AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಂಚಮಸಾಲಿ ಮೀಸಲಾತಿ ಹೋರಾಟಕ್ಕೆ ಮರುಜೀವ: ಜಯ ಮೃತ್ಯುಂಜಯ ಸ್ವಾಮೀಜಿ ಶಕ್ತಿ ಪ್ರದರ್ಶನ, ಸಿಎಂ ನಿವಾಸದಲ್ಲಿ ಸಭೆ

ಪಂಚಮಸಾಲಿ ಮೀಸಲಾತಿ ಕಿಚ್ಚಿಗೆ ಮರುಜೀವ ದೊರೆತಿದೆ. ಪಂಚಮಸಾಲಿ 2ಎ ಮೀಸಲಾತಿಗೆ ದೊಡ್ಡ ಹೋರಾಟವೇ ನಡೆಯುತ್ತಿದ್ದು, ಗಡುವಿನ ಮೇಲೆ ಗಡುವು ಕೊಟ್ಟರೂ ಸರ್ಕಾರ ಮಾತ್ರ ಕ್ಯಾರೇ ಎನ್ನಲಿಲ್ಲ. ಆದರೆ ಅದ್ಯಾವಾಗ ಬೆಳಗಾವಿಯಲ್ಲಿ ವಕೀಲರ ಸಭೆಯಲ್ಲೇ ಸಿಎಂ ಸಭೆ ನಡೆಸುವ ಬಗ್ಗೆ ಭರವಸೆ ಕೊಟ್ಟರೋ, ಸ್ವಾಮೀಜಿ ಹೋರಾಟ ಕೈಬಿಟ್ಟಿದ್ದರು. ಇದೀಗ ಕಾಲ್ನಡಿಗೆಯಲ್ಲೇ ಪಂಚಮಸಾಲಿ ಸಮುದಾಯದ ನಾಯಕರು, ಸ್ವಾಮೀಜಿ ಸಿಎಂ ಸಿದ್ದರಾಮಯ್ಯ ನಿವಾಸಕ್ಕೆ ಬಂದಿದ್ದು, ಮೀಸಲಾತಿಗಾಗಿ ಆಗ್ರಹಿಸಿದ್ದಾರೆ.

ಪಂಚಮಸಾಲಿ ಮೀಸಲಾತಿ ಹೋರಾಟಕ್ಕೆ ಮರುಜೀವ: ಜಯ ಮೃತ್ಯುಂಜಯ ಸ್ವಾಮೀಜಿ ಶಕ್ತಿ ಪ್ರದರ್ಶನ, ಸಿಎಂ ನಿವಾಸದಲ್ಲಿ ಸಭೆ
ಜಯ ಮೃತ್ಯುಂಜಯ ಸ್ವಾಮೀಜಿ, ಮುಖ್ಯಮಂತ್ರಿ ಸಿದ್ದರಾಮಯ್ಯ
ಕಿರಣ್​ ಹನಿಯಡ್ಕ
| Updated By: Ganapathi Sharma|

Updated on: Oct 18, 2024 | 12:50 PM

Share

ಬೆಂಗಳೂರು, ಅಕ್ಟೋಬರ್ 18: ಪಂಚಮಸಾಲಿ 2ಎ ಮೀಸಲಾತಿ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಗೃಹ ಕಚೇರಿ ಕೃಷ್ಣಾದಲ್ಲಿ ಶುಕ್ರವಾರ ಸಭೆ ನಡೆಯಿತು. ಸಭೆಯಲ್ಲಿ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯಶ್ರೀ ಸೇರಿದಂತೆ ಸಮುದಾಯದ ಘಟನಾನುಘಟಿ ನಾಯಕರೇ ಭಾಗಿಯಾದರು. ಸಚಿವರಾದ ಶಿವರಾಜ ತಂಗಡಗಿ, ಲಕ್ಷ್ಮೀ ಹೆಬ್ಬಾಳ್ಕರ್, ಶಾಸಕರಾದ ವಿಜಯಾನಂದ್ ಕಾಶಪ್ಪನವರ್, ವಿನಯ್ ಕುಲಕರ್ಣಿ, ಶಾಸಕ ಯತ್ನಾಳ್​ ಸೇರಿದಂತೆ ಹಲವರು ಭಾಗಿಯಾದರು. ಹೋರಾಟಕ್ಕೆ ನ್ಯಾಯ ಒದಗಿಸಿಕೊಡುವಂತೆ ಎಲ್ಲರೂ ಸಿಎಂಗೆ ಒತ್ತಾಯ ಮಾಡಿದರು.

ಪಂಚಮಸಾಲಿ 2ಎ ಮೀಸಲಾತಿಗೆ ಈ ಹಿಂದೆ ದೊಡ್ಡ ಹೋರಾಟವೇ ನಡೆದಿದೆ. ಬಸವ ಜಯಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಸಾಕಷ್ಟು ಪ್ರತಿಭಟನೆಗಳು ಕೂಡ ನಡೆದಿವೆ. ಅದೆಷ್ಟೋ ಗಡುವುಗಳು ಅಂತ್ಯವಾಗಿದೆ. ಇದೀಗ ಸರ್ಕಾರದ ಮೂಲಕ ನಮಗೆ ನ್ಯಾಯ ಸಿಗುವುದಿಲ್ಲ ಎಂದು ಅರಿತ ಸ್ವಾಮೀಜಿ ಹೊಸ ಹಾದಿಯನ್ನೇ ಹಿಡಿದಿದ್ದಾರೆ. ನ್ಯಾಯಾಲಯದಲ್ಲಿ ವಕೀಲರ ಮೂಲಕ ಹೋರಾಟಕ್ಕೆ ಸಜ್ಜಾಗಿದ್ದಾರೆ.

ಕಾಲ್ನಡಿಗೆಯ ಮೂಲಕ ಸ್ವಾಮೀಜಿ ಶಕ್ತಿ ಪ್ರದರ್ಶನ

ಸಭೆಗೂ ಮುನ್ನ ಕೂಡಲ ಸಂಗಮ ಪೀಠಾಧ್ಯಕ್ಷ ಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಕಾಲ್ನಡಿಗೆ ಹಮ್ಮಿಕೊಳ್ಳಲಾಗಿತ್ತು. ಕಾಲ್ನಡಿಗೆಯಲ್ಲಿ ಪಂಚಮಸಾಲಿ ಸಮುದಾಯದ ನಾಯಕರೇ ಸೇರಿದ್ದರು. ವಕೀಲರು ದಂಡೇ ಬಂದಿತ್ತು. ಬೆಂಗಳೂರಿನ ಶಿವಾನಂದ ಸರ್ಕಲ್​ ಬಳಿಯ ಗಾಂಧಿ ಭವನದಿಂದ ಸಿಎಂ ಗೃಹ ಕಚೇರಿಗೆ ಕಾಲ್ನಡಿಗೆಯಲ್ಲೇ ತೆರಳಲಾಯಿತು. ಕಾಲ್ನಡಿಗೆಯಲ್ಲಿ ಸ್ವಾಮೀಜಿಗೆ ಬಿಜೆಪಿ ಶಾಸಕ ಯತ್ನಾಳ್​ ಸೇರಿದಂತೆ ರಾಜಕೀಯ ನಾಯಕರು ಸಾಥ್ ಕೊಟ್ಟರು.

ನಮ್ಮ ಸಮಾಜದ ಋಣ ನಿಮ್ಮ ಮೇಲೆ ಇದೆ: ಸ್ವಾಮೀಜಿ

ಕಾಲ್ನಡಿಗೆಯಲ್ಲಿ ಮತನಾಡಿದ ಜಯ ಮೃತ್ಯುಂಜಯ ಸ್ವಾಮೀಜಿ, ಕಳೆದ 30 ವರ್ಷಗಳಿಂದ ಹಕ್ಕೊತ್ತಾಯ ಆಗಿದೆ. 3 ವರ್ಷಗಳಿಂದ ನಿರಂತರ ಹೋರಾಟ ಮಾಡಿದ್ದೇವೆ. ನಮ್ಮ ಸಮಾಜದ ಋಣ ನಿಮ್ಮ ಮೇಲಿದೆ, ಮೊದಲು ಮೀಸಲಾತಿ ಕೊಡಿ ಎಂದು ಸಿದ್ದರಾಮಯ್ಯ ಅವರನ್ನು ಉದ್ದೇಶಿಸಿ ಆಗ್ರಹಿಸಿದರು.

ಸಿಎಂ ಜೊತೆ ಫೋನ್​ನಲ್ಲಿ ಸ್ವಾಮೀಜಿ ಮಾತು

ಕಾಲ್ನಡಿಗೆ ಸಂದರ್ಭ ಮಾಜಿ ಸಚಿವರಾದ ವಿನಯ್ ಕುಲಕರ್ಣಿ, ಸಿಸಿ ಪಾಟೀಲ್‌, ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ ಭಾಗಿಯಾಗಿದ್ದರು. ಇದೇ ವೇಳೆ‌ ಮಾಜಿ ಸಚಿವ ವಿನಯ್ ಕುಲಕರ್ಣಿ ತಮ್ಮ ಫೋನನಿಂದಲೇ ಸಿಎಂಗೆ ಕರೆ ಮಾಡಿ ಬಸವ ಜಯಮೃತ್ಯುಂಜಯ ಸ್ವಾಮೀಜಿ ಕೈಗೆ ಕೊಟ್ಟರು. ಈ ವೇಳೆ ಸಿಎಂ ಜೊತೆಗೆ ಸ್ವಾಮೀಜಿ ‌ಎರಡು ನಿಮಿಷ ಮಾತನಾಡಿದರು. ಸಿಎಂ ನಮಗೆ ಸಮಯ ನಿಗದಿ ಮಾಡಿ ತಿಳಿಸುವವರಗೂ ನಾವು ಹೋರಾಟ ಕೈ ಬಿಡಲ್ಲ ಎಂದು ಸ್ವಾಮೀಜಿ ಪಟ್ಟು ಹಿಡಿದರು.

ಇದನ್ನೂ ಓದಿ: ಮತ್ತೆ ಮುನ್ನಲೆಗೆ ಪಂಚಮಸಾಲಿ 2ಎ ಮೀಸಲಾತಿ ಕಿಚ್ಚು: ಸಿಎಂ ಜೊತೆ ಸಮುದಾಯದ ಮುಖಂಡರ ಸಭೆ

ಬಳಿಕ ಮಾತನಾಡಿದ ಜಯಮೃತ್ಯಂಜಯ ಸ್ವಾಮೀಜಿ, ಸಿಎಂ ನಮ್ಮ ಹೋರಾಟಕ್ಕೆ ಮಣಿದು ಸಭೆ ಕರೆದಿದ್ದಾರೆ ಎಂದರು. 2 ಬಾರಿ ಸಭೆ ಮಾಡುತ್ತೇವೆ ಎಂದು ಮಾತುಕೊಟ್ಟಿದ್ದಾರೆ ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ