ಮುಡಾ ಕೇಸ್: ದಾಖಲೆಯನ್ನು ತಿದ್ದಲಾಗಿದೆ ಎಂದ ದೂರುದಾರ, ಇದಕ್ಕೆ ನಗರಾಭಿವೃದ್ಧಿ ಸಚಿವ ಹೇಳಿದ್ದಿಷ್ಟು
ರಾಜ್ಯ ರಾಜಕೀಯದಲ್ಲಿ ಮುಡಾ ಹಗರಣ ಸಾಕಷ್ಟು ಸದ್ದು ಮಾಡುತ್ತಿದೆ. ಹಗರಣಕ್ಕೆ ಸಂಬಂಧಿಸಿದಂತೆ ಒಂದಿಲ್ಲೊಂದು ಹೊಸ ಟ್ವಿಸ್ಟ್ಗಳು ಹೊರಬರುತ್ತಿವೆ. ಇದೀಗ ಅಕ್ರಮ ಆರೋಪ ಕೇಸ್ಗೆ ಸಂಬಂಧಿಸಿದಂತೆ ಸಿಎಂ ಸ್ಪಷ್ಟೀಕರಣ ನೀಡಿ ಬಿಡುಗಡೆಗೊಳಿಸಿದ ದಾಖಲೆ ತಿದ್ದಲಾಗಿದೆ ಎಂದು ದೂರುದಾರ ಸ್ನೇಹಮಯಿ ಕೃಷ್ಣ ಗಂಭೀರ ಆರೋಪ ಮಾಡಿದ್ದಾರೆ.
ಬೆಂಗಳೂರು, ಆಗಸ್ಟ್ 21: ಮುಡಾ ಹಗರಣದಲ್ಲಿ (muda) ಒಂದು ಕಡೆ ಸಿಎಂ ಸಿದ್ದರಾಮಯ್ಯಗೆ (Siddaramaiah) ತಾತ್ಕಾಲಿ ರಿಲೀಫ್ ಸಿಕ್ಕಿದೆ. ಆದರೆ ಖುದ್ದು ಮುಡಾಗೆ ಸಿದ್ದರಾಮಯ್ಯ ಪತ್ನಿ ಬರೆದಿದ್ದಾರೆನ್ನಲಾಗಿರುವ ಪತ್ರ ಪತ್ತೆ ಆಗಿದ್ದು, ಸಾಕಷ್ಟು ಚರ್ಚೆ ಹುಟ್ಟುಹಾಕಿದೆ. ಸದ್ಯ ಈ ವಿಚಾರವಾಗಿ ಸಿಎಂ ಸ್ಪಷ್ಟೀಕರಣ ನೀಡಿ ಬಿಡುಗಡೆಗೊಳಿಸಿದ ದಾಖಲೆ ತಿದ್ದಲಾಗಿದೆ ಎಂದು ದೂರುದಾರ ಸ್ನೇಹಮಯಿ ಕೃಷ್ಣ ಗಂಭೀರ ಆರೋಪ ಮಾಡಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಪತ್ನಿ ಬರೆದ ಪತ್ರದಿಂದಲೇ ಸತ್ಯಾಂಶ ಗೊತ್ತಾಗುತ್ತಿದೆ. ಸ್ವತಃ ಸಿದ್ದರಾಮಯ್ಯ ಸತ್ಯಾಂಶ ಮರೆಮಾಚಿ ಸುಳ್ಳನ್ನು ಹೇಳುತ್ತಿದ್ದಾರೆ. ಮುಡಾ ಅಕ್ರಮದಲ್ಲಿ ಸಿಎಂ ಮತ್ತು ಅವರ ಕುಟುಂಬ ಭಾಗಿಯಾಗಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ನನ್ನನ್ನು ಬಂಧಿಸಲು ನೂರು ಸಿದ್ದರಾಮಯ್ಯ ಬರಬೇಕು: ಸಿಎಂಗೆ ಹೆಚ್‌ಡಿ ಕುಮಾರಸ್ವಾಮಿ ಟಾಂಗ್
2001ರಲ್ಲಿ ಮುಡಾ ಜಮೀನನ್ನು ಸ್ವಾಧೀನಪಡಿಸಿಕೊಂಡಿದ್ದಾರೆ. ಸಿಎಂ ಬಾಮೈದ 2004ರಲ್ಲಿ ಹೇಗೆ ಕೃಷಿ ಭೂಮಿ ಖರೀದಿಸುತ್ತಾರೆ? ಸಿದ್ದರಾಮಯ್ಯ ಪತ್ನಿ ಪಾರ್ವತಿ ಮುಡಾಗೆ ಬರೆದಿರುವ ಪತ್ರ ಮಹತ್ವದ್ದಾಗಿದೆ. ಈ ಪತ್ರಕ್ಕೆ ಸಂಬಂಧಿಸಿದಂತೆ ಸಿದ್ದರಾಮಯ್ಯ ಸ್ಪಷ್ಟನೆ ನೀಡಲಿ. ಮೇಲ್ನೋಟಕ್ಕೆ ದಾಖಲೆಗಳ ಗಮನಿಸಿದರೆ ಆರೋಪ ಸಾಬೀತಾಗುತ್ತಿದೆ ಎಂದಿದ್ದಾರೆ.
ತಿದ್ದುವಂತಹ ನೀಚ ಕೃತ್ಯ ನಾನು ಮಾಡಿಲ್ಲ: ಭೈರತಿ ಸುರೇಶ್
ನಗರಾಭಿವೃದ್ಧಿ ಇಲಾಖೆ ಸಚಿವ ಭೈರತಿ ಸುರೇಶ್ ಈ ವಿಚಾರವಾಗಿ ಮಾತನಾಡಿದ್ದು, ದಾಖಲೆ ತಿದ್ದುವಂತಹ ಪರಿಸ್ಥಿತಿ ಬಂದಿಲ್ಲ. ದಾಖಲೆ ತಿದ್ದುವಂತಹ ನೀಚ ಕೆಲಸಕ್ಕೆ ನಾವು ಯಾರೂ ಇಳಿದಿಲ್ಲ. ಮುಡಾ ಪ್ರಕರಣ ಸಂಬಂಧ ಹೈಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದೆ. ಅಲ್ಲಿ ಬೇರೆ ಏನೋ ಆಗಿದೆ ಅನ್ನೋದು ಅಲ್ಲ, ಏನೂ ಮಿಸ್ಟೇಕ್ ಆಗಲ್ಲವಾ ಎಂದು ಪ್ರಶ್ನಿಸಿದ್ದಾರೆ.
ಜಮೀನಿಗೆ ಪರಿಹಾರ ನೀಡಿಲ್ಲ, ಅಷ್ಟೇ ವಿಸ್ತೀರ್ಣದ ಜಮೀನು ಅಂತಾ ಹೇಳಿದ್ದಾರೆ. ಅಲ್ಲಿ ವರ್ಷ ಮಿಸ್ಟೇಕ್ ಆಗಿರಬಹುದು. ಇಲ್ಲವೇ ಸಮಾನಂತರ ಬಡಾವಣೆಯಲ್ಲಿ ನೀಡುವಂತೆ ಕೋರುತ್ತೇನೆ. ಬಹಳ ಸ್ಪಷ್ಟವಾಗಿ ಹೇಳಿದ್ದಾರೆ, ವಿಜಯನಗರ ಲೇಔಟ್ ಅಂತಾ ಎಲ್ಲಿ ಬರೆದಿದ್ದಾರೆ. ಸಮಾನಂತರ ಜಾಗ ಅಂತಾ ಬರೆದಿದ್ದಾರೆ, ಎಲ್ಲವನ್ನೂ ನೋಡಿ ಹೇಳಿಕೆ ನೀಡಬೇಕು. ತಿದ್ದುವಂತಹ ನೀಚ ಕೃತ್ಯ ನಾನು ಮಾಡಿಲ್ಲ, ಹೆಚ್‌ಡಿ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಲ್ಲ. ಕುಮಾರಸ್ವಾಮಿ ಯಾವತ್ತೂ ಹೆಲಿಕಾಪ್ಟರ್‌ನಲ್ಲಿ ಹೋಗೇ ಇಲ್ಲವಾ ಎಂದು ಕಿಡಿಕಾರಿದ್ದಾರೆ.
ಭೈರತಿ ಸುರೇಶ್ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಬೇಕು: ಪಿ. ರಾಜೀವ್
ಈ ವಿಚಾರವಾಗಿ ನಗರದಲ್ಲಿ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ. ರಾಜೀವ್ ಪ್ರತಿಕ್ರಿಯಿಸಿದ್ದುಮ, ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಹೆಲಿಕಾಪ್ಟರ್‌ನಲ್ಲಿ ಹೋಗಿ ಮುಡಾ ಫೈಲ್ ತಂದರು. ಸಾರ್ವಜನಿಕರ ಹಣ ಅವರ ಏರ್ ಟ್ರಾವೆಲ್ಗೆ ಬಳಕೆಯಾಗಿದೆ. ವೈಟ್ನರ್ ಖರೀದಿಗೆ ಸಾರ್ವಜನಿಕರ ತೆರಿಗೆ ಹಣ ಬಳಕೆಯಾಗಿದೆ. ತಕ್ಷಣವೇ ಸುರೇಶ್ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಬೇಕು ಎಂದು ಆಗ್ರಹಿಸಿದ್ದಾರೆ.
ಸಿಎಂ ಅವರನ್ನು ಒಬ್ಬ ಪೊಲೀಸ್ ಹೇಗೆ ತನಿಖೆ ಮಾಡಲು ಸಾಧ್ಯ? ಭೈರತಿ ಸುರೇಶ್ ಫೈಲ್‌ನಲ್ಲಿ ವೈಟ್ನರ್ ಬಳಸಿ ಹೆಲಿಕಾಪ್ಟರ್ನಲ್ಲೇ ಅಳಿಸಿದರಾ ಗೊತ್ತಿಲ್ಲ. ಸಾಕ್ಷ್ಯ ನಾಶ ಮಾಡಿರುವ ಕಾರಣಕ್ಕೆ ಭೈರತಿ ಸುರೇಶ್ ಅವರನ್ನು ಸಂಪುಟದಿಂದ ರಾಜ್ಯಪಾಲರು ವಜಾ ಮಾಡಬೇಕು. ಸಿದ್ದರಾಮಯ್ಯ ಸಿಎಂ ಸ್ಥಾನದಲ್ಲಿ ಮುಂದುವರೆಯಬಾರದು ಎಂದು ಕಿಡಿಕಾರಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.