ಪಂಚಮಸಾಲಿಗರ ಶಾಪದಿಂದ ಬಿ.ಎಸ್ ಯಡಿಯೂರಪ್ಪ ಸಿಎಂ ಸ್ಥಾನ ಹೋಯ್ತು: ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್
ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡಬೇಕು. ಕಳೆದ ವರ್ಷದಿಂದ ನಿರಂತರ ಹೋರಾಟ ಮಾಡುತ್ತಿದ್ದೇವೆ. ಒಂದು ವರ್ಷದಿಂದಲೂ ಸರ್ಕಾರ ಕಿವಿ, ಬಾಯಿ ಕಳೆದುಕೊಂಡಿದೆ. ಪಂಚಮಸಾಲಿಗರ ಶಾಪದಿಂದ ಸಿಎಂ ಸ್ಥಾನ ಹೋಯ್ತು
ಕೊಪ್ಪಳ: ಯಡಿಯೂರಪ್ಪ ಸಿಎಂ ಸ್ಥಾನ ಕಳೆದುಕೊಂಡಿದ್ದು ಪಂಚಮಸಾಲಿ ಸಮಾಜದ ಶಾಪದಿಂದ ಎಂದು ನಗರದ ಬಳೂಟಗಿ ಗ್ರಾಮದಲ್ಲಿ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್ ಹೇಳಿಕೆ ನೀಡಿದ್ದಾರೆ. ಬೊಮ್ಮಾಯಿ ಅವರೂ ಸಹ ಮೀಸಲಾತಿ ಕೊಡಲು ವಿಳಂಬ ಮಾಡುತ್ತಿದ್ದಾರೆ. ಮೀಸಲಾತಿ ಕೊಡದಿದ್ದರೆ ಬಸವರಾಜ ಬೋಮ್ಮಾಯಿ ಅವರಿಗೂ ಶಾಪ ತಟ್ಟುತ್ತದೆ. ಪಂಚಮಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡುವ ವಿಚಾರವಾಗಿ ಕಳೆದ ವರ್ಷದಿಂದ ನಿರಂತರ ಹೋರಾಟ ಮಾಡುತ್ತಿದ್ದೇವೆ. ಬಸವ 712 ಕಿಲೋಮೀಟರ್ ಪಾದಯಾತ್ರೆ ಮಾಡಿದ್ದೇವೆ. ಸಮಾಜಕ್ಕೆ ನ್ಯಾಯ ಕೊಡಬೇಕು. ಸಮಾಜದ ಬಡ ರೈತರ ಮಕ್ಕಳಿಗೆ ನ್ಯಾಯ ಕೊಡಬೇಕು. ಸಮಾಜಕ್ಕೆ 2ಎ ಮೀಸಲಾತಿ, ಲಿಂಗಾಯತ ಇತರೆ ಜಾತಿಯವರಿಗೆ ಓಬಿಸಿ ಮೀಸಲಾತಿ ನೀಡಬೇಕು ಎಂದು ಹೇಳಿದರು.
ಇದನ್ನೂ ಓದಿ; 2020-21ರಲ್ಲಿ 5 ಪ್ರಾದೇಶಿಕ ಪಕ್ಷಗಳು ಚುನಾವಣಾ ಬಾಂಡ್‌ಗಳ ಮೂಲಕ ₹250.60 ಕೋಟಿ ರೂ ದೇಣಿಗೆ ಪಡೆದಿವೆ: ಎಡಿಆರ್
ಒಂದು ವರ್ಷ ಕಳೆದರೂ ಸರಕಾರ ಕಿವಿ, ಬಾಯಿ ಕಳೆದುಕೊಂಡಿದೆ. ಸ್ವಾಮೀಜಿಗಳ ಹೋರಾಟಕ್ಕೆ ಬೆಲೆ ನೀಡುತ್ತಿಲ್ಲ. ಸದನದಲ್ಲಿ ಮೀಸಲಾತಿ ಕುರಿತು ಮಾತನಾಡಿದ್ದು ಯತ್ನಾಳ್ ಅವರು ಮಾತ್ರ. ಸಮಾಜದ ಕೆಲವರಿಗೆ ಮೀಸಲಾತಿ ಬೇಕಾಗಿಲ್ಲ. ನನಗೆ ಮಂತ್ರಿ ಸ್ಥಾನ ಬೇಡ, ಸಮಾಜಕ್ಕೆ ಮೀಸಲಾತಿ ಕೊಡಿ ಎಂದು ಹೇಳಿದ್ದಾರೆ. ಎಷ್ಟು ಸಾರಿ ಹಿಂದುಳಿದ ವರ್ಗದ ವರದಿ ಪಡೆಯುತ್ತೀರಿ. ಪೂಜ್ಯರು ಯಾವ ಹೋರಾಟಕ್ಕೆ ಕರೆಯುತ್ತಾರೆ ನಾವು ಸಿದ್ದರಾಗಿರಬೇಕು. ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಉಪವಾಸ ಸತ್ಯಾಗ್ರಹ ಮಾಡುತ್ತೇವೆ. ಮೀಸಲಾತಿ ಪತ್ರ ಪಡೆಯುವರೆಗೂ ಹೋರಾಟ ಮಾಡುತ್ತೇವೆ. ಕೆಲವು ಸ್ವಾಮೀಜಿಗಳು ಸಮಾಜವನ್ನು ತಪ್ಪು ಹೇಳಿಕೆ ನೀಡಿ ದಿಕ್ಕು ತಪ್ಪಿಸುತ್ತಾರೆ. ಇದು ಕೊನೆಯ ಹೋರಾಟ. ಮಾಡು ಇಲ್ಲವೇ, ಮಡಿ ಹೋರಾಟ. ಮಡಿವ ಮುನ್ನ ಮಾಡಿ ಸಾಯಬೇಕು. ಮೀಸಲಾತಿ ಕೊಡಿಸಿಯೇ ಸಾಯುತ್ತೇವೆ. ಸಮಾಜಕ್ಕಾಗಿ ಮೀಸಲಾತಿ ಕೇಳುತ್ತಿದ್ದೇವೆ. ಸಂವಿಧಾನ ಬದ್ಧವಾಗಿ ಮೀಸಲಾತಿ ಕೊಡಲೇಬೇಕು ಎಂದು ಆಗ್ರಹಿಸಿದರು.
ಪರೋಕ್ಷವಾಗಿ ಬೊಮ್ಮಾಯಿಗೆ ಟಾಂಗ್ ಕೊಟ್ಟ ಯತ್ನಾಳ್
ಪಂಚಮಸಾಲಿ ಸಮುದಾಯದವರಿಗೆ 2ಎ ಮೀಸಲಾತಿ ವಿಚಾರವಾಗಿ ಬಳೂಟಗಿಯಲ್ಲಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ನೀಡಿದ್ದು, ಕೊಡ್ತೀನಿ ಅಂದ್ರೆ ಕೊಡಿ, ಕೊಡಕ್ಕೆ ಆಗಲ್ಲ ಅಂದ್ರೆ ಹೇಳಿ ಅಂದಿದ್ದೆ. ಆಗ ಶೀಘ್ರವೇ ಮೀಸಲಾತಿ ನೀಡುತ್ತೇನೆ ಎಂದು ಬಿಎಸ್ ಯಡಿಯೂರಪ್ಪ ಹೇಳಿದ್ದರು. ಆದರೆ ಶೀಘ್ರದಲ್ಲೇ ರಾಜೀನಾಮೆ ಕೊಡಬೇಕಾಯಿತು ಎಂದು ವ್ಯಂಗ್ಯವಾಡಿದರು. ಈಗಿನ ಸಿಎಂ ಬಸವರಾಜ ಬೊಮ್ಮಾಯಿರವರಿಗೂ ಹೇಳಿದ್ದೇನೆ. ನೀವೂ ಈ ಕಡೆ, ಆ ಕಡೆ ಅಂದರೆ ನಿಮ್ಮದೂ ಹೋಗುತ್ತೆ. ಪರೋಕ್ಷವಾಗಿ ಬೊಮ್ಮಾಯಿ ಕುರ್ಚಿಗೂ ಕಂಟಕವೆಂದು ಯತ್ನಾಳ್ ಹೇಳಿದ್ದಾರೆ. ನಿಮಗೆ ಒಳ್ಳೆಯ ಖಾತೆ ಕೊಡುತ್ತೇನೆಂದು ಬೊಮ್ಮಾಯಿ ಹೇಳಿದ್ದರು. ನಾನು ಒಂದು ವರ್ಷಕ್ಕೆ ಸಚಿವನಾಗಿ ಏನು ಮಾಡಲಿ. ಎಲ್ಲಾ ಸ್ವಚ್ಛ ಮಾಡಿದ್ದಾರೆಂದು ತಮ್ಮ ಸರ್ಕಾರದ ಸಚಿವರ ವಿರುದ್ಧವೇ ಯತ್ನಾಳ್ ಆರೋಪ ಮಾಡಿದರು. ರಾಜ್ಯದಲ್ಲಿ ಲೂಟಿ ಮಾಡಿ ದುಬೈನಲ್ಲಿ ಆಸ್ತಿ ಮಾಡಿದ್ದು, ಆಸ್ತಿಯನ್ನು ನೋಡಲು ದುಬೈ ಹೋಗುತ್ತಾರೆ ಎಂದರು.
ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.