
ಬೆಂಗಳೂರು: ಆಫ್ಲೈನ್ ಕ್ಲಾಸ್ ಮತ್ತು ನಿಗದಿತ ಪರೀಕ್ಷೆಗಳಲ್ಲಿ ಯಾವುದೇ ಬದಲಾವಣೆಯಿಲ್ಲ. ಕೊವಿಡ್ ಕಾರಣಕ್ಕಾಗಿ ಪದವಿ ಕೋರ್ಸ್ಗಳ ಆಫ್ಲೈನ್ ಕ್ಲಾಸ್ ನಡೆಸಲಾಗುತ್ತದೆ. ಈಗಾಗಲೇ ನಿಗದಿಯಾಗಿರುವ ಪರೀಕ್ಷೆಗಳಲ್ಲಿ ಬದಲಾವಣೆಗಳಿಲ್ಲ. ನಿಗದಿಯಂತೆ ಪರೀಕ್ಷೆಗಳು ಮತ್ತು ಆಫ್ಲೈನ್ ಕ್ಲಾಸ್ ನಡೆಯುತ್ತದೆ ಎಂದು ಉನ್ನತ ಶಿಕ್ಷಣ ಸಚಿವ ಸಿ.ಎನ್.ಅಶ್ವತ್ಥ್ ನಾರಾಯಣ ಮಾಧ್ಯಮ ಪ್ರಕಟನೆಯಲ್ಲಿ ಸ್ಪಷ್ಟನೆ ನೀಡಿದ್ದಾರೆ.
ಕೊವಿಡ್ ನಿಯಮ ಪಾಲಿಸುವಂತೆ ಎಲ್ಲರಿಗೂ ಸೂಚಿಸಿದ್ದೇವೆ. ಸರಕಾರ ಹೊರಡಿಸಿರುವ ಮಾದರಿ ವೇಳಾಪಟ್ಟಿಯಂತೆ ವಿಶ್ವವಿದ್ಯಾಲಯಗಳು ನಿಗದಿಪಡಿಸಿರುವ ವೇಳಾಪಟ್ಟಿ ಅನುಸಾರ ಹಾಲಿ ನಡೆಯುತ್ತಿರುವ ಆಫ್ ಲೈನ್ ತರಗತಿಗಳನ್ನು ಹಾಗೆಯೇ ಮುಂದುವರಿಸಲಾಗುವುದು. ಕೊವಿಡ್ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲಿಸಲು ಎಲ್ಲಾ ವಿಶ್ವವಿದ್ಯಾಲಯಗಳಿಗೆ ಹಾಗೂ ಮಹಾವಿದ್ಯಾಲಯಗಳಿಗೆ ಸೂಚನೆ ನೀಡಲಾಗಿದೆ ಎಂದಿದ್ದಾರೆ.
ವಿಶ್ವವಿದ್ಯಾಲಯಗಳು, ಕಾಲೇಜುಗಳು, ಪಾಲಿಟೆಕ್ನಿಕ್ಗಳು ಮತ್ತು ಇನ್ನಿತರೆ ಶಿಕ್ಷಣ ಸಂಸ್ಥೆಗಳಲ್ಲಿ 2020-21ನೇ ಸಾಲಿನ ಶೈಕ್ಷಣಿಕ ಚಟುವಟಿಕೆಗಳ ಮೇಲೆ ಎರಡನೇ ಅಲೆ ಬೀರುವ ಪರಿಣಾಮಗಳ ಮಹತ್ವದ ಸಮಾಲೋಚನೆ ನಡೆಸಿದ್ದೇನೆ. ಮುಖ್ಯಮಂತ್ರಿ ಅವರ ಜತೆಗೂ ಚರ್ಚಿಸಿದ್ದೇನೆ ಎಂದು ಹೇಳಿದ್ದಾರೆ.
ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಇಲಾಖೆಯಡಿಯಲ್ಲಿ ನಡೆಸುತ್ತಿರುವ ಹಾಸ್ಟೆಲ್ಗಳನ್ನು ಮುಂದುವರಿಸಲು ಆಯಾ ಇಲಾಖೆಗಳನ್ನು ಕೋರಲಾಗುವುದು ವಿಶ್ವವಿದ್ಯಾಲಯಗಳ ಕ್ಯಾಂಪಸ್ಗಳಲ್ಲಿ, ಮಹಾವಿದ್ಯಾಲಯಗಳಲ್ಲಿ ಹಾಗೂ ಹಾಸ್ಟೆಲ್ಗಳಲ್ಲಿ ಕೊವಿಡ್ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಆಫ್ಲೈನ್ ಬದಲು ಆನ್ಲೈನ್ ಪರೀಕ್ಷೆ ನಡೆಸಿ.. ಸರ್ಕಾರಕ್ಕೆ ಪೋಷಕರ ಒತ್ತಾಯ
Published On - 2:25 pm, Tue, 23 March 21