
ಬೆಂಗಳೂರು, ಅಕ್ಟೋಬರ್ 8: ಕೆಪಿಎಸ್‌ಸಿ ಪಶುವೈದ್ಯಾಧಿಕಾರಿಗಳ ನೇಮಕಾತಿ ಹಗರಣದ ತನಿಖೆ ಮುಂದುವರಿದಿದ್ದು, ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಹಾಗೂ ಸದಸ್ಯೆ ಬಿ.ವಿ. ಗೀತಾ ವಿರುದ್ಧ ಜಾರಿ ನಿರ್ದೇಶನಾಲಯ (ED) ಕೋರ್ಟ್‌ನಲ್ಲಿ ಹಲವು ಗಂಭೀರ ಆರೋಪಗಳನ್ನು ಮಾಡಿದೆ. ಅಭ್ಯರ್ಥಿಗಳಿಂದ ಹಣ ಪಡೆಯುವುದು, ಪ್ರಶ್ನೆಪತ್ರಿಕೆ ಜೊತೆಗೆ ಉತ್ತರಗಳನ್ನು ಲೀಕ್ ಮಾಡುವುದು, ಪರೀಕ್ಷೆಗೂ ಮುನ್ನ ಅಭ್ಯರ್ಥಿಗಳನ್ನು ಹೋಟೆಲ್ ಹಾಗೂ ರೆಸಾರ್ಟ್‌ಗಳಲ್ಲಿ ಇರಿಸುವುದು ಸೇರಿದಂತೆ ಹಲವು ಅಂಶಗಳನ್ನು ಇಡಿ ತನಿಖೆಯಲ್ಲಿ ಪತ್ತೆಯಾಗಿವೆ ಎಂದು ಕೋರ್ಟ್‌ಗೆ ತಿಳಿಸಲಾಗಿದೆ.
ಇಡಿ ಪರ ವಕೀಲರ ವಾದದ ಪ್ರಕಾರ, ಅಭ್ಯರ್ಥಿಗಳಿಗೆ ಸರ್ಕಾರಿ ಕೆಲಸ ಕೊಡಿಸುವ ಸಂಬಂಧ ₹80 ಲಕ್ಷದವರೆಗೆ ಹಣಕ್ಕೆ ಡೀಲಿಂಗ್ ನಡೆದಿತ್ತು. ಮೊದಲ ಹಂತದಲ್ಲಿ ₹40 ಲಕ್ಷ ಪಡೆಯಲಾಗಿದ್ದು, ಕೆಲಸ ಸಿಗುವುದು ಖಚಿತವಾದ ಬಳಿಕ ಉಳಿದ ₹40 ಲಕ್ಷ ನೀಡುವಂತೆ ಸೂಚಿಸಲಾಗಿತ್ತು. ಇಬ್ಬರು ಅಭ್ಯರ್ಥಿಗಳಾದ ವಿನುತಾ ಹಾಗೂ ನಂದೀಶ್ ಅವರ ತಂದೆಯರೊಂದಿಗೆ ಹಣದ ವ್ಯವಹಾರದ ಕುರಿತು ಮಾತುಕತೆ ನಡೆದಿತ್ತು ಎಂದು ಇಡಿ ಕೋರ್ಟ್‌ಗೆ ಮಾಹಿತಿ ನೀಡಿದೆ. ಅಭ್ಯರ್ಥಿಗಳ ಅಂತಿಮ ಆಯ್ಕೆಗೂ ಮುನ್ನ ವಿನುತಾ ತಂದೆಯನ್ನು ಸಂಪರ್ಕಿಸಿದ್ದ ಶಿವಶಂಕರಪ್ಪ, ಹೋಟೆಲ್‌ನಲ್ಲಿ ಭೇಟಿಯಾಗಿ ಹಣದ ಬಗ್ಗೆ ಚರ್ಚಿಸಿದ್ದರು.
2026ರ ಜನವರಿ 6 ಮತ್ತು 8ರಂದು ವಿನುತಾ ತಂದೆಯೊಂದಿಗೆ ಸಂಪರ್ಕ ನಡೆದಿದ್ದು, ಬೆಂಗಳೂರಿನ ಡಾಲರ್ಸ್ ಕಾಲೋನಿಯಲ್ಲಿರುವ ಶಿವಶಂಕರಪ್ಪ ನಿವಾಸದಲ್ಲೂ ಭೇಟಿಯಾಗಿದ್ದರೆಂದು ಇಡಿ ವಾದ ಮಂಡನೆ ವೇಳೆ ತಿಳಿಸಲಾಗಿದೆ. ವಿನುತಾ ಹಾಲಪ್ಪ ಅವರಿಂದ ₹50 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟು, ಮೊದಲ ಹಂತದಲ್ಲಿ ₹10 ಲಕ್ಷ ಪಡೆದಿದ್ದರು ಎಂದು ಇಡಿ ಪರ ವಕೀಲ ಮಧುರಾವ್ ಕೋರ್ಟ್‌ಗೆ ತಿಳಿಸಿದ್ದಾರೆ.
ಕನ್ನಡ ಮತ್ತು ಜನರಲ್ ಸೈನ್ಸ್ ಪರೀಕ್ಷೆಗಳಲ್ಲಿ ಅಕ್ರಮ ನಡೆದಿರುವ ಆರೋಪವಿದೆ. ಜ್ಞಾನೇಂದ್ರ ಕುಮಾರ್ ಗಂಗ್ವಾರ್ ಹಾಗೂ ಬಸವರಾಜ್ ಕನ್ನಾಳೆ ಜೊತೆ ಸೇರಿ ಶಿವಶಂಕರಪ್ಪ ಪ್ರಶ್ನೆಪತ್ರಿಕೆ ಜೊತೆಗೆ ಉತ್ತರಗಳನ್ನೂ ಲೀಕ್ ಮಾಡಿದ್ದರು ಎಂದು ಕೋರ್ಟ್‌ಗೆ ಇಡಿ ತಿಳಿಸಿದೆ. ಪರೀಕ್ಷೆಗೂ ಮುನ್ನ ಅಭ್ಯರ್ಥಿಗಳನ್ನು ಹೋಟೆಲ್ ಹಾಗೂ ರೆಸಾರ್ಟ್‌ಗಳಲ್ಲಿ ಇರಿಸಲಾಗಿತ್ತು. ಪರೀಕ್ಷೆಗೂ ಮುನ್ನ ದಿನ ಅಭ್ಯರ್ಥಿಗಳ ಮೊಬೈಲ್‌ಗಳನ್ನು ಸ್ವಿಚ್ ಆಫ್ ಮಾಡಿಸಲಾಗಿತ್ತು. ಪರೀಕ್ಷೆ ದಿನ ಅವರನ್ನು ಪರೀಕ್ಷಾ ಕೇಂದ್ರಕ್ಕೆ ಡ್ರಾಪ್ ಮಾಡಲಾಗಿತ್ತು ಎಂದು ಇಡಿ ವಾದಿಸಿದೆ.
ಈ ಅಕ್ರಮಕ್ಕೆ ಸಂಬಂಧಿಸಿದಂತೆ ಎಲೆಕ್ಟ್ರಾನಿಕ್ ಡಿವೈಸ್ ಹಾಗೂ ತಾಂತ್ರಿಕ ಸಾಕ್ಷ್ಯಗಳು ಲಭ್ಯವಿವೆ ಎಂದು ಇಡಿ ತಿಳಿಸಿದೆ. ಕೆಪಿಎಸ್‌ಸಿ ಕಚೇರಿ ಮೇಲೆ ನಡೆದ ದಾಳಿ ವೇಳೆ ಮಹತ್ವದ ದಾಖಲೆಗಳು ಹಾಗೂ ಸಾಕ್ಷ್ಯಗಳು ಸಿಕ್ಕಿವೆ ಎನ್ನಲಾಗಿದೆ.
2026ರ ಜನವರಿ 8ರಂದು ಕಿರಣ್ ಗೌಡ ಅವರು ಖಾಲಿ ಚೆಕ್ ನೀಡಿದ್ದರೆಂದು ಕೋರ್ಟ್‌ಗೆ ಇಡಿ ಮಾಹಿತಿ ನೀಡಿದೆ. ಅಭ್ಯರ್ಥಿಗಳಿಂದ ಪಡೆದಿದ್ದ ಖಾಲಿ ಚೆಕ್‌ಗಳು ಹಾಗೂ ಪ್ರಾಮಿಸರಿ ನೋಟ್‌ಗಳು ಶಿವಶಂಕರಪ್ಪ ಬಳಿ ಪತ್ತೆಯಾಗಿವೆ ಎಂದು ತನಿಖಾ ಸಂಸ್ಥೆ ತಿಳಿಸಿದೆ.
ಕೆಪಿಎಸ್‌ಸಿ ಸದಸ್ಯೆ ಬಿ.ವಿ. ಗೀತಾ ಅವರ ಪಾತ್ರದ ಬಗ್ಗೆಯೂ ಕೋರ್ಟ್‌ನಲ್ಲಿ ಇಡಿ ಆರೋಪಗಳನ್ನು ಮಾಡಿದೆ. ಅಭ್ಯರ್ಥಿ ನಂದೀಶ್ ತಂದೆ ಬಸವರಾಜಪ್ಪ ಅವರು ಗೀತಾ ಅವರನ್ನು ಭೇಟಿ ಮಾಡಿದ್ದರು, ಕೆಲಸ ಕೊಡಿಸುವ ಸಂಬಂಧ ಮೊದಲು ₹50 ಲಕ್ಷಕ್ಕೆ ಬೇಡಿಕೆ ಇಡಲಾಗಿತ್ತು. ಬಳಿಕ ₹40 ಲಕ್ಷಕ್ಕೆ ಡೀಲಿಂಗ್ ನಡೆದಿತ್ತು ಎಂದು ಇಡಿ ವಾದಿಸಿದೆ.
ಇದನ್ನೂ ಓದಿ: ಕೆಪಿಎಸ್‌ಸಿ ಹಗರಣದಲ್ಲಿ ಶಿವಶಂಕರಪ್ಪ ಸಾಹುಕಾರ್, ಬಿ.ವಿ.ಗೀತಾ ಪಾತ್ರವೇನು? ಇಲ್ಲಿದೆ ಮಾಹಿತಿ
ಮೊದಲ ಹಂತದಲ್ಲಿ ಗೀತಾ ₹20 ಲಕ್ಷ ಪಡೆದಿದ್ದರು ಎಂದು ಇಡಿ ಆರೋಪಿಸಿದೆ. ನಂದೀಶ್ ತಂದೆ ಬಸವರಾಜಪ್ಪರಿಂದ ಹಣ ಪಡೆದಿರುವ ಬಗ್ಗೆ ಅವರ ಹೇಳಿಕೆಯನ್ನು ಈಗಾಗಲೇ ದಾಖಲಿಸಿಕೊಳ್ಳಲಾಗಿದೆ ಎಂದು ಜಾರಿ ನಿರ್ದೇಶನಾಲಯದ ಪರ ವಕೀಲ ಮಧುರಾವ್ ಕೋರ್ಟ್‌ಗೆ ತಿಳಿಸಿದ್ದಾರೆ.
ಕೆಪಿಎಸ್‌ಸಿ ಪಶುವೈದ್ಯಾಧಿಕಾರಿ ನೇಮಕಾತಿ ಅಕ್ರಮದಲ್ಲಿ ಆರೋಪಿಗಳು ಪ್ರಾಥಮಿಕವಾಗಿ ಆರು ಅಭ್ಯರ್ಥಿಗಳಿಂದ ಅಡ್ವಾನ್ಸ್ ಹಣ ಪಡೆದಿರುವುದು ಪತ್ತೆಯಾಗಿರುವ ಬಗ್ಗೆ ಮಾಹಿತಿ ದೊರೆತಿದೆ. ಇಡಿ ತನಿಖೆ ವೇಳೆ ಈ ಆರು ಅಭ್ಯರ್ಥಿಗಳ ಹೆಸರುಗಳು ಬಹಿರಂಗವಾಗಿವೆ. ವಿನುತಾ ಮಲ್ಲಪ್ಪ ಹಿತ್ತಲಮನಿ, ನಂದೀಶ್, ಸೂಗುರೇಶ್, ತೇಜಸ್, ನವೀನ್ ಕುಮಾರ್ ಹಾಗೂ ಕಿರಣ್ ಕುಮಾರ್ ಎನ್ ಹೆಸರುಗಳು ತನಿಖೆಯಲ್ಲಿ ಲಭ್ಯವಾಗಿವೆ.
ಈ ಆರು ಅಭ್ಯರ್ಥಿಗಳು ಪ್ರತ್ಯೇಕವಾಗಿ ಸಾಹುಕಾರ್ ಮತ್ತು ಗೀತಾ ಅವರೊಂದಿಗೆ ನೇರ ಸಂಪರ್ಕದಲ್ಲಿದ್ದರು. ಅಭ್ಯರ್ಥಿಗಳಿಗೆ ಪರೀಕ್ಷೆಗೂ ಮುನ್ನ ಉತ್ತರಗಳನ್ನು ನೀಡುವ ಕೆಲಸವನ್ನು ಗ್ಯಾನೇಂದ್ರ ಕುಮಾರ್ ಮಾಡಿದ್ದರು ಎಂಬ ಆರೋಪವೂ ಇದೆ.
ಪರೀಕ್ಷೆಗೂ ಮುನ್ನ ಚಿಕ್ಕ ಚೀಟಿಯಲ್ಲಿ 80 ಪ್ರಶ್ನೆಗಳಿಗೆ ಉತ್ತರಗಳನ್ನು ನೀಡುವ ಕೆಲಸ ಮಾಡಲಾಗಿತ್ತು ಎಂಬುದೂ ತಿಳಿದುಬಂದಿದೆ. ಚೀಟಿಯ ಮೇಲ್ಭಾಗದಲ್ಲಿ ಅಭ್ಯರ್ಥಿಗಳಿಗೆ ಸಂಬಂಧಿಸಿದ ಮೂರು ಇಂಗ್ಲಿಷ್ ಅಕ್ಷರಗಳ ಕೋಡ್ ನಮೂದಿಸಲಾಗುತ್ತಿತ್ತು. ಅದರ ಮುಂದೆ ಅಭ್ಯರ್ಥಿಗಳ ಆನ್ಸರ್ ಬುಕ್‌ಲೆಟ್ ಸೀರಿಸ್ ಬರೆಯಲಾಗುತ್ತಿತ್ತು. ಇಂತಹ ಚೀಟಿಗಳು ಸಾಹುಕಾರ್ ಅವರ ಮನೆ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ ಸಂದರ್ಭದಲ್ಲಿ ಪತ್ತೆಯಾಗಿವೆ. ಈ ಹಿನ್ನೆಲೆಯಲ್ಲಿ ಕೆಪಿಎಸ್‌ಸಿ ಪ್ರಕರಣದಲ್ಲಿ ಇಡಿ ಅಧಿಕಾರಿಗಳ ತನಿಖೆ ಮುಂದುವರಿದಿದೆ.
ಕೆಪಿಎಸ್‌ಸಿ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಹಾಗೂ ಸದಸ್ಯೆ ಬಿ.ವಿ. ಗೀತಾ ಅವರನ್ನು ಅಕ್ಟೋಬರ್ 19ರವರೆಗೆ ಇಡಿ ಕಸ್ಟಡಿಗೆ ನೀಡಲಾಗಿದೆ. ಪ್ರಕರಣದ ತನಿಖೆಯಲ್ಲಿ ಮತ್ತಷ್ಟು ಅಂಶಗಳು ಹೊರಬರುವ ಸಾಧ್ಯತೆಯಿದ್ದು, ಇಬ್ಬರನ್ನೂ ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗುತ್ತಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:35 am, Thu, 8 October 26