ಒಡವೆ ಅಂಗಡಿ ಮಾಲಿಕರು, ಪೊಲೀಸರ ನಡುವೆ ಕಿರಿಕ್; ಮಫ್ತಿಯಲ್ಲಿ ಬಂದು ವರ್ತಕರ ಮೇಲೆ ದರ್ಪ
ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ನಗರದ ಪೇಟೆ ಬೀದಿಯಲ್ಲಿ ನವಜ್ಯೋತಿ ಜ್ಯುವೆಲರ್ಸ್ ಅಂಗಡಿ ಮಾಲಿಕ ಮತ್ತು ಪೊಲೀಸರ ನಡುವೆ ಗಲಾಟೆಯಾಗಿದೆ.
ಅಲ್ಲಿ ಪೊಲೀಸರು ಹಾಗೂ ಚಿನ್ನದಂಗಡಿ ಮಾಲೀಕರ ನಡುವೆ ಟಗಾಫರ್ ಶುರುವಾಗಿತ್ತು. ಮಫ್ತಿಯಲ್ಲಿ ಬಂದಿದ್ದ ಪೊಲೀಸರ ಮೇಲೆ ಚಿನ್ನದಂಗಡಿ ಮಾಲೀಕರು ರೊಚ್ಚಿಗೆದ್ದಿದ್ದರು. ಅಷ್ಟಕ್ಕೂ ಅಲ್ಲಿ ನಡೆದಿದ್ದಾದರೂ ಏನೂ ಅಂತೀರಾ.? ಈ ಸ್ಟೋರಿ ಓದಿ
ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ನಗರದ ಪೇಟೆ ಬೀದಿಯಲ್ಲಿ ನವಜ್ಯೋತಿ ಜ್ಯುವೆಲರ್ಸ್ ಅಂಗಡಿ ಇದೆ. ಈ ಅಂಗಡಿಗೆ ಅವಲಹಳ್ಳಿ ಪೊಲೀಸರು ಪ್ರಕರಣವೊಂದರಲ್ಲಿ ಮಹಿಳೆ ಮಾರಾಟ ಮಾಡಿದ್ದ ಚಿನ್ನವನ್ನು ರಿಕವರಿ ಮಾಡಿಕೊಳ್ಳಲು ಬಂದಿದ್ದರು. ಈ ವೇಳೆ ಪೊಲೀಸರ ನಡತೆಗೆ ಒಡವೆ ಅಂಗಡಿ ಮಾಲೀಕರು ಗರಂ ಆಗಿದ್ದು, ಪೊಲೀಸರು ಹಾಗೂ ವರ್ತಕರ ಸಂಘದವರ ನಡುವೆ ಮಾತಿಗೆ ಮಾತು ಬೆಳೆದು ಕಿರಿಕ್ ಶುರುವಾಗಿತ್ತು.
ಈ ಪ್ರಕರಣ ಒಂದಡೆಯಾದರೆ ಕಳೆದ ಮೂರು ದಿನಗಳ ಹಿಂದೆಯೂ ಸಹ ನಂದಗುಡಿ ಪೊಲೀಸರು ಮಫ್ತಿಯಲ್ಲಿ ಬಂದು ನೆಲಮಂಗಲ ನಗರದ ಧನಲಕ್ಷ್ಮಿ ಜ್ಯುವೆಲ್ಲರ್ಸ್ ಅಂಗಡಿಗೆ ನುಗ್ಗಿ ಒಂದು ಲಕ್ಷ ನಗದು ವಸೂಲಿ ಮಾಡಿದ್ದರು ಎಂದು ಆರೋಪಿಸಲಾಗಿದೆ. ಪದೇ ಪದೇ ಪೊಲೀಸರು ಮಫ್ತಿಯಲ್ಲಿ ಬರುವುದಲ್ಲದೇ ಯಾವುದೇ ಕೋರ್ಟ್ ನೋಟೀಸ್ ನೀಡುವುದಿಲ್ಲ. ಅಂಗಡಿ ಬಳಿಗೆ ಬಂದು ಇವರು ಚಿನ್ನವನ್ನು ನಿಮ್ಮಲ್ಲಿ ಮಾರಾಟ ಮಾಡಿದ್ದಾರೆ ಎಂದು ಬೆದರಿಕೆ ಹಾಕುತ್ತಾರೆ. ಅಂಗಡಿಯವರು ಕೊಂಡುಕೊಂಡಿಲ್ಲ ಎಂದರೂ ಮಾತು ಕೇಳದೇ, ಪದೆ ಪದೇ ಹಿಂಸೆ ನೀಡುತ್ತಿದ್ದಾರೆ ಎನ್ನುತ್ತಾರೆ ಚಿನ್ನ ಬೆಳ್ಳಿ ವರ್ತಕರ ಸಂಘದ ಅಧ್ಯಕ್ಷ.
ನಂತರ ವರ್ತಕರ ಸಂಘದವರು ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಬಳಿಕ ಅವಲಹಳ್ಳಿ ಠಾಣಾ ಎಸ್ಐ ನಂದೀಶ ಹಾಗೂ ಮಫ್ತಿಯಲ್ಲಿದ್ದ ಸಿಬ್ಬಂದಿಗಳನ್ನು ಕರೆಯಿಸಿ ಮಾತುಕತೆ ನಡೆಸಿದ್ದು, ಇನ್ನು ಮುಂದೆ ಎನಾದರೂ ಇದ್ದಲ್ಲಿ ಕೋರ್ಟ್ ಆದೇಶದ ಪ್ರತಿಯೊಂದಿಗೆ ಬಂದು ದಸ್ತಗಿರಿ ಮಾಡುವಂತೆ ಆಗ್ರಹಿಸಿದ್ದಾರೆ.
ವರದಿ- ವಿನಾಯಕ್ ಗುರವ್ ಟಿವಿ9 ನೆಲಮಂಗಲ