜಿ ಕರೆದಿತ್ತು. ಆಗ ರಾಜ್ಯದ ಸಾವಿರಾರು ಮಹಿಳಾ ಅಭ್ಯರ್ಥಿಗಳು ಅರ್ಜಿ ಹಾಕಿದ್ದರು. ಅರ್ಜಿ ಹಾಕುವಾಗ ನೀವು ವಿವಾಹಿತರೇ ಅನ್ನೋ ಕಾಲಂನಲ್ಲಿ, ವಿವಾಹಿತ ಮಹಿಳಾ ಅಭ್ಯರ್ಥಿಗಳು ವಿವಾಹಿತ ಅಂತ ನಮೂದಿಸಿದ್ದಾರೆ. ಇನ್ನು ಜಾತಿ ಮತ್ತು ಆದಾಯ ಪ್ರಮಾಣ ಪತ್ರ ನೀಡುವಾಗ ತಂದೆಯ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ನೀಡಿ ಅರ್ಜಿ ಹಾಕಿದ್ದರು.

ಅರ್ಜಿ ಸಲ್ಲಿಸುವಾಗ ವಿವಾಹಿತರಾಗಿದ್ದರೆ, ಗಂಡನ ಜಾತಿ ಮತ್ತು ಆದಾಯ ಪ್ರಮಾಣ ಪತ್ರವನ್ನೇ ಲಗತ್ತಿಸಬೇಕು ಅಂತೇನೂ ಅರ್ಜಿಯಲ್ಲಿ ಇರಲಿಲ್ಲ. ಹೀಗಾಗಿ ಅನೇಕ ಮಹಿಳಾ ಅಭ್ಯರ್ಥಿಗಳು ತಂದೆಯ ಜಾತಿ ಮತ್ತು ಆದಾಯ ಪ್ರಮಾಣ ಪತ್ರವನ್ನು ಲಗತ್ತಿಸಿ ಅರ್ಜಿ ಹಾಕಿದ್ದರು. ಅದರಂತೆ ಪರೀಕ್ಷೆಯನ್ನು ಕೂಡಾ ಬರೆದಿದ್ದರು. ಮೆರಿಟ್ ನಲ್ಲಿ ಆಯ್ಕೆ ಕೂಡಾ ಆಗಿದ್ದರು. ಆದ್ರೆ ಯಾವಾಗ ದಾಖಲಾತಿಗಳ ಪರಿಶೀಲನೆ ಆರಂಭವಾಯ್ತೋ ಆಗ ಇವರಿಗೆ ತೊಂದರೆ ಆರಂಭವಾಯ್ತು.

ನೀವು ವಿವಾಹಿತರು ಅಂತ ಹೇಳಿದ್ದೀರಿ. ಆದ್ರೆ ತಂದೆಯ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಲಗತ್ತೀಸಿದ್ದೀರಿ ಅಂತ ಅಧಿಕಾರಿಗಳು ಆಕ್ಷೇಪ ವ್ಯಕ್ತಪಡಿಸಿದ್ದರು. ನಂತರ ಇವರು ಹೈಕೋರ್ಟ್ ಮೆಟ್ಟಿಲೇರಿದ್ದರು. ಹೈಕೋರ್ಟ್ ಏಕ ಸಧಸ್ಯ ಪೀಠ, 2023 ರ ಜನವರಿ 30 ರಂದು, ತಂದೆಯ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಪರಿಗಣಿಸಿ, ಮೆರಿಟ್ ಆಧಾರದ ಮೇಲೆ ಆಯ್ಕೆ ಪಟ್ಟಿಯನ್ನು ಪ್ರಕಟಿಸಬೇಕು ಅಂತ ಹೇಳಿತ್ತಂತೆ. ಆದ್ರೆ ಹೈಕೋರ್ಟ್ ಆದೇಶದ ಪಾಲನೆಯಾಗುತ್ತಿಲ್ಲಾ ಅಂತ ಅನೇಕ ನೊಂದ ಅಭ್ಯರ್ಥಿಗಳು ಹೇಳುತ್ತಿದ್ದಾರೆ.

ಆದ್ರೆ ಅಂತಿಮ ಆಯ್ಕೆ ಪಟ್ಟಿಯಿಂದ ಹೊರಗುಳಿದ ಕೆಲ ಅಭ್ಯರ್ಥಿಗಳು ಹೈಕೋರ್ಟ್ ದ್ವೀಸದಸ್ಯ ಪೀಠಕ್ಕೆ ಅರ್ಜಿ ಹಾಕಿದ್ದಾರಂತೆ. ಆಗ ಹೈಕೋರ್ಟ್, ತಂದೆಯ ಜಾತಿ ಮತ್ತು ಆದಾಯ ಪ್ರಮಾಣ ಪತ್ರವನ್ನು ನೀಡಿದ ಮಹಿಳಾ ಅಭ್ಯರ್ಥಿಗಳನ್ನು ತಾತ್ಕಾಲಿಕವಾಗಿ ಹೊರಗಿಟ್ಟು ಅಂತಿಯ ಆಯ್ಕೆ ಪಟ್ಟಿಯನ್ನು ಪ್ರಕಟಿಸಬೇಕು ಅಂತ ಆದೇಶ ನೀಡಿತ್ತು. ಅದರ ಅನ್ವಯ ಸರ್ಕಾರ ಈಗಾಗಲೇ ಅಂತಿಮ ಆಯ್ಕೆ ಪಟ್ಟಿಯನ್ನು ಪ್ರಕಟಿಸಿದ್ದು, ಕೌನ್ಸಲಿಂಗ್ ಮಾಡಿ ಶಿಕ್ಷಕರಿಗೆ ನೇಮಕಾತಿ ಪತ್ರವನ್ನು ಕೂಡಾ ನೀಡಿದೆ.

ಆದ್ರೆ ಇದೀಗ ಹೈಕೋರ್ಟ್ ಮತ್ತು ಕೆಎಟಿ ಗೆ ಹೋಗಿರುವ ಅನೇಕ ಅಭ್ಯರ್ಥಿಗಳ ಅರ್ಜಿ ವಿಚಾರಣೆ ನ್ಯಾಯಲಯದಲ್ಲಿದೆ. ಆದ್ರೆ ಮೇಲಿಂದ ಮೇಲೆ ತಮಗೆ ನ್ಯಾಯಲಯಕ್ಕೆ ಅಡ್ಡಾಡಲು ಆಗ್ತಿಲ್ಲಾ. ಈ ಹಿಂದೆ ತಂದೆಯ ಜಾತಿ ಮತ್ತು ಆದಾಯ ಪ್ರಮಾಣ ಪತ್ರವನ್ನು ನೀಡಿದ್ದವರಿಗೆ ನೌಕರಿಗೆ ಪರಿಗಣಿಸಲಾಗಿತ್ತು. ಆದ್ರೆ ಈ ಬಾರಿ ಪರಿಗಣಿಸುತ್ತಿಲ್ಲಾ. ಹೀಗಾಗಿ ನಮ್ಮನ್ನು ಕೂಡಾ ಆಯ್ಕೆಗೆ ಪರಿಗಣಿಸಿ, ನೌಕರಿ ಆದೇಶ ನೀಡಬೇಕು ಅಂತ ನೊಂದ ಅಭ್ಯರ್ಥಿಗಳು ಹೇಳ್ತಿದ್ದಾರೆ.

ಸರ್ಕಾರಿ ನೌಕರಿ, ಅದರಲ್ಲೂ ಶಿಕ್ಷಕಿಯಾಗಬೇಕು ಅಂತ ಕನಸು ಕಂಡಿದ್ದವರಿಗೆ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಶಾಕ್ ನೀಡಿದೆ. ಹೀಗಾಗಿ ನೊಂದವರಿಗೆ ಸರ್ಕಾರ ನೆರವು ಕಲ್ಪಿಸುವ ಕೆಲಸ ಮಾಡಬೇಕಿದೆ. ಆಗಿರುವ ಸಮಸ್ಯೆಗೆ ಪರಿಹಾರ ಕಲ್ಪಿಸುವ ಮೂಲಕ ಆಯ್ಕೆಗೆ ಇರುವ ಅವಕಾಶವನ್ನು ಪರಿಗಣಿಸಬೇಕಿದೆ.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.