AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗಣಿಪುರಾಣ ಬಿಚ್ಚಿದ್ರೆ ನಿಮ್ಮ ಮನೆ ಮುಂದೆ ಕಾನ್ಸ್​ಟೇಬಲ್​ಗಳು ಸಾಲುಗಟ್ಟಬೇಕಾಗುತ್ತದೆ: ಸಿಎಂಗೆ ಎಚ್​ಡಿಕೆ ಎಚ್ಚರಿಕೆ

ರಾಜ್ಯ ರಾಜಕೀಯದಲ್ಲಿ ಸದ್ಯ ಪ್ರಾಸಿಕ್ಯೂಷನ್ ಅಸ್ತ್ರ ಆಡಳಿತ ಪಕ್ಷ ಹಾಗೂ ವಿಪಕ್ಷಗಳ ನಡುವೆ ಜಟಾಪಟಿಗೆ ಕಾರಣವಾಗಿದೆ. ಮೂಡ ಹಗರಣದಲ್ಲಿ ಸಿಎಂ ವಿರುದ್ದ ತನಿಖೆಗೆ ರಾಜ್ಯಪಾಲರಿಂದ ಪ್ರಾಸಿಕ್ಯೂಷನ್ ಗೆ ಅನುಮತಿ ಸಿಕ್ಕಿದ ಮೇಲೆ ರಾಜಕೀಯ ವಲಯದಲ್ಲಿ ಸುಂಟರಗಾಳಿ ವಾಗ್ವಾದ ಶುರುವಾಗಿದ್ದು, ಹಲವು ನಾಯಕರ ನಡುವೆ ಸುತ್ತುತ್ತಿದೆ. ಈ ಸಂಬಂಧ ಕೇಂದ್ರ ಸಚಿವ ಎಚ್​​ಡಿ ಕುಮಾರಸ್ವಾಮಿ, ಸಿದ್ದರಾಮಯ್ಯ ಮಧ್ಯ ಮಾತಿನ ವಾಗ್ಯದ್ಧ ಶುರುವಾಗಿದ್ದು, ಸಿಎಂ ವಿರುದ್ಧ ಎಚ್​ಡಿಕೆ ಮತ್ತೊಂದು ಬಾಂಬ್ ಸಿಡಿಸಿದ್ದಾರೆ.

ಗಣಿಪುರಾಣ ಬಿಚ್ಚಿದ್ರೆ ನಿಮ್ಮ ಮನೆ ಮುಂದೆ ಕಾನ್ಸ್​ಟೇಬಲ್​ಗಳು ಸಾಲುಗಟ್ಟಬೇಕಾಗುತ್ತದೆ: ಸಿಎಂಗೆ ಎಚ್​ಡಿಕೆ ಎಚ್ಚರಿಕೆ
ಕುಮಾರಸ್ವಾಮಿ-ಸಿದ್ದರಾಮಯ್ಯ
ರಮೇಶ್ ಬಿ. ಜವಳಗೇರಾ
|

Updated on:Aug 22, 2024 | 7:30 PM

Share

ಬೆಂಗಳೂರು, (ಆಗಸ್ಟ್ 22): ಕರ್ನಾಟಕದಲ್ಲಿ ಮಾಜಿ- ಹಾಲಿ ಸಿಎಂಗಳ ಪ್ರಾಸಿಕ್ಯುಷನ್ ಯುದ್ದ ಜೋರಾಗಿದೆ. ಮೂಡ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ದ ಪ್ರಾಸಿಕ್ಯೂಷನ್ ಗೆ ನಿಡಿದ್ದ ಬೆನ್ನಲ್ಲೇ ಕೇದ್ರ ಸಚಿವ ಕುಮಾರಸ್ವಾಮಿ ಗೆ ಪ್ರಾಸಿಕ್ಯೂಷನ್ ಶಾಕ್ ನೀಡಲು ಹೊರಟಿರುವ ಸಿಎಂ ಸಿದ್ದರಾಮಯ್ಯ ಅಂಡ್ ಟೀಮ್ ವಿರುದ್ದ ಎಚ್ ಡಿಕೆ ಗುಡುಗಿದ್ದಾರೆ. ನಿಮ್ಮ ಹಣೆಬರಹ ನಿರ್ಧರಿಸುವ ನೂರಾರು ಪುರಾಣಗಳು ನನ್ನಲ್ಲಿವೆ. ಸಾವಿರಾರು ಚಾಪ್ಟರುಗಳ ಪ್ಯಾನ್ ಇಂಡಿಯಾ ಸಿನಿಮಾವನ್ನೇ ಮಾಡಬಹುದು. ಬೇಲಿಕೇರಿಯಲ್ಲಿ ಅದಿರು ಕದ್ದ ಅಸಾಮಿಗಳ ಜತೆ ಶಾಮೀಲು ಆರೋಪ. ನಿಮ್ಮ ‘ಸಿದ್ಧಹಸ್ತ’ ಶಾಮೀಲಾಗಿರುವ ಗಣಿಪುರಾಣ ಬಿಚ್ಚಿದರೆ ನಿಮ್ಮ ಮನೆಯ ಮುಂದೆ ಕಾನ್ಸ್ ಟೇಬಲ್ ಗಳು ಸಾಲುಗಟ್ಟಬೇಕಾಗುತ್ತದೆ ಹುಷಾರ್ ಎಂದು ಎಚ್ಚರಿಕೆ ನೀಡಿದ್ದಾರೆ.

ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿರುವ ಕುಮಾರಸ್ವಾಮಿ, ಸಿದ್ದರಾಮಯ್ಯ ವಿರುದ್ಧ ಒಂದಿಷ್ಟು ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಅಲ್ಲದೇ ದಾಖಲೆಗಳು ಬಿಚ್ಚಿಡುತ್ತೇನೆ ಎಂದು ಎಚ್ಚರಿಕೆ ಸಹ ನೀಡಿದ್ದಾರೆ. ಹಾಗಾದ್ರೆ, ಕುಮಾರಸ್ವಾಮಿ ಏನೆಲ್ಲಾ ಹೇಳಿದ್ದಾರೆ ಎನ್ನುವ ವಿವರ ಈ ಕೆಳಗಿನಂತಿದೆ.

ಇದನ್ನೂ ಓದಿ: ಮಹತ್ವದ ನಿರ್ಣಯ ಕೈಗೊಂಡ ಸಚಿವ ಸಂಪುಟ ಸಭೆ: ಬಿಜೆಪಿ, ಜೆಡಿಎಸ್​ ನಾಯಕರಿಗೆ ಸಂಕಷ್ಟ

ಸಿದ್ದಕರ್ಮಿ ಸಿದ್ದರಾಮಯ್ಯನವರೇ . ನಿಮ್ಮ ವಿರುದ್ಧ ಬಂದ ಮೂಡಾ ಕೊಚ್ಚೆಯ ಗಮನ ಬೇರೆಡೆಗೆ ಸೆಳೆಯುವ ನಿಮ್ಮ ಹುನ್ನಾರ ನನಗೆ ಅರ್ಥವಾಗುತ್ತದೆ. ಹೇಗಾದರೂ ಅಧಿಕಾರದಲ್ಲೇ ಉಳಿದು ಲೂಟಿ ಹೊಡೆಯಬೇಕೆನ್ನುವ ನಿಮ್ಮ ಧನದಾಹದ ಹಪಾಹಪಿಯನ್ನೂ ಅರ್ಥ ಮಾಡಿಕೊಳ್ಳಬಲ್ಲೆ. ಕಳ್ಳನ ಜಾಗದಲ್ಲಿ ನಿಂತು ಊರಿಗೆಲ್ಲ ಗೀತೆ ಬೋಧಿಸುವ ನಿಮ್ಮ ಪ್ರಾರಬ್ಧ ಎಂಥಾ ಕೀಳುಮಟ್ಟಕ್ಕೆ ಇಳಿದಿದೆ ಎನ್ನುವುದನ್ನೂ ಅರ್ಥ ಮಾಡಿಕೊಂಡಿದ್ದೇನೆ. ಎಷ್ಟೇ ಆದರೂ ನೀವು ಸಕಲ ಕಲೆಗಳ ಸಿದ್ದಕರ್ಮಿ, ಇಂಥ ಗಲೀಜು ಕೆಲಸ ನಿಮಗೆ ಬೆಣ್ಣೆಯಿಂದ ಬಂದ ವಿದ್ಯೆ ಎಂದು ವಾಗ್ದಾಳಿ ನಡೆಸಿದ್ದಾರೆ.

•ಸಾಯಿ ವೆಂಕಟೇಶ್ವರಕ್ಕೆ 550 ಎಕರೆ ಮಂಜೂರು ಮಾಡಿದ್ದೇನೆ ಎಂದು ಬೊಗಳೆ ಬಿಟ್ಟಿದ್ದೀರಿ. ನನ್ನ ಬರವಣಿಗೆ ಪೋರ್ಜರಿ ಆಗಿದೆ. ಪತ್ರಿಕೆಗಳ ವರದಿಗೆ ನಾನು ಉತ್ತರ ಕೊಡುತ್ತೇನೆ, ಪಲಾಯನ ನನ್ನ ಜಾಯಮಾನವಲ್ಲ. ಆದರೆ, ಆ ವರದಿಯನ್ನೇ ನೆತ್ತಿ ಮೇಲಿಟ್ಟುಕೊಂಡು ಉಪ್ಪಿನಕಾಯಿ ಚಪ್ಪರಿಸುವ ದೈನೇಸಿ ಸ್ಥಿತಿ ನಿಮಗೇಕೆ? 40 ವರ್ಷಗಳ ರಾಜಕೀಯ ಜೀವನದಲ್ಲಿ ನನ್ನ ಮೇಲೆ ಒಂದೇ ಒಂದು ಕಪ್ಪುಚುಕ್ಕೆ ಇಲ್ಲವೆನ್ನುವ ನೀವು, ವೈಟ್ನರ್ ಉಜ್ಜಿ ಕಪ್ಪುಚುಕ್ಕೆ ತೆಗೆಯುವ ವ್ಯರ್ಥ ಪ್ರಯತ್ನ ಮಾಡಿದ್ದೇಕೆ?

•ಮೂಡದಲ್ಲಿ ನೀವು, ನಿಮ್ಮ ಸಕುಟುಂಬ ಪರಿವಾರ ಸರಕಾರಿ ಭೂಮಿಯನ್ನು ಹೇಗೆಲ್ಲಾ ಮುಕ್ಕಿತು ಎನ್ನುವುದಕ್ಕೆ ದಂಡಿದಂಡಿ ದಾಖಲೆಗಳೇ ಇವೆ. ನಿಮ್ಮ ಪಟಾಲಂ ಹೆಲಿಕಾಪ್ಟರ್ ನಲ್ಲಿ ಕದ್ದು ಸಾಗಿಸಿದ ದಾಖಲೆಗಳು ಸುಳ್ಳಾ? ಕಪ್ಪುಚುಕ್ಕೆಯನ್ನು ನಿಮ್ಮ ವೈಟ್ನರ್ ಅಳಿಸೀತಾ ಸಿದ್ದರಾಮಯ್ಯನವರೇ?

•ನನ್ನ ಸಹಿ ಇಲ್ಲ, ಟಿಪ್ಪಣಿಯೂ ಇಲ್ಲ ಅಂತೀರಿ. ಅಪ್ಪಣೆಯನ್ನಷ್ಟೇ ಕೊಟ್ಟಿದ್ದೀರಿ! 14 ಸೈಟಿಗೆ ₹62 ಕೋಟಿ ಪರಿಹಾರ ಕೇಳಲು ಹೇಳಿದ್ದು ಯಾವ ಟಿಪ್ಪಣಿ? ನಿಮ್ಮದು ನಾಲಿಗೆಯೋ.. ಇನ್ನೇನೋ.. ಆಚಾರವಿಲ್ಲದ ನಾಲಿಗೆ ನನ್ನ ತಟ್ಟೆಯತ್ತ ಚಾಚಿದೆ… ಸತ್ತ ಜೀವದ ರುಚಿ ನೆಕ್ಕಲು..

•ಮಿಸ್ಟರ್ ಸಿದ್ದರಾಮಯ್ಯ.. ನಾನು ಕಾನೂನು ಪಂಡಿತ, ವಕೀಲ ಎನ್ನುತ್ತೀರಿ. 2011ರಲ್ಲಿ ಸುಪ್ರೀಂ ಕೋರ್ಟ್ SITಗೆ ಕೊಟ್ಟ ಆದೇಶವೇನು ಎಂದು ನಿಮಗೆ ಗೊತ್ತಿಲ್ಲವೇ? ನಾನು ವಕೀಲ.. ನಾನು ವಕೀಲ.. ಎಂದು ಪದೇಪದೆ ಹೇಳಬೇಡಿ ಎಂದು ಹಿಂದೆಯೇ ಸಲಹೆ ಮಾಡಿದ್ದೆ. ಬುದ್ಧಿಗೇಡಿಗಳಿಗೆ ಬುದ್ಧಿವಾದ ರುಚಿಸದು.

ರಾಜ್ಯಪಾಲರಿಗೆ SIT ಬರೆದ ಪತ್ರ ಇಟ್ಟುಕೊಂಡು ಹಾರಾಟ ಮಾಡುತ್ತಿದ್ದೀರಿ ನೀವು. ಪತಂಗದ ಹಾರಾಟ ನೋಡಲಿಕ್ಕೆ ಚೆಂದ, ಕೆಳಗಿರುವ ಬೆಂಕಿಜ್ವಾಲೆ ಅದಕ್ಕೆ ಅರಿವಿರುವುದಿಲ್ಲ. ನಿಮ್ಮ ಬಗ್ಗೆ ನನಗೆ ಕನಿಕರವಿದೆ. ನಿಮ್ಮ ಆನಂದ ತಾತ್ಕಾಲಿಕ ಸಿದ್ದರಾಮಯ್ಯನವರೇ..

•ಸುತ್ತಲೂ ಪಟಾಲಂ ಕಟ್ಟಿಕೊಂಡು, ಹೈಕಮಾಂಡ್ ಅನ್ನೇ ಕಾಲಕಸ ಮಾಡಿಕೊಂಡು, ನಂಬಿ ಕೈಹಿಡಿದವರ ಬೆನ್ನಿಗೆ ಚೂರಿ ಹಾಕಿ ಕುರ್ಚಿಗಾಗಿ ಪಾಲಿಟಿಕ್ಸ್ ಮಾಡುವ ನಿಮ್ಮ ದಿಕ್ಕೆಟ್ಟ ದುಸ್ಥಿತಿ ನನಗಿಲ್ಲ ಸಿದ್ದರಾಮಯ್ಯನವರೇ..ನನ್ನ ರಾಜಕಾರಣ ನಿಮ್ಮಂತೆಯೇ ಹಣಕ್ಕೆ, ಅಧಿಕಾರಕ್ಕೆ ಅಲ್ಲ. ಅಧಿಕಾರ ಇದ್ದರೂ, ಇಲ್ಲದಿದ್ದರೂ ನಾನು ನಾನೇ… ‘ಸೋತರೆ ಸೋಲಬೇಕು ಬಾಹುಬಲಿಯಂತೆ..’ ಆ ಮಹಾನ್ ವಿರಾಗಿಯೇ ನನ್ನ ಆದರ್ಶ. 20 ತಿಂಗಳ ಅಧಿಕಾರ,14 ತಿಂಗಳ ಸರಕಾರ ತ್ಯಜಿಸುವಾಗಲೂ ನಾನು ನಿರ್ಭಾವುಕ. ಇದು ನಿಮಗೆ ಸಾಧ್ಯವೇ?

•ಗೌರವಾನ್ವಿತ ಪ್ರಧಾನಮಂತ್ರಿಗಳ ರಕ್ಷಣೆ ಪಡೆದುಕೊಳ್ಳುವ, ಅವರ ಗೌರವಕ್ಕೆ ಧಕ್ಕೆ ತರುವ ಕೆಲಸ ನಾನೆಂದೂ ಮಾಡಲಾರೆ. ನನ್ನನ್ನು ನಾನು ರಕ್ಷಣೆ ಮಾಡಿಕೊಳ್ಳುವುದೂ ಗೊತ್ತು. ನಿಮ್ಮ ದುಷ್ಟತನದ ಭಕ್ಷಣೆಯೂ ಗೊತ್ತು.

•ನನ್ನ ಪುರಾಣ ಕಂತುಗಳಲ್ಲಿ ಬರುತ್ತದೆ ಎನ್ನುವ ಸಿದ್ದರಾಮಯ್ಯನವರೇ.. ನಿಮ್ಮ ಹೆಣೆಬರಹ ನಿರ್ಧರಿಸುವ ನೂರಾರು ಪುರಾಣಗಳು ನನ್ನಲ್ಲಿವೆ. ಸಾವಿರಾರು ಚಾಪ್ಟರುಗಳ ಪ್ಯಾನ್ ಇಂಡಿಯಾ ಸಿನಿಮಾವನ್ನೇ ಮಾಡಬಹುದು. ಬೇಲಿಕೇರಿಯಲ್ಲಿ ಅದಿರು ಕದ್ದ ಅಸಾಮಿಗಳ ಜತೆ ನಿಮ್ಮ ‘ಸಿದ್ಧಹಸ್ತ’ ಶಾಮೀಲಾಗಿರುವ ಗಣಿಪುರಾಣ ಬಿಚ್ಚಿದರೆ ನಿಮ್ಮ ಮನೆಯ ಮುಂದೆ ಕಾನ್ಸ್ ಟೇಬಲ್ ಗಳು ಸಾಲುಗಟ್ಟಬೇಕಾಗುತ್ತದೆ. ಹುಷಾರ್ ಎಂದು ಎಚ್ಚರಿಕೆ ಸಂದೇಶ ನೀಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:37 pm, Thu, 22 August 24