ನನ್ನ ತಾಯಿ ದೇಶಕ್ಕಾಗಿ ಮಾಂಗಲ್ಯವನ್ನೇ ತ್ಯಾಗಮಾಡಿದ್ದಾರೆ: ಪ್ರಿಯಾಂಕಾ ಗಾಂಧಿ
ಅತ್ತ ಅಮಿತ್ ಶಾ ಬಿಜೆಪಿ ಅಭ್ಯರ್ಥಿ ಪರ ಮತಶಿಕಾರಿ ನಡೆಸಿದರೆ, ಇತ್ತ ಪ್ರಿಯಾಂಕಾ ಗಾಂಧಿ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯ ರೆಡ್ಡಿ ಪರ ಮತಯಾಚಿಸಿದರು. HSR ಲೇಔಟ್ನಲ್ಲಿರುವ ಆಟದ ಮೈದಾನದಲ್ಲಿ ಬೃಹತ್ ಸಮಾವೇಶದಲ್ಲಿ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಿದ ಅವರು ಕೇಂದ್ರದ ವಿರುದ್ಧ ಗುಡುಗಿದ್ದಾರೆ. ನನ್ನ ತಾಯಿ ದೇಶಕ್ಕಾಗಿ ಮಾಂಗಲ್ಯವನ್ನೇ ತ್ಯಾಗಮಾಡಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿಗೆ ತಿರುಗೇಟು ನೀಡಿದ್ದಾರೆ.
ಬೆಂಗಳೂರು, ಏಪ್ರಿಲ್ 23: ಚುನಾವಣಾ ಪ್ರಚಾರದಲ್ಲಿ 2 ದಿನದಿಂದ ಎಂತೆಂಥಾ ಮಾತು ಬರುತ್ತಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಾಂಗಲ್ಯ ಕಿತ್ತುಕೊಳ್ಳಲಿದೆ ಅಂತಿದ್ದಾರೆ. ನನ್ನ ತಾಯಿ ದೇಶಕ್ಕಾಗಿ ಮಾಂಗಲ್ಯವನ್ನೇ ತ್ಯಾಗಮಾಡಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಹೇಳಿಕೆಗೆ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ (Priyanka Gandhi) ತಿರುಗೇಟು ನೀಡಿದ್ದಾರೆ. ನಗರ HSR ಲೇಔಟ್ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯಾರೆಡ್ಡಿ ಪರ ಪ್ರಚಾರ ವೇಳೆ ಮಾತನಾಡಿದ ಅವರು, ಮಹಿಳೆಯರ ಮನಸಿನಲ್ಲಿರುವ ಸೇವಾಭಾವನೆ ಬಿಜೆಪಿಗೆ ಅರ್ಥವಾಗಲ್ಲ. ಪ್ರಧಾನಿ ಮೋದಿಗೆ ಮಾಂಗಲ್ಯದ ಬೆಲೆಯೇ ಗೊತ್ತಿಲ್ಲ ಎಂದು ವಾಗ್ದಾಳಿ ಮಾಡಿದ್ದಾರೆ.
ಬಿಜೆಪಿಯವರು ಯಾವುದೇ ಅಭಿವೃದ್ಧಿ ಕಾರ್ಯದ ಬಗ್ಗೆ ಮಾತನಾಡಲ್ಲ. ಬಿಜೆಪಿಯವರು ನರೇಂದ್ರ ಮೋದಿ ಇಟ್ಟುಕೊಂಡು ಮತ ಕೇಳುತ್ತಿದ್ದಾರೆ. ಬಿಜೆಪಿ ಭಾವನಾತ್ಮಕ ವಿಚಾರ ಮುಂದಿಟ್ಟು ರಾಜಕೀಯ ಮಾಡ್ತಿದ್ದಾರೆ. ಅವರಿಗೆ ಮಹಿಳೆಯರ ಕಷ್ಟ ಅರ್ಥವಾಗಲ್ಲ. ರೈತರು ಸಾಲ ಹೆಚ್ಚಾದಾಗ ಮಹಿಳೆಯರು ಮಾಂಗಲ್ಯ ಅಡವಿಡುತ್ತಾರೆ. ಮನೆಯಲ್ಲಿ ಯಾರಿಗಾದರೂ ಕಷ್ಟ ಬಂದರೆ ಮಾಂಗಲ್ಯ ಅಡವಿಡುತ್ತಾರೆ. ಅದರ ಬೆಲೆ ಅವರಿಗೆ ಗೊತ್ತಿಲ್ಲ ಎಂದು ಕಿಡಿಕಾರಿದ್ದಾರೆ.
ಬಿಜೆಪಿಯವರು ಹಿಂದೂ, ಮುಸ್ಲಿಂರ ಮಧ್ಯೆ ಕಿತ್ತಾಟ ತಂದಿಡ್ತಾರೆ
ರೈತರ ವಿರೋಧಿ ಕೃಷಿ ಕಾಯ್ದೆ ವಿರುದ್ಧ ವರ್ಷಾನುಗಟ್ಟಲೆ ಹೋರಾಟ ಮಾಡಿದ್ದಾರೆ. ದೆಹಲಿ ಗಡಿಯಲ್ಲಿ ಹೋರಾಟ ಮಾಡುತ್ತಿದ್ದ 609 ರೈತರು ಮೃತಪಟ್ಟರು. ಆಗ ಪ್ರಧಾನಿ ಮೋದಿಗೆ ಮಾಂಗಲ್ಯ ನೆನಪಾಗಲಿಲ್ವಾ? ಮಣಿಪುರದಲ್ಲಿ ಹೆಣ್ಣನ್ನು ಬೆತ್ತಲೆಮಾಡಿ ಮೆರವಣಿಗೆ ಮಾಡಿದ್ದರು ಆ ಸಂದರ್ಭದಲ್ಲಿ ಮೋದಿ ಎಲ್ಲಿದ್ರು? ಬಾಯಿಬಿಡಲಿಲ್ವಲ್ಲಾ? ದೇಶದ ಬಗ್ಗೆ ಕಿಂಚಿಂತೂ ಕಾಳಜಿಯಿಲ್ಲದ ಮೋದಿಗೆ ನಾಚಿಕೆ ಆಗ್ಬೇಕು. ನಿಮಗೆ ಪರೋಪಕಾರ ಬೇಕಾ? ಅಹಂಕಾರ ಬೇಕಾ? ಸುಳ್ಳು ಹೇಳುವವರು ಬೇಕಾ? ಸತ್ಯ ಹೇಳುವವರು ಬೇಕಾ? ನೈಜತೆ ಬೇಕಾ ನಾಟಕೀಯತೆ ಬೇಕಾ ನೀವೇ ತೀರ್ಮಾನ ಮಾಡಿ. ಬಿಜೆಪಿಯವರು ಕೇವಲ ಹಿಂದೂ, ಮುಸ್ಲಿಂ ಎಂದು ಕಿತ್ತಾಟ ತಂದಿಡ್ತಾರೆ ಎಂದು ಹಿರಿಹಾಯ್ದಿದ್ದಾರೆ.
ಮೋದಿ ಸೂಪರ್ಮ್ಯಾನ್ ಅಲ್ಲ, ಬೆಲೆ ಏರಿಕೆ ಮ್ಯಾನ್
ದೇಶದಲ್ಲಿ ಇಂದು ಯಾವ ಪರಿಸ್ಥಿತಿ ಇದೆ ಎಂದು ನಿಮಗೆ ಗೊತ್ತು. ಬಹುದೊಡ್ಡ ಸಮಸ್ಯೆ ನಿರುದ್ಯೋಗ ಹಾಗೂ ಬೆಲೆ ಏರಿಕೆ. ಬೆಲೆ ಏರಿಕೆ ಆದಾಗ ಮಹಿಳೆಯರ ಮೇಲೆ ಕಷ್ಟ ಬೀಳುತ್ತೆ. ಡೀಸೆಲ್, ಪೆಟ್ರೋಲ್, ಗ್ಯಾಸ್ ಸಿಲಿಂಡರ್ ದರ ಹೆಚ್ಚಾಗಿದೆ. ಮೋದಿ 10 ವರ್ಷದ ಆಡಳಿತದಲ್ಲಿ ನಿಮಗೇನು ಸಿಕ್ಕಿದೆ. ನಿತ್ಯ ಟಿವಿಯಲ್ಲಿ ಸೂಪರ್ಮ್ಯಾನ್ ಇಮೇಜ್ ತೋರಿಸ್ತಾರೆ. ಮೋದಿ ಸೂಪರ್ಮ್ಯಾನ್ ಅಲ್ಲ, ಬೆಲೆ ಏರಿಕೆ ಮ್ಯಾನ್. ನಿಮ್ಮ ಜೀವನದಲ್ಲಿ ಯಾವುದೇ ಬದಲಾವಣೆಯೇ ಆಗಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ: Priyanka Gandhi: ಎಸ್ಸಿ, ಎಸ್ಟಿಗೆ ವಿಶೇಷ ಅನುದಾನ, ದೇಶದಲ್ಲಿ ಜಾತಿ ಗಣತಿ ಜಾರಿ ಮಾಡ್ತೇವೆ: ಪ್ರಿಯಾಂಕಾ ಗಾಂಧಿ
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಗ್ಯಾರಂಟಿ ಜಾರಿ ಮಾಡಲಾಗಿದೆ. ಪ್ರತಿ ತಿಂಗಳು ಮಹಿಳೆಯರ ಅಕೌಂಟ್ಗೆ 2,000 ರೂ. ಹೋಗ್ತಿದೆ. ಗೃಹಜ್ಯೋತಿ ಯೋಜನೆಯಡಿ ಉಚಿತ ವಿದ್ಯುತ್ ನೀಡಲಾಗುತ್ತಿದೆ. ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳಲ್ಲಿ ಗ್ಯಾರಂಟಿ ಜಾರಿಯಾಗ್ತಿದೆ. ಕೇಂದ್ರದಲ್ಲಿ ಆಡಳಿತದಲ್ಲಿರುವ ಬಿಜೆಪಿಯಿಂದ ಪ್ರತಿವರ್ಗಕ್ಕೂ ಅನ್ಯಾಯವಾಗಿದೆ ಎಂದಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:34 pm, Tue, 23 April 24