ಚಾಮರಾಜನಗರದಲ್ಲಿ ಮತ್ತೆ ಶಿಕ್ಷಕರ ಕೊರತೆ: 24ನೇ ಸ್ಥಾನಕ್ಕೆ ಕುಸಿದ ಫಲಿತಾಂಶ
ಇನ್ನೇನು ಜೂನ್ನಿಂದ 2024-25ನೇ ಸಾಲಿನ ಶೈಕ್ಷಣಿಕ ವರ್ಷ ಶುರುವಾಗಲಿದೆ. ಆದರೆ ಚಾಮರಾನಗರ ಜಿಲ್ಲೆಯಲ್ಲಿ ಪ್ರಾಥಮಿ ಹಾಗೂ ಪ್ರೌಢ ಶಾಲಾ ಶಿಕ್ಷಕರ ಕೊರತೆ ಎದುರಾಗಿದೆ. ಜಿಲ್ಲೆಯ ಪ್ರಾಥಮಿಕ ಶಾಲೆಗಳಲ್ಲಿ 2999 ಶಿಕ್ಷಕರ ಅಗತ್ಯವಿದೆ. ಹಾಗಾದರೆ ಸದ್ಯ ಇರುವ ಶಿಕ್ಷಕರು ಎಷ್ಟು? ಶಿಕ್ಷಕರ ಕೊರತೆ ಎಷ್ಟಿದೆ ಎನ್ನುವ ಅಂಕಿ-ಅಂಶ ಇಲ್ಲಿದೆ.
ಚಾಮರಾಜನಗರ, ಮೇ 15: ಹೇಳಿ ಕೇಳಿ ಮೊದಲೇ ಪೋಷಕರು ಸರ್ಕಾರಿ ಶಾಲೆಗಳೆಂದರೆ ಮೂಗು ಮುರಿಯುವ ಪರಿಸ್ಥಿತಿಯಿದೆ. ಇದಕ್ಕೆ ಕಾರಣ ಸರ್ಕಾರಿ ಶಾಲೆಗಳಲ್ಲಿ (Govt Schools) ಮೂಲಭೂತ ಸೌಕರ್ಯದ ಸಮಸ್ಯೆ. ಅದಕ್ಕೆ ನಿದರ್ಶನವೆಂಬಂತೆ ಗಡಿಜಿಲ್ಲೆ ಚಾಮರಾಜನಗರದಲ್ಲಿ ಮತ್ತೆ ಶಿಕ್ಷಕರ (teachers) ಕೊರತೆ ಹಾಗೂ ಶಾಲಾ ಕೊಠಡಿ ಸಮಸ್ಯೆ ಎದುರಾಗಿದೆ. ಇದರಿಂದ ಜಿಲ್ಲೆಯಲ್ಲಿ ಫಲಿತಾಂಶ ಕೂಡ ಕುಸಿತಗೊಂಡಿದೆ ಎಂಬ ಆರೋಪ ಬಂದಿದೆ. ಮೊದಲೇ ಪೋಷಕರು ಸರ್ಕಾರಿ ಶಾಲೆಗೆ ಮಕ್ಕಳನ್ನು ಸೇರಿಸಲು ಹಿಂದೇಟು ಹಾಕುತ್ತಿದ್ದಾರೆ. ಶಾಲೆಗಳಲ್ಲಿ ಮೂಲಭೂತ ಸೌಕರ್ಯ ಹಾಗೂ ಉತ್ತಮ ಕಲಿಕಾ ವಾತಾವರಣವಿಲ್ಲವೆಂದು ಖಾಸಗಿ ಶಾಲೆಗಳತ್ತ ಮುಖ ಮಾಡ್ತಿದ್ದಾರೆ. ಆದ್ರೂ ಶಿಕ್ಷಣ ಇಲಾಖೆ ಹಾಗೂ ಸರ್ಕಾರ ಸರ್ಕಾರಿ ಶಾಲೆಗಳಿಗೆ ಅಗತ್ಯ ಮೂಲಭೂತ ಸೌಕರ್ಯ ಕಲ್ಪಿಸದೆ ಇರುವುದರಿಂದ ಸಾರ್ವಜನಿಕ ವಲಯದಲ್ಲಿ ಸರ್ಕಾರದ ನಡೆಗೆ ಆಕ್ಷೇಪ ವ್ಯಕ್ತವಾಗಿದೆ.
ಗಡಿ ಜಿಲ್ಲೆ ಚಾಮರಾಜನಗರದ ಪ್ರಾಥಮಿಕ ಹಾಗೂ ಫ್ರೌಢ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಜೊತೆಗೆ ಕೊಠಡಿಯ ಸಮಸ್ಯೆಯಿದ್ದು,ಕೊಠಡಿಗಳನ್ನು ದುರಸ್ತಿಗೊಳಿಸುವ ಕೆಲಸ ಆಗಬೇಕಿದೆ. ಆ ಮೂಲಕ ವಿದ್ಯಾರ್ಥಿಗಳಿಗೆ ಉತ್ತಮ ಕಲಿಕಾ ವಾತಾವರಣ ಸೃಷ್ಟಿಸಬೇಕಿದೆ. ಜಿಲ್ಲೆಯ ಪ್ರಾಥಮಿಕ ಶಾಲೆಗಳಲ್ಲಿ 2999 ಶಿಕ್ಷಕರ ಅಗತ್ಯವಿದೆ. ಆದರೆ ಸದ್ಯ 2076 ಶಿಕ್ಷಕರಿದ್ದು 923 ಶಿಕ್ಷಕರ ಹುದ್ದೆ ಖಾಲಿಯಿದೆ. ಅದಲ್ಲದೇ ಪ್ರೌಢಶಾಲೆಗಳಲ್ಲಿ 810 ಶಿಕ್ಷಕರ ಅಗತ್ಯವಿದೆ. ಆದರೆ 605 ಶಿಕ್ಷಕರಿದ್ದು 205 ಶಿಕ್ಷಕರ ಹುದ್ದೆ ಖಾಲಿಯಿದೆ ಅಂತಾರೆ ಅಧಿಕಾರಿಗಳು.
ಇದನ್ನೂ ಓದಿ: SSLC ಟಾಪರ್ಸ್ಗೆ ಬಂಪರ್ ಬಹುಮಾನ, ಅವರು ಕಲಿತ ಶಾಲೆಗಳಿಗೂ ಅನುದಾನ ಘೋಷಿಸಿದ ಸಿಎಂ
ಇನ್ನೂ ಈ ಬಾರಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಮೇಲೂ ಶಿಕ್ಷಕರ ಕೊರತೆ ಸಾಕಷ್ಟು ಪ್ರಭಾವ ಬೀರಿದೆ. ಕಳೆದ ಬಾರಿಯ 7 ನೇ ಸ್ಥಾನದಿಂದ 24 ನೇ ಸ್ಥಾನಕ್ಕೆ ಫಲಿತಾಂಶ ಕುಸಿದಿದೆ. ಪ್ರತಿ ಬಾರಿ ಶಿಕ್ಷಕರ ಕೊರತೆಯನ್ನು ಅತಿಥಿ ಶಿಕ್ಷಕರ ಮೂಲಕ ನೀಗಿಸಲು ಶಿಕ್ಷಣ ಇಲಾಖೆ ಮುಂದಾಗುತ್ತಿದೆ. ಅಗತ್ಯ ಸಂಖ್ಯೆಯ ಕಾಯಂ ಶಿಕ್ಷಕರನ್ನು ನೇಮಕ ಮಾಡದೆ ನಿರ್ಲಕ್ಷ ವಹಿಸಿದೆ. ಇನ್ನೊಂದೆಡೆ ಶಾಲಾ ಕೊಠಡಿಗಳು ದುರಸ್ತಿ ಮಾಡಬೇಕಿದೆ. ಬಳಸಲು ಯೋಗ್ಯವಲ್ಲದ ಸ್ಥಿತಿಯಲ್ಲಿ 257 ಕೊಠಡಿಗಳಿವೆ. ಅತ್ಯಗತ್ಯವಾಗಿ 97 ಕೊಠಡಿಗಳು ದುರಸ್ತಿ ಆಗಬೇಕಿದೆ.
ಇದನ್ನೂ ಓದಿ: ಸಿಬಿಎಸ್ಇ ಕ್ಲಾಸ್ 12 ಫಲಿತಾಂಶ: ಬೆಂಗಳೂರಲ್ಲಿ ಶೇ. 96.95 ತೇರ್ಗಡೆ; ಕಳೆದ ವರ್ಷಕ್ಕಿಂತ ಕಡಿಮೆ ಪಾಸ್
ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಆಕರ್ಷಿಸುವ ಕೆಲಸ ಸರ್ಕಾರವೇ ಮಾಡಬೇಕಿದೆ. ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆದು ಮಕ್ಕಳ ದಾಖಲಾತಿ ಕೂಡ ಹೆಚ್ಚಿಸಬೇಕಿದೆ. ಇದೆಲ್ಲ ಆಗ್ಬೇಕಾದ್ರೆ ಸರ್ಕಾರದಿಂದ ಸರ್ಕಾರಿ ಶಾಲೆಗಳನ್ನು ಉನ್ನತೀಕರಣಗೊಳಿಸಬೇಕಿದೆ. ಶಿಕ್ಷಕರು ಹಾಗೂ ಕೊಠಡಿ ಸಮಸ್ಯೆ ಬಗೆಹರಿಸುವ ಜೊತೆಗೆ ಉತ್ತಮ ಕಲಿಕಾ ಸ್ಥಿತಿ ನಿರ್ಮಿಸಬೇಕಿದೆ. ಇನ್ನಾದ್ರೂ ಸರ್ಕಾರ ಗಡಿ ಜಿಲ್ಲೆಯ ಶಾಲೆಗಳತ್ತ ಗಮನಹರಿಸಿ ಅಗತ್ಯ ಸೌಲಭ್ಯ ಒದಗಿಸುತ್ತಾ ಅನ್ನೋದ್ನ ಕಾದುನೋಡಬೇಕಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.