AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇದು ಕರ್ನಾಟಕದಲ್ಲೇ ಮೊದಲು: ಮಂಗಳೂರಲ್ಲಿ ಒಣ ಕಸದಿಂದ ‘ಇಂಧನ ಪೆಲ್ಲೆಟ್‌’ ತಯಾರಿಕೆ; ಕಲ್ಲಿದ್ದಲಿಗೆ ಪರ್ಯಾಯವಾಗಿ ಪರಿಸರಸ್ನೇಹಿ ಆವಿಷ್ಕಾರ

ದಕ್ಷಿಣ ಕನ್ನಡ ಜಿಲ್ಲೆಯ ಕೆಮ್ರಾಲ್‌ನಲ್ಲಿ ರಾಜ್ಯದ ಮೊದಲ ತ್ಯಾಜ್ಯದಿಂದ ಇಂಧನ ಉತ್ಪಾದನಾ ಘಟಕ (RDF) ಆರಂಭಗೊಂಡಿದೆ. ಇದು ಮರುಬಳಕೆಯಾಗದ ಒಣ ಕಸವನ್ನು (ಹಳೆಯ ಬಟ್ಟೆ, ಪಾದರಕ್ಷೆ, ಪ್ಲಾಸ್ಟಿಕ್) ಕೈಗಾರಿಕಾ ಇಂಧನ ಪೆಲೆಟ್‌ಗಳಾಗಿ ಪರಿವರ್ತಿಸುತ್ತದೆ. ಈ ನವೀನ ಯೋಜನೆ ಸಾರಿಗೆ ವೆಚ್ಚವನ್ನು ಗಣನೀಯವಾಗಿ ಉಳಿಸುತ್ತದೆ, ಪಳೆಯುಳಿಕೆ ಇಂಧನದ ಮೇಲಿನ ಅವಲಂಬನೆಯನ್ನು ಕಡಿತಗೊಳಿಸುತ್ತದೆ, ಮತ್ತು ತ್ಯಾಜ್ಯಕ್ಕೆ ಆರ್ಥಿಕ ಮೌಲ್ಯವನ್ನು ನೀಡುತ್ತದೆ. ಇದಲ್ಲದೆ, ಗ್ರಾಮೀಣ ಮಹಿಳಾ ಸ್ವಸಹಾಯ ಸಂಘಗಳಿಗೆ ಉದ್ಯೋಗ ಸೃಷ್ಟಿಸಿ ಸಬಲೀಕರಣಕ್ಕೆ ನೆರವಾಗುತ್ತಿದೆ. ಪರಿಸರ ಸಂರಕ್ಷಣೆಯಲ್ಲಿ ಇದೊಂದು ಮಾದರಿ ಹೆಜ್ಜೆಯಾಗಿದೆ.

ಇದು ಕರ್ನಾಟಕದಲ್ಲೇ ಮೊದಲು: ಮಂಗಳೂರಲ್ಲಿ ಒಣ ಕಸದಿಂದ 'ಇಂಧನ ಪೆಲ್ಲೆಟ್‌' ತಯಾರಿಕೆ; ಕಲ್ಲಿದ್ದಲಿಗೆ ಪರ್ಯಾಯವಾಗಿ ಪರಿಸರಸ್ನೇಹಿ ಆವಿಷ್ಕಾರ
ಒಣ ಕಸ ವಿಲೇವಾರಿ ಘಟಕ
ಅಕ್ಷಯ್​ ಪಲ್ಲಮಜಲು​​
|

Updated on: Jul 10, 2026 | 2:21 PM

Share

ಮುಖ್ಯಾಂಶಗಳು

  • ದ.ಕ ಜಿಲ್ಲಾ ಪಂಚಾಯತ್ ಇಡೀ ರಾಜ್ಯಕ್ಕೆ ಮಾದರಿಯಾಗಬಲ್ಲ ಹೊಸ ಪ್ರಯೋಗ
  • ಒಣ ಕಸವನ್ನು ಕೈಗಾರಿಕೆಗಳಿಗೆ ಬಳಸಬಹುದಾದ ಪರ್ಯಾಯ ಇಂಧನ
  • ಮಂಗಳೂರು ಸಮೀಪದ ಕೆಮ್ರಾಲ್‌ನಲ್ಲಿ ಅಧಿಕೃತವಾಗಿ ಕಾರ್ಯಾರಂಭ

ಮಂಗಳೂರು, ಜು.10: ವೈಜ್ಞಾನಿಕ ಕಸ ವಿಲೇವಾರಿ ಮತ್ತು ಪರಿಸರ ಸಂರಕ್ಷಣೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಇಡೀ ರಾಜ್ಯಕ್ಕೆ ಮಾದರಿಯಾಗಬಲ್ಲ ಹೊಸ ಮೈಲಿಗಲ್ಲೊಂದನ್ನು ಸ್ಥಾಪಿಸಿದೆ. ಮರುಬಳಕೆ ಮಾಡಲು ಸಾಧ್ಯವಾಗದ ಒಣ ಕಸವನ್ನು ಕೈಗಾರಿಕೆಗಳಿಗೆ ಬಳಸಬಹುದಾದ ಪರ್ಯಾಯ ಇಂಧನವನ್ನಾಗಿ (Alternative Industrial Fuel) ಪರಿವರ್ತಿಸುವ ವಿಶೇಷ ಘಟಕವನ್ನು ಮಂಗಳೂರು ಸಮೀಪದ ಕೆಮ್ರಾಲ್‌ನಲ್ಲಿ ಅಧಿಕೃತವಾಗಿ ಕಾರ್ಯಾರಂಭ ಮಾಡಲಾಗಿದೆ. ಈ ರೀತಿಯ ತಂತ್ರಜ್ಞಾನ ಆಧರಿತ ಘಟಕವು ಕರ್ನಾಟಕದಲ್ಲೇ ಮೊದಲನೆಯದಾಗಿದೆ. ಸ್ವಚ್ಛ ಭಾರತ ಮಿಷನ್ (ಗ್ರಾಮೀಣ) ಯೋಜನೆಯಡಿ ಸರಿಸುಮಾರು 15 ದಿನಗಳ ಹಿಂದಷ್ಟೇ ಈ ಪ್ರಾಯೋಗಿಕ ಘಟಕವನ್ನು ಆರಂಭಿಸಲಾಗಿದೆ.

ಇದುವರೆಗೆ ಸಂಪೂರ್ಣ ಅನುಪಯುಕ್ತ ಎಂದು ಭಾವಿಸಲಾಗಿದ್ದ ಹಳೆಯ ಬಟ್ಟೆಗಳು, ಪಾದರಕ್ಷೆಗಳು, ಏಕಬಳಕೆಯ ಪ್ಲಾಸ್ಟಿಕ್ ಹಾಗೂ ಮರುಬಳಕೆಗೆ ಬಾರದ ಇತರ ಒಣ ತ್ಯಾಜ್ಯಗಳನ್ನು ಸಂಸ್ಕರಿಸಿ, ಅದರಿಂದ ‘ರೆಫ್ಯೂಸ್ ಡಿರೈವ್ಡ್ ಫ್ಯುಯೆಲ್’ (RDF) ಪೆಲ್ಲೆಟ್‌ಗಳನ್ನು (ಸಣ್ಣ ಇಂಧನ ಉಂಡೆಗಳು) ಇಲ್ಲಿ ಉತ್ಪಾದಿಸಲಾಗುತ್ತದೆ. ಈ ಉಂಡೆಗಳನ್ನು ಕೈಗಾರಿಕಾ ಬಾಯ್ಲರ್‌ಗಳಲ್ಲಿ ಇಂಧನವಾಗಿ ಬಳಸಬಹುದು.

ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸಿಇಒ ನರವಾಡೆ ವಿನಾಯಕ್ ಕಾರ್ಭಾರಿ ಅವರ ಪ್ರಕಾರ, “ಮಹಾರಾಷ್ಟ್ರದ ಇಂತಹದ್ದೇ ಒಂದು ಘಟಕಕ್ಕೆ ಅಧ್ಯಯನ ಪ್ರವಾಸ ಕೈಗೊಂಡ ಬಳಿಕ ಈ ವಿಶಿಷ್ಟ ಯೋಜನೆಯನ್ನು ರೂಪಿಸಲಾಯಿತು. ಯಂತ್ರೋಪಕರಣಗಳಿಗಾಗಿ ಸುಮಾರು 50 ಲಕ್ಷ ರೂ. ವೆಚ್ಚ ಮಾಡಲಾಗಿದ್ದು, ಕೆಮ್ರಾಲ್‌ನಲ್ಲಿರುವ ಹಳೆಯ ಒಣ ಕಸ ಸಂಸ್ಕರಣಾ ಶೆಡ್ ಅನ್ನು ಇದಕ್ಕಾಗಿ ನವೀಕರಿಸಲಾಗಿದೆ.” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಬಾಹ್ಯಾಕಾಶದಲ್ಲೊಂದು ಮಿನಿ ಉದ್ಯಾನ, ವಿಡಿಯೋ ಹಂಚಿಕೊಂಡ ಗಗನಯಾತ್ರಿ

ಕೆಮ್ರಾಲ್‌ನಲ್ಲಿ ಸ್ಥಾಪಿತವಾಗಿರುವ ಈ ಒಣ ತ್ಯಾಜ್ಯ ಸಂಸ್ಕರಣಾ ಘಟಕವು ಕೇವಲ ಒಂದು ಸಾಮಾನ್ಯ ಕಸ ವಿಲೇವಾರಿ ಕೇಂದ್ರವಲ್ಲ. ಇದು ಆರ್ಥಿಕತೆ, ಪರಿಸರ ಮತ್ತು ಸಾರಿಗೆ ವ್ಯವಸ್ಥೆಯ ಮೇಲೆ ದೀರ್ಘಕಾಲೀನ ಸಕಾರಾತ್ಮಕ ಪ್ರಭಾವ ಬೀರಬಲ್ಲ ಸಾಮರ್ಥ್ಯ ಹೊಂದಿದೆ. ಇದರಿಂದಾಗುವ ಪ್ರಯೋಜನಗಳೇನು? ಹಾಗೂ ಯಾರಿಗೆ ಸಹಾಯವಾಗಲಿದೆ.

ಸಾರಿಗೆ ವೆಚ್ಚದಲ್ಲಿ ಭಾರಿ ಉಳಿತಾಯ

ಇದುವರೆಗೆ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಮೆಟೀರಿಯಲ್ ರಿಕವರಿ ಫೆಸಿಲಿಟಿ ಕೇಂದ್ರಗಳಲ್ಲಿ ಸಂಗ್ರಹವಾಗುತ್ತಿದ್ದ ಮರುಬಳಕೆ ಮಾಡಲಾಗದ ಕಸವನ್ನು ಸಹ-ಸಂಸ್ಕರಣೆಗಾಗಿ ನೂರಾರು ಕಿಲೋಮೀಟರ್ ದೂರದಲ್ಲಿರುವ ಬೆಳಗಾವಿ ಹಾಗೂ ಕಲ್ಬುರ್ಗಿಯ ಸಿಮೆಂಟ್ ಕಾರ್ಖಾನೆಗಳಿಗೆ ಸಾಗಿಸಲಾಗುತ್ತಿತ್ತು. ಇದಕ್ಕೆ ಪ್ರತಿ ಟ್ರಕ್ ಲೋಡ್‌ಗೆ ಅಂದಾಜು ₹48,000 ಸಾರಿಗೆ ವೆಚ್ಚ ತಗಲುತ್ತಿತ್ತು. ಈಗ ಸ್ಥಳೀಯವಾಗಿಯೇ ಕಸ ಸಂಸ್ಕರಣೆಯಾಗಿ ಇಂಧನವಾಗಿ ಬದಲಾಗುವುದರಿಂದ ಈ ಭಾರಿ ಹಣಕಾಸಿನ ಹೊರೆ ಇಲಾಖೆಗೆ ತಪ್ಪಲಿದೆ.

ಪಳೆಯುಳಿಕೆ ಇಂಧನದ ಮೇಲಿನ ಅವಲಂಬನೆ ಕಡಿತ

ಈ ಘಟಕದಲ್ಲಿ ತಯಾರಾಗುವ ‘ಆರ್‌ಡಿಎಫ್’ ಇಂಧನ ಉಂಡೆಗಳು ಅತ್ಯಧಿಕ ಶಾಖೋತ್ಪನ್ನ ಮೌಲ್ಯವನ್ನು ಹೊಂದಿರುತ್ತವೆ. ಇವುಗಳನ್ನು ಕೈಗಾರಿಕೆಗಳಲ್ಲಿ ಕಲ್ಲಿದ್ದಲಿಗೆ ಪರ್ಯಾಯವಾಗಿ ಬಳಸಬಹುದು. ಇದರಿಂದಾಗಿ ಪರಿಸರ ಮಾಲಿನ್ಯಕ್ಕೆ ಕಾರಣವಾಗುವ ಕಲ್ಲಿದ್ದಲಿನಂತಹ ಪಳೆಯುಳಿಕೆ ಇಂಧನಗಳ ಬಳಕೆ ಗಣನೀಯವಾಗಿ ಕಡಿಮೆಯಾಗಲಿದ್ದು, ಹಸಿರು ಇಂಧನ ಪರಿಕಲ್ಪನೆಗೆ ವೇಗ ಸಿಗಲಿದೆ.

ಕಸಕ್ಕೂ ಬಂತು ಕಾಸಿನ ಮೌಲ್ಯ

ಈ ಯೋಜನೆ ‘ವೃತ್ತಾಕಾರದ ಆರ್ಥಿಕತೆ’ಗೆ ಅತ್ಯುತ್ತಮ ಉದಾಹರಣೆಯಾಗಿದೆ. ಭೂಮಿಗೆ ಭಾರವಾಗುತ್ತಿದ್ದ ಸಿಂಗಲ್ ಯೂಸ್ ಪ್ಲಾಸ್ಟಿಕ್, ಹಳೇ ಬಟ್ಟೆ, ಚಪ್ಪಲಿಗಳಂತಹ ಅನುಪಯುಕ್ತ ಒಣ ಕಸಕ್ಕೆ ಈಗ ಮಾರುಕಟ್ಟೆಯಲ್ಲಿ ವಾಣಿಜ್ಯ ಬೆಲೆ ಸಿಕ್ಕಿದೆ. ಉತ್ಪಾದನೆಯಾಗುವ ಪೆಲೆಟ್‌ಗಳನ್ನು ಕೆಜಿಗೆ ₹5 ರಂತೆ ಪುಣೆಯ ಕಂಪನಿಯು ನೇರವಾಗಿ ಖರೀದಿಸುವುದರಿಂದ ಜಿ.ಪಂಗೆ ಖಾತರಿ ಆದಾಯದ ಮೂಲ ಸೃಷ್ಟಿಯಾಗಿದೆ.

ಗ್ರಾಮೀಣ ಮಹಿಳಾ ಸಬಲೀಕರಣ

ಈ ಇಡೀ ಘಟಕವನ್ನು ಗ್ರಾಮೀಣ ಮಹಿಳಾ ಸ್ವಸಹಾಯ ಸಂಘಗಳ ಒಕ್ಕೂಟವಾದ ‘ಕೋರ್ದಬ್ಬು ಸಂಜೀವಿನಿ ಒಕ್ಕೂಟ’ಕ್ಕೆ ವಹಿಸಿಕೊಟ್ಟಿರುವುದು ಶ್ಲಾಘನೀಯ. ಇದು ಗ್ರಾಮೀಣ ಭಾಗದ ಮಹಿಳೆಯರಲ್ಲಿ ತಾಂತ್ರಿಕ ಕೌಶಲ್ಯವನ್ನು ಬೆಳೆಸುವುದಲ್ಲದೆ, ಸ್ಥಳೀಯವಾಗಿ ಸುಸ್ಥಿರ ಉದ್ಯೋಗಾವಕಾಶಗಳನ್ನು ಸೃಷ್ಟಿಸುವಲ್ಲಿ ಯಶಸ್ವಿಯಾಗಿದೆ.

ಭವಿಷ್ಯದ ವಿಸ್ತರಣೆಗೆ ಮುನ್ನುಡಿ

ಸದ್ಯ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಡಪದವು, ಉಜಿರೆ, ಕೆದಂಬಾಡಿ ಮತ್ತು ನರಿಕೊಂಬು ಸೇರಿದಂತೆ 4 MRF ಕೇಂದ್ರಗಳಿದ್ದು, ಇವು ದಿನಕ್ಕೆ ಒಟ್ಟು 31 ಟನ್ ಒಣ ಕಸ ನಿರ್ವಹಿಸುತ್ತವೆ. ಇದರಲ್ಲಿ ಅರ್ಧದಷ್ಟು ಕಸ ಇಂಧನ ತಯಾರಿಕೆಗೆ ಯೋಗ್ಯವಾಗಿದೆ. ಹಾಗಾಗಿ, ಕೆಮ್ರಾಲ್‌ನಲ್ಲಿ ಆರಂಭವಾಗಿರುವ ಈ ಪ್ರಾಯೋಗಿಕ ಪ್ಲಾಂಟ್ ಯಶಸ್ವಿಯಾದರೆ, ಮುಂದಿನ ದಿನಗಳಲ್ಲಿ ಜಿಲ್ಲೆಯಾದ್ಯಂತ ಇಂತಹ ಮತ್ತಷ್ಟು ಘಟಕಗಳನ್ನು ಸ್ಥಾಪಿಸಿ ಇಡೀ ಜಿಲ್ಲೆಯನ್ನು ಕಸಮುಕ್ತ ಹಾಗೂ ಇಂಧನ ಸ್ವಾವಲಂಬಿಯನ್ನಾಗಿ ಮಾಡಬಹುದು.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us