ರಾಜ್ಯದಲ್ಲಿ ನೀಟ್​ ಪರೀಕ್ಷೆಯಿಂದ ಮತ್ತೆ ವಂಚಿತರಾದ ಹಲವು ವಿದ್ಯಾರ್ಥಿಗಳು: ಒಬ್ಬೊಬ್ಬರದು ಒಂದೊಂದು ಕಥೆ

ನೀಟ್ ಪರೀಕ್ಷೆಗೆ ನಿಗದಿತ ಸಮಯಕ್ಕೆ ತಲುಪಲು ಸಾಧ್ಯವಾಗದೆ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ವಿದ್ಯಾರ್ಥಿಗಳು ಪರೀಕ್ಷೆಯಿಂದ ವಂಚಿತರಾಗಿದ್ದಾರೆ. ಟ್ರಾಫಿಕ್ ಜಾಮ್, ಬಸ್ ವಿಳಂಬ ಸೇರಿದಂತೆ ನಾನಾ ಕಾರಣಕ್ಕೆ ತಡವಾಗಿ ಆತಮಿಸಿದ ವಿದ್ಯಾರ್ಥಿಗಳ ಪ್ರವೇಶವನ್ನು ಸಿಬ್ಬಂದಿ ನಿರಾಕರಿಸಿದ್ದಾರೆ. ಹೀಗಾಗಿ ಕಣ್ಣೀರು ಹಾಕುತ್ತಲೇ ಮನೆಗೆ ತೆರಳಿದ್ದಾರೆ.

ರಾಜ್ಯದಲ್ಲಿ ನೀಟ್​ ಪರೀಕ್ಷೆಯಿಂದ ಮತ್ತೆ ವಂಚಿತರಾದ ಹಲವು ವಿದ್ಯಾರ್ಥಿಗಳು: ಒಬ್ಬೊಬ್ಬರದು ಒಂದೊಂದು ಕಥೆ
ವಿದ್ಯಾರ್ಥಿನಿಯರು
Image Credit source: tv9 kannada

Updated on: Jun 21, 2026 | 4:55 PM

ಬೆಂಗಳೂರು, ಜೂನ್​​ 21: ಪ್ರಶ್ನೆ ಪತ್ರಿಕೆ ಲೀಕ್​ನಿಂದ ರದ್ದಾಗಿದ್ದ ನೀಟ್ ಮರುಪರೀಕ್ಷೆ (NEET Re Exam)  ಇಂದು ರಾಜ್ಯಾದ್ಯಂತ ನಡೆದಿದೆ. ವರ್ಷದಲ್ಲೇ ಎರಡನೇ ಬಾರಿಗೆ ವಿದ್ಯಾರ್ಥಿಗಳು (Students) ನೀಟ್ ಪರೀಕ್ಷೆ ಬರೆದಿದ್ದಾರೆ. ಆದರೆ ರಾಜ್ಯದ ಹಲವು ವಿದ್ಯಾರ್ಥಿಗಳು ಈ ಭಾರಿ ಕೂಡ ಪರೀಕ್ಷೆಯಿಂದ ವಂಚಿತರಾಗಿದ್ದಾರೆ. ಟ್ರಾಫಿಕ್ ​ಜಾಮ್ ಸೇರಿದಂತೆ ನಾನಾ ಕಾರಣಗಳಿಗೆ ಪರೀಕ್ಷಾ ಕೇಂದ್ರಕ್ಕೆ ತಡವಾಗಿ ಬಂದಿದ್ದು, ಸಿಬ್ಬಂದಿ ನಿರಾಕರಿಸಿದ್ದಾರೆ. ಹೀಗಾಗಿ ಕಣ್ಣೀರು ಹಾಕುತ್ತಲೇ ಪರೀಕ್ಷಾರ್ಥಿಗಳು ಮನೆಗೆ ತೆರಳಿದ್ದಾರೆ.

ಮುಖ್ಯಾಂಶಗಳು

  • ಪರೀಕ್ಷಾ ಕೇಂದ್ರಕ್ಕೆ ತಡವಾಗಿ ಬಂದ ವಿದ್ಯಾರ್ಥಿಗಳು ಕಣ್ಣೀರು
  • ಗೇಟ್ ಬಳಿಯೇ ಕುಸಿದುಬಿದ್ದು ಗೋಳಾಟ
  • ಟ್ರಾಫಿಕ್, ಬಸ್ ವಿಳಂಬದಿಂದ ಪರೀಕ್ಷೆ ವಂಚಿತರಾದ ವಿದ್ಯಾರ್ಥಿಗಳು

ತಡವಾಗಿ ಬಂದ ವಿದ್ಯಾರ್ಥಿಗಳಿಂದ ಹಂಗಾಮ

ಬೆಂಗಳೂರಿನ ಆರ್​ಸಿ ಕಾಲೇಜಿನ ಪರೀಕ್ಷಾ ಕೇಂದ್ರಕ್ಕೆ ಮೂವರು ವಿದ್ಯಾರ್ಥಿನಿಯರು ಎರಡು ನಿಮಿಷ ತಡವಾಗಿ ಆಗಮಿಸಿದರು. ಆದರೆ ಅದಾಗಲೇ ಪರೀಕ್ಷಾ ಕೇಂದ್ರದ ಗೇಟ್​ಗಳನ್ನು ಮುಚ್ಚಲಾಗಿತ್ತು. ಓರ್ವ ವಿದ್ಯಾರ್ಥಿನಿ ಟ್ರಾಫಿಕ್​ಜಾಮ್​ ಹಿನ್ನೆಲೆ ತಡವಾಗಿ ಆಗಮಿಸಿದರೆ, ಮತ್ತೋರ್ವ ವಿದ್ಯಾರ್ಥಿನಿ ಬಸ್ ಮಿಸ್ ಆಗಿ ತಡವಾಗಿದ್ದಕ್ಕೆ ವಂಚಿತರಾಗಿದ್ದಾಳೆ. ಮತ್ತೊಬ್ಬಳು ವಿದ್ಯಾರ್ಥಿನಿ ಹಳೆ ಹಾಲ್ ಟಿಕೆಟ್ ತಂದು ಎಡವಟ್ಟು ಮಾಡಿಕೊಂಡಿದ್ದಾಳೆ.

ಇದನ್ನೂ ಓದಿ: ವಿದ್ಯಾರ್ಥಿಗಳ ನೆರವಿಗೆ ನಿಂತ ಗೃಹ ಸಚಿವ: ಬೆಂಗಳೂರಿನಲ್ಲಿ ನೀಟ್ ಪರೀಕ್ಷೆ ಬರೆಯುವವರ ಸುಗಮ ಸಂಚಾರಕ್ಕೆ ಅನುವು

ಒಳಗೆ ಬಿಡಿ ಅಂತಾ ಅಳಲು ತೋಡಿಕೊಂಡ ವಿದ್ಯಾರ್ಥಿನಿಯರು, ಗೇಟ್ ಮುಂದೆ ನಿಂತು ಕಣ್ಣೀರು ಹಾಕಿದರು. ಒಬ್ಬಳು ವಿದ್ಯಾರ್ಥಿನಿಯಂತೂ ಗೇಟ್ ಬಳಿಯೇ ಕುಸಿದುಬಿದ್ದು, ಒಳಗೆ ಬಿಡಿ ಅಂತಾ ಗೋಳಾಡಿದ್ದಾಳೆ. ಬಳಿಕ ಮತ್ತೊಂದು ಕಡೆಗೆ ಬಂದ ವಿದ್ಯಾರ್ಥಿನಿ ತಡೆಗೋಡೆ ಏರಿ ಒಳಗೆ ಹೋಗಲು ಯತ್ನಿಸಿದಳು. ಆದರೆ ತಕ್ಷಣ ಮಧ್ಯಪ್ರವೇಶಿಸಿ ಪೊಲೀಸರು ವಿದ್ಯಾರ್ಥಿನಿಯನ್ನು ಕೆಳಗಿಳಿಸಿ ವಾಪಸ್ ಕಳಿಸಿದರು.

ಹತ್ತೇ ನಿಮಿಷ ತಡವಾಗಿ ಬಂದ ವಿದ್ಯಾರ್ಥಿನಿ: ಪರೀಕ್ಷೆಗೆ ನಿರಾಕರಣೆ

ಇನ್ನು ಕೊಪ್ಪಳದಲ್ಲೂ ತಡವಾಗಿ ಬಂದ ವಿದ್ಯಾರ್ಥಿನಿಗೆ ಪ್ರವೇಶ ನಿರಾಕರಿಸಲಾಗಿದೆ. ನಗರದ ಪ್ರಥಮ ದರ್ಜೆ ಕಾಲೇಜ್ ನಲ್ಲಿ ಘಟನೆ ನಡೆದಿದೆ. ಫಾತಿಮಾ ಎಂಬ ವಿದ್ಯಾರ್ಥಿನಿ ಗಂಗಾವತಿಯಿಂದ ಪರೀಕ್ಷೆ ಬರೆಯಲು 1:50ಕ್ಕೆ ಪರೀಕ್ಷಾ ಕೇಂದ್ರಕ್ಕೆ ಬಂದಿದ್ದಳು. 2 ಗಂಟೆಯವರೆಗೆ ಅವಕಾಶವಿದ್ದರೂ ಪರೀಕ್ಷೆಗೆ ನಿರಾಕರಿಸಲಾಗಿದೆ. ಹೀಗಾಗಿ ಪರೀಕ್ಷೆ ಬರೆಯಲು ಅವಕಾಶ ನೀಡುವಂತೆ ಗೇಟ್ ಎದುರು ನಿಂತ ಬೇಡಿಕೊಂಡಿದ್ದಾಳೆ. ಆದರೆ ಸಿಬ್ಬಂದಿ ಮಾತ್ರ ಗೇಟ್ ತೆರೆದಿಲ್ಲ. ಈ ವೇಳೆ ವಿದ್ಯಾರ್ಥಿನಿ ಪೋಷಕರು ಮತ್ತು ಸಿಬ್ಬಂದಿ ಮಧ್ಯೆ ವಾಗ್ವಾದ ಕೂಡ ಉಂಟಾಗಿದೆ. ಕಣ್ಣೀರು ಹಾಕುತ್ತಲೇ ವಿದ್ಯಾರ್ಥಿನಿ ವಾಪಸ್ ತೆರಳಿದ್ದಾಳೆ.

ವರದಿ: ವಿಕಾಸ್​​ ಕ್ರೈಂ, ಟಿವಿ9

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 4:54 pm, Sun, 21 June 26

ಗಂಗಾಧರ​ ಬ. ಸಾಬೋಜಿ

ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ರಬಕವಿ ನನ್ನೂರು. ಡಿಗ್ರಿ ಬಳಿಕ ಮನಸ್ಸು ವಾಲಿದ್ದು ಮಾಧ್ಯಮ ಕ್ಷೇತ್ರದ ಕಡೆ. ಹಾಗಾಗಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಎಂಎ ಪತ್ರಿಕೋದ್ಯಮ ಪದವಿ ಮಾಡಿದೆ. ಆ ಸಂದರ್ಭದಲ್ಲಿಯೇ ಲೋಕಲ್ ಚಾನೆಲ್​ನಲ್ಲಿ ಸುದ್ದಿ ಬರವಣಿಗೆ, ಆ್ಯಂಕರಿಂಗ್​, ವೈಯಿಸ್​ ಓವರ್​, ಎಡಿಟಿಂಗ್​ ಕಲಿಕೆ. ಬಳಿಕ ಟಿವಿ6 ಸುದ್ದಿ ವಾಹಿನಿಯಲ್ಲಿ ಇಂಟರ್ನ್‌ಶಿಪ್. ನಂತರ ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಬೋಧನಾ ಸಹಾಯಕನಾಗಿ ನನ್ನ ಜ್ಞಾನವನ್ನು ಇತತರಿಗೆ ಹಂಚುವ ಕೆಲಸ. ಇದೀಗ ‘ಉತ್ತಮ ಸಮಾಜಕ್ಕಾಗಿ’ ನನ್ನ ಕಾಯಕ. ಓದು, ಬರವಣಿಗೆ, ಸಿನಿಮಾ ನನ್ನ ಆಸಕ್ತಿ.

Read More
Loading...
Unable to load recommendations.
Follow Us