
ಮೈಸೂರು, ಜೂನ್ 17: ಜಯದೇವ ಹೃದ್ರೋಗ ಆಸ್ಪತ್ರೆ (Jayadeva Hospital) ರಾಜ್ಯದಲ್ಲಿ ಅತ್ಯಂತ ಪ್ರಸಿದ್ಧಿ ಪಡೆದಿರುವ ಆಸ್ಪತ್ರೆ. ಹೃದಯ ಸಂಬಂಧಿ ಕಾಲೆಗಳಿಗೆ ಚಿಕಿತ್ಸೆ ನೀಡುವುದರಲ್ಲಿ ಎತ್ತಿದ ಕೈ. ಆದರೆ ಇಂತಹ ಆಸ್ಪತ್ರೆ ವಿರುದ್ಧ ಇದೀಗ ಗಂಭೀರ ಆರೋಪವೊಂದು ಕೇಳಿಬಂದಿದೆ. ಕಳೆದ 24 ಗಂಟೆಯಲ್ಲಿ ಮೈಸೂರಿನ (mysuru) ಜಯದೇವ ಆಸ್ಪತ್ರೆಯಲ್ಲಿ 11 ರೋಗಿಗಳು ಸಾವನ್ನಪ್ಪಿದ್ದಾರೆ ಎನ್ನಲಾಗುತ್ತಿದೆ. ಈ ಬಗ್ಗೆ ಮೃತ ರೋಗಿಗಳ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ವೈದ್ಯರ ನಿರ್ಲಕ್ಷ್ಯವೇ ಇದಕ್ಕೆ ಕಾರಣವೆಂದು ಹೇಳಲಾಗುತ್ತಿರುವ ವಿಡಿಯೋಗಳು ವೈರಲ್ ಆಗಿದೆ. ಆದರೆ ಇದೀಗ ಸಂಸ್ಥೆಯ ನಿರ್ದೇಶಕ ಡಾ.ದಿನೇಶ್ ಸ್ಪಷ್ಟನೆ ನೀಡಿದ್ದಾರೆ.
ಸಾಂಸ್ಕೃತಿಕ ನಗರಿ ಮೈಸೂರಿನ ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ ರೋಗಿಗಳ ಸರಣಿ ಸಾವುಗಳು ಮುಂದುವರಿದಿದ್ದು, 24 ಗಂಟೆಯಲ್ಲಿ ಬರೋಬ್ಬರಿ 11 ಜನ ರೋಗಿಗಳು ಮೃತಪಟ್ಟಿದ್ದಾರೆ ಎನ್ನಲಾಗುತ್ತಿದೆ. ಇದರಿಂದ ಆತಂಕಗೊಂಡಿರುವ ಸಾರ್ವಜನಿಕರು ಮತ್ತು ಮೃತ ರೋಗಿಗಳ ಕುಟುಂಬಸ್ಥರು ಆಸ್ಪತ್ರೆಯಲ್ಲಿ ವೈದ್ಯರೇ ಇರಲಿಲ್ಲ ಎಂಬ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಸದ್ಯ ಇದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ಇನ್ನು ಈ ವಿಚಾರ ವೈರಲ್ ಆಗುತ್ತಿದ್ದಂತೆ ಜಯದೇವ ಆಸ್ಪತ್ರೆ ನಿರ್ದೇಶಕ ಡಾ.ದಿನೇಶ್ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪ್ರತಿನಿತ್ಯ 600 ರಿಂದ 800 ಜನ ಹೊರ ರೋಗಿಗಳು ಬರುತ್ತಾರೆ. 100 ರಷ್ಟು ಜನ ದಾಖಲಾಗುತ್ತಾರೆ. ಈ ಪೈಕಿ ಬಹುತೇಕ ರೋಗಿಗಳು ತೀವ್ರ ಹೃದಯಾಘಾತ ಹೊಂದಿರುತ್ತಾರೆ. ನಮ್ಮಲ್ಲಿ ಚಿಕಿತ್ಸೆ ಮೊದಲು. ಇಂದು ಆಸ್ಪತ್ರೆಯಲ್ಲಿ ನಿಧನರಾದ ತೀವ್ರ ಹೃದಯಾಘಾತಕ್ಕೆ ಒಳಗಾಗಿದ್ದರು. ನಮ್ಮ ವೈದ್ಯರು ಈ ಎಲ್ಲಾ ರೋಗಿಗಳಿಗೂ ಚಿಕಿತ್ಸೆ ನೀಡಿದ್ದಾರೆ. ಸಾವನ್ನಪ್ಪಿರುವ ರೋಗಿಗಳು ಒಂದೇ ದಿನ ದಾಖಲಾದವರಲ್ಲ. ಹಲವು ದಿನಗಳಿಂದ ದಾಖಲಾದವರು ಇಂದು ಸಾವನ್ನಪ್ಪಿದ್ದಾರೆ. ಎಲ್ಲರೂ ಕೂಡ 60 ವರ್ಷ ವಯಸ್ಸು ಮೇಲ್ಪಟ್ಟವರು ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ: ಹಾಸನ ಹೃದಯಾಘಾತ ಪ್ರಕರಣಗಳಿಗೆ ಕೋವಿಡ್ ಲಸಿಕೆ ಕಾರಣವಾ? ಐಸಿಎಂಆರ್ ಅಧ್ಯಯನ ಏನು ಹೇಳುತ್ತೆ?
ವೈದ್ಯರು ಇರಲಿಲ್ಲ ಎಂಬ ವಿಚಾರವಾಗಿ ಮಾತನಾಡಿದ ಅವರು, ರಾತ್ರಿ ಪಾಳಯದಲ್ಲಿ ನಾಲ್ಕು ಜನ ವೈದ್ಯರು ಇದ್ದೆ ಇರುತ್ತಾರೆ. ವೈದ್ಯರು ಇರಲಿಲ್ಲ ಎಂಬ ಸುದ್ದಿ ಸತ್ಯಕ್ಕೆ ದೂರವಾದದ್ದು. ಜಯದೇವ ಆಸ್ಪತ್ರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ವಾಸಿಯಾಗಿದೆ. ಇಂತಹ ಸಂಸ್ಥೆಗೆ ಮಸಿ ಬಳೆಯುವ ಕೆಲಸ ಮಾಡುವುದು ಬೇಡ. ವಾರದ ಪ್ರಾರಂಭದಲ್ಲಿ ಹೆಚ್ಚಿನ ಸಂಖ್ಯೆಯ ರೋಗಿಗಳು ಆಸ್ಪತ್ರೆಗೆ ಬರುತ್ತಾರೆ. ನಮ್ಮಲ್ಲಿ 5ರಿಂದ 7% ವೈದ್ಯರ ಕೊರತೆ ಇದೆ. ಈ ಕಾರಣಕ್ಕಾಗಿಯೇ ಖಾಯಂ ಹುದ್ದೆಗಳನ್ನು ಕರೆಯಲಾಗಿದೆ. ಬೆಂಗಳೂರು, ಮೈಸೂರು ಎರಡು ಆಸ್ಪತ್ರೆಗಳಿಗೆ 25 ಖಾಯಂ ವೈದ್ಯರ ನೇಮಕಾತಿಗೆ ಕರೆ ನೀಡಿದ್ದೇವೆ. ಮುಂದಿನ ದಿನಗಳಲ್ಲಿ ಈ ಸಮಸ್ಯೆ ಕೂಡ ಬಗೆಹರಿಯಲಿದೆ ಎಂದು ಡಾ.ದಿನೇಶ್ ಹೇಳಿದ್ದಾರೆ.
ಇನ್ನು ಮೈಸೂರಿನ ಜಯದೇವ ಆಸ್ಪತ್ರೆಗೆ ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ್ ಪಾಟೀಲ್ ಭೇಟಿ ನೀಡಿ ರೋಗಿಗಳ ಸಾವಿನ ಸಂಬಂಧ ವೈದ್ಯರಿಂದ ಮಾಹಿತಿ ಪಡೆದರು. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಒಂದೇ ದಿನ 11 ಜನ ಸಾವಿನ ಬಗ್ಗೆ ಮಾಹಿತಿ ಕೇಳಿದ್ದೇನೆ. ಕಳೆದ ಹತ್ತಾರು ವರ್ಷಗಳ ಸಾವಿನ ಪ್ರಮಾಣ ನೋಡಿದರೆ 4 ರಿಂದ 5% ಇದೆ. ಜಯದೇವ ಆಸ್ಪತ್ರೆ ರಾಜ್ಯಕ್ಕೆ ಮಾತ್ರವಲ್ಲ ದೇಶಕ್ಕೆ ಮಾದರಿಯಾಗಿದೆ. ಸಾವಿನ ಬಗ್ಗೆ ಲೋಪ, ದೋಷ ಇದ್ದರೆ ವೈದ್ಯರ ಬಳಿ ಕೇಳಿ ಮಾಹಿತಿ ಕೊಡುತ್ತೇವೆ. ಸಾವಿನ ಬಗ್ಗೆ ನಿಖರ ಮಾಹಿತಿ ಕೇಳಿದ್ದೇನೆ. ಅವಲೋಕನ ಮಾಡುವಂತೆ ವೈದ್ಯರಿಗೆ ಹೇಳಿದ್ದೇನೆ ಎಂದರು.
ಇದನ್ನೂ ಓದಿ: ಏಕಾಏಕಿ ಕುಸಿದು ಬಿದ್ದು ಬಾಡಿ ಬಿಲ್ಡರ್ ಸಾವು: ಹೆತ್ತ ತಾಯಿ ಕಣ್ಣೆದುರೇ ಮಗನ ದುರಂತ ಅಂತ್ಯ!
ಜಯದೇವ ಆಸ್ಪತ್ರೆ ವಿರುದ್ಧ ತಪ್ಪು ಮಾಹಿತಿ ರವಾನೆಯಾದರೆ ಖಾಸಗಿ ಆಸ್ಪತ್ರೆಗಳಿಗೆ ಲಾಭವಾಗುತ್ತದೆ. ಕಡಿಮೆ ವೆಚ್ಚದಲ್ಲಿ ಚಿಕಿತ್ಸೆ ಕೊಡುವುದನ್ನ ನಾವು ಮಾಡಿದ್ದೇವೆ. ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಉಚಿತ ಚಿಕಿತ್ಸೆ ಕೊಡುತ್ತೇವೆ. ಕಲಬುರಗಿ, ಮೈಸೂರು ಎಲ್ಲವನ್ನೂ ಬೆಂಗಳೂರಿನಿಂದ ನಿರ್ವಹಣೆ ಮಾಡುತ್ತೇವೆ. ಹೀಗಾಗಿ ಕಲಬುರ್ಗಿ ಹಾಗೂ ಮೈಸೂರು ಜಯದೇವ ಆಸ್ಪತ್ರೆಗಳಿಗೆ ಸ್ವತಂತ್ರ ನಿರ್ಧಾರ ಕೈಗೊಳ್ಳಲು, ತೀರ್ಮಾನ ಮಾಡಲು ಅಧಿಕಾರ ಕೊಡಲು ತೀರ್ಮಾನ ಮಾಡಿದ್ದೇವೆ. ಕೆಲ ನಿರ್ಧಾರಗಳನ್ನು ಸ್ಥಳೀಯವಾಗಿಯೇ ಕೈಗೊಳ್ಳಬೇಕಿದೆ. ಇನ್ನೆರಡು ತಿಂಗಳಲ್ಲಿ ಸಿಬ್ಬಂದಿಗಳ ಕೊರತೆ ನಿವಾರಣೆಯಾಗುತ್ತದೆ ಎಂದು ಹೇಳಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.