ಬೆಂಗಳೂರು, ಆಗಸ್ಟ್ 23: ಮುಡಾ ಹಗರಣ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಮತ್ತು ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ನಡುವಣ ವಾಕ್ಸಮರ ತಾರಕಕ್ಕೇರಿದೆ. ಮೂಡಾ ನಿವೇಶನ ಹಂಚಿಕೆಯಲ್ಲಿ ನನ್ನ ಹಾಗೂ ನನ್ನ ಕುಟುಂಬದ ಪಾತ್ರವೇ ಇಲ್ಲ ಎಂದು ಹೇಳುತ್ತಿರುವ ಸಿದ್ದರಾಮಯ್ಯ ವಿರುದ್ಧ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಆಕ್ರೋಶ ವ್ಯಕ್ತಪಡಿಸಿರುವ ಕುಮಾರಸ್ವಾಮಿ, ದಾಖಲೆ ಸಮೇತ ತಿರುಗೇಟು ನೀಡಿದ್ದಾರೆ.
‘ಸನ್ಮಾನ್ಯ ಸಿಎಂ ಸಿದ್ದರಾಮಯ್ಯನವರೇ, ಮುಡಾ ನಿವೇಶನ ಹಂಚಿಕೆಯಲ್ಲಿ ನನ್ನ ಹಾಗೂ ನನ್ನ ಕುಟುಂಬದ ಪಾತ್ರವೇ ಇಲ್ಲ ಎಂದು ಬೊಗಳೆ ಬಿಡುವ ನಿಮಗೆ ಕನ್ನಡ ಬರುತ್ತದೆ, ಭಾಷೆಯೂ ಗೊತ್ತಿದೆ ಎಂದು ನಾನಾದರೂ ಪರಿಭಾವಿಸುತ್ತೇನೆ. ನೀವು ಸ್ವಯಂಘೋಷಿತ ವಕೀಲರಲ್ಲವೇ? ಇಲ್ಲಿರುವ ದಾಖಲೆಯನ್ನೊಮ್ಮೆ ಕಣ್ಣಲ್ಲಿ ಕಣ್ಣಿಟ್ಟು ಓದಿ. 50:50ರ ಅನುಪಾತದಲ್ಲಿಯೇ ಮುಡಾ ಬದಲಿ ನಿವೇಶನ ನೀಡಲೇಬೇಕು ಎಂದು ಸಿಎಂ ಸಾಹೇಬರ ಧರ್ಮಪತ್ನಿ ‘ಒತ್ತಾಯ’ ಮಾಡಿದ್ದಾರೆ’ ಎಂದು ದಾಖಲೆಯನ್ನು ಲಗತ್ತಿಸಿ ಕುಮಾರಸ್ವಾಮಿ ಉಲ್ಲೇಖಿಸಿದ್ದಾರೆ.
ಅರ್ಜಿದಾರರಾದ ಶ್ರೀಮತಿ ಪಾರ್ವತಮ್ಮ ಇವರಿಗೆ ಮಾರುಕಟ್ಟೆ ದರದಲ್ಲಿ ಜಮೀನಿನ ಪರಿಹಾರ ನೀಡುವುದಾಗಿಯೂ ಅಥವಾ 40:60ರ ಅನುಪಾತದಲ್ಲಿ ನಿವೇಶನ ನೀಡುವುದಾಗಿಯೂ ತಿಳಿಸಲಾಗಿತ್ತು. ಆದರೆ ಪ್ರಾಧಿಕಾರದ ಈ ಸಲಹೆಗೆ ಅವರು ಒಪ್ಪಿಗೆ ನೀಡದೇ ಇದ್ದು, ಬದಲಿ ಜಮೀನನ್ನು ನೀಡುವಂತೆ ಒತ್ತಾಯಿಸಿರುತ್ತಾರೆ. ಇದು ಮುಡಾ ದಾಖಲೆಯಲ್ಲಿರುವ ಒಕ್ಕಣೆ. ಇದಕ್ಕೆ ತಾವು ಏನಂತೀರಿ? ಇದು ತಮ್ಮ ಪ್ರಕಾರ ಟಿಪ್ಪಣಿಯೋ? ಒಕ್ಕಣೆಯೋ? ಅಥವಾ ಅಪ್ಪಣೆಯೋ? ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ಸೂಪರ್ ಸಿಎಂ ಅವರೇ ‘ಒತ್ತಾಯಿಸಿರುತ್ತಾರೆ!!!’ ಎಂದರೆ ಮುಡಾ ಅಧಿಕಾರಿಗಳು ಇನ್ನೇನು ಮಾಡಿಯಾರು? ಆಗ ತಾವು ರಾಜ್ಯದಲ್ಲಿ ಏನಾಗಿದ್ದಿರಿ? ವಿಧಾನಸೌಧದ 3ನೇ ಮಹಡಿಯಲ್ಲಿರುವ ಮುಖ್ಯಮಂತ್ರಿ ಕುರ್ಚಿಯಲ್ಲಿ ಕೂತಿದ್ದಿರಿ. ಈಗ ಹೇಳಿ, ಯಾರ ತಟ್ಟೆಯಲ್ಲಿ ಏನು ಸತ್ತು ಬಿದ್ದಿದೆ? ಕಪ್ಪುಚುಕ್ಕೆಯನ್ನು ವೈಟ್ನರ್ ನುಂಗಿತ್ತಾ? ಎಂದು ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ.
ಸನ್ಮಾನ್ಯ ಸಿಎಂ @siddaramaiah ನವರೇ..
ಮೂಡಾ ನಿವೇಶನ ಹಂಚಿಕೆಯಲ್ಲಿ ನನ್ನ ಹಾಗೂ ನನ್ನ ಕುಟುಂಬದ ಪಾತ್ರವೇ ಇಲ್ಲ ಎಂದು ಬೊಗಳೆ ಬಿಡುವ ನಿಮಗೆ ಕನ್ನಡ ಬರುತ್ತದೆ, ಭಾಷೆಯೂ ಗೊತ್ತಿದೆ ಎಂದು ನಾನಾದರೂ ಪರಿಭಾವಿಸುತ್ತೇನೆ.ನೀವು ಸ್ವಯಂಘೋಷಿತ ವಕೀಲರಲ್ಲವೇ?
ಇಲ್ಲಿರುವ ದಾಖಲೆಯನ್ನೊಮ್ಮೆ ಕಣ್ಣಲ್ಲಿ ಕಣ್ಣಿಟ್ಟು ಓದಿ.
“50:50ರ… pic.twitter.com/9WC5gRtIGK
— ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy (@hd_kumaraswamy) August 23, 2024
ಮತ್ತೊಂದೆಡೆ, ಕುಮಾರಸ್ವಾಮಿ ಸೇರಿದಂತೆ ಬಿಜೆಪಿ ಜೆಡಿಎಸ್ ಮೈತ್ರಿ ನಾಯಕರ ವಿರುದ್ಧದ ಆರೋಪಗಳಿಗೆ ಸಂಬಂಧಿಸಿ ಪ್ರಾಸಿಕ್ಯೂಷನ್ಗೆ ಅನುಮತಿ ನೀಡುವ ಪ್ರಕ್ರಿಯೆ ತ್ವರಿತಗೊಳಿಸುವಂತೆ ರಾಜ್ಯಪಾಲರಿಗೆ ಸಲಹೆ ನೀಡಲು ಗುರುವಾರ ನಡೆದ ರಾಜ್ಯ ಸಚಿವಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.
ಇದನ್ನೂ ಓದಿ: ಗಣಿಪುರಾಣ ಬಿಚ್ಚಿದ್ರೆ ನಿಮ್ಮ ಮನೆ ಮುಂದೆ ಕಾನ್ಸ್ಟೇಬಲ್ಗಳು ಸಾಲುಗಟ್ಟಬೇಕಾಗುತ್ತದೆ: ಸಿಎಂಗೆ ಎಚ್ಡಿಕೆ ಎಚ್ಚರಿಕೆ
ಏತನ್ಮಧ್ಯೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ಇತರ ಕೆಲವು ಕಾಂಗ್ರೆಸ್ ನಾಯಕರು ಇಂದು ದೆಹಲಿಗೆ ತೆರಳಲಿದ್ದು, ಹೈಕಮಾಂಡ್ ಭೇಟಿಯಾಗಿ ಸಮಾಲೋಚನೆ ನಡೆಸಲಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ