AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿವಿಲ್ ಪೊಲೀಸ್ ಕಾನ್‌ಸ್ಟೇಬಲ್ ನೇಮಕಾತಿ: ಸೆ. 28 ರಿಂದ ವಲಯವಾರು ದೈಹಿಕ ಪರೀಕ್ಷೆ ಆರಂಭ!

ರಾಜ್ಯ ಪೊಲೀಸ್ ಇಲಾಖೆಯ ಸಿವಿಲ್ ಕಾನ್‌ಸ್ಟೆಬಲ್ (3,991 ಹುದ್ದೆಗಳು) ನೇಮಕಾತಿಗೆ KEA ದೈಹಿಕ ಪರೀಕ್ಷೆ (PST/ET) ದಿನಾಂಕಗಳನ್ನು ಪ್ರಕಟಿಸಿದೆ. ಲಿಖಿತ ಪರೀಕ್ಷೆಯಲ್ಲಿ ಅರ್ಹತೆ ಪಡೆದ 19,396 ಅಭ್ಯರ್ಥಿಗಳಿಗೆ ಸೆಪ್ಟೆಂಬರ್ 28 ರಿಂದ ವಲಯವಾರು ಪರೀಕ್ಷೆಗಳು ಆರಂಭವಾಗಲಿವೆ. ಅಭ್ಯರ್ಥಿಗಳು ತಮ್ಮ ಕರೆ ಪತ್ರಗಳನ್ನು (Call Letter) KEA ವೆಬ್‌ಸೈಟ್‌ನಿಂದ ಡೌನ್‌ಲೋಡ್ ಮಾಡಿಕೊಂಡು, ನಿಗದಿತ ದಿನಾಂಕದಂದು ಹಾಜರಾಗಬೇಕು.

ಸಿವಿಲ್ ಪೊಲೀಸ್ ಕಾನ್‌ಸ್ಟೇಬಲ್ ನೇಮಕಾತಿ: ಸೆ. 28 ರಿಂದ ವಲಯವಾರು ದೈಹಿಕ ಪರೀಕ್ಷೆ ಆರಂಭ!
ಸಿವಿಲ್ ಪೊಲೀಸ್ ಕಾನ್‌ಸ್ಟೇಬಲ್ ನೇಮಕಾತಿ
ಅಕ್ಷತಾ ವರ್ಕಾಡಿ
|

Updated on: Sep 26, 2026 | 3:24 PM

Share

ಬೆಂಗಳೂರು: ರಾಜ್ಯ ಪೊಲೀಸ್ ಇಲಾಖೆಯಲ್ಲಿನ ಸಿವಿಲ್ ಪೊಲೀಸ್ ಕಾನ್‌ಸ್ಟೇಬಲ್ (ಆರ್‌ಪಿಸಿ ಮತ್ತು ಕೆಕೆ) ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಮುಂದಿನ ಹಂತದ ಆಯ್ಕೆ ಪ್ರಕ್ರಿಯೆ ಬಿರುಸಿನಿಂದ ಆರಂಭಗೊಂಡಿದೆ. ಕಳೆದ ಆಗಸ್ಟ್ 2 ರಂದು ರಾಜ್ಯಾದ್ಯಂತ ಯಶಸ್ವಿಯಾಗಿ ನಡೆಸಲಾಗಿದ್ದ ಲಿಖಿತ ಪರೀಕ್ಷೆಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳಿಗೆ ಇದೀಗ ದೈಹಿಕ ಪರೀಕ್ಷೆಯ ಹಂತ ಎದುರಾಗಿದೆ. ಮುಂದಿನ ಸುತ್ತಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ದೇಹದಾರ್ಢ್ಯ ಪರೀಕ್ಷೆ (PST) ಹಾಗೂ ಸಹಿಷ್ಣುತಾ ಪರೀಕ್ಷೆಯ (ET) ದಿನಾಂಕ ಮತ್ತು ವಲಯವಾರು ವೇಳಾಪಟ್ಟಿಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಬಿಡುಗಡೆ ಮಾಡಿದೆ.

3,991 ಹುದ್ದೆಗಳಿಗೆ 19,396 ಅಭ್ಯರ್ಥಿಗಳ ಸ್ಪರ್ಧೆ:

ಈ ಬೃಹತ್ ನೇಮಕಾತಿ ಅಭಿಯಾನದ ಮೂಲಕ ರಾಜ್ಯಾದ್ಯಂತ ಒಟ್ಟು 3,991 ಸಿವಿಲ್ ಪೊಲೀಸ್ ಕಾನ್‌ಸ್ಟೇಬಲ್ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಲಿಖಿತ ಪರೀಕ್ಷೆಯ ಫಲಿತಾಂಶದ ಆಧಾರದ ಮೇಲೆ ಒಟ್ಟು 19,396 ಅರ್ಹ ಅಭ್ಯರ್ಥಿಗಳು ದೈಹಿಕ ಪರೀಕ್ಷೆಯಲ್ಲಿ ಪಾಲ್ಗೊಳ್ಳಲು ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ. ಉಳಿಕೆ ಮೂಲ ವೃಂದದ (RPC) 3,395 ಹುದ್ದೆಗಳಿಗೆ 16,454 ಅಭ್ಯರ್ಥಿಗಳು ಪರೀಕ್ಷೆಗೆ ಆಯ್ಕೆಯಾಗಿದ್ದರೆ, ಕಲ್ಯಾಣ ಕರ್ನಾಟಕ (KK) ವೃಂದದ 596 ಹುದ್ದೆಗಳಿಗೆ 2,942 ಅಭ್ಯರ್ಥಿಗಳು ಮುಂದಿನ ಸುತ್ತಿಗೆ ಅರ್ಹತೆ ಪಡೆದುಕೊಂಡಿದ್ದಾರೆ.

ಆರ್‌ಪಿಸಿ ವೃಂದ: ಬೆಂಗಳೂರು ನಗರ ಮತ್ತು ಕೇಂದ್ರ ವಲಯದ ಪರೀಕ್ಷಾ ವಿವರ:

ಉಳಿಕೆ ಮೂಲ ವೃಂದದ (RPC) ಪರೀಕ್ಷೆಗಳು ಸೆಪ್ಟೆಂಬರ್ 28 ರಿಂದ ವಿವಿಧ ಹಂತಗಳಲ್ಲಿ ಆರಂಭವಾಗಲಿವೆ. ಅತ್ಯಂತ ಹೆಚ್ಚು ಅಂದರೆ 2,015 ಹುದ್ದೆಗಳನ್ನು ಹೊಂದಿರುವ ಬೆಂಗಳೂರು ನಗರ ಘಟಕದ 9,887 ಅಭ್ಯರ್ಥಿಗಳಿಗೆ ಸೆಪ್ಟೆಂಬರ್ 28 ರಿಂದ ಅಕ್ಟೋಬರ್ 05 ರವರೆಗೆ ಚಾಮರಾಜಪೇಟೆಯ ಸಿಎಆರ್ (ಹೆಚ್‌ಕ್ಯೂ) ಮೈದಾನ, ಆಡುಗೋಡಿಯ ಸಿಎಆರ್ (ದಕ್ಷಿಣ) ಹಾಗೂ ಥಣಿಸಂದ್ರ ಮುಖ್ಯ ರಸ್ತೆಯ ಸಿಎಆರ್ (ಉತ್ತರ) ಪೆರೇಡ್ ಮೈದಾನಗಳಲ್ಲಿ ಪರೀಕ್ಷೆಗಳು ಜರುಗಲಿವೆ. ಇನ್ನು ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು, ಬೆಂಗಳೂರು ಜಿಲ್ಲೆ ಹಾಗೂ ರೈಲ್ವೆ ಘಟಕಗಳನ್ನೊಳಗೊಂಡ ಕೇಂದ್ರ ವಲಯದ 200 ಹುದ್ದೆಗಳ 946 ಅಭ್ಯರ್ಥಿಗಳಿಗೆ ಸೆಪ್ಟೆಂಬರ್ 28 ರಿಂದ ಅಕ್ಟೋಬರ್ 03 ರವರೆಗೆ ಕೊರಮಂಗಲದ 3ನೇ ಬೆಟಾಲಿಯನ್ ಕೆಎಸ್‌ಆರ್‌ಪಿ ಮೈದಾನದಲ್ಲಿ ದೈಹಿಕ ಪರೀಕ್ಷೆ ನಡೆಯಲಿದೆ.

ಆರ್‌ಪಿಸಿ ವೃಂದ: ದಕ್ಷಿಣ, ಪೂರ್ವ ಮತ್ತು ಪಶ್ಚಿಮ ವಲಯದ ವೇಳಾಪಟ್ಟಿ:

ಮೈಸೂರು, ಹಾಸನ, ಕೊಡಗು, ಚಾಮರಾಜನಗರ ಮತ್ತು ಮಂಡ್ಯ ಘಟಕಗಳನ್ನು ಒಳಗೊಂಡ ದಕ್ಷಿಣ ವಲಯದ 395 ಹುದ್ದೆಗಳ 1,891 ಅಭ್ಯರ್ಥಿಗಳಿಗೆ ಸೆಪ್ಟೆಂಬರ್ 28 ರಿಂದ ಅಕ್ಟೋಬರ್ 05 ರವರೆಗೆ ಮೈಸೂರಿನ ರೇಸ್ ಕೋರ್ಸ್ ಹಿಂಭಾಗದ ಸಿಟಿ ಆರ್ಮ್ಸ್ ರಿಸರ್ವ್ (CAR) ಮೈದಾನದಲ್ಲಿ ಪರೀಕ್ಷೆ ನಡೆಯಲಿದೆ. ಶಿವಮೊಗ್ಗ, ಹಾವೇರಿ, ದಾವಣಗೆರೆ ಮತ್ತು ಚಿತ್ರದುರ್ಗ ಘಟಕಗಳ ಪೂರ್ವ ವಲಯದ 250 ಹುದ್ದೆಗಳ 1,234 ಅಭ್ಯರ್ಥಿಗಳಿಗೆ ಸೆಪ್ಟೆಂಬರ್ 29 ರಿಂದ ಅಕ್ಟೋಬರ್ 06 ರವರೆಗೆ ಶಿವಮೊಗ್ಗದ ನವಿಲೆಯಲ್ಲಿರುವ ಕೃಷಿ ವಿಶ್ವವಿದ್ಯಾಲಯದ ಮೈದಾನದಲ್ಲಿ ಪರೀಕ್ಷೆ ನಿಗದಿಯಾಗಿದೆ. ಹಾಗೆಯೇ, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಚಿಕ್ಕಮಗಳೂರು ಮತ್ತು ಮಂಗಳೂರು ನಗರ ಘಟಕಗಳ ಪಶ್ಚಿಮ ವಲಯದ 395 ಹುದ್ದೆಗಳ 1,803 ಅಭ್ಯರ್ಥಿಗಳಿಗೆ ಸೆಪ್ಟೆಂಬರ್ 28 ರಿಂದ ಅಕ್ಟೋಬರ್ 03 ರವರೆಗೆ ಮಂಗಳೂರಿನ ಲಾಲ್‌ಬಾಗ್‌ನಲ್ಲಿರುವ ಮಂಗಳ ಕ್ರೀಡಾಂಗಣದಲ್ಲಿ ದೈಹಿಕ ಪರೀಕ್ಷೆ ಜರುಗಲಿದೆ.

ಆರ್‌ಪಿಸಿ ವೃಂದ: ಉತ್ತರ ಮತ್ತು ಬಳ್ಳಾರಿ ವಲಯದ ಪರೀಕ್ಷಾ ದಿನಾಂಕಗಳು:

ಗದಗ ಹಾಗೂ ಹುಬ್ಬಳ್ಳಿ-ಧಾರವಾಡ ನಗರ ಘಟಕಗಳನ್ನು ಒಳಗೊಂಡ ಉತ್ತರ ವಲಯದ 110 ಹುದ್ದೆಗಳಿಗೆ ಅರ್ಹತೆ ಪಡೆದ 549 ಅಭ್ಯರ್ಥಿಗಳಿಗೆ ಸೆಪ್ಟೆಂಬರ್ 29 ಮತ್ತು 30 ರಂದು ಬೆಳಗಾವಿಯ ಮಚ್ಚೆಯಲ್ಲಿರುವ 2ನೇ ಬೆಟಾಲಿಯನ್ ಕೆಎಸ್‌ಆರ್‌ಪಿ ಮೈದಾನದಲ್ಲಿ ಪರೀಕ್ಷೆ ನಡೆಯಲಿದೆ. ಇದರೊಂದಿಗೆ, ಬಳ್ಳಾರಿ ಮತ್ತು ರಾಯಚೂರು ಘಟಕಗಳನ್ನು ಒಳಗೊಂಡ ಬಳ್ಳಾರಿ ವಲಯದ (RPC) 30 ಹುದ್ದೆಗಳಿಗೆ ಆಯ್ಕೆಯಾಗಿರುವ 144 ಅಭ್ಯರ್ಥಿಗಳಿಗೆ ಅಕ್ಟೋಬರ್ 05 ರಿಂದ 06 ರವರೆಗೆ ಕೊಪ್ಪಳದ ಮುನಿರಾಬಾದ್‌ನ ಕೆಎಸ್‌ಆರ್‌ಪಿ ಪಿ.ಟಿ.ಎಸ್. ಮೈದಾನದಲ್ಲಿ ದೈಹಿಕ ಪರೀಕ್ಷೆ ನಿಗದಿಯಾಗಿದೆ.

ಇದನ್ನೂ ಓದಿ: CRPF ಬಂಪರ್ ನೇಮಕಾತಿ: ಕ್ರೀಡಾಪಟುಗಳಿಗೆ ಸುವರ್ಣಾವಕಾಶ; 521 ಕಾನ್‌ಸ್ಟೇಬಲ್ ಹುದ್ದೆಗಳಿಗೆ ಅರ್ಜಿ ಆಹ್ವಾನ!

ಕಲ್ಯಾಣ ಕರ್ನಾಟಕ (KK) ವೃಂದದ ದೈಹಿಕ ಪರೀಕ್ಷೆಗಳು:

ಕಲ್ಯಾಣ ಕರ್ನಾಟಕ ವೃಂದದ ಪರೀಕ್ಷೆಗಳು ಅಕ್ಟೋಬರ್ ಎರಡನೇ ವಾರದಿಂದ ಆರಂಭಗೊಳ್ಳಲಿವೆ. ಸಿಒಪಿ ಬೆಂಗಳೂರು ನಗರ (KK) ವಿಭಾಗದ 171 ಹುದ್ದೆಗಳಿಗೆ ಆಯ್ಕೆಯಾದ 833 ಅಭ್ಯರ್ಥಿಗಳಿಗೆ ಅಕ್ಟೋಬರ್ 08 ರಂದು ಬೆಂಗಳೂರಿನ ಚಾಮರಾಜಪೇಟೆ ಮತ್ತು ಆಡುಗೋಡಿ ಸಿಎಆರ್ ಮೈದಾನಗಳಲ್ಲಿ ಪರೀಕ್ಷೆ ಜರುಗಲಿದೆ. ಬಳ್ಳಾರಿ ವಲಯದ (KK) ಕೊಪ್ಪಳ, ರಾಯಚೂರು, ಬಳ್ಳಾರಿ ಮತ್ತು ವಿಜಯನಗರ ಘಟಕಗಳ 174 ಹುದ್ದೆಗಳ 869 ಅಭ್ಯರ್ಥಿಗಳಿಗೆ ಅಕ್ಟೋಬರ್ 12 ರಿಂದ 15 ರವರೆಗೆ ಕೊಪ್ಪಳದ ಮುನಿರಾಬಾದ್‌ನಲ್ಲಿ ಪರೀಕ್ಷೆ ನಡೆಸಲಾಗುತ್ತದೆ. ಅಂತಿಮವಾಗಿ, ಕಲಬುರಗಿ ನಗರ/ಜಿಲ್ಲೆ ಹಾಗೂ ಬೀದರ್ ಘಟಕಗಳ ಈಶಾನ್ಯ ವಲಯದ 251 ಹುದ್ದೆಗಳ 1,240 ಅಭ್ಯರ್ಥಿಗಳಿಗೆ ಅಕ್ಟೋಬರ್ 12 ರಿಂದ 14 ರವರೆಗೆ ಕಲಬುರಗಿಯ ತಾಜ್ ಸುಲ್ತಾನ್‌ಪುರದಲ್ಲಿರುವ 6ನೇ ಬೆಟಾಲಿಯನ್ ಕೆಎಸ್‌ಆರ್‌ಪಿ ಮೈದಾನದಲ್ಲಿ ಪರೀಕ್ಷೆಗಳು ನಡೆಯಲಿವೆ.

ಅಭ್ಯರ್ಥಿಗಳಿಗೆ ಪ್ರಮುಖ ಸೂಚನೆ ಮತ್ತು ಕರೆ ಪತ್ರದ ವಿವರ:

ದೈಹಿಕ ಪರೀಕ್ಷೆಗೆ ಅರ್ಹತೆ ಪಡೆದಿರುವ ಎಲ್ಲಾ ಅಭ್ಯರ್ಥಿಗಳು ತಮ್ಮ ಕರೆ ಪತ್ರವನ್ನು (Call Letter) ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (KEA) ಅಧಿಕೃತ ವೆಬ್‌ಸೈಟ್ cetonline.karnataka.gov.in/kea ನಿಂದ ತಕ್ಷಣವೇ ಡೌನ್‌ಲೋಡ್ ಮಾಡಿಕೊಳ್ಳಬಹುದು. ಅಭ್ಯರ್ಥಿಗಳು ತಮಗೆ ನಿಗದಿಪಡಿಸಿದ ದಿನಾಂಕ, ಸಮಯ ಹಾಗೂ ಪರೀಕ್ಷಾ ಕೇಂದ್ರಗಳಿಗೆ ಅಗತ್ಯ ದಾಖಲೆಗಳೊಂದಿಗೆ ಕಡ್ಡಾಯವಾಗಿ ಹಾಜರಾಗಬೇಕೆಂದು ಸೂಚಿಸಲಾಗಿದೆ.

ಉದ್ಯೋಗಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Follow Us
ಅಕ್ಷತಾ ವರ್ಕಾಡಿ
ಅಕ್ಷತಾ ವರ್ಕಾಡಿ

ಅಕ್ಷತಾ ವರ್ಕಾಡಿ – ಮೂಲತಃ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿಯವರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು, ಟಿವಿ9 ಡಿಜಿಟಲ್​ ಮೂಲಕ ವೃತ್ತಿ ಜೀವನವನ್ನು ಆರಂಭಿಸಿದ್ದಾರೆ. ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇವರಿಗಿದೆ. ಆಧ್ಯಾತ್ಮ, ಶಿಕ್ಷಣ, ಉದ್ಯೋಗವಕಾಶ, ಆರೋಗ್ಯ ಮತ್ತು ವೈರಲ್ ಸುದ್ದಿಗಳ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಇವರು ಓದುಗರಿಗೆ ಉತ್ತಮ ಹಾಗೂ ಆಸಕ್ತಿದಾಯಕ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More