ನಾಗಮಂಗಲ ಗಲಭೆ: ಕೇರಳ ಕೈವಾಡ ಬಗ್ಗೆ ಜೆಡಿಎಸ್ ನಿಲುವು ಬೇರೆ ಇರಬಹುದು ಎಂದ ಅಶೋಕ್!
ಮಂಡ್ಯದ ನಾಗಮಂಗಲ ಗಲಭೆಯಲ್ಲಿ ಕೇರಳ ಕೈವಾಡ ಬಗ್ಗೆ ಜೆಡಿಎಸ್ ನಿಲುವು ಬೇರೆ ಇರಬಹುದು. ಅವರ ನಿಲುವನ್ನು ಹೆಚ್ಡಿ ಕುಮಾರಸ್ವಾಮಿ ಈಗಾಗಲೇ ಹೇಳಿದ್ದಾರೆ. ಹಾಗೆಂದು ನಮ್ಮ ನಿಲುವಿಗೆ ನಾವು ಬದ್ಧ. ಮೈತ್ರಿ ಮಾಡಿಕೊಂಡಿದ್ದೇವೆ. ಹಾಗೆಂದು ನಮ್ಮ ನಿಲುವಿಗೆ ನಾವು ಬದ್ಧ ಎಂದು ಪ್ರತಿಪಕ್ಷ ನಾಯಕ ಆರ್ ಅಶೋಕ್ ಹೇಳಿದ್ದಾರೆ. ಅವರ ಮಾತಿನ ಪೂರ್ಣ ವಿಡಿಯೋ ಹಾಗೂ ವಿವರ ಇಲ್ಲಿದೆ.
ಬೆಂಗಳೂರು, ಸೆಪ್ಟೆಂಬರ್ 17: ಮಂಡ್ಯದ ನಾಗಮಂಗಲದಲ್ಲಿ ಸಂಭವಿಸಿದ ಗಲಭೆ ಪೂರ್ವನಿರ್ಧರಿತ ಎಂಬುದು ಸ್ಪಷ್ಟ ಎಂದು ಪ್ರತಿಪಕ್ಷ ನಾಯಕ ಆರ್ ಅಶೋಕ್ ಹೇಳಿದರು. ಬೆಂಗಳೂರಿನಲ್ಲಿ ಮಾತನಾಡಿದ ಅವರು, ನಾಗಮಂಗಲ ಗಲಾಟೆಯ ತನಿಖೆ ಈಗಾಗಲೇ ಹಳ್ಳ ಹಿಡಿದು ಹೋಗಿದೆ. ಕ್ಲೀನ್ಚಿಟ್ ಕೊಡುವುದರಲ್ಲಿ ಈ ಸರ್ಕಾರದ ಸಚಿವರು ನಿಸ್ಸೀಮರು. ವಿಧಾನಸಭೆಯಲ್ಲಿ ಪಾಕ್ ಪರ ಘೋಷಣೆ ಕೂಗಿದ್ದಾಗಲೂ ಹಾಗೆಯೇ ಮಾಡಿದ್ದರು. ಆದರೇನಾಯ್ತು? ವಿಧಿ ವಿಜ್ಞಾನ ಪ್ರಯೋಗಾಲಯ ವರದಿ ಬಂದು ತಪ್ಪಿತಸ್ಥರು ಈಗ ಜೈಲಿನಲ್ಲಿದ್ದಾರೆ ಎಂದರು.
ನಾಗಮಂಗಲ ಗಲಭೆ ವೇಳೆ ಪೆಟ್ರೋಲ್ ಬಾಂಬ್ ಹೇಗೆ ಬಂತು? ಏಕಾಏಕಿ ಪೆಟ್ರೋಲ್ ಬಾಂಬ್ ತಯಾರಿಸಲು ಸಾಧ್ಯವೇ? ಬಾಂಬ್ ತಯಾರು ಮಾಡಲಿಕ್ಕಾದರೂ ಟೈಂ ಬೇಕಲ್ವಾ? ಇವೆಲ್ಲವೂ ಗಲಭೆ ಪೂರ್ವನಿರ್ಧರಿತ ಎಂಬುದಕ್ಕೆ ಪುಷ್ಟಿ ನೀಡಿದೆ ಎಂದರು.
ಮಚ್ಚು, ತಲ್ವಾರ್ ನಿತ್ಯ ಮನೆಯಲ್ಲೇ ಇಟ್ಕೊಂಡಿರುತ್ತಾರಾ? ಗಲಾಟೆ ಆಗಲಿ ಅಂತಾನೇ ಕಾಂಗ್ರೆಸ್ಸಿಗರ ತಲೆಯಲ್ಲಿ ಇತ್ತು. ಬಿಜೆಪಿ ಮೇಲೆ ಗೂಬೆ ಕೂರಿಸುವುದು ಬಿಟ್ಟು ಬೇರೇನೂ ಇಲ್ಲ ಎಂದು ಅಶೋಕ್ ಕಿಡಿ ಕಾರಿದರು.
ನಾಗಮಂಗಲದಲ್ಲಿ ಮುಸ್ಲಿಂ ಸಂತ್ರಸ್ತರಿಗೆ ಕೇಂದ್ರ ಸಚಿವ ಕುಮಾರಸ್ವಾಮಿ ಪರಿಹಾರ ಕೊಟ್ಟಿರುವ ವಿಚಾರವಾಗಿ ಪ್ರತಿಕ್ರಿಯಿಸಿ, ಮೈತ್ರಿ ನಾಯಕರು ಅವರ ಪಕ್ಷದ ಸಿದ್ಧಾಂತ ಏನಿದೆಯೋ ಅದನ್ನು ಮಾಡುತ್ತಾರೆ. ನಮ್ಮದು ಏನಿದೆಯೋ ಅದನ್ನು ನಾವು ಪಾಲಿಸುತ್ತೇವೆ. ನಿಜಸ್ಥಿತಿ, ನಮಗೆ ಏನು ಮಾಹಿತಿ ಬಂದಿದೆಯೋ ಅದರಂತೆ ಹೇಳಿದ್ದೇವೆ. ಕೇರಳದಿಂದ ಬಂದು ಕೃತ್ಯ ಮಾಡಿದ್ದೇವೆ ಅಂತಾ ನಾವು ಆಪಾದನೆ ಮಾಡಿದ್ದೇವೆ. ನಮ್ಮ ಸಿದ್ಧಾಂತ ಬಿಟ್ಟುಕೊಡಲ್ಲ ಎಂದು ಕುಮಾರಸ್ವಾಮಿ ಸ್ಪಷ್ಟ ಮಾಡಿದ್ದಾರೆ. ಮೈತ್ರಿ ಆಗಿದೆ, ಮೈತ್ರಿ ಜೊತೆ ನಾವು ಹೋಗುತ್ತೇವೆ ಅಷ್ಟೇ. ಅವರ ಸಿದ್ಧಾಂತಗಳಿಗೆ ನಮ್ಮದೇನೂ ಸಮಸ್ಯೆ ಇಲ್ಲ, ನಮ್ಮದಕ್ಕೆ ಅವರದ್ದು ಏನೂ ಸಮಸ್ಯೆ ಇಲ್ಲ ಎಂದು ಅಶೋಕ್ ಹೇಳಿದರು.
ಕಾಂಗ್ರೆಸ್ ವಿರುದ್ಧ ವಾಗ್ದಾಳಿ
ಸರಿಯಾದ ರೀತಿ ತನಿಖೆ ನಡೆಯುವುದೇ ಕಾಂಗ್ರೆಸ್ ಸರ್ಕಾರಕ್ಕೆ ಬೇಕಿಲ್ಲ. ಗಲಭೆಯ ಆರೋಪಿಗಳನ್ನು ಹೆಸರಿಸಿರುವುದರಲ್ಲೇ ಅವರ ಉದ್ದೇಶ ಸ್ಪಷ್ಟವಾಗುತ್ತಿದೆ. ನಾಗಮಂಗಲ ಗಲಭೆಯಲ್ಲಿ ಎ1 ರಿಂದ 37ರ ವರೆಗೆ ಹಿಂದುಗಳು, ಎ37 ರ ನಂತರ ಮುಸ್ಲಿಮರು, ಇದರಿಂದಲೇ ಎಲ್ಲವೂ ಅರ್ಥ ಆಗಲ್ವಾ ಎಂದು ಪ್ರಶ್ನಿಸಿದ ಅಶೋಕ್, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಇದನ್ನೂ ಓದಿ: ನಾಗಮಂಗಲ: ಪಾತ್ರೆ ಅಂಗಡಿಗೆ ಪೆಟ್ರೋಲ್ ಸುರಿದು ಬೆಂಕಿ, ಸಿಸಿಟಿವಿಗೆ ಕಲ್ಲೆಸೆದು ಸಾಕ್ಷ್ಯನಾಶಕ್ಕೆ ಯತ್ನ, ವಿಡಿಯೋ ಬಹಿರಂಗ
ಪಾಕಿಸ್ತಾನ ಪರವಾಗಿ ಘೋಷಣೆಗಳನ್ನ ಕೂಗಿಲ್ಲ, ಅಶೋಕ್ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂಬ ಸಚಿವ ಚಲುವರಾಯಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿ, ಹೂಂನಪ್ಪಾ, ಅಶೋಕ್ ಯಾವಾಗಲೂ ಸುಳ್ಳು ಹೇಳೋದು. ಕಾಂಗ್ರೆಸ್ಸಿಗರು ಸತ್ಯಹರಿಶ್ಚಂದ್ರನ ಮೊಮ್ಮಕ್ಕಳು, ಮರಿಮಕ್ಕಳು. ರಾಮೇಶ್ವರಂ ಕೆಫೆ ಸ್ಫೋಟ ಮಸಾಲೆ ದೋಸೆ ಗಲಾಟೆ ಅಂದ್ರು. ಬಿಜೆಪಿ ಕಚೇರಿಗೇ ಬಾಂಬ್ ಇಡುವುದಕ್ಕೆ ಬಂದಿದ್ದ ಅವನು. ಮಂಗಳೂರಲ್ಲಿ ಕುಕ್ಕರ್ ಬಾಂಬ್ ಆದಾಗ ಬ್ರದರ್ ಅಂದರು. ಕಾಂಗ್ರೆಸ್ ತಲೆಯಲ್ಲಿ ಬರೀ ಕುಕ್ಕರ್ಗಳೇ ತುಂಬಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ