ಮಂಡ್ಯದ ಆರತಿ ಉಕ್ಕಡದಲ್ಲಿ ಶಾಸಕ ಸುರೇಶ್‌ಗೌಡ ಪುತ್ರಿ ದರ್ಪ: ಮಹಿಳಾ ಪಿಎಸ್‌ಐಗೆ ಕಪಾಳಮೋಕ್ಷ ಮಾಡಿದ ಐಶ್ವರ್ಯ

ಮಂಡ್ಯದ ಶ್ರೀರಂಗಪಟ್ಟಣ ದೇವಸ್ಥಾನದಲ್ಲಿ ನಡೆದ ಘಟನೆಯೊಂದು ಸದ್ದು ಮಾಡುತ್ತಿದೆ. ಶಾಸಕ ಬಿ. ಸುರೇಶ್‌ಗೌಡ ಪುತ್ರಿ ಐಶ್ವರ್ಯ, ಭೀಮನ ಅಮಾವಾಸ್ಯೆ ದಿನ ಕರ್ತವ್ಯನಿರತ ಮಹಿಳಾ ಪಿಎಸ್‌ಐ ಸವಿತಾ ಮೇಲೆ ಹಲ್ಲೆ ನಡೆಸಿದ್ದಾರೆ. ವಿಐಪಿ ಪ್ರಭಾವ ಬಳಸಿ ಗರ್ಭಗುಡಿ ಪ್ರವೇಶಕ್ಕೆ ಯತ್ನಿಸಿದಾಗ ಪಿಎಸ್‌ಐ ತಡೆದಿದ್ದಾರೆ. ಇದರಿಂದ ಕೆರಳಿದ ಐಶ್ವರ್ಯ ಕಪಾಳಮೋಕ್ಷ ಮಾಡಿದ್ದಾರೆ. ಸರ್ಕಾರಿ ಅಧಿಕಾರಿಗೆ ಅಡ್ಡಿ ಮತ್ತು ಹಲ್ಲೆ ಆರೋಪದಡಿ ಐಶ್ವರ್ಯ ವಿರುದ್ಧ ಪ್ರಕರಣ ದಾಖಲಾಗಿದೆ.

ಮಂಡ್ಯದ ಆರತಿ ಉಕ್ಕಡದಲ್ಲಿ ಶಾಸಕ ಸುರೇಶ್‌ಗೌಡ ಪುತ್ರಿ ದರ್ಪ: ಮಹಿಳಾ ಪಿಎಸ್‌ಐಗೆ ಕಪಾಳಮೋಕ್ಷ ಮಾಡಿದ ಐಶ್ವರ್ಯ
ಮಂಡ್ಯ ಶಾಸಕ ಪುತ್ರಿ
Edited By:

Updated on: Aug 14, 2026 | 10:14 AM

ಮಂಡ್ಯ, ಆ.14: ಶಾಸಕ ಪುತ್ರಿ ದೇವಸ್ಥಾನದಲ್ಲಿ ಕರ್ತವ್ಯನಿರತ ಮಹಿಳಾ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ (PSI) ಮೇಲೆ ಹಲ್ಲೆ ನಡೆಸಿ, ಕಪಾಳಮೋಕ್ಷ ಮಾಡಿರುವ ಆಘಾತಕಾರಿ ಘಟನೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಆರತಿ ಉಕ್ಕಡ ಗ್ರಾಮದಲ್ಲಿ ನಡೆದಿದೆ. ತುಮಕೂರು ಗ್ರಾಮಾಂತರ ಕ್ಷೇತ್ರದ ಬಿಜೆಪಿ ಶಾಸಕ ಬಿ. ಸುರೇಶ್‌ಗೌಡ ಅವರ ಪುತ್ರಿ ಐಶ್ವರ್ಯ ವಿರುದ್ಧ ಮಹಿಳಾ ಪಿಎಸ್‌ಐ ಮೇಲೆ ಹಲ್ಲೆ ನಡೆಸಿದ ಆರೋಪ ಕೇಳಿಬಂದಿದೆ.

ಬುಧವಾರ (ಆ.12) ಭೀಮನ ಅಮಾವಾಸ್ಯೆ ಹಿನ್ನೆಲೆಯಲ್ಲಿ ಆರತಿ ಉಕ್ಕಡದ ಪ್ರಸಿದ್ಧ ಶ್ರೀ ಲಕ್ಷ್ಮಿ ನರಸಿಂಹಸ್ವಾಮಿ ದೇವಸ್ಥಾನಕ್ಕೆ ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಿದ್ದರು. ಶಾಸಕ ಬಿ. ಸುರೇಶ್‌ಗೌಡ ಅವರ ಪುತ್ರಿ ಐಶ್ವರ್ಯ ಕೂಡ ದೇವಸ್ಥಾನಕ್ಕೆ ಬಂದಿದ್ದರು. ಪ್ರಭಾವ ಬಳಸಿ ವಿಐಪಿ ಸಾಲಿನಲ್ಲಿ ಪ್ರವೇಶ ಪಡೆದ ಐಶ್ವರ್ಯ, ಬಳಿಕ ನೇರವಾಗಿ ದೇವರ ಗರ್ಭಗುಡಿಯೊಳಗೆ ಪ್ರವೇಶಿಸಲು ಯತ್ನಿಸಿದ್ದಾರೆ.

ಈ ವೇಳೆ ಸ್ಥಳದಲ್ಲಿ ಭದ್ರತಾ ಕರ್ತವ್ಯದಲ್ಲಿದ್ದ ಕ್ಯಾತನಹಳ್ಳಿ ಪೊಲೀಸ್ ಠಾಣೆಯ ಪಿಎಸ್‌ಐ ಸವಿತಾ, “ದೇವಸ್ಥಾನದಲ್ಲಿ ಭಕ್ತರ ಸಂಖ್ಯೆ ಹೆಚ್ಚಾಗಿದೆ, ಈಗ ಗರ್ಭಗುಡಿಯೊಳಗೆ ಹೋಗಲು ಸಾಧ್ಯವಿಲ್ಲ” ಎಂದು ತಡೆದಿದ್ದಾರೆ. ಅದೇ ಸಮಯದಲ್ಲಿ ಮಫ್ತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸರ್ಕಲ್ ಇನ್ಸ್‌ಪೆಕ್ಟರ್ (CI) ಲಕ್ಷ್ಮಿ ಅವರು ಗರ್ಭಗುಡಿಯ ಕಡೆಗೆ ತೆರಳಿದ್ದಾರೆ. ಇದನ್ನು ಗಮನಿಸಿದ ಐಶ್ವರ್ಯ, “ಅವರನ್ನು ಹೇಗೆ ಬಿಟ್ಟಿದ್ದೀರಿ?” ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿದ ಪಿಎಸ್‌ಐ ಸವಿತಾ, “ಅವರು ನಮ್ಮ ಸರ್ಕಲ್ ಇನ್ಸ್‌ಪೆಕ್ಟರ್, ಡ್ಯೂಟಿಯಲ್ಲಿದ್ದಾರೆ” ಎಂದು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: ಕಲಬುರಗಿಯಲ್ಲಿ ದೇಶವಿರೋಧಿ ಕೃತ್ಯ ಎಸಗುತ್ತಿದ್ದ ಮಹಮ್ಮದ್ ಸಮೀರ್ ಬಂಧನ: ತನಿಖೆ ವೇಳೆ ಬೆಚ್ಚಿಬಿದ್ದ ಪೊಲೀಸ್ ಅಧಿಕಾರಿಗಳು

ಆಗ “ನನಗೂ ಒಳಗಡೆ ಹೋಗಲು ಬಿಡು, ನಾನು ಹೋಗಲೇಬೇಕು” ಎಂದು ಪಟ್ಟು ಹಿಡಿದ ಐಶ್ವರ್ಯ ಹಾಗೂ ಪಿಎಸ್‌ಐ ನಡುವೆ ತೀವ್ರ ವಾಗ್ವಾದ ನಡೆದಿದೆ. ವಾಗ್ವಾದ ವಿಕೋಪಕ್ಕೆ ತಿರುಗಿ ಐಶ್ವರ್ಯ ಅವರು ಕರ್ತವ್ಯನಿರತ ಪಿಎಸ್‌ಐ ಸವಿತಾ ಅವರ ಕಪಾಳಕ್ಕೆ ಹೊಡೆದಿದ್ದಾರೆ ಎಂದು ಆರೋಪಿಸಲಾಗಿದೆ. ಸರ್ಕಾರಿ ಅಧಿಕಾರಿಯ ಕರ್ತವ್ಯಕ್ಕೆ ಅಡ್ಡಿಪಡಿಸಿ, ಹಲ್ಲೆ ನಡೆಸಿದ ಹಿನ್ನೆಲೆಯಲ್ಲಿ ಶಾಸಕ ಸುರೇಶ್‌ಗೌಡ ಪುತ್ರಿ ಐಶ್ವರ್ಯ ವಿರುದ್ಧ ಕ್ಯಾತನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ರಾಜ್ಯದ ಸುದ್ದಿಗಳನ್ನುನ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:10 am, Fri, 14 August 26

ದಿಲೀಪ್​, ಚೌಡಹಳ್ಳಿ

ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಚೌಡಹಳ್ಳಿ ಗ್ರಾಮದವನು. ಕಳೆದ 13 ವರ್ಷದಿಂದ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ನಿರ್ವಹಿಸುತ್ತಿದ್ದೇನೆ.‌ಪತ್ರಿಕೋಧ್ಯಮ ಪದವಿದರನಾಗಿದ್ದೇನೆ.ಮೊದಲಿಗೆ ಮೈಸೂರಿನ ಸ್ಥಳಿಯ ವಾಹಿನ ಹಾಗೂ ಪತ್ರಿಕೆಯಲ್ಲಿ ಕೆಲಸ ನಿರ್ವಹಿಸಿದ್ದೆ.ನಂತರ ಪಬ್ಲಿಕ್ ಟಿವಿಯಲ್ಲಿ ಚಾಮರಾಜನಗರ ಜಿಲ್ಲಾವರದಿಗಾರನಾಗುವ ಅವಕಾಶ ಸಿಕ್ಕಿತು. ಅದಾದ ಬಳಿಕ ಐದು ವರ್ಷಗಳ ಕಾಲ ಚಾಮರಾಜನಗರದಲ್ಲಿ ಕೆಲಸ ನಿರ್ವಹಿಸಿದ್ದೇನೆ. ಬಳಿಕ 2018 ರಲ್ಲಿ ಟಿರ್ವಿ ಮೈಸೂರು ವರದಿಗಾರನಾಗುವ ಅವಕಾಶ ಸಿಕ್ಕಿತು. ಅಂದಿನಿಂದ ಮೈಸೂರು ಜಿಲ್ಲಾ ವರದಿಗಾರರನಾಗಿ ಕೆಲಸ ನಿರ್ವಹಿಸಿದ್ದೇನೆ. ಸಧ್ಯ ಮಂಡ್ಯ ಜಿಲ್ಲಾ ವರದಿಗಾರನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ಕೃಷಿ, ಸಾಹಿತ್ಯ ಆಸಕ್ತಿ ಇದೆ.

Read More
Loading...
Unable to load recommendations.
Follow Us