ಮಂಡ್ಯದಲ್ಲಿ ಕಾಂಗ್ರೆಸ್ ಜೆಡಿಎಸ್ ವಾಟರ್ ವಾರ್, ಕಾವೇರಿ ಆರನೇ ಹಂತದ ಯೋಜನೆಗೆ ದಳ ವಿರೋಧ: ಕಾರಣವೇನು?

ಕಾವೇರಿ ಆರನೇ ಹಂತದ ಯೋಜನೆ ಸಂಬಂಧ ಮಂಡ್ಯ ಜಿಲ್ಲೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ತೀವ್ರ ವಾಕ್ಸಮರ ನಡೆಯುತ್ತಿದೆ. ಬೆಂಗಳೂರಿಗೆ ನೀರು ಪೂರೈಸುವ ಈ ಯೋಜನೆಗೆ ಜೆಡಿಎಸ್ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಮಂಡ್ಯ ಜಿಲ್ಲೆಯ ರೈತರಿಗೆ ಇದರಿಂದ ತೊಂದರೆಯಾಗುತ್ತದೆ ಎಂದು ಆರೋಪಿಸಿದೆ. ಜೆಡಿಎಸ್ ವಿರೋಧಕ್ಕೆ ಕಾರಣಗಳೇನು ಎಂಬ ವಿವರ ಇಲ್ಲಿದೆ.

ಮಂಡ್ಯದಲ್ಲಿ ಕಾಂಗ್ರೆಸ್ ಜೆಡಿಎಸ್ ವಾಟರ್ ವಾರ್, ಕಾವೇರಿ ಆರನೇ ಹಂತದ ಯೋಜನೆಗೆ ದಳ ವಿರೋಧ: ಕಾರಣವೇನು?
ಕೆಆರ್​​ಎಸ್ ಡ್ಯಾಂ
Edited By:

Updated on: Feb 19, 2025 | 10:04 AM

ಮಂಡ್ಯ, ಫೆಬ್ರವರಿ 19: ಮಂಡ್ಯ ಜಿಲ್ಲೆಯಲ್ಲಿ ಆಡಳಿತಾರೂಢ ಕಾಂಗ್ರೆಸ್ ಹಾಗೂ ಜೆಡಿಎಸ್ ಮಧ್ಯೆ ನೀರಿಗಾಗಿ ವಾರ್ ಆರಂಭವಾಗಿದೆ. ಕೆಆರ್​​ಎಸ್ ಡ್ಯಾಂನಿಂದ ಬೆಂಗಳೂರು ನಗರದ ಹೊರವಲಯಕ್ಕೆ ಕಾವೇರಿ ನೀರು ಪೂರೈಸುವ ‘ಕಾವೇರಿ ಆರನೇ ಹಂತದ ಯೋಜನೆ’ಗೆ ಜೆಡಿಎಸ್ ಮಂಡ್ಯ ಘಟಕ ತೀವ್ರ ವಿರೋಧ ವ್ಯಕ್ತಪಡಿಸಿದೆ. ಮತ್ತೊಂದೆಡೆ, ಕಾಂಗ್ರೆಸ್ ಸರ್ಕಾರ ಯೋಜನೆಯ ಅನುಷ್ಠಾನಕ್ಕೆ ಮುಂದಾಗಿದೆ. ಇದು ಉಭಯ ಪಕ್ಷಗಳ ನಾಯಕರ ನಡುವೆ ವಾಕ್ಸಮರಕ್ಕೆ ಕಾರಣವಾಗಿದೆ.

ಕಾವೇರಿ ಆರನೇ ಹಂತದ ಯೋಜನೆ

ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಕೆಆರ್​ಎಸ್​​​​​​ ಜಲಾಶಯದಿಂದ ಬೆಂಗಳೂರು ನಗರದ ಹೊರವಲಯಕ್ಕೆ ನೀರು ಪೂರೈಸುವುದಕ್ಕೆ ಸಂಬಂಧಿಸಿದ್ದೇ ಕಾವೇರಿ ಆರನೇ ಹಂತದ ಯೋಜನೆಯಾಗಿದೆ. ಈ ಯೋಜನೆ ಸಂಬಂಧ ಜಲಮಂಡಳಿ ರಾಜ್ಯ ಸರ್ಕಾರಕ್ಕೆ ಡಿಪಿಆರ್ (ವಿಸ್ತೃತ ಯೋಜನಾ ವರದಿ) ಹಾಗೂ ಪ್ರಸ್ತಾಪನೆ ಸಲ್ಲಿಕೆ ಮಾಡಿದೆ. ಯೋಜನೆಯಡಿ 6 ಟಿಎಂಸಿ ನೀರು ಪೂರೈಕೆಗೆ ಉದ್ದೇಶಿಸಲಾಗಿದೆ.

ಕೆಲವೇ ದಿನಗಳ ಹಿಂದಷ್ಟೇ ಬೆಂಗಳೂರಿನಲ್ಲಿ ನಡೆದ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಸಹ, ಕಾವೇರಿ ನದಿಯಿಂದ 6 ಟಿಎಂಸಿ ನೀರನ್ನು ತರಲು ಸರ್ಕಾರ ಯೋಜನೆ ರೂಪಿಸಿದೆ ಎಂದು ಹೇಳಿದ್ದರು. ಉದ್ಯಮಗಳಿಗೆ ನೀರು, ವಿದ್ಯುತ್ ಮತ್ತು ಭೂಮಿಯನ್ನು ಒದಗಿಸಲು ಸರ್ಕಾರ ಬದ್ಧವಾಗಿದೆ ಎಂದು ಅವರು ಹೇಳಿದ್ದರು.

ಜೆಡಿಎಸ್ ವಿರೋಧಕ್ಕೆ ಕಾರಣವೇನು?

ರಾಜ್ಯ ಕಾಂಗ್ರೆಸ್ ಸರ್ಕಾರದ ಯೋಜನೆಗೆ ಮಂಡ್ಯ ಜಿಲ್ಲೆಯ ಜೆಡಿಎಸ್ ನಾಯಕರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಕಾವೇರಿ 6ನೇ ಹಂತದ ಯೋಜನೆಯಿಂದ ಮಂಡ್ಯ ಜಿಲ್ಲೆಯ ಮದ್ದೂರು, ಮಳವಳ್ಳಿ, ನಾಗಮಂಗಲ ತಾಲೂಕಿನ ರೈತರಿಗೆ ತೊಂದರೆ ಆಗಲಿದೆ. ಈ ಮೂರು ತಾಲೂಕುಗಳಲ್ಲಿ ಎರಡನೇ ಬೆಳೆಗೆ ನೀರು ಸಿಗುವುದಿಲ್ಲ ಎಂಬುದು ಜೆಡಿಎಸ್ ವಾದವಾಗಿದೆ.

ಮಂಡ್ಯ ಜಿಲ್ಲೆಯ ಕೊನೆಯ ಭಾಗದ ರೈತರಿಗೆ ಕಾವೇರಿ ಆರನೇ ಹಂತದ ಯೋಜನೆ ಮರಣ ಶಾಸನವಾಗಲಿದೆ ಎಂದು ಜೆಡಿಎಸ್ ನಾಯಕ, ಮಾಜಿ ಸಚಿವ ಡಿಸಿ ತಮ್ಮಣ್ಣ ಅಭಿಪ್ರಾಯಪಟ್ಟಿದ್ದಾರೆ.

ಜೆಡಿಎಸ್​ನಿಂದ ಹೋರಾಟದ ಎಚ್ಚರಿಕೆ

ಬೆಂಗಳೂರು ಹೊರವಲಯಕ್ಕೆ ಬೇರೆ ಮೂಲದಿಂದ ನೀರು ಕೊಡಿ. ಕಾವೇರಿ ಆರನೇ ಹಂತದ ಯೋಜನೆ ಅನುಷ್ಠಾನಗೊಳಿಸಿದರೆ ಜೆಡಿಎಸ್​ನಿಂದ ಉಗ್ರ ಹೋರಾಟ ಮಾಡಲಾಗುವುದು ಎಂದು ತಮ್ಮಣ್ಣ ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: ಬೆಂಗಳೂರಿಗೆ ಇನ್ನೂ 6 ಟಿಎಂಸಿ ಕಾವೇರಿ ನೀರು ತರ್ತೇವೆ: ಡಿಸಿಎಂ ಡಿಕೆ ಶಿವಕುಮಾರ್​

ಏತನ್ಮಧ್ಯೆ, ಜೆಡಿಎಸ್ ನಾಯಕರಿಗೆ ಸಚಿವ ಚಲುವರಾಯಸ್ವಾಮಿ ತಿರುಗೇಟು ನೀಡಿದ್ದಾರೆ. ವ್ಯರ್ಥವಾಗಿ ಹರಿದು ಹೋಗುವ ನೀರನ್ನು ಮಾತ್ರ ಬಳಸಿಕೊಳ್ಳುತ್ತೇವೆ. ಈ ವಿಚಾರದಲ್ಲಿ ಜೆಡಿಎಸ್ ನಾಯಕರು ರಾಜಕಾರಣ ಮಾಡುತ್ತಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Prashantha B

ಊರು ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನ ಗೋಣಿಬೀಡು. ರೈತಾಪಿ ಕುಟುಂಬದಿಂದ ಬಂದ ನಾನು, ಶಂಕರಘಟ್ಟದಲ್ಲಿರುವ ಕುವೆಂಪು ವಿಶ್ವವಿದ್ಯಾನಿಲಯದಲ್ಲಿ ಪತ್ರಿಕೋದ್ಯಮ ಹಾಗೂ ಸಮೂಹ ಸಂವಹನ ವಿಭಾಗದಲ್ಲಿ ಎಂ ಎ ಪದವಿ ಪಡೆದು, ಆನಂತರ ಒಂದು ವರ್ಷಗಳ ಕಾಲ ಶಿವಮೊಗ್ಗದಲ್ಲಿ ಕೆಲ ಪತ್ರಿಕೆಗಳಲ್ಲಿ ಕೆಲಸ ಮಾಡಿ, ನಂತರ ಕಳೆದ ಹದಿಮೂರು ವರ್ಷಗಳಿಂದ ಹೆಮ್ಮೆಯ ಟಿವಿ9 ಕನ್ನಡ ವಾಹಿನಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದೇನೆ. ಒಂದು ವರ್ಷಗಳ ಕಾಲ ಹುಬ್ಬಳ್ಳಿ ವರದಿಗಾರನಾಗಿ, ಆನಂತರ ರಾಮನಗರ ಜಿಲ್ಲಾ ಪ್ರತಿನಿಧಿಯಾಗಿ ಕೆಲಸ ಮಾಡಿದ್ದು, ಪ್ರಸ್ತುತ ಮಂಡ್ಯ ಜಿಲ್ಲೆಯ ಹಿರಿಯ ವರದಿಗಾಗಿನಾಗಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ಪೇಪರ್ ಹಾಗೂ ಬುಕ್ಸ್ ಗಳನ್ನ ಓದೋದು, ಕ್ರಿಕೆಟ್ ಆಡೊ ಹವ್ಯಾಸ ಇದೆ.

Read More
Follow Us