AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮುಡಾ ಹಗರಣ: ಸಿದ್ದರಾಮಯ್ಯಗೆ ನಾಳೆ ನಿರ್ಣಾಯಕ ದಿನ, ಹೈಕೋರ್ಟ್‌ನಲ್ಲಿ ಏನಾಗಲಿದೆ ಪ್ರಾಸಿಕ್ಯೂಷನ್ ಭವಿಷ್ಯ?

ಮುಡಾ ಹಗರಣ ಸಂಬಂಧ ಸಿಎಂ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್​ಗೆ ಅನುಮತಿ ನೀಡಿರುವುದನ್ನು ಪ್ರಶ್ನಿಸಿ ಹೈಕೋರ್ಟ್​ನಲ್ಲಿ ಸಲ್ಲಿಕೆಯಾಗಿರುವ ಅರ್ಜಿಯ ಸುದೀರ್ಘ ವಿಚಾರಣೆ ನಡೆದಿದೆ. ಗುರುವಾರವೂ ವಿಚಾರಣೆ ಮುಂದುವರಿಯಲಿದ್ದು, ಬಹುತೇಕ ಆದೇಶ ಪ್ರಕಟವಾಗುವ ನಿರೀಕ್ಷೆಯೂ ಇದೆ. ಇದು, ಏನಾಗಲಿದೆ ಪ್ರಾಸಿಕ್ಯೂಷನ್ ಭವಿಷ್ಯ ಎಂಬ ಕುತೂಹಲ ಕೆರಳಿಸಿದೆ.

ಮುಡಾ ಹಗರಣ: ಸಿದ್ದರಾಮಯ್ಯಗೆ ನಾಳೆ ನಿರ್ಣಾಯಕ ದಿನ, ಹೈಕೋರ್ಟ್‌ನಲ್ಲಿ ಏನಾಗಲಿದೆ ಪ್ರಾಸಿಕ್ಯೂಷನ್ ಭವಿಷ್ಯ?
ಸಿದ್ದರಾಮಯ್ಯ
Ganapathi Sharma
|

Updated on: Sep 11, 2024 | 6:49 AM

Share

ಬೆಂಗಳೂರು, ಸೆಪ್ಟೆಂಬರ್ 11: ಮುಡಾ ಹಗರಣ ಸಂಬಂಧ ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ ಭವಿಷ್ಯ ಕರ್ನಾಟಕ ಹೈಕೋರ್ಟ್‌ನಲ್ಲಿದೆ. ಗುರುವಾರ ವಿಚಾರಣೆ ಮುಂದುವರಿಯಲಿದ್ದು, ಗುರುವಾರವೇ ಆದೇಶ ಹೊರಬೀಳುವ ಸಾಧ್ಯತೆಯಿದೆ. ರಾಜ್ಯಪಾಲರ ನಿರ್ಧಾರವನ್ನು ಹೈಕೋರ್ಟ್ ಎತ್ತಿಹಿಡಿಯುತ್ತದೆಯಾ? ಅಥವಾ ಪ್ರಾಸಿಕ್ಯೂಷನ್‌ಗೆ ನೀಡಿರುವ ಅನುಮತಿ ರದ್ದುಮಾಡುತ್ತದೆಯಾ ಎಂಬುದು ತೀವ್ರ ಕುತೂಹಲ ಕೆರಳಿಸಿದೆ. ಸೆಪ್ಟೆಂಬರ್ 12ರಂದೇ ವಿಚಾರಣೆಯನ್ನು ಮುಗಿಸೋಣ ಎಂದು ಈಗಾಗಲೇ ನ್ಯಾಯಮೂರ್ತಿಗಳು ಹೇಳಿದ್ದಾರೆ.

ಗುರುವಾರ ಸಿಎಂ ಪರವಾಗಿ ಹಿರಿಯ ವಕೀಲ ಅಭಿಷೇಕ್ ಮನುಸಿಂಘ್ವಿ ವಾದ ಮಂಡಿಸಲಿದ್ದು, ರಾಜ್ಯಪಾಲರ ಪರ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಾದ ಮಂಡಿಸಲಿದ್ದಾರೆ. ಹೀಗಾಗಿ ನಾಳೆ ಹೈಕೋರ್ಟ್‌ನಲ್ಲಿ ಹೈವೋಲ್ಟೇಜ್ ವಾದ-ಪ್ರತಿವಾದ ನಡೆಯುವ ಸಾಧ್ಯತೆಯಿದೆ.

ಕಾಂಗ್ರೆಸ್‌ನಲ್ಲಿ ಸಿಎಂ ಕುರ್ಚಿ ರೇಸ್; ಬಿಜೆಪಿ ಲೇವಡಿ

ಮತ್ತೊಂದೆಡೆ, ಕಾಂಗ್ರೆಸ್‌ನಲ್ಲಿನ ಸಿಎಂ ಕುರ್ಚಿ ರೇಸ್‌ ಬಗ್ಗೆ ಬಿಜೆಪಿ ನಾಯಕರು ಲೇವಡಿ ಮಾಡಿದ್ದಾರೆ. ಸಿದ್ದರಾಮ್ಯಯರ ಸಿಎಂ ಕುರ್ಚಿ ಉಳಿಯಲ್ಲ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಹೇಳಿದರೆ, ಯಾವುದೇ ಕ್ಷಣದಲ್ಲಿ ಸಿಎಂ ರಾಜೀನಾಮೆ ನಿಶ್ಚಿತ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹೇಳಿದ್ದಾರೆ. ಇನ್ನು ಮಾಜಿ ಸಚಿವ ಸುಧಾಕರ್, ಸಿದ್ದರಾಮಯ್ಯಗೆ ಕಾಂಗ್ರೆಸ್‌ನವರೇ ಖೆಡ್ಡಾ ತೋಡಿದ್ದಾರೆ ಎಂದು ಕುಟುಕಿದ್ದಾರೆ.

ಈ ಮಧ್ಯೆ, ರಾಜ್ಯ ಕಾಂಗ್ರೆಸ್​ನಲ್ಲಿ ಸಿಎಂ ರೇಸ್ ಬಗ್ಗೆ ಹೇಳಿಕೆ ನೀಡದಂತೆ ಹಿರಿಯ ಸಚಿವರಿಗೆ ಕಡಿವಾಣ ಹಾಕಬೇಕು ಎಂದು ರಾಹುಲ್‌ ಗಾಂಧಿಗೆ 15ಕ್ಕೂ ಹೆಚ್ಚು ಕಾಂಗ್ರೆಸ್ ನಾಯಕರು ಪತ್ರ ಬರೆದಿದ್ದಾರೆ. ನಾವು ಹೋರಾಡಬೇಕಾಗಿರುವುದು ಬಿಜೆಪಿ-ಜೆಡಿಎಸ್ ವಿರುದ್ಧ. ಅದರ ಬದಲು ಸಿಎಂ ಸ್ಥಾನದ ಕುರಿತು ಹೇಳಿಕೆ ನೀಡುತ್ತಿರುವುದಕ್ಕೆ, ಸಚಿವರ ಗೊಂದಲಕಾರಿ ಹೇಳಿಕೆಗೆ ಕಡಿವಾಣ ಹಾಕಿ ಎಂದು ಬಿ.ಎಲ್.ಶಂಕರ್, ವಿ.ಎಸ್.ಉಗ್ರಪ್ಪ, ಬಿ.ಎನ್.ಚಂದ್ರಪ್ಪ, ಎಲ್.ಹನುಮಂತಯ್ಯ, ರಾಣಿ ಸತೀಶ್, ವಿ.ಆರ್.ಸುದರ್ಶನ್, ಎಚ್​ಎಂ ರೇವಣ್ಣ, ಹೆಚ್​​ಡಿ ಅಮರನಾಥ್, ಸಿ.ಎಸ್.ದ್ವಾರಕನಾಥ್, ಪಿ.ಆರ್.ರಮೇಶ್ ಸೇರಿ 15ಕ್ಕೂ ಹೆಚ್ಚು ನಾಯಕರು ರಾಹುಲ್ ಗಾಂಧಿಗೆ ಪತ್ರ ಬರೆದಿದ್ದಾರೆ.

ಇದನ್ನೂ ಓದಿ: ರಾಜ್ಯದಲ್ಲಿ ಸಿಎಂ ಖುರ್ಚಿಗಾಗಿ ಕಿತ್ತಾಟ; ರಾಹುಲ್​ ಗಾಂಧಿಗೆ ಪತ್ರ ಬರೆದ ‘ಕೈ’ ಹಿರಿಯ ನಾಯಕರು

ಅಮೆರಿಕದಲ್ಲಿ ರಾಹುಲ್ ಭೇಟಿಯಾದ ಡಿಕೆಶಿ!

ಒಂದೆಡೆ ಸಿಎಂಗೆ ಪ್ರಾಸಿಕ್ಯೂಷನ್ ಟೆನ್ಷನ್‌. ಮತ್ತೊಂದೆಡೆ ಹಲವು ಸಚಿವರು ಸಿಎಂ ಕುರ್ಚಿಗೆ ಟವೆಲ್ ಹಾಕುತ್ತಿದ್ದಾರೆ. ಇದರ ನಡುವೆ ಅಮೆರಿಕ ಪ್ರವಾಸದಲ್ಲಿರುವ ಡಿಸಿಎಂ ಡಿಕೆ ಶಿವಕುಮಾರ್ ಮಂಗಳವಾರ ವಾಷಿಂಗ್ಟನ್‌ನಲ್ಲಿ ರಾಹುಲ್ ಗಾಂಧಿ ಅವರನ್ನು ಅನೌಪಚಾರಿಕವಾಗಿ ಭೇಟಿ ಮಾಡಿದ್ದು ಕುತೂಹಲಕ್ಕೆ ಕಾರಣವಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ