ಲೋಕಸಭೆ ಚುನಾವಣೆ: ಕರ್ನಾಟಕದಲ್ಲಿ ಕಣದಲ್ಲಿದ್ದಾರೆ 10 ಕೋಟ್ಯಧಿಪತಿಗಳು, ವಿವರ ಇಲ್ಲಿದೆ
ಕರ್ನಾಟಕದಲ್ಲಿ ಲೋಕಸಭೆ ಚುನಾವಣೆಗೆ ಮೊದಲ ಹಂತದ ನಾಮಪತ್ರ ಸಲ್ಲಿಕೆ ಗುರುವಾರ ಮುಕ್ತಾಯವಾಗಿದೆ. ಇದರೊಂದಿಗೆ ಅಭ್ಯರ್ಥಿಗಳ ಆಸ್ತಿ ವಿವರವೂ ಬಹಿರಂಗವಾಗಿದೆ. ರಾಜ್ಯದಲ್ಲಿ ಲೋಕಸಭೆ ಕಣದಲ್ಲಿರುವ ಅಭ್ಯರ್ಥಿಗಳ ಪೈಕಿ ಅಗ್ರ ಹತ್ತು ಮಂದಿ ಕೋಟ್ಯಧಿಪತಿಗಳ ಆಸ್ತಿ ವಿವರ ಇಲ್ಲಿದೆ. ಇದರಲ್ಲಿ ಕಾಂಗ್ರೆಸ್ ಸಂಸದ ಡಿಕೆ ಸುರೇಶ್ ಅಗ್ರ ಸ್ಥಾನದಲ್ಲಿದ್ದಾರೆ.
ಬೆಂಗಳೂರು, ಏಪ್ರಿಲ್ 5: ಕರ್ನಾಟಕದಲ್ಲಿ (Karnataka) ಲೋಕಸಭೆ ಚುನಾವಣೆಯ (Lok Sabha Elections) ಮೊದಲ ಹಂತದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಮುಕ್ತಾಯವಾಗಿದೆ. 14 ಲೋಕಸಭಾ ಕ್ಷೇತ್ರಗಳಲ್ಲಿ ಒಟ್ಟು 443 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಇದರಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌ನ 28 ಘಟಾನುಘಟಿಗಳು ಸೇರಿದಂತೆ ಇತರೆ ಪಕ್ಷಗಳ ಅಭ್ಯರ್ಥಿಗಳು, ಪಕ್ಷೇತರ ಕಲಿಗಳೂ ಇದ್ದಾರೆ. ನಾಮಪತ್ರ ಸಲ್ಲಿಕೆ ವೇಳೆ ಅಭ್ಯರ್ಥಿಗಳು ಆಸ್ತಿ ಘೋಷಿಸಿಕೊಂಡಿದ್ದು, ಹೆಚ್ಚಿನವರು ಕೋಟಿ ವೀರರೇ! ಪ್ರಮಾಣಪತ್ರದಲ್ಲಿ ಸಲ್ಲಿಸಿರುವಂತೆ ಲೋಕಸಭೆ ಅಖಾಡದಲ್ಲಿರುವ ಅಗ್ರ 10 ಮಂದಿ ಕೋಟ್ಯಧಿಪತಿಗಳ ವಿವರ ಇಲ್ಲಿದೆ.
ಡಿಕೆ ಸುರೇಶ್, ಬೆಂಗಳೂರು ಗ್ರಾಮಾಂತರ ಕ್ಷೇತ್ರ
ಬೆಂಗಳೂರು ಗ್ರಾಮಾಂತರ ಅಭ್ಯರ್ಥಿ ಡಿಕೆ ಸುರೇಶ್ ಶ್ರೀಮಂತ ಅಭ್ಯರ್ಥಿಗಳ ಪಟ್ಟಿಯಲ್ಲಿ ನಂಬರ್ 1 ಸ್ಥಾನದಲ್ಲಿದ್ದಾರೆ. ಅವರ ಒಟ್ಟು ಆಸ್ತಿ ಮೌಲ್ಯ 593.04 ಕೋಟಿ ರೂಪಾಯಿ ಆಗಿದೆ. ಕಳೆದ 5 ವರ್ಷಗಳಲ್ಲಿ 259 ಕೋಟಿ ಆಸ್ತಿ ಹೆಚ್ಚಳವಾಗಿದೆ. 150 ಕೋಟಿ ಸಾಲ ಹೊಂದಿರುವ ಅವರು, ಒಂದೂಕಾಲು ಕೆಜಿ ಚಿನ್ನ, 4 ಕೆಜಿ 860 ಗ್ರಾಮ್ ಬೆಳ್ಳಿ ಹೊಂದಿದ್ದಾರೆ.
ಸ್ಟಾರ್ ಚಂದ್ರು, ಮಂಡ್ಯ ಕಾಂಗ್ರೆಸ್ ಅಭ್ಯರ್ಥಿ
ಲೋಕಸಭೆ ಕಣದಲ್ಲಿರುವ ಟಾಪ್ 2 ಶ್ರೀಮಂತ ಅಭ್ಯರ್ಥಿ ವೆಂಕಟರಮೇಗೌಡ ಅಲಿಯಾಸ್ ಸ್ಟಾರ್ ಚಂದ್ರು. ಇವರು ಒಟ್ಟು 410 ಕೋಟಿ ಆಸ್ತಿ ಒಡೆಯರಾಗಿದ್ದಾರೆ. 136 ಕೋಟಿ ರೂಪಾಯಿ ಚರಾಸ್ತಿ, 236 ಕೋಟಿ ರೂಪಾಯಿ ಸ್ಥಿರಾಸ್ತಿ ಹೊಂದಿದ್ದಾರೆ. ಇವರ ಹೆಸರಿನಲ್ಲಿ 3 ಟ್ರ್ಯಾಕ್ಟರ್‌ಗಳಿವೆ. ಆದರೆ ಅಚ್ಚರಿ ಅಂದರೆ ಇವ್ರ ಹೆಸರಲ್ಲಿ ಸ್ವಂತ ಕಾರು ಇಲ್ಲ.
ರಕ್ಷಾ ರಾಮಯ್ಯ, ಚಿಕ್ಕಬಳ್ಳಾಪುರ ಕಾಂಗ್ರೆಸ್ ಅಭ್ಯರ್ಥಿ
ಲೋಕಸಭೆ ಕಣದಲ್ಲಿರೋ ಟಾಪ್ 3 ಶ್ರೀಮಂತ ಅಭ್ಯರ್ಥಿ ಮಾಜಿ ಸಚಿವ ಎಂ.ಆರ್.ಸೀತಾರಾಮ್ ಅವರ ಪುತ್ರ ರಕ್ಷಾ ರಾಮಯ್ಯ. ಇವರ ಒಟ್ಟು ಆಸ್ತಿ ಮೌಲ್ಯ 382 ಕೋಟಿ ರೂಪಾಯಿ ಆಗಿದೆ. 2.70 ಕೋಟಿ ಮೌಲ್ಯದ 4 ಕಾರುಗಳಿವೆ. ದಂಪತಿ ಬಳಿ 1 ಕೆಜಿಗೂ ಹೆಚ್ಚು ಚಿನ್ನಾಭರಣವಿದೆ.
ಹೆಚ್ಡಿ ಕುಮಾರಸ್ವಾಮಿ, ಮಂಡ್ಯ ಅಭ್ಯರ್ಥಿ
ಟಾಪ್ 4 ಕೋಟ್ಯಧಿಪತಿ ಅಂದರೆ ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ. 217 ಕೋಟಿ ಆಸ್ತಿ ಒಡೆಯರಾಗಿರುವ ಇವರು 102 ಕೋಟಿ ಚರಾಸ್ತಿ 114 ಕೋಟಿ ಸ್ಥಿರಾಸ್ತಿ ಹೊಂದಿದ್ದಾರೆ. ಕಳೆದೊಂದು ವರ್ಷದಲ್ಲಿ 50 ಕೋಟಿ ಆಸ್ತಿ ಹೆಚ್ಚಳವಾಗಿದೆ. 19 ಕೋಟಿ ರೂಪಾಯಿ ಸಾಲವಿದ್ದು, 750 ಗ್ರಾಮ್ ಚಿನ್ನಾಭರಣ, 12.5 ಕೆಜಿ ಬೆಳ್ಳಿ ಆಭರಣ ಹೊಂದಿದ್ದಾರೆ.
ರಾಜೀವ್ ಗೌಡ, ಬೆಂಗಳೂರು ಉತ್ತರ ಕಾಂಗ್ರೆಸ್ ಅಭ್ಯರ್ಥಿ
ವಿಧಾನಸಭೆಯ ಮಾಜಿ ಸ್ಪೀಕರ್ ದಿವಂಗತ ವೆಂಕಟಪ್ಪ ಅವರ ಪುತ್ರರಾದ ರಾಜೀವ್ ಗೌಡ ಒಟ್ಟು 134 ಕೋಟಿ ಆಸ್ತಿ ಒಡೆಯರಾಗಿದ್ದಾರೆ. ಚರಾಸ್ತಿ 7.84 ಕೋಟಿ ರೂಪಾಯಿ ಇದ್ರೆ, 92.75 ಕೋಟಿ ರೂಪಾಯಿ ಸ್ಥಿರಾಸ್ತಿ ಮೌಲ್ಯವಿದೆ.
ಮನ್ಸೂರ್ ಅಲಿಖಾನ್, ಬೆಂಗಳೂರು ಕೇಂದ್ರ ಕಾಂಗ್ರೆಸ್ ಅಭ್ಯರ್ಥಿ
ಬೆಂಗಳೂರು ಕೇಂದ್ರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮನ್ಸೂರ್ ಅಲಿಖಾನ್ ನಂಬರ್ 6 ಕೋಟ್ಯಧಿಪತಿಯಾಗಿದ್ದು, ಇವರ ಒಟ್ಟು ಆಸ್ತಿ ಮೌಲ್ಯ 96 ಕೋಟಿ 90 ಲಕ್ಷ ರೂಪಾಯಿ. 14.86 ಕೋಟಿ ಚರಾಸ್ತಿ ಮತ್ತು 61.06ಕೋಟಿ ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ. ಇವ್ರ ಬಳಿ 98 ಲಕ್ಷ ರೂಪಾಯಿ ಮೌಲ್ಯದ ಆಡಿ ಎಸ್ 5 ಸ್ಪೋರ್ಟ್ಸ್ ಕಾರು ಇದೆ. ದುಬೈನಲ್ಲಿ ಫ್ಲ್ಯಾಟ್ ಹೊಂದಿದ್ದಾರೆ.
ಡಾ. ಮಂಜುನಾಥ್, ಬೆಂಗಳೂರು ಗ್ರಾಮಾಂತರ
ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ. ಸಿಎನ್ ಮಂಜುನಾಥ್ ಟಾಪ್ 7 ಕೋಟ್ಯಧಿಪತಿಯಾಗಿದ್ದು ಇವರು ಮತ್ತು ಇವರ ಪತ್ನಿ ಹೆಸರಲ್ಲಿ ಒಟ್ಟು 96.29 ಕೋಟಿ ರೂಪಾಯಿ ಆಸ್ತಿಯಿದೆ. ಪತ್ನಿಯೇ ಶ್ರೀಮಂತರಾಗಿದ್ದು 52 ಕೋಟಿ ಆಸ್ತಿ ಒಡತಿಯಾಗಿದ್ದಾರೆ. ಡಾ. ಮಂಜುನಾಥ್ ಅವರ ಹೆಸ್ರಲ್ಲಿ ಯಾವುದೇ ಚಿನ್ನಾಭರಣ, ಮನೆ ಇಲ್ಲ.
ಪಿಸಿ ಮೋಹನ್, ಬೆಂಗಳೂರು ಕೇಂದ್ರ ಅಭ್ಯರ್ಥಿ
ಟಾಪ್ 8ನೇ ಕೋಟ್ಯಧಿಪತಿ ಅಂದರೆ ಪಿ.ಸಿ.ಮೋಹನ್. ಪತ್ನಿ ಆಸ್ತಿಯೂ ಸೇರಿ ಇವರ ಒಟ್ಟು ಆಸ್ತಿ 81 ಕೋಟಿ ರೂಪಾಯಿ ಇದೆ. ಇದ್ರಲ್ಲಿ ಪತ್ನಿ ಶೈಲಾ ಅವರ ಆಸ್ತಿಯೇ 22 ಕೋಟಿ ರೂಪಾಯಿ ಇದೆ.
ವಿ. ಸೋಮಣ್ಣ, ತುಮಕೂರು ಬಿಜೆಪಿ ಅಭ್ಯರ್ಥಿ
ತುಮಕೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ 60 ಕೋಟಿ ಆಸ್ತಿ ಒಡೆಯರಾಗಿದ್ದು, ಇವರ ಪತ್ನಿ ಆಸ್ತಿಯೇ ಒಟ್ಟು 43.83ಕೋಟಿಯಷ್ಟಿದೆ. ಕೃಷಿಮೂಲದಿಂದ 65 ಲಕ್ಷ ಆದಾಯ ತೋರಿಸಿದ್ದಾರೆ. 98 ಲಕ್ಷ ರೂಪಾಯಿ ಮೌಲ್ಯದ ಚಿನ್ನ ಹಾಗೂ ವಜ್ರದ ಆಭರಣ ಹೊಂದಿದ್ದಾರೆ.
ಶ್ರೇಯಸ್ ಪಟೇಲ್, ಹಾಸನ ಕಾಂಗ್ರೆಸ್ ಅಭ್ಯರ್ಥಿ
ಲೋಕಸಭೆ ಅಖಾಡದಲ್ಲಿ ಟಾಪ್ 10ನೇ ಕೋಟ್ಯಧಿಪತಿ ಹಾಸನದ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್. ಇವರು ಒಟ್ಟು 41 ಕೋಟಿ ರೂಪಾಯಿ ಆಸ್ತಿ ಹೊಂದಿದ್ದು, 20 ಎಕರೆ ಕೃಷಿ ಭೂಮಿ ಹೊಂದಿದ್ದಾರೆ.
ಇದನ್ನೂ ಓದಿ: ಮಂಡ್ಯದಲ್ಲಿ ಎಚ್ಡಿಕುಮಾರಸ್ವಾಮಿ ವಿರುದ್ಧ ಸ್ಪರ್ಧೆಗಿಳಿದ ಎಚ್ಡಿ ರೇವಣ್ಣ: ರಂಗೇರಿದ ರಾಜಕೀಯ
ಲೋಕಸಭೆ ಚುನಾವಣೆ ಅಖಾಡಕ್ಕೆ ಧುಮುಕಿರುವ ಅಭ್ಯರ್ಥಿಗಳು ದಾಖಲೆ ಪ್ರಕಾರ ತಮ್ಮ ಆಸ್ತಿ ವಿವರ ಸಲ್ಲಿಸಿದ್ದಾರೆ. ನಾಮಪತ್ರ ಸಲ್ಲಿಕೆ ಗುರುವಾರವೇ ಮುಕ್ತಾಯವಾಗಿದ್ದು, ಇಂದಿನಿಂದ ಅಸಲಿ ಮತಬೇಟೆ ಶುರುವಾಗಲಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ