ಬೆಂಗಳೂರು-ವಿಜಯಪುರ ರೈಲು ಪ್ರಯಾಣ 15ರಿಂದ 10 ಗಂಟೆಗೆ ಇಳಿಕೆ: ಎಂಬಿ ಪಾಟೀಲ್ ಮಹತ್ವದ ಚರ್ಚೆ
ಬೆಂಗಳೂರಿನಿಂದ ವಿಜಯಪುರ ಮತ್ತು ಬಾಗಲಕೋಟೆಗಳಿಗೆ ರೈಲು ಪ್ರಯಾಣಕ್ಕೆ ಈಗ ಸುಮಾರು 15 ಗಂಟೆಗಳ ಅವಧಿ ಹಿಡಿಯುತ್ತಿದ್ದು, ಇದನ್ನು 10 ಗಂಟೆಗಳಿಗೆ ಇಳಿಸಲು ಸಚಿವ ಎಂಬಿ ಪಾಟೀಲ್ ಮುಂದಾಗಿದ್ದಾರೆ. ಈ ಸಂಬಂಧ ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ ಸೋಮಣ್ಣ ಅವರ ಜೊತೆ ಮಹತ್ವದ ಮಾತುಕತೆ ನಡೆಸಿದ್ದಾರೆ. ಹಾಗಾದ್ರೆ, ಉಭಯ ನಾಯಕರ ನಡುವೆ ಏನೆಲ್ಲಾ ಮಾತುಕತೆ ಆಯ್ತು ಎನ್ನುವ ವಿವರ ಇಲ್ಲಿದೆ.

ಬೆಂಗಳೂರು, (ಮೇ 31): ರಾಜಧಾನಿ ಬೆಂಗಳೂರಿನಿಂದ ವಿಜಯಪುರ ಮತ್ತು ಬಾಗಲಕೋಟೆಗೆ ಈಗಿರುವ 15 ಗಂಟೆಗಳ ಪ್ರಯಾಣದ (Bengaluru Vijayapura train) ಅವಧಿಯನ್ನು ಕಡಿಮೆ ಮಾಡುವ ಸಂಬಂಧ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ ಬಿ ಪಾಟೀಲ (mb patil) ಅವರು ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ ಸೋಮಣ್ಣ (V Somanna) ಅವರೊಂದಿಗೆ ಶನಿವಾರ ದೂರವಾಣಿ ಮಾತುಕತೆ ನಡೆಸಿದ್ದಾರೆ. ಪ್ರಯಾಣದ ಅವಧಿ 15 ಗಂಟೆಯಿಂದ 10 ಗಂಟೆಗಳಿಗೆ ಇಳಿಸುವ ಬಗ್ಗೆ ಮಹತ್ವದ ಚರ್ಚೆ ನಡೆಸಿದ್ದಾರೆ.
ಈ ಸಂದರ್ಭದಲ್ಲಿ ಸಚಿವರು, ಈಗ ವಿಜಯಪುರ, ಬಾಗಲಕೋಟೆಗೆ ಹೋಗುವ ರೈಲುಗಳು ಹುಬ್ಬಳ್ಳಿ ಮತ್ತು ಗದಗಿನಲ್ಲಿ ಎಂಜಿನ್ ಬದಲಿಸಿಕೊಳ್ಳಲು ಗಂಟೆಗಟ್ಟಲೆ ನಿಲ್ಲಬೇಕಾಗಿದೆ. ಎರಡೂ ಕಡೆ ಬೈಪಾಸ್ ಮೂಲಕ ರೈಲುಗಳು ಸಾಗಿಹೋಗುವ ವ್ಯವಸ್ಥೆ ಆಗಬೇಕು. ಇದರಿಂದ ಗದಗ ಭಾಗದ ಜನತೆಗೂ ಅನುಕೂಲವಾಗುತ್ತದೆ. ಅಕಸ್ಮಾತ್ ಈಗಾಗಲೇ ಓಡುತ್ತಿರುವ ರೈಲುಗಳನ್ನು ಬೈಪಾಸ್ ಮೂಲಕ ಓಡಿಸುವುದು ಅಸಾಧ್ಯವಾದರೆ, ಹೊಸ ರೈಲುಗಳ ಸೇವೆಯನ್ನಾದರೂ ಆರಂಭಿಸಬೇಕು ಎಂದು ಕೋರಿದ್ದಾರೆ.
ಕೇಂದ್ರ ಸಚಿವ ಸೋಮಣ್ಣನವರು ಈ ಬೇಡಿಕೆಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಸದ್ಯದಲ್ಲೇ ತಾವು ದೆಹಲಿಗೆ ಹೋಗುತ್ತಿದ್ದು, ಈ ಸಂದರ್ಭದಲ್ಲಿ ಅವರನ್ನೂ ರೈಲ್ವೆ ಅಧಿಕಾರಿಗಳನ್ನೂ ಕಂಡು ಮಾತುಕತೆ ನಡೆಸುವುದಾಗಿ ಹೇಳಿದ್ದಾರೆ.
ನೈರುತ್ಯ ರೈಲ್ವೆ ಮುಖ್ಯ ಆಡಳಿತಾಧಿಕಾರಿ ಅಜಯ್ ಶರ್ಮ ಅವರೊಂದಿಗೂ ಸಚಿವರು ಮಾತನಾಡಿದರು. ಈ ಭಾಗದಲ್ಲಿ ಬಾಕಿ ಇರುವ ರೈಲ್ವೆ ಹಳಿ ವಿದ್ಯುದೀಕರಣ ಜುಲೈ ಹೊತ್ತಿಗೆ ಮುಗಿಯಲಿದೆ ಎಂದು ಶರ್ಮ ಹೇಳಿದ್ದಾರೆ. ಇದಾದ ಮೇಲೆ ಬೆಂಗಳೂರಿನಿಂದ ವಿಜಯಪುರ ಮತ್ತು ಬಾಗಲಕೋಟೆ ನಡುವಿನ ರೈಲು ಪ್ರಯಾಣದ ಅವಧಿ ಗಣನೀಯವಾಗಿ ಕಡಿಮೆ ಆಗಲಿದೆ ಎಂದು ಹೇಳಿದ್ದಾರೆ ಎಂದು ಪಾಟೀಲ ತಿಳಿಸಿದ್ದಾರೆ.
ಸಚಿವ ಪಾಟೀಲ ಅವರು ಈ ಸಂಬಂಧ ಈಗಾಗಲೇ ನಿರಂತರವಾಗಿ ಸಭೆಗಳನ್ನು ನಡೆಸುತ್ತಿರುವುದನ್ನು ಇಲ್ಲಿ ನೆನೆಯಬಹುದು.