ಉಪೇಂದ್ರ ಹೇಳಿಕೆಗೆ ಹೆಚ್​ ಸಿ‌ ಮಹದೇವಪ್ಪ ಕಿಡಿ, ಕ್ರಮ ಕೈಗೊಳ್ಳಲಾಗುವುದು ಎಂದ ಸಮಾಜ ಕಲ್ಯಾಣ ಸಚಿವ

ಉಪೇಂದ್ರ ಫೇಸ್​ಬುಕ್​ ಲೈವ್​ನಲ್ಲಿ ನೀಡಿದ ಒಂದು ಹೇಳಿಕೆ, ಬಳಸಿದ ಪದ ಈಗ ವಿವಾದಕ್ಕೆ ಈಡಾಗಿದೆ. ಉಪೇಂದ್ರ ಆಕ್ಷೇಪಾರ್ಹ ಪದ ಬಳಕೆ ಮಾಡಿದ್ದಾರೆಂದು ಆರೋಪಿಸಿ ಎರಡು ಪ್ರಕರಣಗಳು ದಾಖಲಾಗಿದ್ದು, ಇದು ತೀವ್ರ ಸ್ವರೂಪ ಪಡೆದುಕೊಂಡಿದೆ. ಇನ್ನು ಈ ಬಗ್ಗೆ ಸಮಾಜ ಕಲ್ಯಾಣ ಸಚಿವ ಹೆಚ್.ಸಿ‌ ಮಹದೇವಪ್ಪ ಸರಣಿ ಟ್ವೀಟ್​ ಮೂಲಕ ಉಪೇಂದ್ರ ವಿರುದ್ಧ ಕಿಡಿಕಾರಿದ್ದಾರೆ. ಅಲ್ಲದೇ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.

ಉಪೇಂದ್ರ ಹೇಳಿಕೆಗೆ ಹೆಚ್​ ಸಿ‌ ಮಹದೇವಪ್ಪ ಕಿಡಿ, ಕ್ರಮ ಕೈಗೊಳ್ಳಲಾಗುವುದು ಎಂದ ಸಮಾಜ ಕಲ್ಯಾಣ ಸಚಿವ
ಹೆಚ್​ಸಿ ಮಹಾದೇವಪ್ಪ, ಉಪೇಂದ್ರ
Follow us
|

Updated on:Aug 14, 2023 | 11:33 AM

ಬೆಂಗಳೂರು, (ಆಗಸ್ಟ್ 14): ಸಾಮಾಜಿಕ ಜಾಲತಾಣದಲ್ಲಿ (Social Media) ಮಾತನಾಡುವಾಗ ಬಳಸಿದ ಹಳೇ ಗಾದೆ ಮಾತು ನಟ ಉಪೇಂದ್ರಗೆ(Upendra) ಸಂಕಷ್ಟ ತಂದಿಟ್ಟಿದೆ. ಉಪೇಂದ್ರ ಆಡಿದ್ದ ಆ ಮಾತು ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಅಲ್ಲದೇ ರಿಯಲ್ ಸ್ಟಾರ್ ಉಪೇಂದ್ರ ವಿರದ್ಧ ಪ್ರತ್ಯೇಕ ಎರಡು ಪ್ರಕರಣಗಳು ದಾಖಲಾಗಿವೆ. ಉಪೇಂದ್ರ ನಾಲಗೆಯಲ್ಲಿ ಬಂದ ಈ ಪದದ ವಿರುದ್ಧ ಈಗ ದಲಿತ ಸಮುದಾಯಗಳು ಸಿಡಿದೆದ್ದಿವೆ. ಇನ್ನು ಸಮಾಜ ಕಲ್ಯಾಣ ಸಚಿವ ಹೆಚ್.ಸಿ‌ ಮಹದೇವಪ್ಪ ಆಕ್ರೋಶ ವ್ಯಕ್ತಪಡಿಸಿದ್ದು, ಉಪೇಂದ್ರ ಅವರು ಒಬ್ಬ ಖ್ಯಾತ ನಟ, ನಿರ್ಮಾಪಕ ಮತ್ತು ಒಂದು ನಿರ್ದಿಷ್ಟ ರಾಜಕೀಯ ಪಕ್ಷದ ಮೂಲಕ ಸಾರ್ವಜನಿಕ ಜೀವನದಲ್ಲಿ ಇರಲು ಬಯಸುತ್ತಿರುವ ವ್ಯಕ್ತಿ. ಆದರೆ ಸ್ವಾತಂತ್ರ್ಯ ಬಂದು 75 ವರ್ಷ ಕಳೆದರೂ ಅವರು ಜಾತಿ ಹೆಸರನ್ನು ಕರೆಯುತ್ತಿರುವುದನ್ನು ನೋಡಿದರೆ ಇದು ಸಮುದಾಯಕ್ಕೆ ಮಾತ್ರವಲ್ಲದೇ ಸಂವಿಧಾನಕ್ಕೂ ಮಾಡಿದ ಅಪಚಾರ ಆಗಿದೆ ಎಂದು ಸರಣಿ ಟ್ವೀಟ್ ಮೂಲಕ ಕಿಡಿಕಾರಿದ್ದಾರೆ.

ಇನ್ನು ಸೂಕ್ಷ್ಮವಾಗಿ ಗಮನಿಸುವಾಗ ಉಪೇಂದ್ರ ಅವರು ತಮ್ಮ ಮಾತುಗಳಿಗೆ ಪೂರಕವಾಗಿ ಆ ಪದವನ್ನು ಬಳಸಿರುವುದೇ ಅಪ್ರಸ್ತುತ. ಜೊತೆಗೆ ಅವರು ಕ್ಷಮೆಯಾಚನೆಯಲ್ಲೂ ಸಹ ನಾನೂ ಕೂಡಾ ಬಡತನದಿಂದ ಬಂದಿದ್ದೇನೆ ಎಂದು ಹೇಳುತ್ತಿದ್ದಾರೆ. ಆದರೆ ಬಡತನವೇ ಬೇರೆ ಜಾತಿ ಆಧಾರಿತವಾದ ಸಾಮಾಜಿಕ ಅಸಮಾನತೆಯೇ ಬೇರೆ ಎಂಬ ಸಂಗತಿಯನ್ನು ಅವರು ಅರಿಯಬೇಕು, ಹೀಗಾಗಿ ಸಾರ್ವಜನಿಕ ಜೀವನದಲ್ಲಿ ಇರುವ ಅವರು ಈ ದೇಶದ ಅಸಮಾನತೆ ಮತ್ತು ನೋವಿನ ಚರಿತ್ರೆಯನ್ನೇ ತಿಳಿಯದಿದ್ದ ಮೇಲೆ ಇವರ ಸಮಾಜ ಬದಲಾಯಿಸುವಂತಹ ಮಾತುಗಳಿಗೆ ಯಾವ ಅರ್ಥವಿಲ್ಲ ಎಂದು ಸಹಜವಾಗಿ ಅನಿಸುತ್ತಿದೆ ಎಂದಿದ್ದಾರೆ.

ಇದನ್ನೂ ಓದಿ: ಗಂಭೀರ ಸ್ವರೂಪ ಪಡೆದುಕೊಂಡ ಉಪೇಂದ್ರ ವಿವಾದ; ತಕ್ಷಣ ವಿಚಾರಣೆಗೆ ಹಾಜರಾಗಲು ನೋಟಿಸ್ 

ಸಚಿವ ಮಹಾದೇವಪ್ಪ ಮಾಡಿರುವ ಟ್ವೀಟ್​ ಹೀಗಿದೆ

ಈಗಾಗಲೇ ಬಹುತೇಕ ದಲಿತ ಸಂಘಟನೆಗಳು ಈ ಕುರಿತಂತೆ ಮನವಿ ಸಲ್ಲಿಸುತ್ತಿರುವ ಕಾರಣ ಶೋಷಿತ ಸಮುದಾಯಗಳನ್ನು Taken for granted ಆಗಿ ಉಲ್ಲೇಖಿಸುವ ಈ ಉಪೇಂದ್ರರ ಪ್ರವೃತ್ತಿಯನ್ನು ನಿಲ್ಲಿಸಲು ಮತ್ತು ಸಮುದಾಯಗಳಿಗೆ ಸಂವಿಧಾನದಲ್ಲೇ ಇರುವ ಘನತೆಯನ್ನು ಎತ್ತಿ ಹಿಡಿಯುವ ನಿಟ್ಟಿನಲ್ಲಿ ಪೂರಕ ಕ್ರಮ ಕೈಗೊಳ್ಳಲಾಗುವುದು ಎಂದು ಟ್ವೀಟ್ ಮಾಡಿದ್ದಾರೆ.

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

Published On - 11:31 am, Mon, 14 August 23