ಮತಗಳ್ಳತನ ಆರೋಪ: ಸಂಸದ ರಾಹುಲ್ ಗಾಂಧಿಗೆ ಚುನಾವಣಾ ಆಯೋಗ ನೋಟಿಸ್
ಲೋಕಸಭಾ ಚುನಾವಣೆಯಲ್ಲಿ ಮಹದೇವಪುರ ಕ್ಷೇತ್ರದಲ್ಲಿ ಒಂದು ಲಕ್ಷ ಮತಗಳ ಕಳ್ಳತನದ ಆರೋಪ ಮಾಡಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಕರ್ನಾಟಕ ಚುನಾವಣಾ ಆಯೋಗ ನೋಟಿಸ್ ನೀಡಿದೆ. ಆರೋಪಕ್ಕೆ ಸಾಕ್ಷ್ಯಾಧಾರಗಳನ್ನು ಒದಗಿಸುವಂತೆ ಆಯೋಗ ಸೂಚಿಸಿದೆ. ರಾಹುಲ್ ಗಾಂಧಿ ಆಗಸ್ಟ್ 7 ರಂದು ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಆರೋಪ ಮಾಡಿದ್ದರು.

ಬೆಂಗಳೂರು, ಆಗಸ್ಟ್ 10: ಲೋಕಸಭಾ ಚುನಾವಣೆಯಲ್ಲಿ ಸಮಯದಲ್ಲಿ ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ (Mahadevpur Assembly Constituency) 1 ಲಕ್ಷ ನಕಲಿ ಮತ ಚಲಾವಣೆಯಾಗಿದೆ ಎಂದು ನೀವು ಮಾಡಿರುವ ಆರೋಪಗಳಿಗೆ ದಾಖಲೆಗಳನ್ನು ನೀಡಿ ಎಂದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ (Rahul Gandhi) ಅವರಿಗೆ ರಾಜ್ಯ ಚುನಾವಣಾ ಆಯೋಗ (Election Commission) ನೋಟಿಸ್ ನೀಡಿದೆ. ಮತಗಳ್ಳತನಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಆಗಸ್ಟ್ 7ರಂದು ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ದಾಖಲೆಗಳನ್ನು ಬಿಡುಗಡೆ ಮಾಡಿದ್ದರು. ಹೀಗಾಗಿ, ರಾಜ್ಯ ಚುನಾವಣಾ ಆಯೋಗ ಈ ದಾಖಲೆಗಳನ್ನು ನೀಡುವಂತೆ ಸೂಚನೆ ನೀಡಿದೆ.
ಚುನಾವಣಾ ಆಯೋಗ ನೀಡಿರುವ ಸೂಚನೆಗಳೇನು?
- ನಿಮ್ಮ ಪತ್ರಿಕಾಗೋಷ್ಠಿಯಲ್ಲಿ, ತೋರಿಸಿರುವ ದಾಖಲೆಗಳು ಭಾರತ ಚುನಾವಣಾ ಆಯೋಗದ ದಾಖಲೆಗಳಿಂದ ಬಂದಿವೆ ಎಂದು ನೀವು ಹೇಳಿದ್ದೀರಿ. “ಇದು ಚುನಾವಣಾ ಆಯೋಗದ ಡೇಟಾ” ಎಂದಿದ್ದೀರಿ.
- ಮತಗಟ್ಟೆ ಅಧಿಕಾರಿ ನೀಡಿದ ದಾಖಲೆಗಳ ಪ್ರಕಾರ, ಶ್ರೀಮತಿ ಶಕುನ್ ರಾಣಿ ಎರಡು ಬಾರಿ ಮತ ಚಲಾಯಿಸಿದ್ದಾರೆ ಎಂದು ನೀವು ಹೇಳಿದ್ದೀರಿ. “ಈ ಐಡಿ ಕಾರ್ಡ್ ಪರ್ ದೋ ಬಾರ್ ವೋಟ್ ಲಗಹೈ, ವೋ ಜೋ ಟಿಕ್ ಹೈ, ಪೋಲಿಂಗ್ ಬೂತ್ ಕೆ ಆಫೀಸರ್ ಕಿಹೈ” ಎಂದು ಹೇಳಿದ್ದೀರಿ.
- ವಿಚಾರಣೆಯಲ್ಲಿ, ಶ್ರೀಮತಿ ಶಕುನ್ ರಾಣಿ ಅವರು ನೀವು ಆರೋಪಿಸಿದಂತೆ ಎರಡು ಬಾರಿ ಅಲ್ಲ, ಒಮ್ಮೆ ಮಾತ್ರ ಮತ ಚಲಾಯಿಸಿದ್ದಾರೆ ಎಂದು ಹೇಳಿದ್ದಾರೆ.
- ಕಚೇರಿ ನಡೆಸಿದ ಪ್ರಾಥಮಿಕ ವಿಚಾರಣೆಯು ಪ್ರಸ್ತುತಿಯಲ್ಲಿ ನೀವು ತೋರಿಸಿರುವ ಟಿಕ್ ಗುರುತು ಮಾಡಿದ ದಾಖಲೆ ಮತಗಟ್ಟೆ ಅಧಿಕಾರಿ ನೀಡಿದ ದಾಖಲೆಯಲ್ಲ ಎಂದು ಬಹಿರಂಗಪಡಿಸುತ್ತದೆ.
- ಆದ್ದರಿಂದ, ಶ್ರೀಮತಿ ಶಕುನ್ ರಾಣಿ ಅಥವಾ ಬೇರೆ ಯಾರಾದರೂ ಎರಡು ಬಾರಿ ಮತ ಚಲಾಯಿಸಿದ್ದಾರೆ ಎಂದು ನೀವು ತೀರ್ಮಾನಿಸಿರುವ ಸಂಬಂಧಿತ ದಾಖಲೆಗಳನ್ನು ಒದಗಿಸುವಂತೆ ವಿನಂತಿಸಲಾಗಿದೆ.
ಇದನ್ನೂ ಓದಿ: ಮತಗಟ್ಟೆಗಳ ದೃಶ್ಯಾವಳಿ ನೀಡಿದ್ರೆ ಮತಗಳ್ಳತನ ಸಾಬೀತು ಮಾಡುವೆ: ಚುನಾವಣೆ ಆಯೋಗಕ್ಕೆ ರಾಹುಲ್ ಸವಾಲ್
ಇದರಿಂದ ಈ ಕಚೇರಿಯಿಂದ ವಿವರವಾದ ವಿಚಾರಣೆಯನ್ನು ಕೈಗೊಳ್ಳಬಹುದು. ಹೀಗಾಗಿ ಸಂಬಂಧಿಸಿದ ಆರೋಪಗಳಿಗೆ ದಾಖಲೆಗಳನ್ನು ಒದಗಿಸಿ ಎಂದು ಕರ್ನಾಟಕ ರಾಜ್ಯ ಮುಖ್ಯ ಚುನಾವಣಾಧಿಕಾರಿಯವರು ರಾಹುಲ್ ಗಾಂಧಿ ಅವರಿಗೆ ನೊಟೀಸ್ ನೀಡಿದ್ದಾರೆ.
ರಾಹುಲ್ ಗಾಂಧಿ ಆರೋಪವೇನು?
ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದ ರಾಹುಲ್ ಗಾಂಧಿಯವರು, ಕಳೆದ ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಬಿಜೆಪಿ 16 ಸ್ಥಾನ ಹಾಗೂ ಕಾಂಗ್ರೆಸ್ 9 ಸ್ಥಾನಗಳನ್ನು ಗೆದ್ದಿದೆ. ಹೀಗಾಗಿ ಕಡಿಮೆ ಅಂತರದಲ್ಲಿ ಸೋತ ಏಳು ಕ್ಷೇತ್ರಗಳ ಪೈಕಿ ಬೆಂಗಳೂರು ಕೇಂದ್ರ ಕ್ಷೇತ್ರದಲ್ಲಿ ತನಿಖೆ ನಡೆಸಿದೆವು. ಈ ವೇಳೆ ಕಾಂಗ್ರೆಸ್ 1,15,586 ಮತಗಳನ್ನು ಪಡೆದರೆ, ಬಿಜೆಪಿ 2,29,632 ಮತಗಳನ್ನು ಪಡೆದುಕೊಂಡಿದೆ. ಕಾಂಗ್ರೆಸ್‌ಗಿಂತ ಬಿಜೆಪಿ 1,14,046 ಮತಗಳ ಬಹುಮತ ಪಡೆದುಕೊಂಡಿದೆ. ಈ ಮತಗಳಲ್ಲಿ 11,965 ನಕಲಿ ಮತದಾರರು, 40,009 ನಕಲಿ ವಿಳಾಸದ ಮತಗಳು, ಒಂದೇ ವಿಳಾಸದಲ್ಲಿ ಹತ್ತಾರು ಮತಗಳಿರುವಂತಹ 10,452 ಮತಗಳು, ಫೋಟೋ ಇಲ್ಲದಿರುವ 4,132 ಹಾಗೂ ಫಾರಂ 6 ದುರ್ಬಳಕೆಯಾದ 33,692 ಮತಗಳಿವೆ ಎಂದು ಸ್ಫೋಟಕ ಆರೋಪ ಮಾಡಿದ್ದರು.
ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಮಹದೇವಪುರ ವಿಧಾನಸಭಾ ಕ್ಷೇತ್ರವೊಂದರಲ್ಲೇ 6.5 ಲಕ್ಷ ಒಟ್ಟು ಮತಗಳ ಪೈಕಿ 1,00,250 ನಕಲಿ ಮತ ಚಲಾವಣೆಯಾಗಿದೆ ಎಂದು ರಾಹುಲ್ ಗಾಂಧಿ ದಾಖಲೆ ಬಿಡುಗಡೆ ಮಾಡಿದ್ದರು.
ಕರ್ನಾಟಕ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:08 pm, Sun, 10 August 25




