ಹಲೋ ಅಂದ್ರೆ ಆ ಕಡೆಯಿಂದ ಹಲೋ ಅಂತಾರೆ: ಹನಿಟ್ರ್ಯಾಪ್ ಬಗ್ಗೆ ಡಿಕೆಶಿ ಹೇಳಿಕೆಗೆ ರಾಜಣ್ಣ ಹೇಳಿದ್ದಿಷ್ಟು
ಸಚಿವ ಕೆ.ಎನ್.ರಾಜಣ್ಣ ಹಾಗೂ ಬಿಜೆಪಿ ಶಾಸಕ ಮುನಿರತ್ನ ಮಾಡಿರುವ ಹನಿಟ್ರ್ಯಾಪ್ ಆರೋಪಕ್ಕೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಕೌಂಟರ್ ನೀಡಿದ್ದಾರೆ. ನೀವು ಹಲೋ ಎನ್ನದೆ ಅವರು ಹಲೋ ಅಂತಾರಾ? ಹನಿಟ್ರ್ಯಾಪ್ ಮಾಡೋದಲ್ಲ.. ಹನಿಟ್ರ್ಯಾಪ್ ಆಗೋದು ಎಂದು ಕಿಡಿಕಾರಿದ್ದಾರೆ. ಇದೀಗ ಇದಕ್ಕೆ ರಾಜಣ್ಣ ಪ್ರತಿಕ್ರಿಯಿಸಿ ಕೆಲ ಅಂಶಗಳನ್ನು ಬಿಚ್ಚಿಟ್ಟಿದ್ದಾರೆ.

ಬೆಂಗಳೂರು (ಮಾರ್ಚ್ 21): ರಾಜ್ಯ ರಾಜಕಾರಣದಲ್ಲಿ ಹನಿಟ್ರ್ಯಾಪ್ ಭಾರೀ ಸಂಚಲನ ಮೂಡಿಸಿದೆ. ಕೇವಲ ಸದನ ಒಳಗಷ್ಟೇ ಅಲ್ಲ. ಸದನದ ಹೊರಗೂ ಹನಿಟ್ರ್ಯಾಪ್ ವಿಚಾರ ಕೋಲಾಹಲವನ್ನೇ ಎಬ್ಬಿಸಿದೆ. ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರ ನಡುವೆ ಮಾತಿನ ಯುದ್ಧವೇ ನಡೆದಿದೆ. ಇನ್ನು ಈ ಹನಿಟ್ರ್ಯಾಪ್ ಯತ್ನ ನಡೆದಿತ್ತು ಎಂದು ಹೇಳಿಕೊಂಡಿರುವ ಸಚಿವ ರಾಜಣ್ಣ ಮಾತನಾಡಿ, ‘ಹಲೋ ಅಂದ್ರೆ ಆ ಕಡೆಯಿಂದ ಹಲೋ ಅಂತಾರೆಂಬ’ ಡಿಕೆ ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯಿಸಿದ್ದು, ಅದರ ಬಗ್ಗೆ ನನಗೆ ಗೊತ್ತಿಲ್ಲ, ಅದು ಅವರ ಅನುಭವ ಹೇಳಿರುತ್ತಾರೆ. ನಾನ್ಯಾರಿಗೂ ಕೆಟ್ಟದ್ದು ಬಯಸಿಲ್ಲ, ನಮಗಾದ ರೀತಿ ಯಾರಿಗೂ ಆಗಬಾರದು ಎಂದಿದ್ದಾರೆ.
ತುಮಕೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿ ರಾಜಣ್ಣ, ಸದನದಲ್ಲಿ ನಾನೊಂದು ಹೇಳಿಕೆ ಮಾಡಿದ್ದೇನೆ. ಅದಕ್ಕೆ ಬದ್ಧ ಇದ್ದೇನೆ. ಏನೇನು ಕಾನೂನು ಕ್ರಮ ತೆಗೆದುಕೊಳ್ಳಬೇಕಾಗಿದೆ. ಅದಕ್ಕೆ ಗೃಹ ಮಂತ್ರಿಗಳನ್ನ ಭೇಟಿ ಮಾಡಿ ಲಿಖಿತ ರೂಪದಲ್ಲಿ ದೂರು ಕೊಡುತ್ತೇನೆ. ಮೂರು ದಿನ ಬ್ಯೂಸಿ ಇದ್ದೇನೆ. ನಾಳೆ(ಮಾರ್ಚ್ 22) ಕೋಲಾರಕ್ಕೆ ಹೋಗುತ್ತಿದ್ದೇನೆ. ಮಾರ್ಚ್ 23ರಂದು ತುರುವೇಕೆರೆ, ಅರಸೀಕೆರೆ ಕಾರ್ಯಕ್ರಮ ಫಿಕ್ಸ್ ಆಗಿದೆ. ಹೀಗಾಗಿ ಮೂರು ದಿನಗಳ ಬಳಿಕ ಗೃಹ ಸಚಿವರನ್ನ ಭೇಟಿಯಾಗಿ ದೂರು ನೀಡುತ್ತೇನೆ ಎಂದು ಸ್ಪಷ್ಟಪಪಡಿಸಿದರು. ಇನ್ನು ಇದೇ ವೇಳೆ ನನಗೆ ಮಾಟ ಮಂತ್ರ ನಿಂಬೆಹಣ್ಣು, ಹೂ ಹಾಕೋದು, ಮೊಳೆ ಹಾಕೋದು ಅದೆಲ್ಲಾ ಮಾಡುತ್ತಾರೆ ಎಂದು ಅಸಮಾಧಾನ ಹೊರಹಾಕಿದರು.
ಇದನ್ನೂ ಓದಿ: ಹನಿ ಟ್ರ್ಯಾಪ್ ಪ್ರಕರಣ ಹಿಟ್ ಅಂಡ್ ರನ್ ಆಗಬಾರದು, ಟಾರ್ಗೆಟ್ ಆಗಿರುವವರು ದೂರು ಸಲ್ಲಿಸಲಿ: ಡಿಕೆ ಶಿವಕುಮಾರ್
ಡಿಕೆಶಿ ಹಲೋ ಮಾತಿ ರಾಜಣ್ಣ ಹೇಳಿದ್ದೇನು?
ಇನ್ನು ಡಿಕೆ ಶಿವಕುಮಾರ್ ಹಲೋ ಅಂದಾಗ ಆ ಕಡೆಯಿಂದ ಹಲೋ ಅಂತಾರೆ ಅನ್ನೋ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ರಾಜಣ್ಣ, ಹೌದಾ ಅದು ನನಗೆ ಗೊತ್ತಿಲ್ಲ, ಅವರವರ ಅನುಭವ ಅವರು ಹೇಳುತ್ತಾರೆ. ನಾನು ಯಾವತ್ತು ಯಾರಿಗೂ ಕೆಟ್ಟದ್ದು ಬಯಸಿಲ್ಲ. ಯಾರು ಕೆಟ್ಟದ್ದಯ ಬಯಸುತ್ತಾರೋ ಅವರು ಉದ್ದಾರ ಆಗಿಲ್ಲ, ನೂರಾರು ಉದಾಹರಣೆಗಳಿವೆ. ಬೇರೆಯವರಿಗೆ ಕೆಟ್ಟದು ಮಾಡಿ ನನ್ನಗೇನು ಲಾಭ ಆಗಬೇಕಿಲ್ಲ. ನಮಗಾದ ರೀತಿ ಬೇರೆಯವರಿಗೆ ಆಗಬಾರದು ಎಂದರು.
ರಾಜೇಂದ್ರ ಸಿಎಂ ಭೇಟಿ ಮಾಡಬಹುದು. ನಾನು ಮೂರು ನಾಲ್ಕು ದಿನ ಬೆಂಗಳೂರಿಗೆ ಹೋಗಲ್ಲ. ಅವಶ್ಯಕತೆ ಬಿದ್ದರೆ ಸಿಎಂ ಭೇಟಿ ಮಾಡುತ್ತೇನೆ. ಗೃಹ ಸಚಿವರನ್ನ ಭೇಟಿ ಮಾಡೇ ಮಾಡುತ್ತೇನೆ. ಹನಿಟ್ರ್ಯಾಪ್ ವಿಚಾರವಾಗಿ ಸಿಎಂ ಅನ್ನು ಭೇಟಿ ಮಾಡಿಲ್ಲ. ಸಿಎಂ ಬಂದು 3 ಗಂಟೆಗೆ ಉತ್ತರ ಕೊಡ್ಬೇಕಿತ್ತಲ್ಲ, ಅದಕ್ಕೂ ಮೊದಲು ಭೇಟಿ ಮಾಡಿಲು ಹೋಗಿದ್ದೆ. ಅಲ್ಲಿ ಏನು ಚರ್ಚೆ ಆಗಲಿಲ್ಲ. 12.30ಕ್ಕೆ ಸಿಎಂ ಮನೆಗೆ ಹೋಗಿದ್ದೆ. ಅವರು ಏನೋ ಓದುತ್ತಿದ್ದರು. ದೇವರು ನಿನಗೆ ಏನು ಬುದ್ದಿ ಕೊಡುತ್ತೋ ಆ ರೀತಿ ಮಾಡು ಅಂತ ಹೇಳಿದ್ರು ಎಂದರು.
ಇದನ್ನೂ ಓದಿ: ರಾಜಣ್ಣ ಮಾತ್ರವಲ್ಲಇನ್ನೂ ಮೂರು ಮಂತ್ರಿಗಳಿಗೂ ಹನಿಟ್ರ್ಯಾಪ್: ಗ್ಯಾಂಗ್ನ ಹಿಡಿದು ಬಾಯ್ಬಿಡಿಸಿದ ಸಚಿವ!
ಎಲ್ಲರ ಮುಂದೆ ಏನು ಹೇಳಲು ಬಯಸಲ್ಲ
ಮೂರು ತಿಂಗಳಿಂದ ಅಲ್ಲ, ಒಂದೂವರೆ ತಿಂಗಳಿಂದ ಪ್ರಯತ್ನ ನಡೆಯುತ್ತಿದೆ. ಏನೇನು ಕೃತ್ಯ ನಡೆದಿದೆ ಅಂತ ವಿವರವಾಗಿ ಹೇಳಿಕೆಯಲ್ಲಿ ಕೊಡುತ್ತೇನೆ. ಎಲ್ಲರ ಮುಂದೆ ಏನು ಎತ್ತ ಅಂತ ಹೇಳಲು ಬಯಸಲ್ಲ. ಎಲ್ಲೋ ಆಗಿದೆ, ಆಗಿರುವುದನ್ನು ಎಲ್ಲ ಹೇಳುತ್ತೇನೆ. ಸತೀಶ್ ಜಾರಕಿಹೊಳಿ ತೀವ್ರವಾಗಿ ತೆಗೆದುಕೊಳ್ಳಬೇಕು ಎಂದು ಹೇಳಿದ್ದಾರೆ. ಯಾವ ರೀತಿ ತೀವ್ರತೆ ಅಂತ ಅವರ ಬಾಯಿಂದಲ್ಲೇ ಕೇಳಿ. ಯಾರು ಮಾಡಿದ್ದಾರೆ ಅಂತ ನಾನು ಹೇಳಲಿಕ್ಕೆ ಸಾಧ್ಯವಿಲ್ಲ. ರಮೇಶ್ ಜಾರಕಿಹೊಳಿ, ಹಾಸನದಲ್ಲಿ ರೇವಣ್ಣ ಪ್ರಜ್ವಲ್ ರೇವಣ್ಣ ಮೇಲೆ ಏಕೆ ಟಾರ್ಗೆಟ್ ಮಾಡಿದ್ರು ಅಂತ ಹೇಳೋದು. ಒಂದೊಂದು ಉದ್ದೇಶ ಇಟ್ಟುಕೊಂಡು ಮಾಡಿರುತ್ತಾರೆ. ನನ್ನ ಮೇಲಿನ ಉದ್ದೇಶ ಏನಂತ ಗೊತ್ತಿಲ್ಲ ಎಂದು ಹೇಳಿದರು.
ನನ್ನ ಮೇಲೆ ಲೋಪ ಇದೆ ಅಂದ್ರೆ ನಂಬಬಾರದು
ತನಿಖೆಯಲ್ಲಿ ಗೊತ್ತಾಗಬೇಕು, ಗೊತ್ತು ಪಡಿಸಬೇಕು. ತನಿಖೆಯ ಸ್ವರೂಪ ಸರ್ಕಾರಕ್ಕೆ ಬಿಟ್ಟ ವಿಚಾರ. ಗೃಹ ಸಚಿವರು ಹಿರಿಯ ಅಧಿಕಾರಿಗಳ ಜೊತೆಗೆ ಸಭೆ ಮಾಡಿ ತನಿಖೆ ಮಾಡಿದ್ರೆ ಸೂಕ್ತ. ಇದರಲ್ಲಿ ಇವರು, ಅವರು ಸೇರಿದ್ದಾರೆ ಅಂತ ನಿರ್ದಿಷ್ಟವಾಗಿ ಹೇಳಲು ಬರಲ್ಲ. ಯಾರಿದ್ದಾರೆ ಎಂದು ಸತ್ಯ ಹೊರಗೆ ಬರಬೇಕು. ಹೈಕಮಾಂಡ್ ಗೆ ಏಕೆ ದೂರು ಕೊಡಬೇಕು ಅಂದ್ರೆ, ಯಾರಾದ್ರೂ ಮುಂದೆ ಹೈಕಮಾಂಡ್ ಗೆ ಸಿಡಿ ತಗೊಂಡು ಹೋಗಿ ಕೊಟ್ಟರೆ, ರಾಜಣ್ಣ ಮೊದಲೇ ಹೇಳಿದ್ರು ಅಂತ ಗೊತ್ತಿರಬೇಕಲ್ಲ. ನಾನು ಯಾವ ರೀತಿ ಲೋಪ ಎಸಗಿಲ್ಲ. ನನ್ನ ಮೇಲೆ ಯಾವುದಾದ್ರೂ ಲೋಪ ಇದೆ ಅಂದ್ರೆ ನಂಬಬಾರದು ಎಂದು ತಿಳಿಸಿದರು.
ನನಗೆ ಮಾಟ ಮಂತ್ರ ಮಾಡ್ತಾರೆ ಎಂದ ರಾಜಣ್ಣ
ಸಾರ್ವಜನಿಕ ಜೀವನದಲ್ಲಿ ಏಕಾಏಕಿ ಬೆಳೆದು ಬಂದಿಲ್ಲ. ಹೋರಾಟ ಮಾಡಿಕೊಂಡು ಜನ ಮನ್ನಣೆ ಗಳಿಸಿಕೊಂಡು ಬೆಳೆದಿದ್ದು, ಬೆಳೆದ ಮೇಲೆ ಈ ರೀತಿ ತೇಜೋವಧೆ ಮಾಡೋದು ಯಾರಿಗೂ ಭೂಷಣ ಬರೋದಲ್ಲ. ನನಗೆ ಮಾಟ ಮಂತ್ರ ನಿಂಬೆಹಣ್ಣು, ಹೂ ಹಾಕೋದು, ಮೊಳೆ ಹಾಕೋದು ಅದೆಲ್ಲಾ ಮಾಡುತ್ತಾರೆ. ರಾಜಕಾರಣದಲ್ಲಿ ಇರುವವರಿಗೆ ತೇಜವಧೆ ಮಾಡುವಂತಹದ್ದು ಬಹಳ ಹಿಂದಿನಿಂದ ನಡೆದುಕೊಂಡು ಬಂದಿದೆ. ಯಾರು ಇದರಲ್ಲಿ ಭಾಗಿ ಆಗುತ್ತಾರೆ ಎನ್ನುವುದನ್ನು ಪತ್ತೆ ಹಚ್ಚಬೇಕು. ಅವರಿಗೆ ಶಿಕ್ಷೆ ಕೊಡಿ ಎಂದು ಒತ್ತಾಯವಲ್ಲ, ಮುಂದೆ ಈ ರೀತಿ ಆಗಬಾರದು ಎನ್ನುವುದೇ ನನ್ನ ಆಗ್ರಹ ಎಂದು ಸ್ಪಷ್ಟಪಡಿಸಿದರು.