AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಂಡ್ಯದ ಜನಪ್ರಿಯ ವೈದ್ಯ ಡಾ ಶಂಕರೇಗೌಡ ಡಿಸ್​ಚಾರ್ಜ್: ಹೃದಯದ ತೊಂದರೆಯಿಂದ ಚೇತರಿಸಿಕೊಂಡ 5 ರೂಪಾಯಿ ಡಾಕ್ಟರ್

ಕಳೆದ ವಾರ ಲಘು ಹೃದಯಾಘಾತಕ್ಕೆ ಒಳಗಾಗಿದ್ದ ಡಾ.ಶಂಕರೇಗೌಡ ಚಿಕಿತ್ಸೆಯ ಬಳಿಕ ಚೇತರಿಸಿಕೊಂಡರು. ಇದೀಗ ಶಂಕರೇಗೌಡರನ್ನು ಡಿಸ್​ಚಾರ್ಜ್ ಮಾಡಲಾಗಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಮಂಡ್ಯದ ಜನಪ್ರಿಯ ವೈದ್ಯ ಡಾ ಶಂಕರೇಗೌಡ ಡಿಸ್​ಚಾರ್ಜ್: ಹೃದಯದ ತೊಂದರೆಯಿಂದ ಚೇತರಿಸಿಕೊಂಡ 5 ರೂಪಾಯಿ ಡಾಕ್ಟರ್
ಮಂಡ್ಯದ ಜನಪ್ರಿಯ ವೈದ್ಯ ಡಾ.ಶಂಕರೇಗೌಡ
TV9 Web
| Edited By: |

Updated on:May 31, 2022 | 7:52 AM

Share

ಮಂಡ್ಯ: ನಗರದಲ್ಲಿ ಐದು ರೂಪಾಯಿ ಡಾಕ್ಟರ್ ಎಂದೇ ಜನಪ್ರಿಯವಾಗಿರುವ ಡಾ ಶಂಕರೇಗೌಡ (Dr Shankare Gowda) ಅವರ ಆರೋಗ್ಯ ಸುಧಾರಿಸಿದ್ದು, ಆಸ್ಪತ್ರೆಯಿಂದ ಡಿಸ್​ಚಾರ್ಜ್ ಆಗಿದ್ದಾರೆ. ಕಳೆದ ವಾರ ಲಘು ಹೃದಯಾಘಾತವಾಗಿದ್ದ ಹಿನ್ನೆಲೆಯಲ್ಲಿ ಅವರನ್ನು ಬೆಂಗಳೂರಿನ ಫೋರ್ಟಿಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಯ ಬಳಿಕ ಅವರು ಚೇತರಿಸಿಕೊಂಡರು. ಇದೀಗ ಶಂಕರೇಗೌಡರನ್ನು ಡಿಸ್​ಚಾರ್ಜ್ ಮಾಡಲಾಗಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಮಂಡ್ಯ ಜಿಲ್ಲೆಯ ಶಿವಳ್ಳಿ ಗ್ರಾಮದ ಶಂಕರೇಗೌಡ ಅವರು ಕೇವಲ ಮಂಡ್ಯ ಜಿಲ್ಲೆಯಲ್ಲಿ ಮಾತ್ರವಲ್ಲದೆ ರಾಜ್ಯ ಮತ್ತು ದೇಶದ ಮಟ್ಟದಲ್ಲಿಯೂ ಜನಪ್ರಿಯರಾಗಿದ್ದರು. ಇವರನ್ನು ಭೇಟಿಯಾಗಿ ಚಿಕಿತ್ಸೆ ಪಡೆಯಲು ದೇಶದ ಮೂಲೆಮೂಲೆಗಳಿಂದಲೂ ಜನರು ಬರುತ್ತಿದ್ದರು. ಎಲ್ಲರನ್ನೂ ಸಮಾನವಾಗಿ ಕಾಣುತ್ತಿದ್ದ ಶಂಕರೇಗೌಡ, ಭೇದಭಾವ ಮಾಡದೆ ಎಲ್ಲರನ್ನೂ ಸಮಾನವಾಗಿ ಕಾಣುತ್ತಿದ್ದರು. ಇವರ ಈ ಗುಣವೂ ಜನಪ್ರಿಯತೆಗೆ ಬಹುಮುಖ್ಯ ಕಾರಣವಾಗಿತ್ತು. ವೈದ್ಯ ವೃತ್ತಿಯ ಜೊತೆಗೆ ಕೃಷಿಯಲ್ಲಿಯೂ ಯಶಸ್ವಿಯಾಗಿರುವ ಡಾ.ಶಂಕರೇಗೌಡ ಪ್ರತಿವರ್ಷ ಕಬ್ಬು, ಭತ್ತ ಬೆಳೆಯುತ್ತಾರೆ.

ಜನರ ಒತ್ತಾಯದ ಮೇರೆಗೆ ಶಂಕರೇಗೌಡ ಅವರು ಈ ಹಿಂದೆ ಜಿಲ್ಲಾ ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸಿ ಗೆದ್ದಿದ್ದರು. ಆ ಮೂಲಕ ಮಂಡ್ಯ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷರಾಗಿದ್ದರು. ಶಂಕರೇಗೌಡರಿಗೆ ಹೃದಯಾಘಾತವಾಗಿದ್ದ ಸಂಗತಿ ಬಹುತೇಕರಿಗೆ ಬೇಸರ ತರಿಸಿತ್ತು. ಅವರು ಬೇಗನೇ ಗುಣಕಾಣಲಿ ಎಂದು ಸಾಕಷ್ಟು ಜನರು ಬಯಸಿದ್ದರು. ಸಾಮಾಜಿಕ ಮಾಧ್ಯಮಗಳಲ್ಲಿಯೂ ಈ ಕುರಿತು ಪೋಸ್ಟ್​ಗಳನ್ನು ಹಾಕಲಾಗಿತ್ತು.

ಕೊರೊನಾ ಪಿಡುಗು ವ್ಯಾಪಿಸಿದ್ದಾಗ ದೇಶದ ಬಹುತೇಕ ಖಾಸಗಿ ಕ್ಲಿನಿಕ್ ಮತ್ತು ನರ್ಸಿಂಗ್​ ಹೋಂಗಳಲ್ಲಿ ಜನರಿಗೆ ಚಿಕಿತ್ಸೆ ಸಿಗಲಿಲ್ಲ. ಆದರೆ ಶಂಕರೇಗೌಡ ಮಾತ್ರ ನಿರಂತರವಾಗಿ ಚಿಕಿತ್ಸೆ ಕೊಡುವುದನ್ನು ಮುಂದುವರಿಸಿದ್ದರು.

ಈಡುಗಾಯಿ ಹರಕೆ

ಡಾ ಶಂಕರೇಗೌಡರ ಆರೋಗ್ಯ ಶೀಘ್ರ ಚೇತರಿಕೆ ಕಾಣಲಿ ಎಂದು ಮಂಡ್ಯ ರಕ್ಷಣಾ ವೇದಿಕೆ ಕಾರ್ಯಕರ್ತರು ಶ್ರೀರಂಗಪಟ್ಟಣದ ರಂಗನಾಥ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದರು. ಶಂಕರೇಗೌಡರ ಆರೋಗ್ಯ ಶೀಘ್ರ ಸುಧಾರಿಸಲಿ ಎಂದು ದೇಗುಲದ ಮುಂಭಾಗದಲ್ಲಿ 101 ತೆಂಗಿನಕಾಯಿ ಒಡೆದು ಹರಕೆ ಮಾಡಿಕೊಂಡಿದ್ದರು.

ಕರ್ನಾಟಕದ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ. ದೇಶದ ಇತರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:51 am, Tue, 31 May 22