KSRTC Package Tour: ಜೋಗ ಜಲಪಾತ ವೀಕ್ಷಣೆಗೆ ಕೆಎಸ್ಆರ್ಟಿಸಿಯಿಂದ ಊಟ ಸಹಿತ ಟೂರ್ ಪ್ಯಾಕೇಜ್, ಇಲ್ಲಿದೆ ಸಮಯ, ದರ ವಿವರ
ಮಲೆನಾಡು ಶಿವಮೊಗ್ಗ ಜಿಲ್ಲೆಯಲ್ಲಿ ಮಳೆರಾಯ ಆರ್ಭಟ ಜೋರಾಗಿದೆ. ಇದರಿಂದ ಜೋಗ ಜಲಪಾತ ಹಾಲಿನಂತೆ ಪ್ರಪಾತಕ್ಕೆ ಧುಮ್ಮುಕ್ಕುತ್ತಿದೆ. ಮುಂಗಾರಿನ ವೇಳೆ ಜಲಪಾತವನ್ನು ನೋಡ ಬಯಸಿದರೆ ನಿಮಗಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಊಟ, ತಿಂಡಿ ಸಹಿತವಾಗಿ ವಿಶೇಷ ಟೂರ್ ಪ್ಯಾಕೇಜ್ ಘೋಷಿಸಿದೆ.
ಬೆಂಗಳೂರು, ಜುಲೈ 17: ಮಲೆನಾಡಿನ ಹಚ್ಚ ಹಸಿರಿನ ಮಧ್ಯೆ ಜೋಗ ಜಲಪಾತ (Jog Falls) ಭೋರ್ಗರೆಯುತ್ತ ಧುಮ್ಮುಕ್ಕುತ್ತಿದೆ. ಹಾಲಿನಂತೆ ಪ್ರಪಾತಕ್ಕೆ ಧುಮ್ಮುಕ್ಕುವ ಜಲಪಾತದ ಸೌಂದರ್ಯವನ್ನು ಮಳೆಗಾಲದಲ್ಲಿ ನೋಡುವುದೇ ಆನಂದದ ಸಂಗತಿ. ಮುಂಗಾರಿನ ವೇಳೆ ಜಲಪಾತವನ್ನು ನೋಡ ಬಯಸಿದರೆ ನಿಮಗಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC) ಊಟ, ತಿಂಡಿ ಸಹಿತವಾಗಿ ವಿಶೇಷ ಟೂರ್ ಪ್ಯಾಕೇಜ್ ಘೋಷಿಸಿದೆ.
ವಾರಾಂತ್ಯ ಶುಕ್ರವಾರ (ಜು.19) ಮತ್ತು ಶನಿವಾರ (ಜು.20) ಎರಡು ದಿನವು ಕೆಎಸ್ಆರ್ಟಿಸಿಯ ನಾನ್ ಎಸಿ ಸ್ಲೀಪರ್ ಬಸ್ಗಳು ಪ್ರವಾಸಿಗರನ್ನು ಕರೆದುಕೊಂಡು ಹೋಗಿ, ಮರಳಿ ಕರೆತರುತ್ತವೆ. ಒಬ್ಬರಿಗೆ 3 ಸಾವಿರ ರೂ. ( 6 ರಿಂದ 12 ವರ್ಷದವರಿಗೆ 2,800 ರೂ.) ದರ ನಿಗದಿ ಮಾಡಿದೆ.
ಟೂರ್ ಸಮಯ ವಿವರ
ರಾತ್ರಿ 10:30 ವರೆಗೆ ಬೆಂಗಳೂರಿನಿಂದ ಹೊರಡುವ ಬಸ್ ನಸುಕಿನ ಜಾವ 5:30ಕ್ಕೆ ಸಾಗರ ತಲುಪಲಿದೆ. ನಂತರ ಹೋಟೆಲ್ನಲ್ಲಿ ಫ್ರೆಶ್ ಅಪ್ ಹಾಗೂ ವಿಶ್ರಾಂತಿಗೆ ಬೆಳಗ್ಗೆ 7 ಗಂಟೆವರೆಗೆ ಸಮಯವಿರುತ್ತದೆ. ಬಳಿಕ ಬೆಳಗ್ಗೆ 7:15ಕ್ಕೆ ಉಪಹಾರ ತಿಂದು ಅಲ್ಲಿಂದ 7:30ಕ್ಕೆ ವರದಹಳ್ಳಿ ತಲುಪಲಿದೆ. ನಂತರ ಅರ್ಧ ಗಂಟೆಯ ಆಸು ಪಾಸಿನಲ್ಲಿ ವರದಮೂಲದಿಂದ ಇಕ್ಕೇರಿ, ಕೆಳದಿ, ಸಾಗರಕ್ಕೆ ಬಸ್ ಬರಲಿದೆ.
ಸಾಗರದಲ್ಲಿ 1:15ಕ್ಕೆ ಮಧ್ಯಾಹ್ನದ ಊಟ ಮುಗಿಸಿಕೊಂಡು ಮಧ್ಯಾಹ್ನ 2 ಗಂಟೆಗೆ ಜೋಗ ತಲುಪಲಿದೆ. ಸಾಯಂಕಾಲ 5:15ಕ್ಕೆ ಸುಮಾರಿಗೆ ಜೋಗದಿಂದ ಹೊರಟು 6 ಗಂಟೆ ಹೊತ್ತಿಗೆ ಸಾಗರ ತಲುಪಲಿದೆ. ಸಾಗರದಲ್ಲಿ ಒಂದು ಗಂಟೆ ಕಾಲ ಶಾಪಿಂಗ್ ಮಾಡಿ, ರಾತ್ರಿ ಊಟ ಅಲ್ಲಿಯೇ ಮುಗಿಸಿಕೊಂಡು, 11 ಗಂಟೆಗೆ ಬಸ್ ಸಾಗರದಿಂದ ಹೊರಟು ನಸುಕಿನ ಜಾವ 5ಕ್ಕೆ ಬೆಂಗಳೂರು ತಲುಪಲಿದೆ.
ಇದನ್ನೂ ಓದಿ: ಬಿಎಂಟಿಸಿಯಿಂದ ಚಿಕ್ಕಬಳ್ಳಾಪುರ ರೌಂಡ್ಸ್: ಈಶಾ ಫೌಂಡೇಶನ್ ಸೇರಿದಂತೆ 5 ಪ್ರವಾಸಿ ತಾಣಗಳ ಸುತ್ತಾಟ
ಇದರೊಂದಿಗೆ ಕೆಎಸ್ಆರ್ಟಿಸಿ ಬೆಂಗಳೂರಿನಿಂದ ಸೋಮನಾಥಪುರ, ತಲಕಾಡು, ಮಧ್ಯರಂಗ, ಭರಚುಕ್ಕಿ, ಗಗನಚುಕ್ಕಿ ಜಲಪಾತಕ್ಕೂ ಟೂರ್ ಪ್ಯಾಕೇಜ್ ಘೋಷಿಸಿದೆ. ಒಬ್ಬರಿಗೆ 500 ರೂ. (6 ರಿಂದ 12 ವರ್ಷದವರಿಗೆ 350 ರೂ.) ನಿಗದಿ ಮಾಡಿದೆ.
ಟೂರ್ ಸಮಯ ವಿವರ
ಬೆಂಗಳೂರಿನಿಂದ ನಸುಕಿನ ಜಾವ 6:30ಕ್ಕೆ ಹೊರಟು ಬೆಳಗ್ಗೆ 8:30ಕ್ಕೆ ಬಸ್ ಮದ್ದೂರು ತಲುಪಲಿದೆ. ಮದ್ದೂರಿನಲ್ಲಿ ಉಪಹಾರ ಮಾಡಿಕೊಂಡು ಸೋಮನಾಥಪುರಕ್ಕೆ ಬೆಳಗ್ಗೆ 9:45ಕ್ಕೆ ತಲುಪಲಿದೆ. ಅಲ್ಲಿಂದ 1:45ಕ್ಕೆ ಹೊರಟು ತಲಕಾಡಿಗೆ ತಲುಪಲಿದೆ. ತಲಕಾಡು ಪಂಚಲಿಂಗ ದರ್ಶನ ಮತ್ತು ಊಟ ಮುಗಿಸಿಕೊಂಡು ಮಧ್ಯಾಹ್ನ 3 ಗಂಟೆಗೆ ಹೊರಟು ತಲಕಾಡಿನ ಮಧ್ಯರಂಗ, ರಂಗನಾಥ ಸ್ವಾಮಿ ದರ್ಶನ ಪಡೆದು ಭರಚುಕ್ಕಿಗೆ ಸಾಯಂಕಾಲ 5 ಗಂಟೆಗೆ ಬಸ್ ಬರಲಿದೆ. ನಂತರ ಭರಚುಕ್ಕಿಯಿಂದ ಗಗನಚುಕ್ಕಿ ತೆರಳಲಿದೆ. ಗಗನಚುಕ್ಕಿ ನೋಡಿಕೊಂಡು ರಾತ್ರಿ 10 ಗಂಟೆಗೆ ಬೆಂಗಳೂರಿಗೆ ಬಸ್ ಬರಲಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ