AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗೇಮಿಂಗ್​ ಆ್ಯಪ್​ಗಳಿಗೆ ಅಕ್ರಮ ಹಣ ವರ್ಗಾವಣೆ ಆರೋಪ: ಕಾಂಗ್ರೆಸ್​ ಶಾಸಕ ಕೆಸಿ ವೀರೇಂದ್ರ ಇಡಿ ಕಸ್ಟಡಿಗೆ

ಚಿತ್ರದುರ್ಗದ ಕಾಂಗ್ರೆಸ್ ಶಾಸಕ ಕೆ.ಸಿ. ವೀರೇಂದ್ರ ಪಪ್ಪಿ ಅವರನ್ನು ಅಕ್ರಮ ಹಣ ವರ್ಗಾವಣೆ ಮತ್ತು ಆಸ್ತಿ ಗಳಿಕೆ ಆರೋಪದಡಿ ಇಡಿ ವಶಕ್ಕೆ ಪಡೆದುಕೊಂಡಿದೆ. ಆಗಸ್ಟ್ 28 ರವರೆಗೆ ಇಡಿ ಕಸ್ಟಡಿಗೆ ನೀಡಲಾಗಿದೆ. ಕೋಟ್ಯಂತರ ರೂಪಾಯಿ ನಗದು ಮತ್ತು ಚಿನ್ನ ವಶಪಡಿಸಿಕೊಳ್ಳಲಾಗಿದೆ. ಆನ್‌ಲೈನ್ ಬೆಟ್ಟಿಂಗ್ ಮತ್ತು ಕ್ಯಾಸಿನೋಗಳೊಂದಿಗಿನ ಸಂಪರ್ಕವನ್ನು ಇಡಿ ತನಿಖೆ ನಡೆಸುತ್ತಿದೆ.

ಗೇಮಿಂಗ್​ ಆ್ಯಪ್​ಗಳಿಗೆ ಅಕ್ರಮ ಹಣ ವರ್ಗಾವಣೆ ಆರೋಪ: ಕಾಂಗ್ರೆಸ್​ ಶಾಸಕ ಕೆಸಿ ವೀರೇಂದ್ರ ಇಡಿ ಕಸ್ಟಡಿಗೆ
ಕೆಸಿ ವೀರೇಂದ್ರ ಪಪ್ಪಿ
Ramesha M
| Updated By: ವಿವೇಕ ಬಿರಾದಾರ|

Updated on:Aug 24, 2025 | 5:41 PM

Share

ಬೆಂಗಳೂರು, ಆಗಸ್ಟ್​ 24: ಅಕ್ರಮ ಹಣ ವರ್ಗಾವಣೆ, ಅಕ್ರಮ ಆಸ್ತಿ ಗಳಿಕೆ ಆರೋಪಕ್ಕೆ ಸಂಬಂಧಿಸಿದಂತೆ ಚಿತ್ರದುರ್ಗದ ಕಾಂಗ್ರೆಸ್ (Congress) ಶಾಸಕ ಕೆ.ಸಿ ವೀರೇಂದ್ರ ಪಪ್ಪಿ (KC Veerendra pappi) ಅವರನ್ನು ಬೆಂಗಳೂರಿನ 35ನೇ ಸಿಸಿಹೆಚ್ ಆಗಸ್ಟ್ 28ರ ವರೆಗೆ ಜಾರಿ ನಿರ್ದೇಶನಾಲಯದ (ED) ಕಸ್ಟಡಿಗೆ ನೀಡಿದೆ. ಶಾಸಕ ಕೆ.ಸಿ ವೀರೇಂದ್ರ ಅವರನ್ನು 14 ದಿನ ತಮ್ಮ ವಶಕ್ಕೆ ನೀಡುವಂತೆ ಇಡಿ ಮನವಿ ಮಾಡಿತ್ತು. ಇಡಿ ವಶಕ್ಕೆ ನೀಡುವ ಅವಶ್ಯಕತೆ ಇಲ್ಲ ಎಂದು ವಿರೇಂದ್ರ ಪಪ್ಪಿ ಪರ ವಕೀಲರ ಮನವಿ ಮಾಡಿದರು.

ಆಗ ಇಡಿ ಪರ ವಕೀಲರು, ತನಿಖೆ ಅಗತ್ಯ ಇದೆ. ಕೋಟ್ಯಾಂತರ ರೂ. ನಗದು ಕೆಜಿ ಗಟ್ಟಲೇ ಚಿನ್ನ ಪತ್ತೆಯಾಗಿದೆ. ವಿದೇಶದಲ್ಲಿ ವ್ಯವಹಾರ ನಡೆಸಿದ್ದಾರೆ. ಕಸಿನೋಗಳು, ಆನ್ಲೈನ್ ಬೆಟ್ಟಿಂಗ್ ಸೈಟ್​ಗಳ ವ್ಯವಹಾರ ನಡೆದಿದೆ. ಕೋಟ್ಯಾಂತರ ರೂ. ಅಕ್ರಮ ವಹಿವಾಟು ನಡೆಸಿದ್ದಾರೆ. ಈ ಬಗ್ಗೆ ವಿಚಾರಣೆ ಅಗತ್ಯ ಇದೆ. ಹೀಗಾಗಿ 14 ದಿನ ವಿಚಾರಣೆ ನಡೆಸಲು ಅವಶ್ಯಕತೆ ಇದೆ ಎಂದು ಇಡಿ ಪರ ವಕೀಲರು ಮನವಿ ಮಾಡಿದರು. ಎರಡೂ ಕಡೆಯ ವಾದ ಆಲಿಸಿದ ನ್ಯಾಯಾಧೀಶ ಸೈಯದ್ ಬಿ ರೆಹಮಾನ್ ಅವರು, ಆಗಸ್ಟ್​ 28ರ ವರೆಗೆ ಇಡಿ ವಶಕ್ಕೆ ನೀಡಿ ಆದೇಶಿಸಿದ್ದಾರೆ.

ಜಾಮೀನು ಅರ್ಜಿ ಸಲ್ಲಿಸುತ್ತೇವೆ: ಪಪ್ಪಿ ಪರ ವಕೀಲ ಉಮೇಶ್

ಶಾಸಕ ಕೆಸಿ ವೀರೇಂದ್ರ ಪಪ್ಪಿ ಅವರನ್ನು ಇಡಿ ಅಧಿಕಾರಿಗಳು ರವಿವಾರ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದರು. ನ್ಯಾಯಾಧೀಶರು ಐದು ದಿನ ಕಸ್ಟಡಿಗೆ ಕೊಟ್ಟಿದ್ದಾರೆ. ಇಡಿಯವರಿಗೆ ನ್ಯಾಯಾಧೀಶರು ಕೆಲವು ಸೂಚನೆ ಕೊಟ್ಟಿದ್ದಾರೆ. ಮಾನಸಿಕ ಹಾಗೂ ದೈಹಿಕ ಹಿಂಸೆ ಕೊಡಬಾರದು ಎಂದು ಹೇಳಿದ್ದಾರೆ. ತನಿಖೆಗೆ ಸಹಕಾರ ಕೊಡಬೇಕೆಂದು ಶಾಸಕ ಕೆಸಿ ವೀರೇಂದ್ರ ಅವರಿಗೆ ಹೇಳಿದ್ದಾರೆ. ವಕೀಲರ ನೇಮಕ ಮಾಡಿಕೊಳ್ಳಲು ತಿಳಿಸಿದ್ದಾರೆ. ಆಗಸ್ಟ್​. 28 ರಂದು ತೆರೆದ ನ್ಯಾಯಾಲಯದ ಮುಂದೆ ಹಾಜರುಪಡಿಸುತ್ತಾರೆ. ಬಳಿಕ ನಮ್ಮ ವಕೀಲರ ತಂಡ ಜಾಮೀನು ಅರ್ಜಿ ಸಲ್ಲಿಸುತ್ತೇವೆ ಎಂದು ಕೆಸಿ ವೀರೇಂದ್ರ ಪಪ್ಪಿ ಪರ ವಕೀಲ ಉಮೇಶ್ ಹೇಳಿದರು.

ಕೆಸಿ ವೀರೇಂದ್ರ ವಿರುದ್ಧ ಕೇಳಿಬಂದಿರುವ ಆರೋಪವೇನು?

ಕೆಸಿ ವಿರೇಂದ್ರ ಒಡೆತನದ ಕಂಪನಿಗಳಿಂದ ಗೇಮಿಂಗ್​ ಆ್ಯಪ್​ಗಳಿಗೆ ಅಕ್ರಮ ಹಣ ವರ್ಗಾವಣೆ ಮತ್ತು ಅಕ್ರಮ ಆಸ್ತಿ ಗಳಿಕೆ ಆರೋಪ ಕೇಳಿಬಂದಿತ್ತು. ಈ ಸಂಬಂಧ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಶುಕ್ರವಾರ (ಆ.22) ದಂದು ಶಾಸಕ ಕೆ.ಸಿ.ವೀರೇಂದ್ರ ಹಾಗೂ ಅವರ ಸಹೋದರರ ಮನೆಗಳ ಮೇಲೆ ದಾಳಿ ನಡೆಸಿದ್ದರು. ಚಿತ್ರದುರ್ಗ, ಚಳ್ಳಕೆರೆ, ಬೆಂಗಳೂರು, ಗೋವಾ ಸೇರಿದಂತೆ 30 ಕಡೆಗಳಲ್ಲಿ ದಾಳಿ ಮಾಡಿದರು. ಶಾಸಕ ಕೆ.ಸಿ.ವೀರೇಂದ್ರ ಮನೆಗಳು, ಕಂಪನಿಗಳು ಮತ್ತು ಇತರರ ಮನೆ, ಕಚೇರಿಗಳು ಸೇರಿ 30 ಕಡೆ ದಾಳಿ ನಡೆಸಿ, ಪರಿಶೀಲನೆ ನಡೆಸಿದ್ದರು. ಕೆಸಿ ವೀರೇಂದ್ರ ಅವರನ್ನು ಇಡಿ ಅಧಿಕಾರಿಗಳು ಸಿಕ್ಕಿಂನಲ್ಲಿ ಬಂಧಿಸಿದ್ದರು.

ಇದನ್ನೂ ಓದಿ: ಶಾಸಕ ವೀರೇಂದ್ರ ಪಪ್ಪಿ ಬಂಧನ: ಇಡಿ ದಾಳಿ ವೇಳೆ ಕೋಟ್ಯಂತರ ರೂ ನಗದು ಸೇರಿ ವಿದೇಶಿ ಕರೆನ್ಸಿ ಪತ್ತೆ

ಬೆಂಗಳೂರು ವಿಭಾಗದ ಇಡಿ ಅಧಿಕಾರಿಗಳ ತಂಡ ಚಿತ್ರದುರ್ಗ ಜಿಲ್ಲೆಯ 6 ಕಡೆ, ಬೆಂಗಳೂರು ನಗರದ 10, ಹುಬ್ಬಳ್ಳಿಯ 1 ಕಡೆ, ರಾಜಸ್ಥಾನದ ಜೋಧ್​ಪುರದ 3 ಕಡೆ, ಮುಂಬೈನ 2 ಕಡೆ, ಗೋವಾದ 5 ಕ್ಯಾಸಿನೋ ಸೇರಿ ಹಲವೆಡೆ ದಾಳಿ ಮಾಡಿದ್ದರು.

ಆನ್​ಲೈನ್​ ಬೆಟ್ಟಿಂಗ್ ತಾಣಗಳಾದ ಕಿಂಗ್567, ರಾಜಾ567, ಪಪ್ಪಿಸ್003, ರತ್ನ ಗೇಮಿಂಗ್, ಶಾಸಕ ಕೆ.ಸಿ.ವೀರೇಂದ್ರ ಸಹೋದರ ಕೆ.ಸಿ.ತಿಪ್ಪೇಸ್ವಾಮಿಗೆ ಸೇರಿದ ದುಬೈನಲ್ಲಿರುವ ವ್ಯವಹಾರಗಳ ಕಚೇರಿಗಳಾದ ಡೈಮಂಡ್ ಸಾಫ್ಟೆಕ್​​​​, ಟಿಆರ್​ಎಸ್​ ಟೆಕ್ನಾಲಜಿಸ್​​​, ಪ್ರೈಮ್​​9 ಟೆಕ್ನಾಲಜಿಸ್​​, ಕಾಲ್​ ಸೆಂಟರ್​​​​​ ಸರ್ವೀಸ್​​ ಮೇಲೆ ದಾಳಿ ನಡೆಸಿ, ಗೇಮಿಂಗ್​ ಬ್ಯುಸಿನೆಸ್​​ಗೆ ಸಂಬಂಧಿಸಿದ ದಾಖಲೆ ಪರಿಶೀಲಿಸಿದ್ದರು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:59 pm, Sun, 24 August 25