ಹಾಲು, ಮೊಸರು ದರ ಏರಿಕೆ ಆದೇಶಕ್ಕೆ ಸಿಎಂ ಬೊಮ್ಮಾಯಿ ತಡೆ; ಸದ್ಯಕ್ಕೆ ಬೆಲೆ ಏರಿಕೆ ಇಲ್ಲ
ಹಾಲು, ಮೊಸರು ದರ ಏರಿಕೆ ಆದೇಶವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಡೆ ಹಿಡಿದಿದ್ದಾರೆ.
ಬೆಂಗಳೂರು: ಪ್ರತಿ ಲೀಟರ್ ಹಾಲು ಮತ್ತು ಮೊಸರಿನ ದರವನ್ನು 3ರೂಗೆ ಏರಿಕೆ ಮಾಡಿದ್ದ ಕೆಎಂಎಫ್‌ನ ಆದೇಶವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಡೆ ಹಿಡಿದಿದ್ದಾರೆ. ಬೆಲೆ ಏರಿಕೆ ಬಗ್ಗೆ ನ.20ರಂದು ನಡೆಯುವ ಸಭೆ ಬಳಿಕ ನಿರ್ಧಾರ ಮಾಡಲಾಗುತ್ತದೆ ಎಂದು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಮಾಹಿತಿ ನೀಡಿದ್ದಾರೆ. ಇಂದು (ನ. 14) ಬೆಳಿಗ್ಗೆ ಕೆಎಂಎಫ್ ಹಾಲಿನ ಮತ್ತು ಮೊಸರಿನ ದರವನ್ನು 3ರೂ ಗೆ ಏರಿಕೆ ಮಾಡಿ ಆದೇಶ ಹೊರಡಿಸಿತ್ತು. ಇದಾದ ಬಳಿಕ ಕಲಬುರಗಿಯ ಸೇಡಂನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಹಾಲಿನ ದರ ಏರಿಕೆ ಇಲ್ಲ, ನ.20ರ ನಂತರ ಸಭೆ ಮಾಡಿ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದಿದ್ದರು.
ಅಷ್ಟಕ್ಕೂ ಈ ಅವಸರದ ನಿರ್ಧಾರಗಳಿಗೆ ಕಾರಣವೇನು?
16 ಹಾಲು ಒಕ್ಕೂಟಗಳಿಂದ ಕೆಎಂಎಫ್ಗೆ ಮನವಿ
ರೈತರು ಸಂಕಷ್ಟದಲ್ಲಿದ್ದಾರೆ ಹೀಗಾಗಿ ಪ್ರತಿ ಲೀಟರ್ಗೆ 3 ರೂಗೆ ಏರಿಕೆ ಮಾಡಬೇಕೆಂದು 16 ಜಿಲ್ಲಾ ಹಾಲು ಒಕ್ಕೂಟಗಳು ಕೆಎಂಎಫ್ಗೆ ಮನವಿ ಮಾಡಿದ್ದವು. ಅಲ್ಲದೆ ದರ ಏರಿಕೆಯ ಹಣವನ್ನು ರೈತರಿಗೆ ನೀಡುವುದಾಗಿ ಹೇಳಿದ್ದವು. ಈ ಕುರಿತು ಹಿಂದೊಮ್ಮೆ ಬೆಂಗಳೂರಿನಲ್ಲಿ ಬಾಲಚಂದ್ರ ಜಾರಕಿಹೊಳಿ ಅಧ್ಯಕ್ಷತೆಯಲ್ಲಿ ಕೆಎಂಎಫ್ ವಾರ್ಷಿಕ ಸರ್ವ ಸದಸ್ಯರ ಸಾಮಾನ್ಯ ಸಭೆ ನಡೆದಿತ್ತು. ಸಭೆಯಲ್ಲಿ ಈ ಬಗ್ಗೆ ಸರ್ವಾನುಮತದ ನಿರ್ಣಯ ಕೈಗೊಳ್ಳಲಾಗಿತ್ತು. ಕೆಎಂಎಫ್‌ನ ಎಲ್ಲ 16 ಜಿಲ್ಲಾ ಹಾಲು ಒಕ್ಕೂಟಗಳು ಹಾಲಿನ ದರ ಹೆಚ್ಚಳ ಮಾಡುವುದಕ್ಕೆ ಬೆಂಬಲ ವ್ಯಕ್ತಪಡಿಸಿದ್ದವು.
ಸಚಿವ ಎಸ್.ಟಿ. ಸೋಮಶೇಖರ್ ಭರವಸೆ
ಹಾಲಿನ ಬೆಲೆ ಹೆಚ್ಚಳ ಸೇರಿದಂತೆ ಪ್ರಮುಖ ನಿರ್ಧಾರ ತೆಗೆದುಕೊಳ್ಳುವಾಗ ರಾಜ್ಯ ಸರ್ಕಾರದ ಅನುಮೋದನೆ ಪಡೆದುಕೊಳ್ಳಬೇಕು. ಹೀಗಾಗಿ ಈ ಪ್ರಸ್ತಾವನೆಯನ್ನು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಅವರ ಕಿವಿಗು ಹಾಕಲಾಗಿತ್ತು. ಹೀಗಾಗಿ ಎಸ್.ಟಿ. ಸೋಮಶೇಖರ್ ವಿಧಾನಪರಿಷತ್ನಲ್ಲಿ ಲೀಟರ್ ಹಾಲಿಗೆ 3 ರೂ. ಹೆಚ್ಚಳ ಮಾಡಲು ಕೆಎಂಎಫ್ನಲ್ಲೂ ತೀರ್ಮಾನ ಆಗಿದೆ. ತಕ್ಷಣ ತೀರ್ಮಾನ ತೆಗೆದುಕೊಳ್ಳಲು ಸಿಎಂ ಗಮನಕ್ಕೆ ತರುವೆ ಎಂದಿದ್ದರು.
ಭರವಸೆ ನೀಡಿ 8 ತಿಂಗಳು ಕಳೆದರು ಸರ್ಕಾರ ಹಾಲಿನ ದರ ಏರಿಕೆ ಬಗ್ಗೆ ಚಕಾರ ಎತ್ತಿರಲಿಲ್ಲ. ಇದರಿಂದ ಸರ್ಕಾರ ವಿಳಂಬ ನೀತಿ ಅನುಸರಿಸುತ್ತಿರುವುದರಿಂದ ಇರುವ ಅಧಿಕಾರವನ್ನು ಬಳಸಿಕೊಂಡು ದರ ಹೆಚ್ಚಳದ ಆದೇಶ ಮಾಡಬೇಕು ಎಂದು ಒಕ್ಕೂಟಗಳು ಅಧ್ಯಕ್ಷರ ಮೇಲೆ ಒತ್ತಡ ಹೇರಿದ್ದವು. ನಂತರ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೋಳಿ ಅಕ್ಟೋಬರ್ 31 ರಂದು ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಹೂಲಿಕಟ್ಟಿ ಗ್ರಾಮದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿ ಶೀಘ್ರದಲ್ಲೇ ಹಾಲಿನ ದರ ಏರಿಸುವುದಾಗಿ ಹೇಳಿದ್ದರು. ಹೇಳಿಕೆ ನೀಡಿ 15 ದಿವಸ ಕಳೆಯುವುದರ ಒಳಗಾಗಿ ಕೆಎಂಎಫ್ ಹಾಲಿನ ದರವನ್ನು ಏರಿಕೆಯಾಗಿತ್ತು. ಆದರೆ ಈಗ ಕೆಎಂಎಫ್ ನಿರ್ಧಾರಕ್ಕೆ ಸಿಎಂ ಬೊಮ್ಮಾಯಿ ತಡೆಯೊಡ್ಡಿದ್ದಾರೆ.
Published On - 10:04 pm, Mon, 14 November 22