ಬಲಿಯಿಂದ ತಪ್ಪಿಸಿಕೊಳ್ಳಲು ಮರ ಏರಿ ಕುಳಿತ ಹುಂಜ: ಕೋಳಿ ಇಳಿಸಲು ಜನರ ಹರಸಾಹಸ
ಮಾರಮ್ಮನ ಉತ್ಸವದ ವೇಳೆ ದೇವಿಗೆ ಬಲಿ ನೀಡಲು ಭಕ್ತರೊಬ್ಬರು ತಂದಿದ್ದ ಹುಂಜ ತಪ್ಪಿಸಿಕೊಂಡು ಮರ ಏರಿ ಜೀವ ಉಳಿಸಿಕೊಳ್ಳಲು ಯತ್ನಿಸಿತು.
ಮಂಡ್ಯ: ನಗರದ ಬಿಸಿಲು ಮಾರಮ್ಮ ದೇಗುಲದ ಬಳಿ ನಡೆಯುತ್ತಿದ್ದ ಮಾರಮ್ಮನ ಉತ್ಸವದ ವೇಳೆ ದೇವಿಗೆ ಬಲಿ ನೀಡಲು ಭಕ್ತರೊಬ್ಬರು ತಂದಿದ್ದ ಹುಂಜ ತಪ್ಪಿಸಿಕೊಂಡು ಮರ ಏರಿ ಜೀವ ಉಳಿಸಿಕೊಳ್ಳಲು ಯತ್ನಿಸಿತು. ಕೋಳಿಯನ್ನು ಹಿಡಿಯಲು ಭಕ್ತರು ಮರ ಹತ್ತಿದರಾದರೂ ಅದು ರೆಂಬೆಯಿಂದ ರೆಂಬೆಗೆ ಹಾರಿ ತಪ್ಪಿಸಿಕೊಳ್ಳುತ್ತಿತ್ತು. ಮಳೆ ಬಂದಾಗ ಜನರು ಅನಿವಾರ್ಯವಾಗಿ ಮರದಿಂದ ಕೆಳಗೆ ಇಳಿಯಬೇಕಾಯಿತು. ಕೊನೆಗೂ ಹಾಗೂ ಹೀಗೂ ಕೋಳಿಯನ್ನು ಹಿಡಿದ ಭಕ್ತರು ದೇವಿ ಬಲಿಕೊಟ್ಟರು.
ಗ್ರಾಮೀಣ ಪ್ರದೇಶಗಳಲ್ಲಿ ಭಕ್ತರು ದೇವರಿಗೆ ಕೋಳಿ, ಕುರಿಗಳ ಹರಕೆ ಹೇಳಿಕೊಳ್ಳುವುದು ಮತ್ತು ಬಲಿಕೊಡುವುದು ಮುಂದುವರಿದಿದೆ. ಇಂಥ ಸಂದರ್ಭದಲ್ಲಿ ಪ್ರಾಣಿಗಳು ಬಲಿಯಿಂದ ತಪ್ಪಿಸಿಕೊಳ್ಳಲು ಜಾಣತನದ ತಂತ್ರಗಳನ್ನು ಹೂಡುತ್ತವೆ. ಮಂಡ್ಯ ನಗರದ 100 ಅಡಿ ರಸ್ತೆಯಲ್ಲಿ ನೆರೆದಿದ್ದ ಜನರು ಇಂಥದ್ದೊಂದು ಘಟನೆಗೆ ಸಾಕ್ಷಿಯಾದರು. ಗಾಂಧಿ ನಗರ ಬಡಾವಣೆಯಲ್ಲಿ ನಡೆಯುತ್ತಿದ್ದ ಶ್ರೀಕಾಳಮ್ಮ ದೇವರ ಹಬ್ಬರ ಅಂಗವಾಗಿ ಬಿಸಿಲು ಮಾರಮ್ಮ ದೇವಿಯ ಆರತಿ ಉತ್ಸವ ನಡೆಯುತ್ತಿತ್ತು. ಈ ವೇಳೆ ಭಕ್ತರೊಬ್ಬರು ಎರಡು ನಾಟಿ ಹುಂಜಗಳನ್ನು ಬಲಿಕೊಡಲೆಂದು ತಂದಿದ್ದರು. ಒಂದು ಹುಂಜವನ್ನು ಬಲಿಕೊಟ್ಟ ನಂತರ, ಮತ್ತೊಂದು ಹುಂಜ ಅವರ ಹಿಡಿತದಿಂದ ಪಾರಾಗಿ ಮರ ಏರಿತು.
ಮರದಿಂದ ಕೋಳಿಯನ್ನು ಇಳಿಸಲು ಅಲ್ಲಿದ್ದವರು ಸಾಕಷ್ಟು ತಂತ್ರಗಳನ್ನು ಹೂಡಿದರೂ ಪ್ರಯೋಜನ ಸಿಗಲಿಲ್ಲ. ಮಳೆಯೂ ಕೋಳಿಯ ಪರವಾಗಿಯೇ ಇತ್ತು. ಕೊನೆಗೆ ಅಲ್ಲಿಗೆ ಬಂದಿದ್ದವರೊಬ್ಬರು ಹುಂಜ ಹಿಡಿಯುವಲ್ಲಿ ಯಶಸ್ವಿಯಾಗಿ, ಹುಂಜ ಸೆರೆಹಿಡಿಯುವ ಕಾರ್ಯಾಚರಣೆಗೆ ಮಂಗಳ ಹಾಡಿದರು.
ಇದನ್ನೂ ಓದಿ: ಚಾಮರಾಜನಗರದಲ್ಲಿ ನಡೆಯಿತು ಬೆಳಗ್ಗೆ ಸತ್ತ ವ್ಯಕ್ತಿಗೆ ಮರುಜೀವ ನೀಡುವ ಬಲಿ ಜಾತ್ರೆ! ಏನಿದರ ವಿಶೇಷತೆ?
ಇದನ್ನೂ ಓದಿ: ತಬ್ಬಲಿ ಕುರಿಮರಿಯನ್ನು ಮಗುವಿನಂತೆ ಸಾಕಿದ ಕುಟುಂಬ ಅದರ ಮೊದಲ ಹುಟ್ಟುಹಬ್ಬವನ್ನು ಭರ್ಜರಿಯಾಗಿ ಆಚರಿಸಿತು
Published On - 1:13 pm, Wed, 11 May 22