ಯಾವ ಸಮಸ್ಯೆ ಇಲ್ಲದೆ ಅಕ್ಷಯ ಪಾತ್ರೆಯಾಗಿದ್ಯಾ? ದೇವೇಗೌಡರ ಹೇಳಿಕೆಗೆ ಸಿದ್ದರಾಮಯ್ಯ ತಿರುಗೇಟು
ಪ್ರಧಾನಿ ನರೇಂದ್ರ ಮೋದಿ ಚೊಂಬನ್ನು ಅಕ್ಷಯ ಪಾತ್ರೆ ಮಾಡಿದ್ದಾರೆ ಎಂಬ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಹೇಳಿಕೆಗೆ ಸಿಎಂ ಸಿದ್ದರಾಮಯ್ಯ ಬೆಂಗಳೂರಿನ ಹೆಬ್ಬಗೋಡಿಯಲ್ಲಿ ಮಾತನಾಡಿದ್ದು, ಈ ದೇಶದಲ್ಲಿ ಯಾವ ಸಮಸ್ಯೆ ಇಲ್ಲದೆ ಅಕ್ಷಯ ಪಾತ್ರೆಯಾಗಿದ್ಯಾ? ಏಕೆ ಮತ್ತೆ ಹೆಚ್.ಡಿ.ದೇವೇಗೌಡರು ಸುಳ್ಳು ಹೇಳುತ್ತಿದ್ದಾರೆ. ಸುಳ್ಳು ಹೇಳಲು ಮೋದಿ, ದೇವೇಗೌಡರು ಪೈಪೋಟಿಗೆ ಬಿದ್ದಿದ್ದಾರೆ ಎಂದು ವಾಗ್ದಾಳಿ ಮಾಡಿದ್ದಾರೆ.
ಆನೇಕಲ್, ಏಪ್ರಿಲ್ 21: ಪ್ರಧಾನಿ ನರೇಂದ್ರ ಮೋದಿಯವರು ಖಾಲಿ ಚೊಂಬನ್ನು ಅಕ್ಷಯ ಪಾತ್ರೆ ಮಾಡಿದ್ದಾರೆ ಅಂದರೆ ಈ ದೇಶದಲ್ಲಿ ಯಾವ ಸಮಸ್ಯೆ ಇಲ್ಲದೆ ಅಕ್ಷಯ ಪಾತ್ರೆಯಾಗಿದೆಯಾ? ಏಕೆ ಮತ್ತೆ ಹೆಚ್ಡಿ ದೇವೇಗೌಡರು (HD Deve Gowda) ಸುಳ್ಳು ಹೇಳುತ್ತಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ (Siddaramaiah) ತಿರುಗೇಟು ನೀಡಿದ್ದಾರೆ. ಬೆಂಗಳೂರಿನ ಹೆಬ್ಬಗೋಡಿಯಲ್ಲಿ ಮಾತನಾಡಿದ ಅವರು, ಮೋದಿ ಮತ್ತು ದೇವೇಗೌಡರು ಸುಳ್ಳು ಹೇಳುವುದರಲ್ಲಿ ಪೈಪೋಟಿಗೆ ಬಿದ್ದಿದ್ದಾರೆ. ಏಕೆ ಇಷ್ಟೊಂದು ಕೆಳಮಟ್ಟಕ್ಕೆ ಇಳಿದಿದ್ದಾರೆ ಅಂತಾ ಅರ್ಥವಾಗಿಲ್ಲ ಎಂದು ವಾಗ್ದಾಳಿ ಮಾಡಿದ್ದಾರೆ.
ಬಿಜೆಪಿ ಕೋಮುವಾದಿ ಪಕ್ಷ ಅಂತಾ ಇದೇ ದೇವೇಗೌಡರು ಹೇಳಿದ್ದರು. ಮುಂದಿನ ಜನ್ಮದಲ್ಲಿ ಹುಟ್ಟಿದ್ದರೆ ಮುಸ್ಲಿಮನಾಗಿ ಹುಟ್ತೀನಿ ಎಂದಿದ್ದರು. ಜೆಡಿಎಸ್ ಪಕ್ಷದಲ್ಲಿ ತಮ್ಮ ಅಳಿಯನಿಗೆ ಟಿಕೆಟ್ ಕೊಟ್ಟಿಲ್ಲ. ಜೆಡಿಎಸ್ನವರು ಮೂರು ಕ್ಷೇತ್ರಗಳಲ್ಲಿ ಟೆಕೆಟ್ ತೆಗೆದುಕೊಂಡಿದ್ದಾರೆ. ಕೋಲಾರ ಮೀಸಲು ಕ್ಷೇತ್ರವಾಗದಿದ್ದರೆ ಆ ಕ್ಷೇತ್ರವನ್ನೂ ಬಿಡ್ತಿರಲಿಲ್ಲ. ಕುಟುಂಬ ರಾಜಕಾರಣ ಮಾಡುವವರಿಗೆ ನೀವು ಮತ ನೀಡುತ್ತೀರಾ ಎಂದು ಪ್ರಶ್ನಿಸಿದ್ದಾರೆ. ಇನ್ನು ಇದ್ದಿದ್ದು ಇದ್ದಂಗೆ ಹೇಳಿದ್ರೆ ಎದ್ದು ಬಂದು ಎದೆಗೆ ಒದ್ರಂತೆ. ಇರೋದನ್ನು ಹೇಳಿದರೆ ಸಿದ್ದರಾಮಯ್ಯ ಗರ್ವಭಂಗ ಮಾಡ್ತಾರೆ ಅಂತಾರೆ ಎಂದರು.
ಇಂದಿರಾ ಕ್ಯಾಂಟೀನ್ ಮುಚ್ಚಲು ಬಿಜೆಪಿ ಸರ್ಕಾರ ಮುಂದಾಗಿತ್ತು
ಇಂದಿರಾ ಕ್ಯಾಂಟೀನ್ ಮಾಡಿದ್ದು ಕಾಂಗ್ರೆಸ್ ಸರ್ಕಾರ. ಆದರೆ ಮುಚ್ಚಲು ಬಿಜೆಪಿ ಸರ್ಕಾರ ಮುಂದಾಗಿತ್ತು. ಇಂದಿರಾ ಕ್ಯಾಂಟೀನ್ಗಳನ್ನು ಪುನರಾರಂಭ ಮಾಡುತ್ತೇವೆ. ಹೆಬ್ಬಗೋಡಿ ಭಾಗದಲ್ಲಿ 4 ಕ್ಯಾಂಟೀನ್ಗಳ ಸ್ಥಾಪಿಸಿದ್ದೇವೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ‘ಕೈ’ಕೊಟ್ಟ ಚೆಂಬನ್ನು ಅಕ್ಷಯ ಪಾತ್ರೆಯಾಗಿಸಿ ಬಡವರಿಗೆ ಕೊಟ್ಟ ಮೋದಿ: ಹೆಚ್ಡಿ ದೇವೇಗೌಡ
‘ಕಾಂಗ್ರೆಸ್’ ಅಭ್ಯರ್ಥಿ ಡಿ.ಕೆ.ಸುರೇಶ್ ಜನಸಾಮಾನ್ಯರ ಜೊತೆಗೆ ಬೆಳೆದವರು. ರಾಜ್ಯಕ್ಕೆ ಅನ್ಯಾಯವಾಗಿದೆ ಕೇಳಿದ್ರೆ ಡಿ.ಕೆ.ಸುರೇಶ್ ಮೇಲೆ ಬೀಳುತ್ತಾರೆ. ಯಾವ ಸಂಸದರು ಕೂಡ ಪಾರ್ಲಿಮೆಂಟ್ನಲ್ಲಿ ಬಾಯಿ ಬಿಡುವುದಿಲ್ಲ. ಮೋದಿ ಮುಂದೆ ಮಾತನಾಡಲು ಬಿಜೆಪಿ ಸಂಸದರಿಗೆ ಗಢಗಢ ಅನ್ನುತ್ತೆ ಎಂದು ಕಿಡಿಕಾರಿದ್ದಾರೆ.
ನರೇಂದ್ರ ಮೋದಿಯವರು ಹತ್ತು ವರ್ಷ ಪ್ರಧಾನಿಯಾಗಿದ್ದಾರೆ. ಬಡವರ, ಮಧ್ಯಮ ವರ್ಗದ ಜನರಿಗೆ ಅವರು ಏನು ಮಾಡಿಲ್ಲ. ಮೊದಲನೇ ಹಾಗೂ ಎರಡನೇ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಭಾವನಾತ್ಮಕ ವಿಚಾರಗಳನ್ನ ಮುಂದಿಟ್ಟಿದ್ದರು. ಹಲವಾರು ಭರವಸೆಗಳನ್ನ ಸಹ ಕೊಟ್ಟಿದ್ದರು. ಆ ಭರವಸೆಗಳು ಇಲ್ಲಿಯತನಕ ಏನಾಯ್ತು ಅಂತ ಹೇಳಲಿಲ್ಲ. ಕಪ್ಪು ಹಣವನ್ನ ತೆಗೆದುಕೊಂಡು ಬಂದು ಅಕೌಂಟ್ಗಳಿಗೆ 15 ಲಕ್ಷ ರೂ. ಜಮಾ ಮಾಡುತ್ತೇವೆ ಅಂತ ಹೇಳಿದ್ದರು. ಪುಣ್ಯತ್ಮ ತಂದು ಕೊಡಬೇಕಲ್ವಾ, 15 ಲಕ್ಷ ರೂ. ಅಲ್ಲ 15 ಪೈಸೆ ಕೂಡ ಬರಲಿಲ್ಲ. ಇದು ಮೋದಿ ಹೇಳಿದ ಮೊದಲನೇ ಸುಳ್ಳು ಎಂದಿದ್ದಾರೆ.
ಇದನ್ನೂ ಓದಿ: ವ್ಯತ್ಯಾಸ ಇಷ್ಟೇ! ಕಾಂಗ್ರೆಸ್ನ ಚೊಂಬಾಸ್ತ್ರಕ್ಕೆ ಟ್ವೀಟ್ನಲ್ಲೇ ತಿರುಗೇಟು ನೀಡಿದ ಬಿಜೆಪಿ
ನಿರುದ್ಯೋಗ ಸಮಸ್ಯೆ ಬಗೆಹತಿಸುತ್ತೇನೆ ಅಂತ ಹೇಳಿದ್ದರು. ವರ್ಷಕ್ಕೆ ಎರಡು ಕೋಟಿ ಉದ್ಯೋಗ ಕೊಡ್ತಾನೆ ಅಂದಿದ್ದರು. ಹತ್ತು ವರ್ಷದಲ್ಲಿ 20 ಲಕ್ಷ ಕೂಡ ಕೊಡಲಿಲ್ಲ. ಯಾರಾದರೂ ಕೆಲಸ ಕೇಳಿದರೆ ಪಕೋಡ ಮಾರುವುದಕ್ಕೆ ಕಳಿಸಿ ಅಂತಾರೇ. ಎರಡು ಕೋಟಿ ಉದ್ಯೋಗ ಕೊಡ್ತೀನಿ ಅಂದವರು ಪಕೋಡ ಮಾರೋಕೆ ಹೋಗಿ ಅಂತಾರೇ ಇದು ಬೇಜಾವಾಬ್ದಾರಿ ಹೇಳಿಕೆ. ಇದು ನಾವು ಚುನಾವಣಾ ಪ್ರಚಾರಕ್ಕೊಸ್ಕರ ಹೇಳುವ ಮಾತಲ್ಲ ಎಂದು ಹೇಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.