ದಲಿತರು ದೇವಸ್ಥಾನದೊಳಗೆ ಬಂದರೆಂದು ಉತ್ಸವ ಮೂರ್ತಿಯನ್ನೇ ಹೊರತಂದ ಸವರ್ಣೀಯರು
ಮಂಡ್ಯ ಜಿಲ್ಲೆಯ ಹನಕೆರೆ ಗ್ರಾಮದ ಕಾಲಭೈರವೇಶ್ವರ ದೇವಾಲಯಕ್ಕೆ ದಲಿತರ ಪ್ರವೇಶದಿಂದಾಗಿ ಸವರ್ಣೀಯರ ಆಕ್ರೋಶ ಭುಗಿಲೆದ್ದಿದೆ. ದೇವಸ್ಥಾನದಿಂದ ಉತ್ಸವ ಮೂರ್ತಿಯನ್ನು ಹೊರತರಲಾಗಿದೆ. ಸದ್ಯ ಜಿಲ್ಲಾಡಳಿತ ಎಲ್ಲರಿಗೂ ದೇವಾಲಯ ಪ್ರವೇಶಕ್ಕೆ ಅವಕಾಶ ನೀಡಿದೆ. ಮುಂಜಾಗ್ರತವಾಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದೆ.
ಮಂಡ್ಯ, ನವೆಂಬರ್ 10: ಕಾಲಭೈರವೇಶ್ವರ ದೇವಾಲಯಕ್ಕೆ ದಲಿತರು (Dalit) ಪ್ರವೇಶಿಸಿ ಪೂಜೆ ಸಲ್ಲಿಸಿದ ಹಿನ್ನೆಲೆ ದೇಗುಲದಿಂದ ಉತ್ಸವ ಮೂರ್ತಿಯನ್ನು ಹೊರತಂದು, ದೇವಾಲಯದ ನಾಮಫಲಕ ಆಚೆ ಎಸೆದು ಸವರ್ಣೀಯರು ಆಕ್ರೋಶ ವ್ಯಕ್ತಪಡಿಸಿರುವಂತಹ ಘಟನೆ ಜಿಲ್ಲೆಯ ಹನಕೆರೆ ಗ್ರಾಮದಲ್ಲಿ ನಡೆದಿದೆ. ಸದ್ಯ ಹನಕೆರೆ ಗ್ರಾಮ ಬೂದಿಮುಚ್ಚಿದ ಕೆಂಡದಂತಾಗಿದೆ. ಘಟನೆ ಹಿನ್ನೆಲೆ ಗ್ರಾಮದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದೆ.
ಕಳೆದ 2 ವರ್ಷಗಳ ಹಿಂದೆ ದೇವಾಲಯ ಪುನರ್ ನಿರ್ಮಾಣ ಮಾಡಲಾಗಿದೆ. ಬಳಿಕ ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಗೆ ದೇಗುಲ ಸೇರುತ್ತಿದ್ದಂತೆ ದಲಿತರ ಪ್ರವೇಶಕ್ಕೆ ಸವರ್ಣೀಯರು ಒಪ್ಪುತ್ತಿಲ್ಲ. ಈ ಕುರಿತಾಗಿ ಈಗಾಗಲೇ ಎರಡು ಬಾರಿ ನಡೆಸಿದ ಶಾಂತಿ ಸಭೆಯೂ ವಿಫಲಾಗಿದೆ.
ಇದನ್ನೂ ಓದಿ: ಬೀದರ್: ಜಾತ್ರೆಗೆ ಬಂದಿದ್ದಕ್ಕೆ ದಲಿತರ ಮೇಲೆ ಸವರ್ಣೀಯರಿಂದ ಹಲ್ಲೆ, ಕೇಸ್ ಬುಕ್
ದಲಿತರ ದೇಗುಲ ಪ್ರವೇಶಕ್ಕೆ ಸವರ್ಣೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ದೇಗುಲ ಅವರೇ ಇಟ್ಟುಕೊಳ್ಳಲಿ, ದೇವರನ್ನ ಕೊಂಡೊಯುತ್ತೇವೆ. ಕೂಲಿ ಹಣದಿಂದ ದೇಗುಲ ನಿರ್ಮಿಸಿದ್ದೇವೆ ಎಂದು ಬೇಸರ ಹೊರಹಾಕಿದ್ದಾರೆ. ಈ ಮಧ್ಯೆ ಪೊಲೀಸರ ಭದ್ರತೆ ನಡುವೆ ದಲಿತರು ದೇಗುಲ ಪ್ರವೇಶಿಸಿದ್ದಾರೆ.
ಯಾರ ಮನವಿಗೂ ಬಗ್ಗದ ಗ್ರಾಮಸ್ಥರು
ಇನ್ನು ಮಾಜಿ ಶಾಸಕ ಎಂ ಶ್ರೀನಿವಾಸ್ ಸವರ್ಣೀಯರ ಮನವೊಲಿಸಲು ಯತ್ನಿಸಿದ್ದಾರೆ. ತಹಶಿಲ್ದಾರ್, ಸಮಾಜ ಕಲ್ಯಾಣ, ಪೊಲೀಸ್ ಇಲಾಖೆ ಅಧಿಕಾರಿಗಳೊಂದಿಗೆ ಮನವೊಲಿಕೆಗೆ ಯತ್ನಿಸಿದ್ದು, ಯಾರ ಮನವಿಗೂ ಗ್ರಾಮಸ್ಥರು ಬಗ್ಗಿಲ್ಲ. ಕಡೆಗೆ ಸಾಮಾಜಿಕ ನ್ಯಾಯದಂತೆ ದಲಿತರ ದೇವಾಲಯ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ.
ಇದನ್ನೂ ಓದಿ: ಬೆಂಗಳೂರಿನಿಂದ ಕೂಗಳತೆ ದೂರದಲ್ಲೇ ಅಸ್ಪೃಶ್ಯತೆ: ದಲಿತರಿಗೆ ದೇಗುಲ ಪ್ರವೇಶ ನಿರಾಕರಣೆ
ಇತ್ತ ದಲಿತರ ದೇವಾಲಯ ಪ್ರವೇಶಿಸುತ್ತಿದ್ದಂತೆ ಇನ್ಮುಂದೆ ನಾವು ದೇವಾಲಯ ಪ್ರವೇಶ ಮಾಡಲ್ಲ ಎಂದು ಸವರ್ಣೀಯರು ಹೇಳುತ್ತಿದ್ದಾರೆ. ಸದ್ಯಕ್ಕೆ ದೇವಸ್ಥಾನ ಬಾಗಿಲು ಬಂದ್ ಮಾಡಲಾಗಿದ್ದು, ಎಂದಿನಂತೆ ಮತ್ತೆ ಸಂಜೆ ಓಪನ್ ಆಗಲಿದೆ. ಜಿಲ್ಲಾಡಳಿತ ದೇವಸ್ಥಾನಕ್ಕೆ ಎಲ್ಲರಿಗೂ ಅವಕಾಶ ಮಾಡಿಕೊಟ್ಟಿದೆ. ಸವರ್ಣೀಯರು ಉತ್ಸವ ಮೂರ್ತಿಯನ್ನು ಮತ್ತೊಂದು ಕೊಠಡಿಯಲ್ಲಿ ಇಟ್ಟಿದ್ದು, ಸಂಜೆ ಮತ್ತೆ ಉತ್ಸವ ಮೂರ್ತಿಯನ್ನ ದೇವಸ್ಥಾನಕ್ಕೆ ತೆಗೆದುಕೊಂಡು ಹೋಗಲು ಮುಜರಾಯಿ ಇಲಾಖೆ ತೀರ್ಮಾನಿಸಿದೆ.
ತಹಶಿಲ್ದಾರ್ ಶಿವಕುಮಾರ್ ಬಿರದಾರ್ ಹೇಳಿದ್ದಿಷ್ಟು
ತಹಶಿಲ್ದಾರ್ ಶಿವಕುಮಾರ್ ಬಿರದಾರ್ ಪ್ರತಿಕ್ರಿಯಿಸಿದ್ದು, ದೇವಸ್ಥಾನಕ್ಕೆ ಪ್ರವೇಶ ಇಲ್ಲ ಎಂದು ನಮಗೆ ದೂರು ಕೊಟ್ಟಿದ್ದರು. ದಲಿತ ಕುಟುಂಬದವರಿಗೆ ಪ್ರವೇಶ ಇಲ್ಲ ನಮಗೆ ಮಾಹಿತಿ ಕೊಟ್ಟಿದ್ದರು. 4 ತಿಂಗಳ ಹಿಂದೆ ಎಲ್ಲಾರು ದೇವಸ್ಥಾನಕ್ಕೆ ಹೋಗುತ್ತಿದ್ದರು. ಕೆಲ ದಿನಗಳ ಹಿಂದೆ ಇಲ್ಲಿ ಸಮಸ್ಯೆ ಉಂಟಾಗಿದೆ. ಇದು ಮುಜುರಾಯಿ ದೇವಸ್ಥಾನವಾಗಿದೆ. ಕೆಲವು ಜನರಿಗೆ ವೈಮನಸ್ಸು ಇರುವುದರಿಂದ ಹೋಗಿದ್ದಾರೆ. ಎಲ್ಲರಿಗೂ ಪ್ರವೇಶಕ್ಕೆ ಅವಕಾಶ ಇದೆ ಎಂದಿದ್ದಾರೆ.
4 ತಿಂಗಳ ಹಿಂದೆಯಿಂದ ಈ ಸಮಸ್ಯೆ
ಸಮಾಜ ಕಲ್ಯಾಣ ಅಧಿಕಾರಿ ಸಿದ್ದಲಿಂಗಪ್ಪ ಮಾತನಾಡಿದ್ದು, 4 ತಿಂಗಳ ಹಿಂದೆಯಿಂದ ಈ ಸಮಸ್ಯೆ ಇದೆ. ದಲಿತರಿಗೆ ಪ್ರವೇಶಕ್ಕೆ ಬಿಟ್ಟಿಲ್ಲ. 2 ಬಾರಿ ಸಭೆ ಮಾಡಿ ಗ್ರಾಮಸ್ಥರಿಗೆ ತಿಳಿಸಿದ್ದೇವೆ. ಗ್ರಾಮದಲ್ಲಿ ವಿರೋಧ ಇರುವುದರಿಂದ ಡಿಸಿಗೆ ಮಾಹಿತಿ ನೀಡಿದ್ದೇವೆ. ಡಿಸಿ ಕ್ರಮಕೈಗೊಳ್ಳುವುದಾಗಿ ತಿಳಿಸಿದ್ದಾರೆ ಎಂದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.