ನಕಲಿ ಪ್ರಶ್ನೆಪತ್ರಿಕೆ ಹಾವಳಿ: ವಿದ್ಯಾರ್ಥಿಗಳೇ ನಂಬಿ ಮೋಸ ಹೋಗದಿರಿ ಎಂದ KSEAB

ದ್ವಿತೀಯ ಪಿಯುಸಿ ಪರೀಕ್ಷೆಗೂ ಮುನ್ನ ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಪ್ರಶ್ನೆಪತ್ರಿಕೆ ಹರಿದಾಡುತ್ತಿರುವ ಬಗ್ಗೆ KSEAB ಎಚ್ಚರಿಕೆ ನೀಡಿದ್ದು, ವಿದ್ಯಾರ್ಥಿಗಳು ನಂಬಿ ಮೋಸ ಹೋಗಬಾರದೆಂದು ಮನವಿ ಮಾಡಿದೆ. KSEAB ಈ ಸಂಬಂಧ ಸೈಬರ್ ಪೊಲೀಸರಿಗೆ ದೂರು ನೀಡೋದಾಗಿ ತಿಳಿಸಿದ್ದು, ಪರೀಕ್ಷೆಗಳ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣಗಳ ಮೇಲೆ ತೀವ್ರ ನಿಗಾ ವಹಿಸಲು ನಿರ್ಧರಿಸಿದೆ.

ನಕಲಿ ಪ್ರಶ್ನೆಪತ್ರಿಕೆ ಹಾವಳಿ: ವಿದ್ಯಾರ್ಥಿಗಳೇ ನಂಬಿ ಮೋಸ ಹೋಗದಿರಿ ಎಂದ KSEAB
ಸಾಂದರ್ಭಿಕ ಚಿತ್ರ
Image Credit source: Google

Updated on: Feb 26, 2026 | 4:29 PM

ಬೆಂಗಳೂರು, ಫೆಬ್ರವರಿ 26: 2026ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಗೆ ಕೌಂಟ್​​ಡೌನ್​​ ನಡುವೆ ಕೆಲವು ದುಷ್ಕರ್ಮಿಗಳು ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಪ್ರಶ್ನೆಪತ್ರಿಕೆಗಳನ್ನು ಹಂಚುತ್ತಿರುವ ಆರೋಪ ಕೇಳಿಬಂದಿದೆ. ಈ ಕುರಿತು ಪ್ರತಿಕ್ರಿಯಿಸಿದ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ (KSEAB) ಅಧ್ಯಕ್ಷ ಪ್ರಕಾಶ್ ನಿಟ್ಟಾಲಿ, ಆನ್‌ಲೈನ್‌ನಲ್ಲಿ ಹರಿದಾಡುತ್ತಿರುವ ಪ್ರಶ್ನೆಪತ್ರಿಕೆ ನಕಲಿ ಎಂದು ಸ್ಪಷ್ಟಪಡಿಸಿದ್ದಾರೆ. ಈ ಕುರಿತು ಸಂಬಂಧಪಟ್ಟವರನ್ನು ಪತ್ತೆಹಚ್ಚಲು ಸೈಬರ್ ಪೊಲೀಸರಿಗೆ ದೂರು ನೀಡೋದಾಗಿಯೂ ತಿಳಿಸಿದ್ದಾರೆ.

ಕರ್ನಾಟಕ ಬೋರ್ಡ್ SSLC ಪರೀಕ್ಷೆಗಳು ಮಾರ್ಚ್ 18ರಿಂದ ಆರಂಭವಾಗಲಿದ್ದರೆ, ಪಿಯುಸಿ ಪರೀಕ್ಷೆಗೆ ಬೆರಳೆಣಿಕೆ ದಿನಗಳಷ್ಟೇ ಬಾಕಿಯಿದ್ದು ಫೆಬ್ರವರಿ 28ರಿಂದ ಪ್ರಾರಂಭವಾಗಲಿವೆ. ಈ ಹಿನ್ನೆಲೆ ನಕಲಿ ಪ್ರಶ್ನೆ ಪತ್ರಿಕೆಗಳ ಹರಿದಾಟ ಆರೋಪ ಕೇಳಿಬಂದ ಕಾರಣ SSLC ಮತ್ತು PU ಪರೀಕ್ಷೆಗಳ ವೇಳೆ ಸಾಮಾಜಿಕ ಜಾಲತಾಣಗಳ ಮೇಲೆ ನಿಗಾವಹಿಸುವುದಾಗಿ ರಾಜ್ಯ ಸರ್ಕಾರ ಘೋಷಿಸಿದೆ. ಪೂರ್ವಭಾವಿ ಪರೀಕ್ಷೆಗಳ ವೇಳೆಯೂ ಇಂತಹ ಘಟನೆಗಳು ಮೇಲಿಂದ ಮೇಲೆ ನಡೆದಿರುವುದರಂದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಮುಖ್ಯ ಪರೀಕ್ಷೆಗಳ ಸಮಯದಲ್ಲಿ ಸಾಮಾಜಿಕ ಜಾಲತಾಣಗಳ ಮೇಲಿನ ನಿಗಾವನ್ನು ಮತ್ತಷ್ಟು ಕಠಿಣಗೊಳಿಸಲು ನಿರ್ಧರಿಸಿದೆ.

ಇದನ್ನೂ ಓದಿ: ದ್ವಿತೀಯ ಪಿಯು ಪರೀಕ್ಷೆಗೂ ಮುನ್ನ ವಿದ್ಯಾರ್ಥಿಗಳಿಗೆ ಆತಂಕ; ಪ್ರಶ್ನೆ ಪತ್ರಿಕೆ ಬೇಕಾದರೆ ಮೆಸೇಜ್ ಮಾಡಿ ಎಂಬ ಪೋಸ್ಟ್ ವೈರಲ್!

ಶಿಕ್ಷಣ ಸಚಿವ ಮಧು ಬಂಗಾರಪ್ಪ ಈ ಸಂಬಂಧ ಅದಾಗಲೇ ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಪೊಲೀಸ್ ಅಧೀಕ್ಷಕರು ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಉನ್ನತ ಮಟ್ಟದ ಪರಿಶೀಲನಾ ಸಭೆ ನಡೆಸಿದ್ದಾರೆ. ನಕಲಿ ಪ್ರಶ್ನೆ ಪತ್ರಿಕೆ ಅಥವಾ ಪ್ರಶ್ನೆ ಪತ್ರಿಕೆ ಸೋರಿಕೆ ಆಗದಂತೆ ತಡೆಯಲು ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದ್ದಾರೆ.

ಈ ವರ್ಷ ದ್ವಿತೀಯ ಪಿಯುಸಿ ಪರೀಕ್ಷೆಗೆ 5,174 ಪಿಯು ಕಾಲೇಜುಗಳಿಂದ ಒಟ್ಟು 7,10,363 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ. ಇವರಲ್ಲಿ 2,92,645 ಮಂದಿ ವಿಜ್ಞಾನ ವಿಭಾಗದವರು, 2,11,174 ಮಂದಿ ವಾಣಿಜ್ಯ ಹಾಗೂ 1,42,982 ಮಂದಿ ಕಲಾ ವಿಭಾಗದ ವಿದ್ಯಾರ್ಥಿಗಳಿದ್ದಾರೆ. ರಾಜ್ಯದಾದ್ಯಂತ 1,217 ಕೇಂದ್ರಗಳಲ್ಲಿ ಪರೀಕ್ಷೆಗಳು ನಡೆಯಲಿವೆ. ಹಾಗೆಯೇ SSLC ಪರೀಕ್ಷೆಗಳು 2,871 ಕೇಂದ್ರಗಳಲ್ಲಿ ನಡೆಯಲಿದ್ದು, 15,941 ಶಾಲೆಗಳಿಂದ ದಾಖಲೆ ಪ್ರಮಾಣದ 9,02,889 ವಿದ್ಯಾರ್ಥಿಗಳು ಈ ವರ್ಷ ಪರೀಕ್ಷೆ ಬರೆಯಲಿದ್ದಾರೆ ಎಂದು ಇಂಡಿಯನ್​​ ಎಕ್ಸ್​​ಪ್ರೆಸ್​​ ವರದಿ ಮಾಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 4:27 pm, Thu, 26 February 26

Follow Us