AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಂಡ್ಯ: ಮಲಗಿದ್ದ ವೇಳೆ ಮಂಚಕ್ಕೆ ಬೆಂಕಿ: ಅರ್ಧಂಬರ್ದ ಸುಟ್ಟು ಕರಕಲಾದ ಮಹಿಳೆ…!

ಮದ್ದೂರು ತಾಲೂಕಿನ ಮಾರಸಿಂಗನಹಳ್ಳಿಯಲ್ಲಿ ಗ್ರಾಮದ ಪ್ರೇಮಾ ಎಂಬುವವರು ಜನವರಿ 10 ರಂದು ಮನೆಯೊಳಗೆ ಬೆಂಕಿ ಹೊತ್ತಿ ಸಾವನ್ನಪ್ಪಿದ್ದರು. ಇದು ಕೊಲೆಯೋ ಅಥವಾ ಶಾರ್ಟ್​ ಸರ್ಕ್ಯೂಟ್​ನಿಂದ ಬೆಂಕಿ ಹತ್ತಿ ಮೃತಪಟ್ಟಿದ್ದಾರಾ ಎಂಬುದು ಯಕ್ಷ ಪ್ರಶ್ನೆಯಾಗಿದೆ.

ಮಂಡ್ಯ: ಮಲಗಿದ್ದ ವೇಳೆ ಮಂಚಕ್ಕೆ ಬೆಂಕಿ: ಅರ್ಧಂಬರ್ದ ಸುಟ್ಟು ಕರಕಲಾದ ಮಹಿಳೆ...!
ಸಾವನ್ನಪ್ಪಿದ ಮಹಿಳೆ ಪ್ರೇಮಾ
TV9 Web
| Updated By: ಕಿರಣ್ ಹನುಮಂತ್​ ಮಾದಾರ್|

Updated on:Jan 14, 2023 | 4:04 PM

Share

ಮಂಡ್ಯ: ಜಿಲ್ಲೆಯ ಮದ್ದೂರು ತಾಲೂಕಿನ ಮಾರಸಿಂಗನಹಳ್ಳಿಯಲ್ಲಿ ಜ.10 ರಂದು ಪ್ರೇಮಾ ಎನ್ನುವವರ ಮನೆಗೆ ಬೆಂಕಿ ಹತ್ತಿತ್ತು. ಇದನ್ನು ನೋಡಿದ ಗ್ರಾಮಸ್ಥರು ಕೂಡಲೇ ಫೈರಿಂಜಿನ್​ಗೆ ಕರೆ ಮಾಡಿ ತಾವು ಕೂಡ ಬೆಂಕಿ ನಂದಿಸಲು ಮುಂದಾಗಿದ್ದರು. ಕೊನೆಗೆ ಬೆಂಕಿ ಆರಿಸಿದ ಬಳಿಕ ಮನೆಯಲ್ಲಿದ್ದ ಪ್ರೇಮಾಳನ್ನ ಹುಡುಕಿದ್ದಾರೆ. ಆ ಮಹಿಳೆಯ ಸುಳಿವೇ ಸಿಕ್ಕಿರ್ಲಿಲ್ಲ. ಕೊನೆಗೆ ಮಲಗುವ ಕೋಣೆ ಬಳಿ ಬಂದು ನೋಡಿದಾಗ ಮಂಚದ ಮೇಲೆ ಮನೆ ಒಡತಿ ಪ್ರೇಮಾ ಭಾಗಶಃ ಸುಟ್ಟು ಕರಕಲಾಗಿದ್ದು ಮುಖದ ಭಾಗ ಮಾತ್ರ ಅಲ್ಪ ಸ್ವಲ್ಪ ಉಳಿದಿತ್ತು. ಇದರಿಂದ ಸತ್ತಿರುವುದು ಮನೆಯ ಒಡತಿ ಪ್ರೇಮಾಳದ್ದೆ ಎಂಬುದು ಪಕ್ಕಾ ಆಗಿತ್ತು. ಕೂಡಲೇ ಗ್ರಾಮಸ್ಥರು ಬೆಸಗರಹಳ್ಳಿ ಪೊಲೀಸ್ ಠಾಣೆಗೆ ಕರೆ ಮಾಡಿ ಸುದ್ದಿ ಮುಟ್ಟಿಸಿದ್ದಾರೆ. ಕುದ್ದು ಎಸ್ ಪಿ ಹಾಗೂ ಬೆರಳಚ್ಚು ತಜ್ಞರ ತಂಡ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ. ಇದು ಶಾರ್ಟ್ ಸರ್ಕ್ಯೂಟ್​ನಿಂದ ಹೊತ್ತಿಕೊಂಡ ಬೆಂಕಿನಾ ಅಥವಾ ಯಾರಾದರು ಪೆಟ್ರೋಲ್ ಸುರಿದು ಹಚ್ಚಿದ್ದ ಎಂದು ಪರಿಶೀಲನೆ ನಡೆಸಿದ್ದಾರೆ.

ತಾಯಿ ಮೃತ ಪಟ್ಟಿದ್ದಾಳೆಂಬ ಸುದ್ದಿ ಪುತ್ರನಿಗೆ ತಿಳಿಯುತ್ತಿದ್ದಂತೆ ಶ್ರೀಶೈಲ ಬೆಂಗಳೂರಿನಿಂದ ಓಡೋಡಿ ಬಂದಿದ್ದನು. ತಾಯಿಯ ಮೃತ ದೇಹವನ್ನ ನೋಡಿ ಬಿಕ್ಕಿ ಬಿಕ್ಕಿ ಅತ್ತಿದ್ದನು. ಮನೆಗೆ ಬಂದ ಶ್ರೀಶೈಲಾ ಇದು ಆಕಸ್ಮಿಕವಾಗಿ ಹೊತ್ತಿಕೊಂಡ ಬೆಂಕಿ ಅಲ್ಲ. ಇದೊಂದು ಪ್ರೀ ಪ್ಲಾನ್ ಮರ್ಡರ್ ಎಂದು ಪೊಲೀಸರಿಗೆ ತಿಳಿಸಿದ್ದ. ಘಟನೆ ನಡೆದ ಹಿಂದಿನ ದಿನ ತಾಯಿ ಪ್ರೇಮಾ ಸಂಜೆ 7 ಗಂಟೆಗೆ ಪುತ್ರ ಶ್ರೀಶೈಲಾ ಆರಾದ್ಯಗೆ ಕರೆ ಮಾಡಿ ಇಬ್ಬರು ಚೆನ್ನಾಗಿ ಮಾತನಾಡಿದ್ದಾರೆ. ಈಗ ತಾನೆ ಮುದ್ದೆಯನ್ನ ತಿಂದಿದ್ದೇನೆ ಮಲಗ್ತೀನಿ ಎಂದು ಮೃತ ಪ್ರೇಮಾ ಮಗನ ಜೊತೆ ಮಾತನಾಡಿ ಫೋನ್ ಇಟ್ಟಿದ್ದರಂತೆ. ಆದರೆ ಕತ್ತಲು ಕರಗಿ ಬೆಳಕು ಮೂಡುವಷ್ಟರಲ್ಲಿ ಪ್ರೇಮಾ ಸುಟ್ಟು ಕರಕಲಾಗಿದ್ದರು.

ಪ್ರೇಮಾಳ ಬಗ್ಗೆ ಮಾಹಿತಿ ಕಲೆ ಹಾಕಿದ ಪೊಲೀಸರು

ಇನ್ನು ಮೃತ ಪ್ರೇಮ ಯಾರು ಆಕೆಯ ಜೊತೆ ಯಾರೆಲ್ಲ ವಾಸವಿದ್ದರು ಎಂಬುದರ ಮಾಹಿತಿಯನ್ನ ಕಲೆ ಹಾಕಿದ ಪೊಲೀಸರು. ಪ್ರೇಮಾಳ ಪತಿ ಕುಮಾರ್ ಆರಾದ್ಯ ಕಳೆದ 8 ವರ್ಷಗಳ ಹಿಂದೆಯೇ ಅನಾರೋಗ್ಯ ಕಾರಣದಿಂದ ಮೃತ ಪಟ್ಟಿದ್ದರೆ. ಇದ್ದ ಓರ್ವ ಮಗ ಇಂಜಿನಿಯರಿಂಗ್ ವ್ಯಾಸಾಂಗ ಮುಗಿಸಿಕೊಂಡು ಬೆಂಗಳೂರಿನ ಸಾಫ್ಟ್ ವೇರ್ ಕಂಪನಿಯೊಂದರಲ್ಲಿ ಕೆಲಸಕ್ಕೆ ಸೇರಿದ್ದ. ರಜಾ ದಿನಗಳಲ್ಲಿ ಮಾರಸಿಂಗನಹಳ್ಳಿಗೆ ಬಂದು ಶನಿವಾರ ಭಾನುವಾರ ತಾಯಿಯ ಜೊತೆ ಕಾಲ ಕಳೆದು ಆಕೆಗೆ ಆರೈಕೆ ಮಾಡಿ ಸೋಮವಾರ ಬೆಳಗ್ಗೆ ಎದ್ದು ಹೋಗುತ್ತಾ ಇದ್ದನಂತೆ. ಇನ್ನುಳಿದ ದಿನಗಳಲ್ಲಿ ಪ್ರೇಮ ಒಂಟಿಯಾಗಿ ಇರುತ್ತಾ ಇದ್ದರು ಎಂಬ ಮಾಹಿತಿಯನ್ನ ಪೊಲೀಸರು ಕಲೆ ಹಾಕಿದರು.

ಊರಿನಲ್ಲಿ ಯಾರ ತಂಟೆಗೆ ಹೋಗದ ಪ್ರೇಮ ತಾನಾಯ್ತು ತನ್ನ ಕೆಲಸ ಆಯ್ತು ಎಂದು ಇದ್ದ ಪ್ರೇಮಾ ಮನೆ ಬಿಟ್ಟು ಆಚೆ ಹೋಗುವಾಗ ಮೈ ತುಂಬಾ ಚಿನ್ನಾಭರಣವನ್ನ ಹಾಕಿಕೊಂಡು ಹೋಗುತ್ತಾಯಿದ್ದು, ಇದು ಎಲ್ಲರ ಕಣ್ಣನ್ನ ಕುಕ್ಕುತ್ತಿತ್ತು. ಸ್ಥಿತಿವಂತರಾಗಿದ್ದ ಪ್ರೇಮಾ ಮಾರಸಿಂಗನಹಳ್ಳಿ ಗ್ರಾಮದ ಮಹಿಳೆಯರಿಗೆ ಸಾಲ ಕೊಟ್ಟು ಬಡ್ಡಿ ಪಡಿತಾ ಇದ್ದಳು. ಇದು ಕೂಡ ಕೊಲೆಗೆ ಒಂದು ಕಾರಣ ಆಗಿರಬಹುದೆಂದು ಪೊಲೀಸರಿಗೆ ಅನುಮಾನ ಮೂಡಿದೆ.

ಇದನ್ನೂ ಓದಿ:Ramanagara: ವರ್ಷದ ನಂತರ ಸಿಕ್ತು ಅಪರಿಚಿತ ಮಹಿಳೆಯ ಕೊಲೆ ಪ್ರಕರಣದ ಸುಳಿವು, ಆರೋಪಿಗಳ ಬಂಧನಕ್ಕೆ ವಿಶೇಷ ತಂಡ ರಚನೆ

ಇನ್ನು ಈ ಘಟನೆಗೆ ಕಾರಣವೇನು ಎಂದು ತಲೆ ಕೆಡಿಸಿಕೊಂಡು ನಿಂತಿದ್ದ ಪೊಲೀಸರಿಗೆ ಮಗ ಆರಾದ್ಯ ಕೊಟ್ಟ ಸ್ಟೇಟ್ ಮೆಂಟ್ ಪ್ರಕರಣದ ದಿಕ್ಕನ್ನೆ ಬದಲಾಯಿಸಿತ್ತು. ಪ್ರೇಮಾಳ ಕೊರಳಲಿದ್ದ 80 ಗ್ರಾಂ ಚಿನ್ನದ ಸರ ಹಾಗೂ ಕಿವಿಯಲ್ಲಿದ್ದ ಓಲೆ ಜುಮುಕಿ ಸಹ ನಾಪತ್ತೆಯಾಗಿತ್ತು. ಮನೆಯ ಬಾಗಿಲು ತೆರೆದೆ ಇತ್ತು. ಇತ್ತ ಬೀರು ಕಪಾಟಿನಲ್ಲಿ ಇಟ್ಟಿದ್ದ ಬೆಳ್ಳಿಯ ವಸ್ತುಗಳು ಹಾಗೂ ಲ್ಯಾಪ್ ಟ್ಯಾಪ್ ಕಾಣೆಯಾಗಿದೆ ಎಂದು ಮೃತ ಪ್ರೇಮಾಳ ಪುತ್ರ ಪೊಲೀಸರಿಗೆ ಮಾಹಿತಿ ನೀಡಿದ್ದ. ಅಲ್ಲಿಗೆ ಇದೊಂದು ಮರ್ಡರ್ ಎಂಬುದು ಪೊಲೀಸರಿಗೆ ತಿಳಿದಿತ್ತು.ಪ್ರೇಮಾ ಯಾರ್ಯಾರಿಗೆ ಸಾಲ ಕೊಟ್ಟಿದ್ದರು. ಆಕೆ ಯಾರ ಜೊತೆ ಸ್ನೇಹ ಸಂಪಾದನೆ ಮಾಡಿದ್ದರು. ಆಕೆಯ ಓಡನಾಟ ಯಾರ ಜೊತೆ ಇತ್ತೆಂಬ ಮಾಹಿತಿಯನ್ನ ಸಹ ಕಲೆ ಹಾಕುತ್ತಿದ್ದಾರೆ. ಸ್ಥಳೀಯರು ಹೇಳುವ ಪ್ರಕಾರ ಪ್ರೇಮಾ ಊರಿನಲ್ಲಿ ಯಾರ ಜೊತೆಯೂ ಅಷ್ಟೊಂದು ಆತ್ಮೀಯವಾಗಿ ಇರ್ತಾಯಿರ್ಲಿಲ್ಲ. ಆಗಾಗ ಯಾರೋ ಅಪರಿಚಿತರು ಬೈಕ್​ನಲ್ಲಿ ಬಂದು ಹೋಗುತ್ತಾಯಿದ್ದರು ಎನ್ನುವ ಮಾಹಿತಿಯನ್ನ ಸಹ ಪೊಲೀಸರಿಗೆ ನೀಡಿದ್ದಾರೆ.

ಪೊಲೀಸರ ಪ್ರಾಥಮಿಕ ಮಾಹಿತಿ ಪ್ರಕಾರ ಯಾರೊ ಪರಿಚಿತರೇ ಈ ಕೃತ್ಯ ಎಸಗಿದ್ದಾರೆಂದು ಪಕ್ಕಾ ಆಗಿದೆ. ಮನೆಯ ಬಾಗಿಲಿಗೆ ಬೀಗ ಹಾಕಿಲ್ಲ. ಮನೆಯ ಮಲಗುವ ಕೋಣೆ ಬಿಟ್ಟರೆ ಬೇರೆಲ್ಲೂ ಬೆಂಕಿ ಹೊತ್ತಿಲ್ಲ. ಮನೆಯ ಬೀರು ಕಪಾಟಿನಲ್ಲಿದ್ದ ವಸ್ತುಗಳು ಕಳುವಾಗಿದೆ. ಯಾರೊ ಗೊತ್ತಿರುವ ಪರಿಚಿತರೇ ಈ ಕೃತ್ಯವೆಸಗಿದ್ದಾರೆ ಎಂಬುದು ಪೊಲೀಸರ ತನಿಖೆಯಲ್ಲಿ ತಿಳಿದು ಬಂದಿದೆ. ಮೊದಲಿಗೆ ಪ್ರೇಮಾರನ್ನ ಕೊಂದು ಬಳಿಕ ಶವಕ್ಕೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ ಎಂಬ ಗುಮಾನಿ ಸಹ ಹರಿದಾಡುತ್ತಿದೆ. ಸದ್ಯ ಬೆಸಗರಹಳ್ಳಿ ಪೊಲೀಸರು ಐಪಿಸಿ ಸೆಕ್ಷನ್ 302 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಆದಷ್ಟು ಬೇಗಾ ಕೊಲೆ ಪಾತಕಿಗಳ ಕೈಗೆ ಕೋಳ ತೊಡಸಲೇ ಬೇಕೆಂದು ಪಣ ತೊಟ್ಟಿದ್ದಾರೆ.

ಅದೇನೆ ಹೇಳಿ ಗಲಾಟೆ ಗದ್ದಲಗಳಿಗೆ ಆಸ್ಪದ ಕೊಡದ ಮಾರಸಿಂಗನಹಳ್ಳಿ ಗ್ರಾಮಸ್ಥರು ಈ ಕೊಲೆಯಿಂದ ಬೆಚ್ಚಿ ಬಿದ್ದಿದ್ದಾರೆ. ಇದೇ ಮೊದಲ ಬಾರಿಗೆ ನಡೆದ ಕೊಲೆಯನ್ನ ಕಂಡು ಭಯಭೀತರಾಗಿದ್ದಾರೆ. ಆರೋಪಿಗಳನ್ನ ಆದಷ್ಟು ಬೇಗ ಸೆರೆ ಹಿಡಿದು ತಕ್ಕ ಶಾಸ್ತಿ ಮಾಡಿ ಎಂದು ಪೊಲೀಸರಲ್ಲಿ ಗ್ರಾಮಸ್ಥರು ಮನವಿ ಮಾಡಿ ಕೊಂಡಿದ್ದಾರೆ.

ವರದಿ: ಸೂರಜ್ ಪ್ರಸಾದ್ ಟಿವಿ9 ಮಂಡ್ಯ

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 4:03 pm, Sat, 14 January 23