ನಾನು ಇನ್ಮುಂದೆ ಕಣ್ಣೀರು ಹಾಕಲ್ಲ: ಮಂಡ್ಯದಲ್ಲಿ ಮಾಜಿ ಸಿಎಂ ಎಚ್​ಡಿ ಕುಮಾರಸ್ವಾಮಿ ಹೇಳಿಕೆ

HD Kumaraswamy: ನಾನು ಮೈತ್ರಿ ಮಾಡಿಕೊಳ್ಳುತ್ತೇನೆ ಎಂದು ಎಲ್ಲಿಯೂ ಹೇಳಿಲ್ಲ. ನಮ್ಮ ಪಕ್ಷದ ಖಜಾನೆ ಹಣದ ಮೂಲಕ ತುಂಬಿಲ್ಲ. ಬದಲಾಗಿ ಜನರ ಪ್ರೀತಿ ವಿಶ್ವಾಸದಿಂದ ಖಜಾನೆ ತುಂಬಿದೆ. ಅದೂ ಅಲ್ಲದೆ ಯಾವ ಪಕ್ಷವೂ ನಮ್ಮ ಬೆಂಬಲವನ್ನು ಕೋರಿಲ್ಲ. ಆದರೆ ನಮ್ಮ ಅಭ್ಯರ್ಥಿ ಇಲ್ಲದ ಕಡೆ ಬಿ.ಎಸ್.ಯಡಿಯೂರಪ್ಪ ಸಹಕಾರ ಕೋರಿದ್ದಾರೆ. ನಮ್ಮ ಅಭ್ಯರ್ಥಿಗೆ ಬಿಜೆಪಿಯವರು ಸಹಕರಿಸುತ್ತಿಲ್ಲ.

ನಾನು ಇನ್ಮುಂದೆ ಕಣ್ಣೀರು ಹಾಕಲ್ಲ: ಮಂಡ್ಯದಲ್ಲಿ ಮಾಜಿ ಸಿಎಂ ಎಚ್​ಡಿ ಕುಮಾರಸ್ವಾಮಿ ಹೇಳಿಕೆ
ಜೆಡಿಎಸ್ ನಾಯಕ ಹೆಚ್​.ಡಿ. ಕುಮಾರಸ್ವಾಮಿ
Follow us
TV9 Web
| Updated By: Digi Tech Desk

Updated on:Dec 06, 2021 | 2:04 PM

ಮಂಡ್ಯ:  ನಾನು ಇನ್ಮುಂದೆ ಕಣ್ಣೀರು ಹಾಕಬಾರದು ಎಂದು ನಿರ್ಧರಿಸಿದ್ದೇನೆ. ಹಾಗೆಂದ ಮಾತ್ರಕ್ಕೆ ನಾನು ಕಟುಕ ಹೃದಯವನ್ನು ಹೊಂದಿದವನು ಎಂದರ್ಥವಲ್ಲ. ಜನರ ಕಷ್ಟವನ್ನು ಭಾವನಾತ್ಮಕವಾಗಿ ನೋಡಿದಾಗ ನಮ್ಮ ಹೃದಯ ಮಿಡಿಯುತ್ತೆ. ನಾನು ಸಿಎಂ ಆಗಿದ್ದಾಗ ಕನಗನಮರಡಿ ಬಸ್ ದುರಂತ ನಡೆಯಿತು. ಅದನ್ನ ನೋಡಿ ನನ್ನ ಕಣ್ಣಲ್ಲಿ ನೀರು ಬಂತು. ಕೆಲವರು ಅದನ್ನೇ ಟವಲ್​ನಲ್ಲಿ ಗ್ಲಿಸ್​ರಿನ್​ ಹಾಕ್ಕೊಂಡು ಅಳ್ತಾರೆ ಎಂದು ಹೇಳಿದ್ದರು, ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ತಮ್ಮ ಅಸಮಧಾನ ಹೊರಹಾಕಿದ್ದಾರೆ.

ಈ ಹಿಂದೆ ನಡೆದ ಚುನಾವಣೆ ಮತ್ತು ಬೇರೆ ಬೇರೆ ಸಂದರ್ಭಗಳಲ್ಲಿ ಕುಮಾರಸ್ವಾಮಿ ಕಣ್ಣೀರು ಹಾಕಿದ್ದು, ಅವರ ರಾಜಕೀಯ ವಿರೋಧಿಗಳಿಂದ ತೀವ್ರ ಟೀಕೆಗೂ ಮತ್ತು ಜನರ ಟ್ರೋಲ್​ಗೂ ಒಳಗಾಗಿತ್ತು. 2018 ರ ವಿಧಾನ ಸಭಾ ಚುನಾವಣೆಯ ಸಂದರ್ಭದಲ್ಲಿ ರಾಜರಾಜೇಶ್ವರಿ ನಗರದಲ್ಲಿ ಪ್ರಚಾರ ಮಾಡುವಾಗ, ನಾನು ಎಷ್ಟು ದಿನ ಬದುಕಿರುತ್ತೇನೋ ಗೊತ್ತಿಲ್ಲ, ಹಾಗಾಗಿ ಮತ ಹಾಕಿ,” ಎಂದು ಕಣ್ಣೀರು ಹಾಕುತ್ತಾ ಕುಮಾರಸ್ವಾಮಿ ಮತ ಕೇಳಿದ್ದರು. ಮುಂದೆ ಮುಖ್ಯಮಂತ್ರಿ ಸ್ಥಾನದಿಂದ ಇಳಿಯುವಾಗ ಕಣ್ಣೀರು ಹಾಕಿರಲಿಲ್ಲ. ಮುಂದೆ ಕೆಆರ್​ ಪೇಟೆ ಉಪಚುನಾವಣೆ ಸಂದರ್ಭದಲ್ಲಿ ಮತ್ತೆ ಕಣ್ಣೀರು ಹಾಕಿದ್ದ ಕುಮಾರಸ್ವಾಮಿ ಬಿಜೆಪಿಯ ಟೀಕೆಗೆ ಗುರಿಯಾಗಿದ್ದರು. ಆಗ ಬಿಜೆಪಿಯ ಡಿ.ವಿ. ಸದಾನಂದ ಗೌಡರಿಗೆ ತಿರುಗೇಟು ನೀಡುತ್ತ, ಕಣ್ಣೀರು ಹಾಕೋದನ್ನ ನಮ್ಮ ಕುಟುಂಬ ಪೇಟೆಂಟ್ ಪಡೆದಿದೆ  ಎಂದು ಹೇಳಿದ್ದರು ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ತಿಳಿಸಿದ್ದಾರೆ.

ಕಳೆದ ವರ್ಷ ಡಿಸೆಂಬರಿನಲ್ಲಿ ಸಿದ್ದರಾಮಯ್ಯ ಕೂಡ ದೇವೇಗೌಡ ಕುಟುಂಬದ ಕಣ್ಣೀರು ರಾಜಕಾರಣವನ್ನು ತರಾಟೆಗೆ ತೆಗೆದುಕೊಂಡಿದ್ದರು. “ಜನರನ್ನು ಹಾದಿ ತಪ್ಪಿಸಿ, ಅವರನ್ನು ಭಾವನಾತ್ಮಕವಾಗಿ blackmail ಮಾಡಿ ಮತ ತಗೊಳ್ಳೋಕೆ ಈ ರೀತಿ ಕಣ್ಣೀರು ಹಾಕೋ ರಾಜಕಾರಣ ಮಾಡುತ್ತಾರೆ” ಎಂದು ಕಟಕಿದ್ದರು. ಆಗ ಕುಮಾರಸ್ವಾಮಿಯವರು ಬಿಜೆಪಿ, ಕಾಂಗ್ರೆಸ್ ನಮಗೆ ಶತ್ರುಗಳು, ಮಿತ್ರರಲ್ಲ ಎಂದು ತಿರುಗೇಟು ನೀಡಿದ್ದಾರೆ. ಮೈತ್ರಿ ಬಗ್ಗೆ ಕುಮಾರಸ್ವಾಮಿ ಹೇಳಿದ್ದೇನು? ನಾನು ಮೈತ್ರಿ ಮಾಡಿಕೊಳ್ಳುತ್ತೇನೆ ಎಂದು ಎಲ್ಲಿಯೂ ಹೇಳಿಲ್ಲ. ಕೆಲವು ದಿನಗಳ ಹಿಂದೆ ದೇವೇಗೌಡರು ಪ್ರಧಾನಿ ಮೋದಿಯವರನ್ನ ಭೇಟಿಯಾಗಿದ್ದರ ಬಗ್ಗೆ ಹೇಳಿದ ಅವರು, ಕಾಂಗ್ರೆಸ್ ನಾಯಕರು ನಮ್ಮ ಸಹಕಾರವನ್ನೂ ಕೇಳಿಲ್ಲ, ಆದರೆ ಯಡಿಯೂರಪ್ಪ ಅವರು ಕೇಳಿದ್ದಾರೆ, ಆ ಬಗೆಗೆ ನಾನಿನ್ನು ನಿರ್ಧರಿಸಿಲ್ಲ. ನಾಳೆ ಬೆಂಗಳೂರಿನಲ್ಲಿ ಪ್ರೆಸ್ ಮೀಟ್ ಕರೆದು ಘೋಷಣೆ ಮಾಡುತ್ತೇನೆ ಎಂದು ಹೇಳಿದ್ದಾರೆ. ಈ ಬಾರಿಯ ವಿಧಾನ ಪರಿಷತ್ ಚುನಾವಣೆಯು 2023 ರ ವಿಧಾನ ಸಭಾ ಚುನಾವಣೆಗೆ ಜೆಡಿಎಸ್ ಪಕ್ಷಕ್ಕೆ ಅಡಿಪಾಯ ಆಗಲಿದೆ. ಕಳೆದ ಲೋಕಸಭೆ ಚುನಾವಣೆಯನ್ನು ನಾವು ನಂಬರ್ ಗೇಮ್ ನಲ್ಲಿ ಸೋತಿರಬಹುದು. ಆದರೆ ನೈತಿಕವಾಗಿ ಚುನಾವಣೆಯಲ್ಲಿ ಗೆಲುವು ಕಂಡಿದ್ದೇವೆ. ಅಂದಿನ ಚುನಾವಣೆಯ ನೋವಿನ ಅನುಕಂಪದಲ್ಲಿ ಈ ಚುನಾವಣೆಯಲ್ಲಿ ಗೆಲ್ಲಿಸುತ್ತಾರೆ ಎಂದು ಪಕ್ಷಗೆಲ್ಲುವ ಬಗೆಗೆ ಆಶಾಭಾವನೆ ವ್ಯಕ್ತಪಡಿಸಿದ್ದಾರೆ.ನಮ್ಮ ಪಕ್ಷದ ಖಜಾನೆ ಹಣದ ಮೂಲಕ ತುಂಬಿಲ್ಲ. ಬದಲಾಗಿ ಜನರ ಪ್ರೀತಿ ವಿಶ್ವಾಸದಿಂದ ತುಂಬಿದೆ. ಅದೂ ಅಲ್ಲದೆ ಯಾವ ಪಕ್ಷವೂ ನಮ್ಮ ಬೆಂಬಲವನ್ನು ಕೋರಿಲ್ಲ. ಆದರೆ ನಮ್ಮ ಅಭ್ಯರ್ಥಿ ಇಲ್ಲದ ಕಡೆ ಬಿ.ಎಸ್. ಯಡಿಯೂರಪ್ಪ ಸಹಕಾರ ಕೋರಿದ್ದಾರೆ. ನಮ್ಮ ಅಭ್ಯರ್ಥಿಗೆ ಬಿಜೆಪಿಯವರು ಸಹಕರಿಸುತ್ತಿಲ್ಲ. ನನಗೆ ಎರಡೂ ಪಕ್ಷಗಳು ಶತ್ರುಗಳೇ, ಮಿತ್ರರಲ್ಲ ಎಂದು ಮಂಡ್ಯದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.

ಮುಂದುವರೆದು ಮಾತನಾಡಿದ ಕುಮಾರಸ್ವಾಮಿ, ಸಿದ್ದರಾಮಯ್ಯನವರು ವೈದ್ಯನಾಗಿದ್ದ ಮಗನನ್ನು ಏಕೆ ರಾಜಕೀಯಕ್ಕೆ ಕರೆತಂದರು? ಇದನ್ನ ಏನಂತ ಕರಿಬೇಕು, ಎಫ್ ಎನ್ನಬೇಕಾ ಸಿ ಎನ್ನಬೇಕಾ? ಈಗಿನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವೇ 8 ಅಭ್ಯರ್ಥಿಗಳನ್ನು ಕುಟುಂಬದಲ್ಲೇ ನಿಲ್ಲಿಸಿದ್ದಾರೆ. ಅಲ್ಲದೆ ಸಂವಿಧಾನದಲ್ಲಿ ಒಂದು ಕುಟುಂಬದಲ್ಲಿ ಎಷ್ಟು ಜನ ಚುನಾವಣೆಗೆ ಸ್ಪರ್ಧಿಸಬೇಕೆಂಬ ಬಗೆಗೆ ಸ್ಪಷ್ಟವಾಗಿ ಉಲ್ಲೇಖಿಸಿಲ್ಲ ಹೀಗಾಗಿ ಎರಡೂ ರಾಷ್ಟ್ರೀಯ ಪಕ್ಷಗಳು ಕುಟುಂಬ ರಾಜಕಾರಣದ ಬಗೆಗೆ ಮಾತನಾಡುವುದನ್ನು ಬಿಡಬೇಕು ಎಂದು ಸಿದ್ದರಾಮಯ್ಯಗೆ ಮಾಜಿ ಸಿಎಂ ಕುಮಾರಸ್ವಾಮಿ ತಿರುಗೇಟು ನೀಡಿದರು.

ಇದನ್ನೂ ಓದಿ: ಬಿಜೆಪಿ- ಜೆಡಿಎಸ್ ಮೈತ್ರಿ ಬಗ್ಗೆ ನಾಳೆ ನಿರ್ಧಾರ; ಹೆಚ್​ಡಿ ಕುಮಾರಸ್ವಾಮಿ ಹೇಳಿಕೆ

ಎಪಿಎಂಸಿ ವ್ಯಾಪ್ತಿಯ ಮನೆಗಳ ಕರೆಂಟ್ ಕಟ್; ಹೆಸ್ಕಾಂ ಅಧಿಕಾರಿಯನ್ನು ತರಾಟೆ ತೆಗೆದುಕೊಂಡ ಮಾಜಿ ಸಿಎಂ ಸಿದ್ದರಾಮಯ್ಯ

Published On - 1:55 pm, Mon, 6 December 21