
ಬೆಂಗಳೂರು/ಕೊಚ್ಚಿನ್, ಏಪ್ರಿಲ್ 1: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು (KSRTC) ತರಬೇತಿ ಮತ್ತು ಸಾಂಸ್ಥಿಕ ಅಭಿವೃದ್ಧಿ (Training and Organisation Development) ಕ್ಷೇತ್ರದಲ್ಲಿ ಮಾಡಿರುವ ಅಭೂತಪೂರ್ವ ಸಾಧನೆಗಾಗಿ ಪ್ರತಿಷ್ಠಿತ ‘ವರ್ಲ್ಡ್ ಹೆಚ್‌ಆರ್‌ಡಿ ಕಾಂಗ್ರೆಸ್’ನ (World HRD Congress Award) ‘ಕೇರಳ ಲೀಡರ್‌ಶಿಪ್ ಪ್ರಶಸ್ತಿ-2026’ ಅನ್ನು ತನ್ನದಾಗಿಸಿಕೊಂಡಿದೆ. ಕೇರಳದ ಕೊಚ್ಚಿನ್‌ನಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ಈ ಗೌರವವನ್ನು ಪ್ರದಾನ ಮಾಡಲಾಯಿತು.
ನಿಗಮದ ವ್ಯಾಪ್ತಿಯ ಐದು ತರಬೇತಿ ಕೇಂದ್ರಗಳಲ್ಲಿ ಕಳೆದ 6 ತಿಂಗಳ ಅವಧಿಯಲ್ಲಿ 12,000ಕ್ಕೂ ಹೆಚ್ಚು ಸಿಬ್ಬಂದಿಗಳಿಗೆ ಪರಿಣಾಮಕಾರಿ ತರಬೇತಿ ನೀಡಿರುವುದನ್ನು ಪರಿಗಣಿಸಿ ಈ ಪ್ರಶಸ್ತಿ ನೀಡಲಾಗಿದೆ. ಇಂಧನ ಕ್ಷಮತೆ, ಅಪಘಾತ ರಹಿತ ಚಾಲನೆ, ಸಿಮ್ಯುಲೇಟರ್ ತರಬೇತಿ ಹಾಗೂ ರಸ್ತೆ ಸುರಕ್ಷತೆಯಂತಹ ಪ್ರಮುಖ ವಿಷಯಗಳಲ್ಲಿ ಸಿಬ್ಬಂದಿಗಳನ್ನು ಸಜ್ಜುಗೊಳಿಸಿರುವುದು ನಿಗಮದ ಈ ಸಾಧನೆಗೆ ಕಾರಣವಾಗಿದೆ.
ಇದರೊಂದಿಗೆ ಸಾರಿಗೆ ಇಲಾಖೆ ಮತ್ತು ಅಲ್ಪಸಂಖ್ಯಾತ ನಿರ್ದೇಶನಾಲಯದ ಸಹಯೋಗದೊಂದಿಗೆ ಪರಿಶಿಷ್ಟ ಜಾತಿ ಹಾಗೂ ಅಲ್ಪಸಂಖ್ಯಾತ ಅಭ್ಯರ್ಥಿಗಳಿಗೆ ಉಚಿತ ಭಾರಿ ವಾಹನ ಚಾಲನಾ ತರಬೇತಿ ಮತ್ತು ಪರವಾನಗಿ ವಿತರಿಸುವಂತಹ ಸಾಮಾಜಿಕ ಕಳಕಳಿಯ ಕಾರ್ಯಕ್ರಮಗಳೂ ಸಹ ಈ ಪ್ರಶಸ್ತಿಗೆ ಪೂರಕವಾಗಿವೆ.
ಕೊಚ್ಚಿನ್‌ನಲ್ಲಿ ನಡೆದ ಸಮಾರಂಭದಲ್ಲಿ ಶಿಪ್ ಟೆಕ್ನಾಲಜಿ ಕಾಲೇಜಿನ ನಿರ್ದೇಶಕ ಕ್ಯಾಪ್ಟನ್ ಎಸ್.ಟಿ. ಶ್ರೀಧರನ್ ಅವರಿಂದ ಕೆಎಸ್‌ಆರ್‌ಟಿಸಿ ಪರವಾಗಿ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ. ಲತಾ ಟಿ.ಎಸ್. ಹಾಗೂ ಹಾಸನ ಪ್ರಾದೇಶಿಕ ತರಬೇತಿ ಕೇಂದ್ರದ ಪ್ರಾಂಶುಪಾಲರಾದ ಎ.ಎಸ್. ಗೀತಾಂಜಲಿ ಪ್ರಶಸ್ತಿಯನ್ನು ಸ್ವೀಕರಿಸಿದರು.
ಇದನ್ನೂ ಓದಿ: ರಾಷ್ಟ್ರಮಟ್ಟದಲ್ಲಿ ಎರಡು ಪ್ರತಿಷ್ಠಿತ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡ ಕೆಎಸ್‌ಆರ್‌ಟಿಸಿ!
ಐದು ದಿನಗಳ ಹಿಂದಷ್ಟೇ ಇಲೆಟ್ಸ್ ಮೊಬಿಲಿಟಿ ಎಕ್ಸೆಲೆನ್ಸ್ ಪ್ರಶಸ್ತಿಗಳಲ್ಲಿ ಧ್ವನಿ ಸ್ಪಂದನ ಮತ್ತು AWATAR 4.0 ಯೋಜನೆಗಳಿಗಾಗಿ ಎರಡು ರಾಷ್ಟ್ರೀಯ ಪ್ರಶಸ್ತಿಗಳನ್ನು ಕೆಎಸ್‌ಆರ್‌ಟಿಸಿ ತನ್ನ ಮುಡಿಗೇರಿಸಿಕೊಂಡಿತ್ತು. ತಂತ್ರಜ್ಞಾನ ಮತ್ತು ಸಮುದಾಯದ ಸಲಹೆಗಳನ್ನು ಬಳಸಿ, ಸಮಾಜದ ಪ್ರತಿಯೊಬ್ಬರಿಗೂ (ವಿಶೇಷವಾಗಿ ವಿಕಲಚೇತನರು ಮತ್ತು ಹಿರಿಯ ನಾಗರಿಕರಿಗೆ) ಸುಲಭ ಹಾಗೂ ಸುರಕ್ಷಿತ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸುವ ಧ್ವನಿ ಸ್ಪಂದನ ಯೋಜನೆಗೆ ಪ್ರಶಸ್ತಿ ಲಭಿಸಿತ್ತು.