ಮಕ್ಕಳ ಕೈಯಲ್ಲಿ ಪೆನ್ನಿನ ಬದಲು ತಲ್ವಾರ್ ಕೊಡಿ: ಮರುಳಾರಾಧ್ಯ ಶಿವಾಚಾರ್ಯ ಹೇಳಿಕೆ ಬಗ್ಗೆ ಪರಮೇಶ್ವರ್ ಹೇಳಿದ್ದಿಷ್ಟು
ವಕ್ಫ್ ವಿರುದ್ಧದ ಪ್ರತಿಭಟನೆ ವೇಳೆ ಅಫಜಲಪುರದಲ್ಲಿ ಮರುಳಾರಾಧ್ಯ ಶಿವಾಚಾರ್ಯ ಶ್ರೀಗಳು ನೀಡಿರುವ ಪೆನ್ನು, ತಲ್ವಾರ್ ಹೇಳಿಕೆಗೆ ಈಗ ವಿರೋಧ ವ್ಯಕ್ತವಾಗುತ್ತಿದೆ. ಸ್ವಾಮೀಜಿ ವಿರುದ್ಧ ಕ್ರಮ ಕೈಗೊಳ್ಳಬೇಕೆಂಬ ಆಗ್ರಹ ವ್ಯಕ್ತವಾಗುತ್ತಿದೆ. ಹಾಗಾದರೆ, ಸ್ವಾಮೀಜಿ ಹೇಳಿದ್ದೇನು? ಆ ಬಗ್ಗೆ ಗೃಹ ಸಚಿವ ಪರಮೇಶ್ವರ್ ಏನಂದರು ಎಂಬ ವಿವರ ಇಲ್ಲಿದೆ.
ಬೆಂಗಳೂರು, ನವೆಂಬರ್ 11: ‘ಮಕ್ಕಳ ಕೈಯಲ್ಲಿ ಪೆನ್ನು ಕೊಡುವ ಬದಲು ತಲ್ವಾರ್ ಕೊಡಿ’ ಎಂದು ಮರುಳಾರಾಧ್ಯ ಶಿವಾಚಾರ್ಯ ಶ್ರೀಗಳು ಹೇಳಿರುವ ಬಗ್ಗೆ ಗೃಹ ಸಚಿವ ಡಾ. ಜಿ ಪರಮೇಶ್ವರ ಪ್ರತಿಕ್ರಿಯಿಸಿದ್ದು, ಪೊಲೀಸರು ಆ ಬಗ್ಗೆ ಕ್ರಮ ಕೈಗೊಳ್ಳಲಿದ್ದಾರೆ ಎಂದಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಪರಮೇಶ್ವರ್, ಧರ್ಮಗುರುಗಳು ಧರ್ಮದಿಂದ ನಡೆದುಕೊಳ್ಳಬೇಕಕು. ಅವರು ಧರ್ಮ ಪ್ರಚಾರಕರಾಗಿ ಪ್ರಚೋದನೆಯ ಹೇಳಿಕೆಗಳನ್ನು ನೀಡಬಾರದು ಎಂದರು.
ನಾವು ಪೂಜನೀಯ ಭಾವದಿಂದ ಸ್ವಾಮೀಜಿಯವರ ಕಾಲಿಗೆ ಬೀಳುತ್ತೇವೆ. ಆದರೆ, ಅಂಥವರೇ ಯುವಕರ ಕೈಯಲ್ಲಿ ತಲ್ವಾರ್ ಕೊಡಿ ಎಂಬುದು ಸರಿಯಲ್ಲ ಎಂದು ಪರಮೇಶ್ವರ್ ಅಭಿಪ್ರಾಯಪಟ್ಟರು.
ಏನು ಹೇಳಿದ್ದರು ಮರುಳಾರಾಧ್ಯ ಶಿವಾಚಾರ್ಯ ಶ್ರೀ?
ರೈತರ ಪಹಣಿಯಲ್ಲಿ ವಕ್ಫ್ ಹೆಸರು ನಮೂದಾಗಿರುವ ವಿಚಾರ ಸದ್ಯ ಕರ್ನಾಟಕದಾದ್ಯಂತ ತೀವ್ರ ಚರ್ಚೆಯಲ್ಲಿದೆ. ಹಲವೆಡೆ ಪ್ರತಿಭಟನೆಗಳೂ ನಡೆಯುತ್ತಿವೆ. ಕಲಬುರಗಿ ಜಿಲ್ಲೆಯಲ್ಲಿಯೂ ವಕ್ಫ್ ವಿರುದ್ಧ ಪ್ರತಿಭಟನೆಯಲ್ಲಿ ನಡೆದಿದೆ. ಪ್ರತಿಭಟನೆಯಲ್ಲಿ ಭಾಗವಹಿಸಿದ ಮರುಳಾರಾಧ್ಯ ಶಿವಾಚಾರ್ಯ ಶ್ರೀ, ಪೊಲೀಸರ ಎದುರೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಕಲಬುರಗಿಯ ಅಫಜಲಪುರದಲ್ಲಿ, ‘ವಕ್ಫ್ ಹಠಾವೋ ದೇಶ್ ಬಚಾವೋ’ ಘೋಷಣೆಯೊಂದಿಗೆ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಸ್ವಾಮೀಜಿ, ಆ ಸಮುದಾಯದ ಎಲ್ಲ ಯುವಕರ ಮನೆಗಳಲ್ಲಿ ತಲ್ವಾರ್ಗಳಿವೆ. ಎದುರು ಬಂದವರನ್ನು ಕಡಿಯುತ್ತೇವೆ ಎನ್ನುತ್ತಾರೆ. ಭಾರತವನ್ನು ಪಾಕಿಸ್ತಾನ ಮಾಡುತ್ತೇವೆ ಎನ್ನುತ್ತಿದ್ದಾರೆ. ನಾವು ಇನ್ನೂ ಎಚ್ಚೆತ್ತುಕೊಳ್ಳದಿದ್ದರೆ ಕಷ್ಟವಿದೆ. ಹೀಗಾಗಿ ಮಕ್ಕಳ ಕೈಗೆ ಪೆನ್ನು ಕೊಡುವ ಬದಲು ತಲ್ವಾರ್ ಕೊಡಬೇಕು ಎಂದು ಹೇಳಿದ್ದರು. ಪೊಲೀಸರ ಎದುರೇ ಸ್ವಾಮೀಜಿ ಈ ಹೇಳಿಕೆ ನೀಡಿದ್ದರು. ಮರುಳಾರಾಧ್ಯ ಶಿವಾಚಾರ್ಯ ಶ್ರೀ ಹೇಳಿಕೆಗೆ ಇದೀಗ ವಿರೋಧ ವ್ಯಕ್ತವಾಗುತ್ತಿದೆ.
ಮಂಡ್ಯ ದೇಗುಲ ಗಲಾಟೆ ಬಗ್ಗೆ ಪರಮೇಶ್ವರ್ ಪ್ರತಿಕ್ರಿಯೆ
ಮಂಡ್ಯ ಜಿಲ್ಲೆಯ ಹನಕೆರೆ ಗ್ರಾಮದ ಕಾಲಭೈರವೇಶ್ವರ ದೇಗುಲದಲ್ಲಿ ಭಾನುವಾರ ನಡೆದ ಗಲಭೆ ಬಗ್ಗೆ ಪ್ರತಿಕ್ರಿಯಿಸಿ, ಕಾನೂನು ಪ್ರಕಾರ ಏನು ಕ್ರಮ ಕೈಗೊಳ್ಳಬೇಕೋ ಅದು ಆಗಲಿದೆ. ಇಂತಹ ಘಟನೆ ನಡೆಯುತ್ತಲೇ ಇರುತ್ತವೆ. ದೇವಸ್ಥಾನದಲ್ಲೂ ದಲಿತರ ಪ್ರವೇಶಕ್ಕೆ ಅವಕಾಶ ಕೊಡುತ್ತಿಲ್ಲ. ಆದರೆ ಕಾಲ ಬದಲಾಗುತ್ತಿದೆ, ದೇವರು ಎಲ್ಲರಿಗೂ ಒಬ್ಬನೇ. ಸಮಾಜವನ್ನು ಎಲ್ಲರೂ ಕೂಡ ಅರ್ಥ ಮಾಡಿಕೊಳ್ಳಬೇಕು ಎಂದರು.
ಇದನ್ನೂ ಓದಿ: ದಲಿತರು ದೇವಸ್ಥಾನದೊಳಗೆ ಬಂದರೆಂದು ಉತ್ಸವ ಮೂರ್ತಿಯನ್ನೇ ಹೊರತಂದ ಸವರ್ಣೀಯರು
ಮತ್ತೊಂದೆಡೆ, ಪ್ರಧಾನಿ ಮೋದಿ ಮಾಡಿರುವ 700 ಕೋಟಿ ರೂಪಾಯಿ ಅಕ್ರಮ ಆರೋಪದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಪರಮೇಶ್ವರ್, ಬಿಜೆಪಿ ಮುಖಂಡರು ಹೇಳಿದ್ದರೆ ಬಿಡಿ ಅನ್ನಬಹುದಿತ್ತು. ಆದರೆ ದೇಶದ ಪ್ರಧಾನಮಂತ್ರಿಗಳು ಈ ರೀತಿ ಹೇಳಿದ್ದಾರೆ. ಮೋದಿ ಸತ್ಯಕ್ಕೆ ದೂರವಾದ ಮಾತುಗಳನ್ನು ಆಡಿದ್ದಾರೆ. ಪ್ರಧಾನಿ ಮೋದಿ ಬಳಿ ಯಾವ ಪುರಾವೆ ಇದೆ ಗೊತ್ತಿಲ್ಲ, ಮಹಾರಾಷ್ಟ್ರದಲ್ಲಿಯೂ ನಮ್ಮ ಪಕ್ಷ ಇದೆ. ಅಲ್ಲಿನ ‘ಕೈ’ ನಾಯಕರು ಚುನಾವಣೆ ನೋಡಿಕೊಳ್ತಾರೆ. ನಾವು ಇಲ್ಲಿಂದ ಅವರಿಗೆ ಹಣ ಕಳುಹಿಸುವ ಅಗತ್ಯ ಇಲ್ಲ ಎಂದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ