ಮೋದಿ ಸರ್ಕಾರದಿಂದ 15 ರಾಜ್ಯಗಳಿಗೆ ವಿಪತ್ತು ಪರಿಹಾರ ನಿಧಿ, ಕರ್ನಾಟಕಕ್ಕೆ ಕೊಟ್ಟಿದ್ದೆಷ್ಟು?
ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ, ಕರ್ನಾಟಕದ ಸೇರಿದಂತೆ ಒಟ್ಟು 15 ರಾಜ್ಯಗಳಿಗೆ ವಿಪತ್ತು ಪರಿಹಾರ ನಿಧಿಯನ್ನು ಹಂಚಿಕೆ ಮಾಡಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದ ಉನ್ನತ ಮಟ್ಟದ ಸಮಿತಿಯು 15 ರಾಜ್ಯಗಳಲ್ಲಿ ವಿವಿಧ ವಿಪತ್ತು ಪರಿಹಾರ ಮತ್ತು ಸಾಮರ್ಥ್ಯ ವೃದ್ಧಿ ಯೋಜನೆಗಳಿಗೆ 1,000 ಕೋಟಿ ರೂಪಾಯಿ ಮೊತ್ತವನ್ನು ಬಿಡುಗಡೆ ಮಾಡಿದೆ. ಹಾಗಾದ್ರೆ, ಕರ್ನಾಟಕಕ್ಕೆ ಸಿಕ್ಕಿದ್ದೆಷ್ಟು? ಇತರೆ ರಾಜ್ಯಗಳಿಗೆ ಎಷ್ಟೆಷ್ಟು? ಎನ್ನುವ ವಿವರ ಇಲ್ಲಿದೆ.
ಬೆಂಗಳೂರು, (ನವೆಂಬರ್ 26): ಕರ್ನಾಟಕ ಸೇರಿದಂತೆ ಒಟ್ಟು 15 ರಾಜ್ಯಗಳಲ್ಲಿ ವಿವಿಧ ವಿಪತ್ತು ಪರಿಹಾರ ಮತ್ತು ನಾಗರಿಕ ರಕ್ಷಣಾ ಸ್ವಯಂಸೇವಕರ ತರಬೇತಿ ಮತ್ತು ಸಾಮರ್ಥ್ಯ ವೃದ್ಧಿ ಯೋಜನೆಗೆ ಒಟ್ಟು 1115 ಕೋಟಿ ರೂಪಾಯಿ ಹಣವನ್ನು ಮೋದಿ ಸರ್ಕಾರ ಬಿಡುಗಡೆ ಮಾಡಿದೆ. ಇದರಲ್ಲಿ 1,000 ರೂ. ವಿವಿಧ ವಿಪತ್ತು ಪರಿಹಾರದ ಹಣವಾಗಿದ್ದರೆ, ಇನ್ನುಳಿದ ಹಣ ಸಾಮರ್ಥ್ಯ ವೃದ್ಧಿ ಯೋಜನೆಗೆ ನೀಡಲಾಗಿದೆ. ಇಂದು(ನವೆಂಬರ್ 26) ನವದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆದ್ದು, ಬಿಜೆಪಿ ಆಡಳಿತವಿರುವ ರಾಜ್ಯಗಳಿಗೆ ಹೆಚ್ಚಿನ ಹಣ ಬಿಡುಗಡೆ ಮಾಡಲಾಗಿದ್ದು, ವಿಪಕ್ಷಗಳ ಸರ್ಕಾರ ಇರುವ ರಾಜ್ಯಗಳಿಗೆ ಕಡಿಮೆ ಹಣ ನೀಡಲಾಗಿದೆ. ಅದರಂತೆ ಕರ್ನಾಟಕಕ್ಕೆ ಕೇವಲ 72 ಕೋಟಿ ರೂಪಾಯಿ ನೀಡಲಾಗಿದೆ.
ಎನ್ಡಿಎ ಸರ್ಕಾರವಿರುವ ಉತ್ತರಾಖಂಡ ಮತ್ತು ಹಿಮಾಚಲ ಪ್ರದೇಶಕ್ಕೆ ತಲಾ 139 ಕೋಟಿ ರೂ. ಹಾಗೂ ಮಹಾರಾಷ್ಟ್ರಕ್ಕೆ ಬರೋಬ್ಬರಿ 100 ಕೋಟಿ ರೂಪಾಯಿ ನೀಡಲಾಗಿದೆ. ಇನ್ನು ವಿರೋಧ ಪಕ್ಷಗಳು ಇರುವ ಕರ್ನಾಟಕ ಮತ್ತು ಕೇರಳಕ್ಕೆ ತಲಾ 72 ಕೋಟಿ ರೂ. ನೀಡಿದ್ದರೆ, ತಮಿಳುನಾಡು ಮತ್ತು ಪಶ್ಚಿಮ ಬಂಗಾಳಕ್ಕೆ ತಲಾ 50 ಕೋಟಿ ರೂ. ಹಂಚಿಕೆ ಮಾಡಿದೆ.
ಇನ್ನು ಎಂಟು ಈಶಾನ್ಯ ರಾಜ್ಯಗಳಾದ ಅಸ್ಸಾಂ, ಅರುಣಾಚಲ ಪ್ರದೇಶ, ಮಣಿಪುರ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್, ಸಿಕ್ಕಿಂ ಮತ್ತು ತ್ರಿಪುರಕ್ಕೆ 378 ಕೋಟಿ ಪರಿಹಾರ ಹಣವನ್ನು ಬಿಡುಗಡೆ ಮಾಡಲಾಗಿದೆ.
ಕಳೆದ ತಿಂಗಳು ಅಷ್ಟೇ ಕೇಂದ್ರ ಸರಕಾರವು 28 ರಾಜ್ಯಗಳಿಗೆ ತೆರಿಗೆ ಪಾಲಿನ ಕಂತಿನ ರೂಪದಲ್ಲಿ ಸುಮಾರು 1,78,173 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿತ್ತು. ಆದರೆ, ದೇಶದಲ್ಲೇ ಎರಡನೇ ಅತಿ ಹೆಚ್ಚಿನ ತೆರಿಗೆ ಸಂಗ್ರಹವಾಗುವ ಕರ್ನಾಟಕಕ್ಕೆ ಕೇವಲ 6,498 ಕೋಟಿ ರೂ. ಹಂಚಿಕೆ ಮಾಡಲಾಗಿತ್ತು. ಇದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಸಮಾಧಾನ ಹೊರಹಾಕಿದ್ದರು. ಇದೀಗ ವಿಪತ್ತು ಪರಿಹಾರ ಹಣದಲ್ಲೂ ಕರ್ನಾಟಕಕ್ಕೆ ಕಡಿಮೆ ಹಣ ನೀಡಲಾಗಿದೆ.
ಮೋದಿ ಸರ್ಕಾರ ಈ ವರ್ಷದಲ್ಲಿ ರಾಜ್ಯಗಳಿಗೆ ಈಗಾಗಲೇ 21,476 ಕೋಟಿ ರೂಪಾಯಿ ಹಣ ನೀಡಿದೆ. ಇದರಲ್ಲಿ ರಾಜ್ಯ ವಿಪತ್ತು ನಿಧಿಯಿಂದ (SDRF) 26 ರಾಜ್ಯಗಳಿಗೆ 14,878.40 ಕೋಟಿ ರೂಪಾಯಿ ನೀಡಿದ್ದರೆ, ಎನ್‌ಡಿಆರ್‌ಎಫ್‌ನಿಂದ 15 ರಾಜ್ಯಗಳಿಗೆ 4,637.66 ಕೋಟಿ ರೂಪಾಯಿ ನೀಡಲಾಗಿದೆ. ರಾಜ್ಯ ವಿಪತ್ತು ಮಿಟಿಗೇಷನ್ ನಿಧಿಯಿಂದ (SDMF) 1,385.45 ಕೋಟಿ ರೂಪಾಯಿ ಹಣವನ್ನು 11 ರಾಜ್ಯಗಳಿಗೆ ಹಾಗೂ ರಾಷ್ಟ್ರೀಯ ವಿಪತ್ತು ಮಿಟಿಗೇಷನ್ ನಿಧಿಯಿಂದ 6 ರಾಜ್ಯಗಳಿಗೆ 574.93 ಕೋಟಿ ಹಣ ನೀಡಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.