ಮಡಿಕೇರಿ: ಶವಾಗಾರ ಸಿಬ್ಬಂದಿಯಿಂದ ಆಸ್ಪತ್ರೆಯಲ್ಲಿಯೇ ಲೈಂಗಿಕ ದೌರ್ಜನ್ಯ, ಡೀನ್ಗೆ ಹಿಂದೂ ಜಾಗರಣ ವೇದಿಕೆ ದೂರು
ಶವಾಗಾರ ಸಿಬ್ಬಂದಿ ಸೈಯ್ಯದ್ ಹುಸೇನ್ ಎಂಬಾತ ಆಸ್ಪತ್ರೆಯ ಮಹಿಳಾ ಸಿಬ್ಬಂದಿಯನ್ನ ಶವಾಗಾರಕ್ಕೆ ಆಹ್ವಾನಿಸಿ ಲೈಂಗಿಕ ದೌರ್ಜನ್ಯ ಎಸಗಿರುವುದಾಗಿ ಹಿಂದೂ ಜಾಗರಣ ವೇದಿಕೆಯು ಕೊಡಗು ವಿಜ್ಞಾನಗಳ ಸಂಸ್ಥೆ ಆಸ್ಪತ್ರೆಯ ಡೀನ್ಗೆ ದೂರು ನೀಡಿದೆ.
ಕೊಡಗು: ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಆಸ್ಪತ್ರೆ ಶವಾಗಾರದಲ್ಲಿ ವಿಕೃತ ಕಾಮದಾಟ ನಡೆದಿರುವ ಬಗ್ಗೆ ಗಂಭೀರ ಆರೋಪ ಕೇಳಿಬಂದಿದೆ. ಶವಾಗಾರ ಸಿಬ್ಬಂದಿ ಸೈಯ್ಯದ್ ಹುಸೇನ್ ಎಂಬಾತ ಆಸ್ಪತ್ರೆಯ ಮಹಿಳಾ ಸಿಬ್ಬಂದಿಯನ್ನ ಶವಾಗಾರಕ್ಕೆ ಆಹ್ವಾನಿಸಿ ಲೈಂಗಿಕ ದೌರ್ಜನ್ಯ ಎಸಗಿರುವುದಾಗಿ ಹಿಂದೂ ಜಾಗರಣ ವೇದಿಕೆಯು ಆಸ್ಪತ್ರೆಯ ಡೀನ್ ಡಾ.ಕಾರ್ಯಪ್ಪ ಅವರಿಗೆ ದೂರು ನೀಡಿದೆ. ಅಷ್ಟೇ ಅಲ್ಲದೆ ಸೈಯ್ಯದ್ ಹುಸೇನ್ ಶವಾಗಾರಕ್ಕೆ ಬಂದ ಮಹಿಳೆಯರ ಮೃತದೇಹಗಳ ನಗ್ನ ದೇಹದ ಫೊಟೋಗಳನ್ನ ತನ್ನ ಮೊಬೈಲ್ನಲ್ಲಿ ಅಕ್ರಮವಾಗಿ ತೆಗೆದಿಟ್ಟುಕೊಂಡಿದ್ದಾನೆ ಎಂದು ಆರೋಪಿಸಲಾಗಿದೆ. ಇದಕ್ಕೆ ಪೂರಕವಾಗಿ ಆತನ ಮೊಬೈಲ್ನಲ್ಲಿ ಹಲವು ಮೃತ ಮಹಿಳೆಯರ ನಗ್ನ ಫೋಟೋಗಳು ಪತ್ತೆಯಾಗಿವೆ. ಜೊತೆಗೆ ಆಸ್ಪತ್ರೆಯ ಮಹಿಳಾ ಸಿಬ್ಬಂದಿಯನ್ನ ಕಾಮದಾಟಕ್ಕೆ ಶವಾಗಾರಕ್ಕೆ ಬರುವಂತೆ ಆಹ್ವಾನಿಸಿರುವ ಕಾಲ್ ರೆಕಾರ್ಡ್ಗಳು ಕೂಡ ಮೊಬೈಲ್ನಲ್ಲಿ ಪತ್ತೆಯಾಗಿವೆ.
ಆಡಿಯೋ ರೆಕಾರ್ಡ್ನಲ್ಲಿ ಏನಿದೆ?
ಹತ್ತಾರು ಮಹಿಳಾ ಸಿಬ್ಬಂದಿಗೆ ಕರೆ ಮಾಡಿರುವ ಸೈಯ್ಯದ್, ಅರ್ಧ ಗಂಟೆ ಮಾರ್ಚರಿಗೆ ಬರುವಂತೆ ಮನವಿ ಮಾಡುತ್ತಾನೆ. ಕೆಲವು ಮಹಿಳಾ ಸಿಬ್ಬಂದಿ ಅಲ್ಲಿಗೆ ಬರುವುದಿಲ್ಲ ಭಯವಾಗುತ್ತದೆ ಎಂದು ಹೇಳುತ್ತಾರೆ. ಇದಕ್ಕೆ ಆತ, ಅಲ್ಲಿ ಏನೂ ಆಗಲ್ಲ ನಮಗೆ ಅಂತ ಸಪರೇಟ್ ರೂಮ್ ಕೊಟ್ಟಿದ್ದಾರೆ, ಅಲ್ಲಿಗೆ ಬನ್ನಿ ಎಂದು ಒತ್ತಾಯಿಸುತ್ತಾನೆ. ಬರುವುದಿಲ್ಲ ಎಂದರೆ ಬಂದು ಎತ್ತಿಕೊಂಡು ಹೋಗುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ. ಮತ್ತೆ ಕೆಲವು ಮಹಿಳೆಯರು ಮಾರ್ಚರಿಗೆ ಬರುವುದಿಲ್ಲ, ಆಸ್ಪತ್ರೆ ಅಂಡರ್ಪಾಸ್ಗೆ ಬರುವಂತೆ ಹೇಳಿದ್ದಾನೆ. ಹೀಗೆ ಆತ ಬಹಳಷ್ಟು ಮಹಿಳೆಯರೊಂದಿಗೆ ಮಾರ್ಚರಿಯಲ್ಲಿ ಕಾಮದಾಟ ನಡೆಸಿರುವ ಶಂಶಯ ವ್ಯಕ್ತವಾಗಿದೆ.
ಮೊಬೈಲ್ ಕಾಲ್ ರೆಕಾರ್ಡ್ ಸಿಕ್ಕಿದ್ದು ಹೇಗೆ?
ಇತ್ತೀಚೆಗೆ ಈ ವಿಕೃತ ಕಾಮಿ ಸೈಯ್ಯದ್ ಆಸ್ಪತ್ರೆಯ ಮಹಿಳಾ ಸಿಬ್ಬಂದಿಯ ಮನೆಗೆ ರಾತ್ರಿ ನುಗ್ಗಲು ಯತ್ನಿಸಿದ್ದಾನೆ. ಈ ಸಂದರ್ಭ ಸ್ಥಳೀಯರು ಆತನನ್ನು ಹಿಡಿದು ಗೂಸಾ ನೀಡಿ ಮೊಬೈಲ್ ಕಿತ್ತುಕೊಂಡು ಪರಿಶೀಲಿಸಿದಾಗ ಸ್ಫೋಟಕ ಮಾಹಿತಿಗಳು ಬಹಿರಂಗವಾಗಿದೆ. ಇನ್ನು ಬೇರೆ ಬೇರೆ ಪ್ರಕರಣಗಳಲ್ಲಿ ಸಾವನ್ನಪ್ಪಿದ್ದ ಮಹಿಳೆಯರು, ಯುವತಿಯರ ನಗ್ನ ಫೋಟೋಗಳನ್ನ ಮಾರ್ಚರಿಯಲ್ಲಿ ಅಕ್ರಮವಾಗಿ ತೆಗೆದಿರುವುದು ಕೂಡ ಬೆಳಕಿಗೆ ಬಂದಿದೆ.
ಈ ಹಿನ್ನೆಲೆಯಲ್ಲಿ ಹಿಂದೂ ಜಾಗರಣ ವೇದಿಕೆ ಜಿಲ್ಲಾ ಸಂಚಾಲಕ ಮಗೇರನ ಬೆಳ್ಯಪ್ಪ ಅವರು ಆಸ್ಪತ್ರೆ ಡೀನ್ ಡಾ. ಕಾರ್ಯುಪ್ಪ ಅವರಿಗೆ ದೂರು ನೀಡಿ ಕ್ರಮಕ್ಕೆ ಆಗ್ರಹಿಸಿದ್ದಾರೆ. ಈ ದೂರನ್ನು ಆಧರಿಸಿ ಡೀನ್ ಕಾರ್ಯಪ್ಪ ಅವರು ಮಡಿಕೇರಿ ನಗರ ಪೊಲೀಸ್ ಠಾಣೆಗೆ ಸೈಯ್ಯದ್ ಹುಸೇನ್ ವಿರುದ್ಧ ದೂರು ನೀಡಿದ್ದಾರೆ. ಪೊಲೀಸರು ಎಫ್ಐಆರ್ ಇನ್ನೂ ದಾಖಲಿಸಿಕೊಂಡಿಲ್ಲ. ಆದರೆ ಪ್ರಕರಣ ಬೆಳಕಿಗೆ ಬರುತ್ತಲೇ ಡಿ ಗ್ರೂಪ್ ನೌಕರ ಸೈಯ್ಯದ್ ಕೆಲಸಕ್ಕೆ ರಾಜೀನಾಮೆ ನೀಡಿದ್ದಾನೆ.
ಕೋವಿಡ್ ಸಮಯದಲ್ಲಿ ಸನ್ಮಾನ ಸ್ವೀಕರಿಸಿದ್ದ ಸೈಯ್ಯದ್
ಇದೇ ಸೈಯ್ಯದ್ ಕೋವಿಡ್ ಸಮಯದಲ್ಲಿ ಸಾವನ್ನಪ್ಪಿದ 300ಕ್ಕೂ ಅಧಿಕ ಜನರ ದೇಹಗಳನ್ನ ಶವಾಗಾರದಲ್ಲಿ ಸುರಕ್ಷಿತವಾಗಿ ಪ್ಯಾಕ್ ಮಾಡಿದ್ದ. ಬಿಡುವಿಲ್ಲದ ಕೆಲಸದಿಂದಾಗಿ ಜನರ ಪ್ರಶಂಸೆ ಗಳಿಸಿದ್ದ. ಹಾಗಾಗಿ ವಿವಿಧ ಸಂಘ ಸಂಸ್ಥೆಗಳು ಈತನಿಗೆ ಸನ್ಮಾನ ಮಾಡಿದ್ದವು. ಆದರೆ ಇದೇ ವ್ಯಕ್ತಿ ಇದೀಗ ವಿಕೃತ ಕಾಮದಾಟದ ಆರೋಪಕ್ಕೆ ಗುರಿಯಾಗಿರುವುದು ವಿಪರ್ಯಾಸ. ಪೊಲಿಸರು ಈತನ ವಿರುದ್ಧ ಸೂಕ್ತ ತನಿಖೆ ನಡೆಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.
ಘಟನೆ ಬಗ್ಗೆ ಯಾವುದೇ ಮಾಹಿತಿ ಇಲ್ಲ
ಪ್ರಕರಣ ಕುರಿತು ಟಿವಿ9 ಜೊತೆ ಮಾತನಾಡಿದ ಕೊಡಗು ವೈದ್ಯಕೀಯ ವಿಜ್ಞಾಗಳ ಸಂಸ್ಥೆ ಡೀನ್ ಕಾರ್ಯಪ್ಪ, ಘಟನೆ ಬಗ್ಗೆ ನಮಗೆ ಯಾವುದೇ ಮಾಹಿತಿ ಇಲ್ಲ, ಹಿಂದೂ ಜಾಗರಣ ವೇದಿಕೆ ನಮಗೆ ಈ ಕುರಿತು ದೂರು ನೀಡಿದೆ. ಈ ರೀತಿ ಘಟನೆ ನಡೆದಿದ್ದರೆ ವಿಷಾದ ವ್ಯಕ್ತಪಡಿಸುತ್ತೇವೆ. ಪ್ರಕರಣದ ಬಗ್ಗೆ ತನಿಖೆ ನಡೆಸುವಂತೆ ಮಡಿಕೇರಿ ನಗರ ಪೊಲೀಸರಿಗೆ ಮನವಿ ಮಾಡಿದ್ದೇನೆ ಎಂದಿದ್ದಾರೆ.
ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ