ಮುಡಾ ಹಗರಣ: ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ದೂರು ದಾಖಲು

ಮುಡಾ ಹಗರಣ ಸಿಎಂ ಸಿದ್ದರಾಮಯ್ಯಗೆ ದಿನೇ ದಿನೇ ಉರುಳಾಗಿ ಸುತ್ತಿಕೊಳ್ಳುತ್ತಿದೆ. ಇದೀಗ ಪ್ರಕರಣ ಸಂಬಂಧ ಮೈಸೂರಿನಲ್ಲಿ ಸಿದ್ದರಾಮಯ್ಯ ವಿರುದ್ಧ ದೂರು ದಾಖಲಾಗಿದೆ. ಇಷ್ಟೇ ಅಲ್ಲದೆ ದೂರುದಾರರು ರಾಜ್ಯಪಾಲರು, ಸರ್ಕಾರದ ಮುಖ್ಯದ ಕಾರ್ಯದರ್ಶಿಗೂ ಪತ್ರ ಬರೆದಿದ್ದು ಹಲವು ಪ್ರಶ್ನೆಗಳನ್ನು ಎತ್ತಿದ್ದಾರೆ. ಆ ಪ್ರಶ್ನೆಗಳು ಇಲ್ಲಿವೆ.

ಮುಡಾ ಹಗರಣ: ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ದೂರು ದಾಖಲು
ಸಿದ್ದರಾಮಯ್ಯ
Image Credit source: Getty Images
Edited By:

Updated on: Jul 09, 2024 | 1:31 PM

ಮೈಸೂರು, ಜುಲೈ 9: ಮುಡಾ ಹಗರಣ ದಿನೇ ದಿನೇ ಸಿಎಂ ಸಿದ್ದರಾಮಯ್ಯಗೆ ಕಂಟಕವಾಗಿ ಪರಿಣಮಿಸುತ್ತಿದ್ದು, ಇದೀಗ ಮೈಸೂರಿನ ವಿಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ನಕಲಿ ದಾಖಲೆ ಸೃಷ್ಟಿ ಮೂಲಕ ಮುಡಾ ವಂಚಿಸಿ ಕೋಟ್ಯಂತರ ಬೆಲೆಯ ನಿವೇಶನ ಪಡೆದ ಆರೋಪದಲ್ಲಿ ಸಿಎಂ ಸಿದ್ದರಾಮಯ್ಯ, ಅವರ ಪತ್ನಿ ಪಾರ್ವತಿ, ಬಾಮೈದ ಮಲ್ಲಿಕಾರ್ಜುನಸ್ವಾಮಿ, ಭೂ ಮಾಲೀಕ ಎಂದು ಹೇಳುವ ದೇವರಾಜು ಹಾಗೂ ಕುಟುಂಬದವರ ವಿರುದ್ಧ ದೂರು ದಾಖಲಾಗಿದೆ.

ಇದೇ ಪ್ರಕರಣದಲ್ಲಿ ಜಿಲ್ಲಾಧಿಕಾರಿ, ತಹಸೀಲ್ದಾರ್, ಉಪ ನೊಂದಣಾಧಿಕಾರಿ ಹಾಗೂ ಮುಡಾ ಅಧಿಕಾರಿಗಳು ಶಾಮೀಲಾಗಿರುವ ಬಗ್ಗೆಯೂ ದೂರು ದಾಖಲಾಗಿದೆ. ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಎಂಬವರು ದೂರು ದಾಖಲಿಸಿದ್ದಾರೆ.

ಪೊಲೀಸರಿಗೆ ದೂರು ನೀಡಿದ್ದಷ್ಟೇ ಅಲ್ಲದೆ, ರಾಜ್ಯಪಾಲ, ರಾಜ್ಯ ಮುಖ್ಯಕಾರ್ಯದರ್ಶಿ, ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಗೂ ಪತ್ರ ಬರೆದಿದ್ದಾರೆ. ಪತ್ರದ ಮೂಲಕ ಸ್ನೇಹಮಯಿಕೃಷ್ಣ ಪ್ರಕರಣ ಸಂಬಂಧ ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ.

ದೂರುದಾರರ ಪ್ರಶ್ನೆಗಳೇನು?

  1. ಪಾರ್ವತಿ ಪ್ರಕರಣದಲ್ಲಿ ಭೂ ಸ್ವಾಧೀನದಿಂದ ಕೈಬಿಟ್ಟಿರುವ ರಾಜ್ಯಪತ್ರದ ಬಗ್ಗೆಯೇ ಅನುಮಾನ.
  2. ಮೂಲ ಭೂ ಮಾಲೀಕರ ಮಗ ಎನ್ನುವ ದೇವರಾಜು ಅಸ್ತಿತ್ವದ ಬಗ್ಗೆ ಪ್ರಶ್ನೆ.
  3. 1998ರಲ್ಲಿ ಭೂ ಸ್ವಾಧಿನದಿಂದ ಕೈ ಬಿಟ್ಟಿದ್ದು ನಿಜವಾದರೆ 2010ರ ವರೆಗಿನ ಆರ್‌ಟಿಸಿ ಗಳಲ್ಲಿ ಭೂ ಸ್ವಾಧೀನ ಎಂಬ ಉಲ್ಲೇಖ ಏಕಿದೆ‌?
  4. ದೇವರಾಜು ಮತ್ತು ನಂತರ ಮಲ್ಲಿಕಾರ್ಜುನಸ್ವಾಮಿ ಅವರ ಮಾಲೀಕತ್ವ ಮತ್ತು ಸ್ವಾಧೀನದಲ್ಲಿ ಈ ಜಮೀನು ಇದ್ದಿದ್ದರೆ ಪ್ರಾಧಿಕಾರದ ಅಭಿವೃದ್ಧಿ ಕೆಲಸವನ್ನ ಏಕೆ ತಡೆದಿಲ್ಲ?
  5. ಮಲ್ಲಿಕಾರ್ಜುನ ಹಾಗೂ ಪಾರ್ವತಿ ಅವರ ಹೆಸರಿಗೆ ಖಾತೆ ವರ್ಗಾವಣೆ ಮಾಡುವ ವೇಳೆ ಸ್ಥಳ ಪರಿಶೀಲನೆ ಮಾಡಲಿಲ್ಲವೇ?
  6. ಮಾಡಿದ್ದರೆ ಮುಡಾ ಅಭಿವೃದ್ಧಿ ಮಾಡಿರುವುದು ಕಂಡುಬಂದಿದ್ದರೂ ಕೃಷಿ ಭೂಮಿ ಎಂದು ಹೇಗೆ ಖಾತೆ ಮಾಡಿದರು?
  7. ನಿಜವಾದ ಭೂ ಮಾಲೀಕರ ವಂಶವೃಕ್ಷ, ಜವರ ಅವರ ಮರಣ ಪ್ರಮಾಣಪತ್ರ ಸೇರಿ ಹಲವು ದಾಖಲೆಗಳ ಉಲ್ಲೇಖ ಇಲ್ಲ ಯಾಕೆ?
  8. ಕೆಸರೆ ಗ್ರಾಮದ 464ನೇ ಸರ್ವೆ ನಂಬರ್‌ನ 3.16 ಎಕರೆ ಭೂ ಭೂ ಸ್ವಾಧೀನ ಕೈ ಬಿಡಲು ಕಾರಣ ಏನು?
  9. ಅಂತಹ ಯಾವ ಪ್ರಭಾವವನ್ನು (ಕಾರಣವನ್ನು) ಬಳಸಿದ್ದರು?
  10. 2005ರಲ್ಲೇ ಮಲ್ಲಿಕಾರ್ಜುನ ಸ್ವಾಮಿಗೆ ಅನ್ಯಕ್ರಾಂತ ಆಗಿದ್ದರೆ ಸದರಿ ಉಲ್ಲೇಖ ಆರ್‌ಟಿಸಿಗಳಲ್ಲಿ ಯಾಕೆ‌ ಇಲ್ಲ?
  11. 2004-05ನೇ ಸಾಲಿನ ಆರ್‌ಟಿಸಿಯ ಕಲಂ 10ರಲ್ಲಿ MR8/92-93 ಎಂಬ ಉಲ್ಲೇಖವಿದೆ. ಇದರ MR ಗಮನಿಸಿದಾಗ ಮಾರಪ್ಪ ಎಂಬುವವರಿಗೆ ಸೇರಿದ ದಾಖಲೆ ಎಂದು ಗೊತ್ತಾಗುತ್ತದೆ.
  12. ಮಲ್ಲಿಕಾರ್ಜುನ ಸ್ವಾಮಿಗೆ ಭೂಮಿ ಮಾರಿರುವ ದೇವರಾಜು ಕುಟುಂಬದ ವಿಳಾಸವೇ ಅಸ್ತಿತ್ವದಲ್ಲಿ ಇಲ್ಲದಿರುವುದು ದೊಡ್ಡ ಅನುಮಾನ.

ಇದನ್ನೂ ಓದಿ: ಮುಡಾ ಅಕ್ರಮ: ಸಿದ್ದರಾಮಯ್ಯ ಪತ್ನಿಗೆ ನೀಡಿದ್ದೆನ್ನಲಾದ ಜಮೀನಿನ ವಿವರ, ಪ್ರಕರಣದ ಸಂಪೂರ್ಣ ಟೈಮ್​ಲೈನ್ ಇಲ್ಲಿದೆ

ಪ್ರಕರಣದಲ್ಲಿ ಇಷ್ಟೆಲ್ಲ ಅನುಮಾನಗಳು ಇವೆ. ಹೀಗಾಗಿ ಪ್ರಕರಣದ ಸಮಗ್ರ ತನಿಖೆ ನಡೆಸಬೇಕು. 10 ದಿನಗಳ ಒಳಗೆ ಇದಕ್ಕೆ ಉತ್ತರ ಕೊಡಬೇಕು ಎಂದು ಆಗ್ರಹಿಸಿರುವುದಾಗಿ ದೂರುದಾರ ಸ್ನೇಹಮಯಿ ಕೃಷ್ಣ ‘ಟಿವಿ9’ಗೆ ತಿಳಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Dileep CP

ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಚೌಡಹಳ್ಳಿ ಗ್ರಾಮದವನು. ಕಳೆದ 13 ವರ್ಷದಿಂದ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ನಿರ್ವಹಿಸುತ್ತಿದ್ದೇನೆ.‌ಪತ್ರಿಕೋಧ್ಯಮ ಪದವಿದರನಾಗಿದ್ದೇನೆ.ಮೊದಲಿಗೆ ಮೈಸೂರಿನ ಸ್ಥಳಿಯ ವಾಹಿನ ಹಾಗೂ ಪತ್ರಿಕೆಯಲ್ಲಿ ಕೆಲಸ ನಿರ್ವಹಿಸಿದ್ದೆ.ನಂತರ ಪಬ್ಲಿಕ್ ಟಿವಿಯಲ್ಲಿ ಚಾಮರಾಜನಗರ ಜಿಲ್ಲಾವರದಿಗಾರನಾಗುವ ಅವಕಾಶ ಸಿಕ್ಕಿತು. ಅದಾದ ಬಳಿಕ ಐದು ವರ್ಷಗಳ ಕಾಲ ಚಾಮರಾಜನಗರದಲ್ಲಿ ಕೆಲಸ ನಿರ್ವಹಿಸಿದ್ದೇನೆ. ಬಳಿಕ 2018 ರಲ್ಲಿ ಟಿರ್ವಿ ಮೈಸೂರು ವರದಿಗಾರನಾಗುವ ಅವಕಾಶ ಸಿಕ್ಕಿತು. ಅಂದಿನಿಂದ ಮೈಸೂರು ಜಿಲ್ಲಾ ವರದಿಗಾರರನಾಗಿ ಕೆಲಸ ನಿರ್ವಹಿಸುತ್ತಿದ್ದೇನೆ.ಅದನ್ನು ಹೊರತು ಪಡಿಸಿದರೆ ಒಂದಷ್ಟು ಕೃಷಿ, ಸಾಹಿತ್ಯ ಆಸಕ್ತಿ ಇದೆ.

Read More
Follow Us