ಮುಡಾ ಗೆಬ್ಬೆದ್ದು ಹೋಗಿದೆ, ನಮ್ಮಿಂದಲೂ ತಪ್ಪಾಗಿದೆ ಸರಿ ಮಾಡುತ್ತೇವೆ: ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿಕೆ
ಮೈಸೂರಿನಲ್ಲಿರುವ ಸಿಎಂ ಸಿದ್ದರಾಮಯ್ಯ ಮುಡಾ ಹಗರಣದ ಬಗ್ಗೆ ಮಾಧ್ಯಮದವರು ಪ್ರಶ್ನೆ ಕೇಳುತ್ತಿದ್ದಂತೆಯೇ ಸಿಟ್ಟಾದರು. ಹೊಟ್ಟೆಕಿಚ್ಚಿನಿಂದ ಈ ವಿಚಾರದಲ್ಲಿ ತಮ್ಮನ್ನು ಗುರಿಯಾಗಿಸಲಾಗುತ್ತಿದೆ ಎಂದ ಅವರು, ನಮ್ಮಿಂದಲೂ ತಪ್ಪಾಗಿದೆ. ಆದರೆ ಬಿಜೆಪಿ ಅವಧಿಯಲ್ಲೇ ಹೆಚ್ಚು ತಪ್ಪಾಗಿದೆ. ಎಲ್ಲ ಸರಿ ಮಾಡುತ್ತೇವೆ ಎಂದರು. ಸಿಎಂ ಹೇಳಿಕೆಯ ಪೂರ್ಣ ವಿವರ ತಿಳಿಯಲು ಮುಂದೆ ಓದಿ.
ಮೈಸೂರು, ಜುಲೈ 11: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಮುಡಾ ಗೆಬ್ಬೆದ್ದು ಹೋಗಿದೆ. ಅದನ್ನು ಸ್ವಚ್ಛಗೊಳಿಸುವ ಕೆಲಸ ಮಾಡುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು. ಮೈಸೂರಿನಲ್ಲಿ ಮಾತನಾಡಿದ ಅವರು, ಮುಡಾ ಹಗರಣದ ಬಗ್ಗೆ ತನಿಖೆ ನಡೆಯುತ್ತಿದೆ. ತನಿಖಾ ವರದಿ ಬಂದ ಮೇಲೆ ಕಠಿಣ ಕ್ರಮ ಕೈಗೊಳ್ಳುತ್ತೇನೆ. ನಮ್ಮ ಕಾಲದಲ್ಲೂ ತಪ್ಪುಗಳು ಆಗಿದೆ. ಆದರೆ, ಬಿಜೆಪಿ ಕಾಲದಲ್ಲೇ ಹೆಚ್ಚು ತಪ್ಪಾಗಿರುವುದು. ಅದನ್ನು ಸರಿಪಡಿಸುತ್ತೇನೆ ಎಂದರು.
ಪತ್ನಿಗೆ ಸೈಟ್ ಕೊಟ್ಟಿರುವ ವಿಚಾರವಾಗಿ ಪ್ರತಿಪಕ್ಷಗಳ ಟೀಕೆಗೆ ಪ್ರತಿಕ್ರಿಯಿಸಿದ ಅವರು, ನಮ್ಮದು ಅಕ್ರಮವೇ ಅಲ್ಲ. ಆ ಪ್ರಕರಣವೇ ಬೇರೆ, ಈಗ ನಡೆದಿರುವ ಪ್ರಕರಣಗಳೇ ಬೇರೆ ಎಂದರು.
ನನ್ನ ಪತ್ನಿಗೆ ಸೈಟ್ ನೀಡಿರುವ ವಿಚಾರ ಹಗರಣವೇ ಅಲ್ಲ. ಬಿಜೆಪಿ ಸರ್ಕಾರದ ಅವಧಿಯಲ್ಲಿ ನನ್ನ ಪತ್ನಿಗೆ ಸೈಟ್ ಕೊಟ್ಟಿದ್ದು. ಅವರು ನನ್ನನ್ನು ಕೇಳಿ ಸೈಟ್ ಕೊಟ್ಟಿದ್ದಾರಾ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.
ಪತ್ನಿಗೆ ಸೈಟ್ ಹಂಚಿಕೆಯಾದಾಗ ನಾನು ವಿರೋಧ ಪಕ್ಷದ ನಾಯಕ. ನಾನು ಈಗ ವಿಪಕ್ಷ ನಾಯಕನನ್ನು ಕೇಳಿ ಕೆಲಸ ಮಾಡುತ್ತೇನಾ? ಮುಡಾ ತಪ್ಪು ಮಾಡಿ ನಂತರ ಪರಿಹಾರದ ಸೈಟ್ ಕೊಟ್ಟಿದೆ. ಭೂಮಿ ಕಳೆದುಕೊಂಡ ನಾವು ಪರಿಹಾರ ಪಡೆಯಬೇಕೋ ಬೇಡವೋ? ಈಗಲೂ ಅವರು ಕೊಟ್ಟಿರುವ ಸೈಟ್ ಅನ್ನು ವಾಪಸ್ ಪಡೆಯಲಿ. ಲೆಕ್ಕದ ಪ್ರಕಾರ ಬಡ್ಡಿ ಸೇರಿಸಿ 62 ಕೋಟಿ ರೂಪಾಯಿ ಪಾವತಿಸಲಿ ಎಂದಿದ್ದೇನೆ. ಸೈಟ್ ಹಂಚಿಕೆ ವಿಚಾರ ಯಾವ ಹಂತದಲ್ಲೂ ಅಕ್ರಮವಾಗಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.
ಹೊಟ್ಟೆ ಕಿಚ್ಚಿನಿಂದ ಇಲ್ಲಸಲ್ಲದ ಆರೋಪ: ಸಿದ್ದರಾಮಯ್ಯ
ಎರಡನೇ ಬಾರಿ ಸಿಎಂ ಆಗಿದ್ದಕ್ಕೆ ಸಹಿಸಲು ಕೆಲವರಿಗೆ ಆಗುತ್ತಿಲ್ಲ. ಹಿಂದುಳಿದ ವರ್ಗದ ಸಿದ್ದರಾಮಯ್ಯ ಸಿಎಂ ಆಗಿದ್ದಕ್ಕೆ ಸಹಿಸಿಕೊಳ್ಳಲು ಆಗುತ್ತಿಲ್ಲ. ಹೊಟ್ಟೆ ಕಿಚ್ಚಿನಿಂದ ಕೆಲವರು ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ನನ್ನ ಮೇಲೆ ಆರೋಪ ಮಾಡಲು ಬೇರೆ ಏನೂ ಇಲ್ಲ, ಹೀಗಾಗಿ ಈ ವಿಚಾರವನ್ನು ಮುಂದಿಟ್ಟುಕೊಂಡು ಆರೋಪ ಮಾಡುತ್ತಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು.
ಕಾನೂನಾತ್ಮಕವಾಗಿ ಆಗಿದ್ದನ್ನು ಅಕ್ರಮವೆಂದು ಬಿಂಬಿಸಲು ಯತ್ನಿಸುತ್ತಿದ್ದಾರೆ. ಇದಕ್ಕೆಲ್ಲ ಹೆದರುತ್ತೀನಾ, ಇದರಿಂದ ನನ್ನ ಹೆದರಿಸಲು ಸಾಧ್ಯನಾ ಎಂದು ಅವರು ವಾಗ್ದಾಳಿ ನಡೆಸಿದರು.
ಇದನ್ನೂ ಓದಿ: ಕರ್ನಾಟಕ ರಾಜ್ಯದ ಶೇ 80ರಷ್ಟು ಮಂದಿ ಬಡವರೇ? ಸಿಎಂ ಸಿದ್ದರಾಮಯ್ಯ ಹೀಗೆ ಪ್ರಶ್ನಿಸಲು ಇದೆ ಕಾರಣ!
ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ಅಕ್ರಮ ವರ್ಗಾವಣೆ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿ, ಇನ್ನೂ ಅಧಿಕೃತವಾದ ಯಾವ ವರದಿ ಬಂದಿಲ್ಲ. ಮಾಧ್ಯಮದವರು ತೋರಿಸುವ ವರದಿಯ ಪ್ರತಿ ಹೇಗೆ ನಂಬಲಿ? ವರ್ಗಾವಣೆ ಆಗುವ ಹಣದ ಎಲ್ಲಾ ವಿಚಾರ ನನ್ನ ಗಮನಕ್ಕೆ ಬರಲ್ಲ. ವಾಲ್ಮೀಕಿ ಹಗರಣ ಬಗ್ಗೆ ಮೂರು ಹಂತದಲ್ಲಿ ತನಿಖೆಯಾಗುತ್ತಿದೆ. ವರದಿ ಬಂದ ಬಳಿಕ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುತ್ತೇನೆ. ಈಗ ಎಲ್ಲವೂ ತನಿಖಾ ಹಂತದಲ್ಲೇ ಇದೆ ಎಂದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ