AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಸ್ತಿ ಪಡೆದು ಮನೆಯಿಂದ ಹೊರಹಾಕಿದ್ದ ಪುತ್ರರ ವಿರುದ್ಧ ತಾಯಂದಿರ ಹೋರಾಟ: ಕೊನೆಗೂ ಸಿಕ್ತು ನ್ಯಾಯ

ಇದ್ದ ಆಸ್ತಿ ಕಳೆದುಕೊಂಡು ಬೀದಿ ಪಾಲಾಗುವಂತಾಗಿದ್ದ ತಾಯಂದಿರ ಮೊಗದಲ್ಲಿ ಈಗ ಸಂತಸದ ನಗೆ ಮೂಡಿದೆ. ಇಬ್ಬರು ತಾಯಿಯಂದಿರ ಕಾನೂನು ಹೋರಾಟ ಕರುಣೆ ಇಲ್ಲದ‌‌ ಮಕ್ಕಳಿಂದ‌ ತೊಂದರೆ ಅನುಭವಿಸುತ್ತಿರುವ ತಾಯಂದಿರಿಗೆ ಪ್ರೇರಣೆ ಆಗಬೇಕಿದೆ.

ಆಸ್ತಿ ಪಡೆದು ಮನೆಯಿಂದ ಹೊರಹಾಕಿದ್ದ ಪುತ್ರರ ವಿರುದ್ಧ ತಾಯಂದಿರ ಹೋರಾಟ: ಕೊನೆಗೂ ಸಿಕ್ತು ನ್ಯಾಯ
ರತ್ನವ್ವ ಮತ್ತು ಫಕ್ಕೀರವ್ವ
preethi shettigar
| Updated By: ರಾಜೇಶ್ ದುಗ್ಗುಮನೆ|

Updated on: Feb 05, 2021 | 2:49 PM

Share

ಹಾವೇರಿ: ಹೆತ್ತ ತಾಯಿ ಎಂದರೆ ಸಾಕ್ಷಾತ್ ದೇವರ ಸಮಾನ. ಮಕ್ಕಳ ಆರೈಕೆಯಲ್ಲಿ ಸದಾ ಅಮ್ಮಂದಿರು ನಿರತರಾಗಿರುತ್ತಾರೆ. ಆದರೆ ಅಮ್ಮನನ್ನು ಮುಪ್ಪಿನ ವಯಸ್ಸಿನಲ್ಲಿ ಕಾಳಜಿಯಿಂದ ನೋಡಿಕೊಳ್ಳುವ ಬದಲು ಅದೇಷ್ಟೋ ಮಕ್ಕಳು ದೂರ ತಳ್ಳುತ್ತಾರೆ. ಇದೇ ರೀತಿಯ ಘಟನೆ ಸದ್ಯ ಹಾವೇರಿಯಲ್ಲಿ ನಡೆದಿದ್ದು ಮಕ್ಕಳು ಅಮ್ಮಂದಿರಿಂದ ಮನೆ, ಜಮೀನು ಬರೆಸಿಕೊಂಡು ಬೀದಿಗೆ ತಳ್ಳಿದ್ದಾರೆ. ಈ ಮಕ್ಕಳು ತಾಯಂದಿರಿಗೆ ಕೊಡಬಾರದ ಚಿತ್ರಹಿಂಸೆ ಕೊಟ್ಟಿದ್ದು, ಸದ್ಯ, ಪುತ್ರರ ವಿರುದ್ಧ ತೊಡೆತಟ್ಟಿ ಹೋರಾಟಕ್ಕೆ ಇಳಿದಿದ್ದ ಇಳಿ ವಯಸ್ಸಿನ ಇಬ್ಬರು ಅಮ್ಮಂದಿರು ಮಕ್ಕಳ ವಿರುದ್ಧ ಜಯ ಸಾಧಿಸಿದ್ದಾರೆ. ಮಕ್ಕಳಿಂದ ತಮ್ಮ ಆಸ್ತಿಯನ್ನು ಮರಳಿ ಪಡೆದುಕೊಂಡಿದ್ದಾರೆ.

ಹೌದು, ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ನಿಸ್ಸೀಮ ಆಲದಕಟ್ಟಿ ಮತ್ತು ಚಿಕ್ಕಾಂಶಿ ಹೊಸೂರು ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಮನೆ, ಆಸ್ತಿ ಬಿಟ್ಟುಕೊಟ್ಟು ಎಲ್ಲೆಲ್ಲೋ ಆಶ್ರಯ ಪಡೆದಿದ್ದ ವೃದ್ಧ ಜೀವಗಳಿಗೆ ಸದ್ಯ ಅಧಿಕಾರಿಗಳು ಆಸ್ತಿಯನ್ನು ಮರಳಿ ಹಸ್ತಾಂತರಿಸಿದ್ದಾರೆ. 91 ವರ್ಷದ ಇಳಿ ವಯಸ್ಸಿನಲ್ಲಿರುವ ಈ ಅಮ್ಮನ‌ ಹೆಸರು ಫಕ್ಕೀರವ್ವ. ನಿಸ್ಸೀಮ ಆಲದಕಟ್ಟಿ ಗ್ರಾಮದ ನಿವಾಸಿ. ಫಕ್ಕೀರವ್ವಳಿಗೆ 8 ಜನ ಗಂಡು ಮಕ್ಕಳು. ಅವರು ತನ್ನ ಪಾಲಿಗೆ ಬಂದಿದ್ದ ಮನೆಯನ್ನ ನಾಲ್ಕನೆಯ ಪುತ್ರನ ಹೆಸರಿಗೆ ಬರೆದು ಕೊಟ್ಟಿದ್ದರು.

ಫಕ್ಕೀರವ್ವನ ಆಸ್ತಿಯನ್ನು ಆಕೆಕೆ ತಲುಪಿಸಿದ ಅಧಿಕಾರಿಗಳು

ಆರಂಭದಲ್ಲಿ ಪುತ್ರ ತಾಯಿಯನ್ನ ಸಾಕ್ಷಾತ್ ದೇವರ ಸ್ವರೂಪದಲ್ಲೇ ನೋಡಿಕೊಳ್ಳುತ್ತಿದ್ದ. ಯಾವಾಗ ತಾಯಿಯ ಮನೆ ತನ್ನ ಹೆಸರಿಗೆ ಬಂತೋ ಆಗ ಹೆತ್ತ ತಾಯಿಯನ್ನೆ‌‌ ಕಿಂಚಿತ್ತೂ ಕರುಣೆ ಇಲ್ಲದಂತೆ ಮನೆಯಿಂದ ಹೊರಹಾಕಿದ. ತಾಯಿ ಎನ್ನುವುದನ್ನ ಮರೆತು ಆಕೆಗೆ ಇನ್ನಿಲ್ಲದ‌ ಕಿರುಕುಳ ನೀಡುತ್ತಿದ್ದ. ಇದರಿಂದ ಬೇಸತ್ತ ತಾಯಿ ಮಗನ ವಿರುದ್ಧವೇ ಸಮರ ಸಾರಿದಳು.

ಉಪವಿಭಾಗಾಧಿಕಾರಿಗಳ ನ್ಯಾಯಾಲಯಕ್ಕೆ ತನಗೆ ಆಗಿರುವ ಅನ್ಯಾಯದ ವಿರುದ್ಧ ದೂರು ಸಲ್ಲಿಸಿದ್ದು, ದೂರು ಸ್ವೀಕರಿಸಿದ ಉಪವಿಭಾಗಾಧಿಕಾರಿ ಅನ್ನಪೂರ್ಣ ಮುದಕಮ್ಮನವರ ಕಾನೂನು ಪ್ರಕಾರ ಹೆತ್ತವಳ ಆಸ್ತಿಯನ್ನ ಆಕೆಗೆ ಮರಳಿಸಿದ್ದಾರೆ. ಸದ್ಯ ಮಗನಿಗೆ ನೀಡಿದ್ದ ಮನೆಯನ್ನ ಮರಳಿ ತಾಯಿಯ ಹೆಸರಿಗೆ ಮಾಡಿಸಿದ್ದಾರೆ.

ಫಕ್ಕೀರವ್ವಳ ವ್ಯಥೆಯ ಕತೆ ಒಂದು ರೀತಿಯಾದರೆ ಚಿಕ್ಕಾಂಶಿ ಹೊಸೂರು ಗ್ರಾಮದ 71 ವರ್ಷದ ರತ್ನವ್ವರದ್ದು ಮತ್ತೊಂದು ಕತೆ. ರತ್ನವ್ವಳರಿಗೆ ಒಟ್ಟು 4 ಹೆಣ್ಣು ಮಕ್ಕಳಿದ್ದಾರೆ. ಗಂಡು ಮಕ್ಕಳು ಇರಲಿಲ್ಲ. ರತ್ನವ್ವರ ಪತಿ ಮಾನಸಿಕ ಅಸ್ವಸ್ಥನಂತಿದ್ದರು. ಹೀಗಾಗಿ ರತ್ನವ್ವಳ ಮನೆಗೊಬ್ಬ ಮಗ ಬೇಕು ಎಂದು ಹಿರಿಯ ಮಗಳ ಪುತ್ರನನ್ನೆ ದತ್ತು ಸ್ವೀಕರಿಸಿದ್ದರು. ಕುಟುಂಬಕ್ಕೆ ಎಂದು ಇದ್ದ 3 ಎಕರೆ ಜಮೀನನ್ನ ದತ್ತು ಪುತ್ರನ ಹೆಸರಿಗೆ ಬರೆದಿದ್ದರು.

ದತ್ತು ಪುತ್ರ ಆರಂಭದಲ್ಲಿ ರತ್ನವ್ವರನ್ನು ಹೆತ್ತ ತಾಯಿಗಿಂತಲೂ ಮಿಗಿಲಾಗಿ ನೋಡ್ತಿದ್ದ. ಯಾವಾಗ 3 ಎಕರೆ ಜಮೀನು ತನ್ನ ಹೆಸರಿಗೆ ಆಯ್ತೋ ಆಗಲೆದತ್ತು ಪುತ್ರ ತಾಯಿಗೆ ಇನ್ನಿಲ್ಲದ ಕಿರುಕುಳ ನೀಡುವುದಕ್ಕೆ ಶುರು ಮಾಡಿದ್ದ. ಹಗಲು ರಾತ್ರಿ ಎನ್ನದೆ ತಾಯಿಗೆ ಕಿರಿಕಿರಿ ಮಾಡುತ್ತಿದ್ದ. ರತ್ನವ್ವಳ ಪತಿ ಹಾಸಿಗೆ ಬಿಟ್ಟು ಮೇಲೇಳದ ಸ್ಥಿತಿಯಲ್ಲಿ ಇದ್ದರೂ ದತ್ತು ಪುತ್ರ ತಂದೆ‌ ಮತ್ತು ತಾಯಿಯನ್ನ ನೋಡಿಕೊಳ್ಳುತ್ತಿರಲಿಲ್ಲ. ಹೀಗಾಗಿ ರತ್ನವ್ವಳ ಪತಿ ಕೆಲವು ತಿಂಗಳುಗಳ ಹಿಂದೆ‌ ಮೃತಪಟ್ಟಿದ್ದರು.

ರತ್ನವ್ವನ ಆಸ್ತಿಯನ್ನು ಅಧಿಕಾರಿಗಳು ಆಕೆಗೆ ಹಸ್ತಾಂತರಿಸುತ್ತಿರುವ ದೃಶ್ಯ

ಮೂರು ಎಕರೆ ಜಮೀನು ತನ್ನ ಹೆಸರಿಗೆ ಮಾಡಿಕೊಂಡ ದತ್ತು ಪುತ್ರ ರತ್ನವ್ವಳ ಪತಿ ಮೃತಪಟ್ಟರು ಅಂತ್ಯಕ್ರಿಯೆಗೆ ಬರಲಿಲ್ಲ. ರತ್ನವ್ವ ವಾಸವಾಗಿದ್ದಲ್ಲಿಗೆ ರಾತ್ರಿ ವೇಳೆಗೆ ಬಂದು ಬೆಳಗಾಗುವಷ್ಟರಲ್ಲಿ ಜಾಗ ಖಾಲಿ ಮಾಡುತ್ತಿದ್ದ ದತ್ತು ಪುತ್ರ ರತ್ನವ್ವರಿಗೆ ಭಯದ ವಾತಾವರಣ ನಿರ್ಮಾಣ ಮಾಡಿದ್ದ. ಸಾಲದ್ದಕ್ಕೆ ರತ್ನವ್ವ ಬರೆದುಕೊಟ್ಟಿದ್ದ 3 ಎಕರೆ ಜಮೀನನ್ನ ಬೇರೆಯವರಿಗೆ ವರ್ಷದ ಬಾಡಿಗೆ ರೂಪದಲ್ಲಿ ಕೊಟ್ಟು ಊರು ಬಿಟ್ಟು ಹೋಗಿದ್ದ.

ಇದ್ದ ಜಮೀನನ್ನ ಬರೆದುಕೊಟ್ಟು ಕಂಗಾಲಾಗಿದ್ದ ತಾಯಿ ಜೀವ ಕಣ್ಣೀರು ಹಾಕುತ್ತಾ ಗ್ರಾಮದ ಜನರ ಗಮನಕ್ಕೆ ತಂದು ಸವಣೂರು ಉಪವಿಭಾಗಾಧಿಕಾರಿಗೆ ದೂರು ಸಲ್ಲಿಸಿದ್ದರೂ. ದೂರು ಸ್ವೀಕರಿಸಿದ ಅಧಿಕಾರಿಗಳು ಮರಳಿ ತಾಯಿಗೆ ಆಸ್ತಿ ಕೊಡಿಸಿದ್ದಾರೆ. ಇದ್ದ ಆಸ್ತಿ ಕಳೆದುಕೊಂಡು ಬೀದಿ ಪಾಲಾಗುವಂತಾಗಿದ್ದ ತಾಯಂದಿರ ಮೊಗದಲ್ಲಿ ಈಗ ಸಂತಸದ ನಗೆ ಮೂಡಿದೆ. ಇಬ್ಬರು ತಾಯಿಯಂದಿರ ಕಾನೂನು ಹೋರಾಟ ಕರುಣೆ ಇಲ್ಲದ‌‌ ಮಕ್ಕಳಿಂದ‌ ತೊಂದರೆ ಅನುಭವಿಸುತ್ತಿರುವ ತಾಯಂದಿರಿಗೆ ಪ್ರೇರಣೆ ಆಗಬೇಕಿದೆ.

ಆಸ್ತಿಗಾಗಿ ತಾಯಿಯ ಕತ್ತು ಸೀಳಿದ ಮಗ: ಜೊತೆಗಿದ್ದ ನಾದಿನಿ ಮತ್ತು ತಮ್ಮನ ಮಗನಿಗೂ ಚಾಕು ಇರಿತ