ರಸ್ತೆ ಅಭಿವೃದ್ಧಿ ಮಾಡಿ ಅಂತ ಕೆಳೋದೇ ತಪ್ಪಾ? ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನಿಸಿದ್ದಕ್ಕೆ ಯುವಕನ ಮನೆಗೆ ಪೊಲೀಸ್ರು ನುಗ್ಗಿದ್ರು!
ಕ್ಷಿಪ್ರ ಕಾರ್ಯಾಚರಣೆಗೆ ಇಳಿದ ಕೊಪ್ಪಳ ಪೊಲೀಸರು ಜನವರಿ 18ರ ಬೆಳಗ್ಗೆ 11ಗಂಟೆಗೆ ಪೊಲೀಸ್ ಪೇದೆ ರಮೇಶ ಹಾಗೂ ಹೋಂಗಾರ್ಡ್ ರಾಮಣ್ಣ ಎಂಬುವವರು ಯುವಕನ ಮನೆಗೆ ತೆರಳಿದ್ದು ಬೆಂಗಳೂರು ಐಟಿ ಸೆಲ್‌ನಿಂದ ಸಾಹೇಬರಿಗೆ ಮಾಹಿತಿ ಬಂದಿದೆ. ಆದ್ದರಿಂದ ಠಾಣೆಗೆ ಕರೆತರುವಂತೆ ತಿಳಿಸಿದ್ದಾರೆ.
ಕೊಪ್ಪಳ: ರಸ್ತೆ ಅಭಿವೃದ್ಧಿ ಬಗ್ಗೆ ಯುವಕನೋರ್ವ ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನಿಸಿದ್ದಕ್ಕೆ ಯುವಕನ ಮನೆಗೆ ಪೊಲೀಸರು ಆಗಮಿಸಿ ಠಾಣೆಗೆ ಕರೆದೊಯ್ಯಲು ಬಂದಿರುವ ಘಟನೆ ಕೊಪ್ಪಳ ಜಿಲ್ಲೆಯಲ್ಲಿ ನಡೆದಿದೆ. ಕೊಪ್ಪಳ ಜಿಲ್ಲೆ ಕಾರಟಗಿ ತಾಲೂಕಿನ ಉಳೇನೂರು ಗ್ರಾಮದ ಯುವಕ ಸುರೇಶ ಮಡಿವಾಳರ್ ಜನವರಿ 16ರಂದು ಸಿದ್ದಾಪೂರ-ನಂದಿಹಳ್ಳಿ ಮುಖ್ಯರಸ್ತೆ ಸಂಪೂರ್ಣ ಹದಗೆಟ್ಟಿರುವ ಕುರಿತು ಪ್ರಶ್ನಿಸಿ ವಿಡಿಯೋ ಚಿತ್ರೀಕರಣ ಮಾಡಿ, ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು.
ಕ್ಷಿಪ್ರ ಕಾರ್ಯಾಚರಣೆಗೆ ಇಳಿದ ಕೊಪ್ಪಳ ಪೊಲೀಸರು ಜನವರಿ 18ರ ಬೆಳಗ್ಗೆ 11ಗಂಟೆಗೆ ಪೊಲೀಸ್ ಪೇದೆ ರಮೇಶ ಹಾಗೂ ಹೋಂಗಾರ್ಡ್ ರಾಮಣ್ಣ ಎಂಬುವವರು ಯುವಕನ ಮನೆಗೆ ತೆರಳಿದ್ದು ಬೆಂಗಳೂರು ಐಟಿ ಸೆಲ್‌ನಿಂದ ಸಾಹೇಬರಿಗೆ ಮಾಹಿತಿ ಬಂದಿದೆ. ಆದ್ದರಿಂದ ಠಾಣೆಗೆ ಕರೆತರುವಂತೆ ತಿಳಿಸಿದ್ದಾರೆ. ಇದರಿಂದ ಆಕ್ರೋಶಗೊಂಡ ಯುವಕ ಸುರೇಶ ಮಡಿವಾಳರ್ ಮತ್ತು ಕುಟುಂಬಸ್ಥರು ಠಾಣೆಗೆ ಆಗಮಿಸುವುದಿಲ್ಲವೆಂದಿದ್ದಕ್ಕೆ 2 ತಾಸುಗಳ ಕಾಲ ಕಾದು, ಬಂದ ದಾರಿಗೆ ಸುಂಕವಿಲ್ಲದಂತೆ ಪೊಲೀಸ್ ಪೇದೆ ಹಿಂತಿರುಗಿದ್ದಾರೆ.
ಸುರೇಶ್ ಮೂಲತಃ ಉಳೇನೂರ ಗ್ರಾಮದ ನಿವಾಸಿಯಾಗಿದ್ದು, ಬೆಂಗಳೂರಿನಲ್ಲಿ ಕೆಲಸ ಮಾಡ್ತಿದ್ದ, ಊರಿನಲ್ಲಿ ರಸ್ತೆ ಸಮಸ್ಯೆ ಬಗ್ಗೆ ವಿಡಿಯೋ ಚಿತ್ರೀಕರಣ ಮಾಡಿ, ಅದನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದ. ಸಿದ್ದಾಪೂರ-ನಂದಿಹಳ್ಳಿ ರಸ್ತೆ ಹದಗೆಟ್ಟ ಪರಿಣಾಮ ಅನೇಕ ಅಪಘಾತಗಳು ಸಂಭವಿಸಿದ್ದು ಸಂಚಾರಕ್ಕೆ ಜನರು ನಿತ್ಯ ಪಡಿಪಾಟಲು ಪಡುತ್ತಿದ್ದಾರೆ. ಆದ್ದರಿಂದ ಸುರೇಶ ಮಡಿವಾಳರ್ ಮುಖ್ಯಮಂತ್ರಿ ಕಚೇರಿ, ಲೋಕೋಪಯೋಗಿ, ಜಿಲ್ಲಾ ಪಂಚಾಯತ್ ಸಿಇಒ ಸೇರಿದಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಈ ಮೇಲ್ ಮಾಡಿದ್ದಾರೆ. ಹೀಗಾಗಿ ಪೊಲೀಸರು ಸುರೇಶ್ ಮನೆಗೆ ಬಂದು ವಿಚಾರಿಸಿಕೊಂಡು, ವಾಪಸ್ ಆಗಿದ್ದಾರೆ. ರಸ್ತೆ ಬಗ್ಗೆ ಪ್ರಶ್ನೆ ಮಾಡಿದರೆ ಮನೆಗೆ ಪೊಲೀಸರು ಬರೋದು ಸಾರ್ವಜನಿಕ ವಲಯದಲ್ಲಿ ಇದೀಗ ಚರ್ಚೆಗೆ ಗ್ರಾಸವಾಗಿದೆ.
ಇದನ್ನೂ ಓದಿ:
ಎಸ್‌ಬಿಐ ಶಾಖೆಯಲ್ಲಿ ಚಾಕು ತೋರಿಸಿ 6 ಲಕ್ಷ ರೂ ದರೋಡೆ; 2 ದಿನದಲ್ಲಿ ಹಸೆಮಣೆ ಏರಬೇಕಿದ್ದವ ಪೊಲೀಸ್ ಮೆಟ್ಟಿಲೇರಿದ!
Published On - 10:16 am, Wed, 19 January 22