ಕೊಲೆ ಬೆದರಿಕೆ ಹಾಕಿದ್ದ ರೌಡಿ ಶೀಟರ್ ಮಟ್ಯಾಷ್: ಹಳ್ಳಿ ಹೈದರು ಪ್ಯಾಟೆಯಲ್ಲಿ ಸಿಕ್ಕಿರು
ಅವರೆಲ್ಲ ಸಣ್ಣಪುಟ್ಟ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ರೌಡಿ ಶೀಟರ್ ಒಬ್ಬನ ಸ್ನೇಹ ಮಾಡಿದ್ದಕ್ಕೆ ಮತ್ತೊಬ್ಬ ರೌಡಿಯಿಂದ ಟಾರ್ಚರ್ ಶುರುವಾಗಿತ್ತು. ಎರಡ್ಮೂರು ಬಾರಿ ಆತನಿಂದ ಹಲ್ಲೆಗೂ ಒಳಗಾಗಿದ್ದರು. ಅಷ್ಟೆ ಅಲ್ಲ ಮರ್ಡರ್ ಮಾಡುತ್ತೇನೆ ಎಂದು ಆ ರೌಡಿ ಬೆದರಿಕೆ ಹಾಕಿದ್ದ. ಇದರಿಂದ ಭಯಗೊಂಡ ಗ್ಯಾಂಗ್, ಎಲ್ಲಿ ಕೊಂದು ಬಿಡುತ್ತಾನೋ ಎಂದು ಬೆದರಿಕೆ ಹಾಕಿದ್ದ ರೌಡಿಯನ್ನೇ ಮಟ್ಯಾಷ್ ಮಾಡಿದ್ದಾರೆ.

ಮಂಡ್ಯ, (ಡಿಸೆಂಬರ್ 18): ಬೆದರಿಕೆ ಹಾಕಿದ್ದ ರೌಡಿ ಶೀಟರ್ ನನ್ನೇ (rowdy sheeter )ಹತ್ಯೆ ಮಾಡಲಾಗಿದೆ. ಮಂಡ್ಯ (Mandya) ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ಅಮೃತಿ ಗ್ರಾಮದ ಬಳಿ ಕಳೆದ ನವೆಂಬರ್ 29ರಂದು ರೌಡಿ ಶೀಟರ್ ಮಹೇಶ್ ಎಂಬಾತನ ಭೀಕರ ಹತ್ಯೆ ಮಾಡಲಾಗಿದ್ದು, ತಲೆಮರಿಸಿಕೊಂಡಿದ್ದ ಹಂತಕರು ಇದೀಗ ಬೆಂಗಳೂರಿನಲ್ಲಿ ಸಿಕ್ಕಿಬಿದ್ದಿದ್ದಾರೆ. ಬಸವರಾಜು, ಶಶಾಂಕ್, ಹೇಮಂತ್ ಕುಮಾರ್, ಸುಮಂತ್ ಬಂಧಿತರು. ಈ ಸ್ನೇಹಿತರ ಗುಂಪಿಗೆ ರೌಡಿ ಶೀಟರ್ ಮಹೇಶ್, ಕೆಲ ಹಲವು ದಿನಗಳಿಂದ ಟಾರ್ಚರ್ ಕೊಡುತ್ತಾ ಕೊನೆಗೆ ಕೊಲೆ ಬೆದರಿಕೆ ಹಾಕಿದ್ದ. ಇದರಿಂದ ಆತಂಕಗೊಂಡ ಗ್ಯಾಂಗ್, ಪ್ಲ್ಯಾನ್ ಮಾಡಿ ಸಿಮಿಮಾ ಸ್ಟೈಲ್ನಲ್ಲೇ ರೌಡಿ ಶೀಟರ್ ಮಹೇಶನನ್ನೇ ಕೊಲೆ ಮಾಡಿ ತಲೆಮರಿಸಿಕೊಂಡಿದ್ದರು. ಇದೀಗ ಬೆಂಗಳೂರಿನ ಲಾಡ್ಜ್ನಲ್ಲಿ ತಂಗಿದ್ದ ಹಂತಕರನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸಿನಿಮಾ ಸ್ಟೈಲ್ ನಲ್ಲಿ ರೌಡಿಶೀಟರ್ ಹತ್ಯೆ
ಕೊಲೆಯಾದ ಮಹೇಶ ಲಕ್ಷ್ಮೀಸಾಗರದ ನಿವಾಸಿ. ಹಲವು ವರ್ಷಗಳಿಂದ ರೌಡಿ ಚಟುವಟಿಕೆಯಲ್ಲಿ ತೊಡಗಿದ್ದ. ಈತನ ವಿರುದ್ಧ 8 ಪ್ರಕರಣಗಳು ದಾಖಲಾಗಿದ್ದವು. ಅಷ್ಟೆಯಲ್ಲ 2023ರಲ್ಲಿ ಈತನನ್ನ ಪೊಲೀಸರು ಗಡಿಪಾರು ಮಾಡಿದ್ದದರು. ಗಡಿಪಾರು ಅವಧಿ ಮುಗಿದ ಬಳಿಕ ಬೆಂಗಳೂರಿನಲ್ಲಿ ಆಟೋ ಓಡಿಸುತ್ತಿದ್ದ. ಆದ್ರೆ, ಕೊಲೆಯಾಗುವ ಮೂರು ದಿನದ ಹಿಂದಷ್ಟೆ ಊರಿಗೆ ಬಂದಿದ್ದ. ನವೆಂಬರ್ 28ರಂದು ಸಮೀಪದ ಜಕ್ಕನಹಳ್ಳಿಯ ಬಾರ್ ವೊಂದರಲ್ಲಿ ಪಾರ್ಟಿ ಮಾಡಿ ಸ್ನೇಹಿತರಾದ ಕಿರಣ್ ಹಾಗೂ ಮರೀಗೌಡ ಜೊತೆಗೆ ಒಂದೇ ಬೈಕ್ ನಲ್ಲಿ ಊರಿಗೆ ಹೊಟ್ಟಿದ್ದ. ಅಮೃತಿ ಬಳಿಗೆ ಬರ್ತಿದ್ದಂತೆ ಮಾರುತಿ ಓಮ್ನಿಯಲ್ಲಿ ಅಟ್ಯಾಕ್ ಮಾಡಿದ್ದ ಗ್ಯಾಂಗ್, ಸಿನಿಮಾ ಸ್ಟೈಲ್ ನಲ್ಲಿ ಮೊದಲು ಬೈಕ್ ಗೆ ಗುದ್ದಿ ಬಳಿಕ ಮಾರಕಾಸ್ತ್ರಗಳಿಂದ ಕೊಚ್ಚಿ ಪರಾರಿಯಾಗಿದ್ದರು.
ಇದನ್ನೂ ಓದಿ: ಹುಡುಗಿಯರ ಮೊಬೈಲ್ ನಂಬರ್ ಕೇಳಿದ್ದಕ್ಕೆ ಫೈಟ್: ಪೊಲೀಸ್ ಠಾಣೆ ಮೆಟ್ಟಿಲೇರಿದ ಪಬ್ ಗಲಾಟೆ
ಬೆಂಗಳೂರಿನಲ್ಲಿ ತಲೆಮರೆಸಿಕೊಂಡಿದ್ದ ಹಂತಕರು
ಭೀಮಾ ಅಲಿಯಾಸ್ ಚಂದ್ರಶೇಖರ, ಬಸವರಾಜು, ಶಶಾಂಕ್, ಹೇಮಂತ್ ಕುಮಾರ್, ಸುಮಂತ್ ಸಿನಿಮಾ ಸ್ಟೈಲ್ ನಲ್ಲಿ ಮೊದಲು ಬೈಕ್ ಗೆ ಕಾರಿನಲ್ಲಿ ಡಿಕ್ಕಿ ಹೊಡೆಸಿ ಬಳಿಕ ಮಾರಕಾಸ್ತ್ರಗಳಿಂದ ಕೊಚ್ಚಿ ಪರಾರಿಯಾಗಿದ್ದರು. ಈ ಬಗ್ಗೆ ಮಾಹಿತಿ ಪಡೆದ ಮೇಲುಕೋಟೆ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾಗ ಮಹೇಶ ಇನ್ನೂ ಬದುಕಿದ್ದ. ತಕ್ಷಣ ಆತನನ್ನ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ಮಹೇಶ ಮೃತಪಟ್ಟಿದ್ದ. ಇನ್ನು ಪ್ರಕರಣ ದಾಖಲಿಸಿಕೊಂಡು ಮೇಲುಕೋಟೆ ಪೊಲೀಸರು ತನಿಖೆ ಕೈಗೊಳ್ಳುತ್ತಿದ್ದಂತೆಯೇ ಎ1 ಆರೋಪಿ ಭೀಮ ನ್ಯಾಯಾಲಯದಲ್ಲಿ ಶರಣಾಗಿದ್ದ. ಆತನನ್ನ ಕಸ್ಟಡಿಗೆ ಪಡೆದ ಪೊಲೀಸರು ಮತ್ತಷ್ಟು ತನಿಖೆ ಚುರುಕುಗೊಳಿಸಿದಾಗ ಉಳಿದ ಹಂತಕರು ಬೆಂಗಳೂರಿನಲ್ಲಿರುವುದು ಗೊತ್ತಾಗಿದೆ. ಕೂಡಲೇ ಬೆಂಗಳೂರಿಗೆ ತೆರಳಿ ಕಾರ್ಯಚರಣೆ ನಡೆಸಿದಾಗ ಹಂತಕರು ಜಿಗಿಣಿಯ ಲಾಡ್ಜ್ವೊಂದರಲ್ಲಿ ಸಿಕ್ಕಿಬಿದ್ದಿದ್ದಾರೆ. ಇದರೊಂದಿಗೆ ಕೊಲೆ ಬಳಿಕ ತಲೆಮರೆಸಿಕೊಂಡಿದ್ದ ಬಸವರಾಜು, ಶಶಾಂಕ್, ಹೇಮಂತ್ ಕುಮಾರ್, ಸುಮಂತ್ ನನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕೊಲೆ ಮಾಡಲು ಕಾರಣವೇನು?
ಇನ್ನು ಲಕ್ಷ್ಮೀಸಾಗರದ ಮತ್ತೊಬ್ಬ ರೌಡಿಶೀಟರ್ ರೋಹಿತ ಎಂಬಾತನ ಜೊತೆಗೆ ಭೀಮ ಸ್ನೇಹ ಬೆಳೆಸಿದ್ದಕ್ಕೆ ಮಹೇಶ ದ್ವೇಷ ಮಾಡಲು ಶುರು ಮಾಡಿದ್ದ. ಇದೇ ವಿಚಾರವಾಗಿ ಭೀಮ ಹಾಗೂ ಬಸವರಾಜುಗೆ ಎರಡ್ಮೂರು ಬಾರಿ ಮಹೇಶ ಹಲ್ಲೆ ಮಾಡಿದ್ದ. ಅಷ್ಟೇ ಅಲ್ಲ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದ. ಇದರಿಂದ ಭಯಗೊಂಡ ಭೀಮ ಹಾಗೂ ಬಸವರಾಜು ಸ್ಕೆಚ್ ಹಾಕಿ ಕೊಲೆ ಮಾಡಿದ್ದಾಗಿ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾರೆ.
ಒಟ್ಟಿನಲ್ಲಿ ಗಡಿಪಾರಾದ ಬಳಿಕವೂ ಬುದ್ಧಿ ಕಲಿಯದೆ ರೌಡಿಸಂ ಮುಂದುವರೆಸಿದ್ದ ಮಹೇಶ ಕೊಲೆಯಾಗಿದ್ರೆ, ಅತ್ತ ಸಣ್ಣಪುಟ್ಟ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದವರು ಮಚ್ಚು ಹಿಡಿದು ಜೈಲು ಸೇರಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.



