
ಮಂಡ್ಯ, ನವೆಂಬರ್ 06: ರೈಲಿಗೆ ತಲೆಕೊಟ್ಟು ವಿವಾಹಿತೆ ಜೊತೆ ಯುವಕ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಂಡ್ಯದ ವಿಸಿ ಫಾರಂ ರಸ್ತೆಯ ರೈಲ್ವೆ ಟ್ರಾಕ್‌ನಲ್ಲಿ ನಡೆದಿದೆ. ಬೆಂಗಳೂರು ಮೂಲದ ಸಹನಾ(25) ಮತ್ತು ರಾಹುಲ್(23) ಆತ್ಮಹತ್ಯೆಗೆ ಶರಣಾದವರು. ಘಟನಾ ಸ್ಥಳಕ್ಕೆ ರೈಲ್ವೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ಸದ್ಯ ಮೃತದೇಹಗಳನ್ನ ಮಂಡ್ಯ ಮಿಮ್ಸ್ ಆಸ್ಪತ್ರೆ ಶವಾಗಾರಕ್ಕೆ ರವಾನಿಸಿದ್ದಾರೆ. ರೈಲ್ವೆ ಪೊಲೀಸರು ಮೃತರ ಸಂಬಂಧಿಕರಿಗೆ ಮಾಹಿತಿ ನೀಡಿದ್ದಾರೆ.
8 ವರ್ಷದ ಹಿಂದೆ ಪ್ರೀತಿಸಿ ವೀರೇಶ್ನನ್ನು ಸಹನಾ ವಿವಾಹವಾಗಿದ್ದಳು. ದಂಪತಿಗೆ 6 ವರ್ಷದ ಹೆಣ್ಣು ಮತ್ತು 2 ವರ್ಷದ ಗಂಡು ಮಗುವಿದೆ. ವೀರೇಶ್ ವೃತ್ತಿಯಲ್ಲಿ ಆಟೋ ಚಾಲಕನಾಗಿದ್ದ. ಕಳೆದ 2-3 ವರ್ಷಗಳಿಂದ ಬೆಂಗಳೂರಿನ ಮಾದನಾಯಕನಹಳ್ಳಿಯಲ್ಲಿ ವಾಸವಾಗಿದ್ದರು. ದಂಪತಿ ಇದ್ದ ಕಟ್ಟಡದಲ್ಲೇ ರಾಹುಲ್ ಕೂಡ ವಾಸವಿದ್ದ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಒಂದೇ ಕುಟುಂಬದ 7 ಜನರ ಹತ್ಯೆ: ಹಂತಕನಿಂದ 11 ವರ್ಷದ ಬಾಲಕ ಬದುಕುಳಿದಿದ್ದೇ ರೋಚಕ
ಮದುವೆ ಆಗಿ ಮಕ್ಕಳಿದ್ದರು ಕೂಡ ಇತ್ತೀಚೆಗೆ ರಾಹುಲ್ ಜೊತೆ ಸಹನಾ ಆತ್ಮೀಯತೆ ಬೆಳೆಸಿಕೊಂಡಿದ್ದಳು. ಪರಿಚಯ ಪ್ರೀತಿಗೆ ತಿರುಗಿ ಇಬ್ಬರ ನಡುವೆ ಅಕ್ರಮ ಸಂಬಂಧವಿತ್ತು. ಈ ವಿಚಾರ ತಿಳಿದ ಪತಿ ವೀರೇಶ್, ಸಹನಾಳೊಂದಿಗೆ ಜಗಳ ಮಾಡಿದ್ದ. ಮದನಾಯಕನಹಳ್ಳಿ ಬಿಟ್ಟು ಬೇರೆ ಕಡೆ ಮನೆ ಮಾಡಿದ್ದ. ಹಲವು ಬಾರಿ ಹಿರಿಯರ ಸಮ್ಮುಖದಲ್ಲಿ ರಾಜೀ ಪಂಚಾಯಿತಿ ಆಗಿತ್ತು. ರಾಹುಲ್ ಸಹವಾಸ ಬಿಟ್ಟುಬಿಡುವಂತೆ ಸಹನಾಗೆ ಬುದ್ಧಿ ಹೇಳಿದ್ದರು. ಆದರೆ ಯಾರ ಮಾತನ್ನೂ ಕೇಳದೆ ಹಳೇ ಚಾಳಿ ಮುಂದುವರಿಸಿದ್ದಳು.
ಇನ್ನು ಸೋಮವಾರ ಇದೇ ವಿಚಾರಕ್ಕೆ ಸಹನಾ ಮತ್ತು ವೀರೇಶ್ ನಡುವೆ ಜಗಳವಾಗಿದೆ. ಈ ವೇಳೆ ರಾಹುಲ್ ಜೊತೆಯಲ್ಲೇ ಬಾಳುವುದಾಗಿ ಹೇಳಿದ್ದಳು. ಈ ವೇಳೆ ನಿಮ್ಮಿಬ್ಬರನ್ನು ಬಾಳಲು ಬಿಡಲ್ಲ ಎಂದು ವೀರೇಶ್ ಗದರಿದ್ದಾನೆ. ಗಂಡನ ಮನೆಯಿಂದ ಹೊರಟ ಸಹನಾ ಮಂಡ್ಯದ ಗುನ್ನಾಯಕನಹಳ್ಳಿಯಲ್ಲಿರುವ ತನ್ನ ಅಜ್ಜಿ ಮನೆಗೆ ಬಂದಿದ್ದಾಳೆ. ಗುರುವಾರ ಗುನ್ನಾಯಕನಹಳ್ಳಿ ಬಳಿ ಸಹನಾ ಪಿಕ್ ಮಾಡಿದ್ದ ರಾಹುಲ್, ವಿರೇಶ್ ವಿರುದ್ಧ ದೂರು ನೀಡಲು ತೀರ್ಮಾನಿಸಿದ್ದರು. ಆದರೆ ವೀರೇಶ್ ನಮ್ಮನ್ನು ಬಾಳಲು ಬಿಡಲ್ಲ ಎಂದು ಮನನೊಂದು ಬೆಳಗ್ಗೆ ರೈಲಿಗೆ ತಲೆಕೊಟ್ಟು ಸಹನಾ ಮತ್ತು ರಾಹುಲ್ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.