ಅಧಿಕಾರ ಸಿಕ್ಕ ನಂತರ ಪ್ರೀತಿ ಇಲ್ಲದಂತಾಗಿದೆ: ಡಿಕೆ ಶಿವಕುಮಾರ್ ವಿರುದ್ಧ ಸಿಡಿದೆದ್ದ ಒಕ್ಕಲಿಗರು
ಒಕ್ಕಲಿಗರು ಸಂಸ್ಕೃತಿ ಹೀನರು. ಈ ಮಾತು ನನ್ನದು ಅಲ್ಲ ಕುವೆಂಪು ಅವರದ್ದು. ನಾನು ಹೇಳಿದ್ರೆ ನನ್ನ ಹೊಡೆಯುವುದಕ್ಕೆ ಬರುತ್ತಾರೆ. ನಿಜ ಹೇಳಿದವರನ್ನು ಯಾರು ಬಿಡಲ್ಲ. ಆದರೇ ನಿಜ ಹೇಳಿಯೇ ಸಾಯಬೇಕು ಎಂದು ವಿವಾದಾತ್ಮಕ ಹೇಳಿಕೆ ನೀಡಿದ ಪ್ರೊ.ಭಗವಾನ್ ವಿರುದ್ಧ ರಾಜ್ಯಾದ್ಯಂತ ಒಕ್ಕಲಿಗರು ಆಕ್ರೋಶ ಹೊರಹಾಕುತ್ತಿದ್ದಾರೆ. ಮಂಡ್ಯದ ಮದ್ದೂರಿನಲ್ಲಿ ನಡೆದ ಪ್ರತಿಭಟನೆಯಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧವೂ ಆಕ್ರೋಶ ಹೊರಹಾಕಲಾಗಿದೆ.
ಮಂಡ್ಯ, ಅ.15: ಒಕ್ಕಲಿಗರು ಸಂಸ್ಕೃತಿ ಹೀನರು ಎಂಬ ಪ್ರೊ.ಕೆ.ಎಸ್. ಭಗವಾನ್ (Prof.K.S.Bhagawan) ಹೇಳಿಕೆ ಖಂಡಿಸಿ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನಲ್ಲಿ ಒಕ್ಕಲಿಗರ ಸಂಘದಿಂದ ಪ್ರತಿಭಟನೆ ನಡೆಯಿತು. ಇದೇ ವೇಳೆ ಒಕ್ಕಲಿಗ ನಾಯಕರೂ ಆಗಿರುವ ಡಿಸಿಎಂ ಡಿಕೆ ಶಿವಕುಮಾರ್ (D.K.Shivakumar) ವಿರುದ್ಧವೂ ಆಕ್ರೋಶ ಹೊರಹಾಕಿದ ಪ್ರತಿಭಟನಾಕಾರರು, ಅಧಿಕಾರ ಸಿಗುವ ಮುಂಚೆ ಜನಾಂಗದ ಬಗ್ಗೆ ಅವರು ತೋರುತ್ತಿದ್ದ ಪ್ರೀತಿ, ಅಧಿಕಾರ ಸಿಕ್ಕ ನಂತರ ಇಲ್ಲದಂತಾಗಿದೆ ಎಂದಿದ್ದಾರೆ.
ಮದ್ದೂರು ಪಟ್ಟಣದ ಟಿಬಿ ವೃತ್ತದಲ್ಲಿ ನಾಡಪ್ರಭು ಕೆಂಪೇಗೌಡ ಒಕ್ಕಲಿಗರ ಸಂಘದ ಕಾರ್ಯಕರ್ತರು, ಪ್ರೊ.ಭಗವಾನ್ ವಿರುದ್ಧ ಪ್ರತಿಭಟನೆ ನಡೆಸಿದ್ದು, ಮೈಸೂರು-ಬೆಂಗಳೂರು ಹೆದ್ದಾರಿ ತಡೆದು ಭಗವಾನ್ ಪ್ರತಿಕೃತಿ ದಹಿಸಿ ಆಕ್ರೋಶ ಹೊರಹಾಕಿದರು.
ಇದನ್ನೂ ಓದಿ: ದಸರಾ ಯುವ ಕವಿಗೋಷ್ಠಿ ಪಟ್ಟಿಯಿಂದ ಪ್ರೊ.ಭಗವಾನ್ ಹೆಸರು ಕೈ ಬಿಡುವಂತೆ ಒತ್ತಾಯಿಸಿ ನಾಳೆ ಒಕ್ಕಲಿಗರಿಂದ ಪ್ರತಿಭಟನೆ
ಸಮುದಾಯದ ಬಗ್ಗೆ ಅವಹೇಳನಕಾರಿಯಾಗಿ ಹೇಳಿಕೆ ನೀಡದ ಭಗವಾನ್ ಅವರನ್ನು ಕೂಡಲೇ ಬಂಧಿಸಬೇಕು. ಅವರಿಗೆ ನೀಡಿರುವ ಅಂಗರಕ್ಷಕರನ್ನ ವಾಪಸ್ಸು ಪಡೆಯಬೇಕು. ಅವರಂತಹ ಅವಿವೇಕಿಗಳನ್ನ ಬಂಧಿಸಿ ಗಡಿಪಾರು ಮಾಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಒಕ್ಕಲಿಗ ಸಮುದಾಯದ ಜನಾಂಗಕ್ಕೆ ಆಗುತ್ತಿರುವ ಅನ್ಯಾಯದ ಬಗ್ಗೆ ಎಲ್ಲಾ ಒಕ್ಕಲಿಗ ನಾಯಕರು ಒಗ್ಗೂಟಿ ಧ್ವನಿ ಆಗಬೇಕು. ಆದರೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಅಧಿಕಾರ ಸಿಗುವ ಮುಂಚೆ ಜನಾಂಗದ ಬಗ್ಗೆ ತೋರುತ್ತಿದ್ದ ಪ್ರೀತಿ ಅಧಿಕಾರ ಸಿಕ್ಕ ನಂತರ ಇಲ್ಲದಂತಾಗಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ