ತಂದೆ-ತಾಯಿಯ ಮೂಲ ಹುಡುಕಿಕೊಂಡು ಮೈಸೂರಿಗೆ ಬಂದ ಸ್ವೀಡನ್ ಮಹಿಳೆ
ಆಕೆ ಭಾರತೀಯ ಮೂಲದ ಮಹಿಳೆ, ದೂರದ ಸ್ವೀಡನ್ ದೇಶದಿಂದ ಇದೀಗ ಪತಿಯ ಜೊತೆ ಭಾರತಕ್ಕೆ ಬಂದಿದ್ದಾರೆ. ಅದಕ್ಕೆ ಕಾರಣವೇ ರೋಚಕ. ಸಾಂಸ್ಕೃತಿಕ ನಗರಿ ಮೈಸೂರಿಗೆ ಬಂದಿರುವ ಆಕೆಯ ಕಥೆ ಏನು ? ಇಲ್ಲಿದೆ ವಿವರ.
ಮೈಸೂರು, ಫೆ.17: ಪತಿಯ ಜೊತೆ ನಿಂತಿರುವ ಈಕೆ ಜೋಲಿ. ವಯಸ್ಸು ಸ್ವೀಡನ್(Sweden)ದೇಶದವರು. ಇದೀಗ ಪತಿ ಎರಿಕ್ ಜೊತೆ ಸಾಂಸ್ಕೃತಿಕ ನಗರಿ ಮೈಸೂರಿಗೆ ಬಂದಿದ್ದಾರೆ. ಇವರು ಮೈಸೂರಿಗೆ(Mysore) ಬಂದಿರುವ ಕಾರಣ, ಆಕೆಯ ತಂದೆ ತಾಯಿಯ ಮೂಲ. ಹೌದು, ಜೋಲಿ ಅವರ ತಂದೆ-ತಾಯಿ ಮೂಲತಃ ಮೈಸೂರು ಹಾಗೂ ಮಂಡ್ಯದವರು. ಜೋಲಿಗೆ ಎಂಟು ವರ್ಷದ ಮಗುವಾಗಿದ್ದಾಗ ಆಕೆಯನ್ನು ಸ್ವೀಡನ್ ದೇಶದ ದಂಪತಿ ದತ್ತು ಪಡೆದುಕೊಂಡಿದ್ದರು. ಜೋಲಿಗೆ ನೆನಪಿರುವಂತೆ ಆಕೆಯ ಮೂಲ ಹೆಸರು ಜಾನು. ಆಕೆಯ ತಂದೆ ಮೈಸೂರಿನವರು, ತಾಯಿ ಮಂಡ್ಯ ಜಿಲ್ಲೆಯ ಮದ್ದೂರಿನವರು.
ಮೊದಲು ಜೋಲಿ ತಂದೆ ಅನುಮಾನಸ್ಪದವಾಗಿ ಸಾವನ್ನುಪ್ಪುತ್ತಾರೆ. ಆಗ ಆಕೆಯ ತಾಯಿ ಎರಡನೇ ಮದುವೆಯಾಗುತ್ತಾರೆ. ಹೀಗಾಗಿ ಜಾನು ಅಜ್ಜಿಯ ಆಶ್ರಯದಲ್ಲಿರುತ್ತಾರೆ. ಅಜ್ಜಿ ಸಹ ಕ್ಯಾನ್ಸರ್‌ನಿಂದ ಸಾವನ್ನಪ್ಪುತ್ತಾರೆ. ಆಗ ಜಾನುವನ್ನು ಬೆಂಗಳೂರಿನ ಬಾಲಮಂದಿರಕ್ಕೆ ಬಿಡಲಾಗುತ್ತದೆ. ಅಲ್ಲಿಂದ ಜಾನುವನ್ನು ಸ್ವೀಡನ್ ದಂಪತಿ ದತ್ತು ಪಡೆಯುತ್ತಾರೆ. ಜಾನು ಜೋಲಿಯಾಗಿ ಬದಲಾಗುತ್ತಾರೆ. ಜೋಲಿಗೆ ಮದುವೆ ಸಹ ಆಗುತ್ತದೆ. ಎಲ್ಲವೂ ಸರಿಯಾಗಿಯೇ ಇರುತ್ತದೆ. ಆದರೆ, ದಿನ ಕಳೆದಂತೆ ಜೋಲಿಗೆ ತಾನು ಮಾತ್ರ ಈ ರೀತಿ ಇದ್ದೇನೆ ಉಳಿದವರು ಬೇರೆ ರೀತಿ ಇದ್ದಾರೆ ಎನ್ನುವ ವಿಚಾರ ಕಾಡುತ್ತಿರುತ್ತದೆ.
ಈ ಹಿನ್ನಲೆ ಇದಕ್ಕೆ ಉತ್ತರ ಹುಡುಕಿಕೊಂಡು 2017ಕ್ಕೆ ಭಾರತದ ಕರ್ನಾಟಕಕ್ಕೆ ಬರುತ್ತಾರೆ. ಆಗ ಟಿವಿ9 ಮೂಲಕ ತನ್ನ ತಾಯಿ ತಂದೆಯ ಮೂಲ ಹುಡುಕಲು ಯತ್ನಿಸುತ್ತಾರೆ. ಟಿವಿ9 ಈ ಬಗ್ಗೆ ವಿಸ್ತೃತ ವರದಿ ಪ್ರಸಾರ ಮಾಡುತ್ತದೆ. ಇದರ ಫಲವಾಗಿ ಆಕೆಗೆ ತನ್ನ ತಾಯಿಯ ಮಾಹಿತಿ ಸಿಗುತ್ತದೆ. ತಾಯಿ ವಸಂತ ಎನ್ನುವಂತಹ ವಿಚಾರ ತಿಳಿಯುತ್ತದೆ. ಮದ್ದೂರಿನಲ್ಲಿ ಆಕೆಯ ಅಜ್ಜಿಯ ಸ್ನೇಹಿತೆ ಎಲ್ಲಾ ವಿವರಗಳನ್ನು ನೀಡುತ್ತಾರೆ. ಆದ್ರೆ, ತಾಯಿ ವಸಂತ ಅಥವಾ ಅಜ್ಜಿಯ ಯಾವೊಬ್ಬ ಸಂಬಂಧಿಕರು ಇರುವುದಿಲ್ಲ. ಈ ಹಿನ್ನೆಲೆಯಲ್ಲಿ ಜೋಲಿ ಈಗ ತನ್ನ ತಂದೆಯ ಮೂಲ ಹುಡುಕಲು ಶುರು ಮಾಡಿದ್ದಾರೆ.
ಇದನ್ನೂ ಓದಿ:ತಂದೆ-ತಾಯಿಯನ್ನು ಕಳೆದುಕೊಂಡಿದ್ದ ಯುವಕ ಬಸ್ ಕ್ಲೀನರ್ ಆಗಿದ್ದ, ಆದ್ರೆ, ಲವ್ನಲ್ಲಿ ಬಿದ್ದು ದುರಂತ ಅಂತ್ಯ ಕಂಡ
ಜೋಲಿಯ ಹುಡುಕಾಟಕ್ಕೆ ಪತಿ ಎರಿಕ್ ಹಾಗೂ ಪುಣೆಯ ಎನ್‌ಜಿಓದ ಸಂಸ್ಥಾಪಕಿ ಹಾಗೂ ವಕೀಲೆ ಅಂಜಲಿ ಪವಾರ್ ಸಾಥ್ ಕೊಟ್ಟಿದ್ದಾರೆ. ಇವರೆಲ್ಲಾ ಸಾಂಸ್ಕೃತಿಕ ನಗರಿ ಮೈಸೂರಿಗೆ ಬಂದು ತಂದೆಯ ಕಡೆಯವರ ಹುಡುಕಾಟದಲ್ಲಿ ತೊಡಗಿದ್ದಾರೆ. ಆದರೆ, ಜಾನು ಅಲಿಯಾಸ್ ಜೋಲಿ ಹುಡುಕಾಟ ಯಾವುದೇ ಫಲ ನೀಡಿಲ್ಲ. ಇದೆಲ್ಲಾ ಆಗಿರುವುದು 80ರ ದಶಕದಲ್ಲಿ, ಮೇಲಾಗಿ ಜಾನು ತಂದೆ ಮೈಸೂರಿನವರು ಎನ್ನುವುದು ಮಾತ್ರ ಗೊತ್ತು. ಆದ್ರೆ, ಅವರ ಹೆಸರಾಗಲಿ ಊರಾಗಲಿ ಬಡಾವಣೆಯಾಗಲಿ ಏನು ಗೊತ್ತಿಲ್ಲ. ಇದರಿಂದ ಜಾನುವಿನ ಹುಡುಕಾಟಕ್ಕೆ ಹಿನ್ನೆಡೆಯಾಗಿದೆ.
ಆದರೂ ಜಾನು, ಆಕೆಯ ಪತಿ, ಎನ್‌ಜಿಓನ ಅಂಜಲಿಯಾಗಲಿ ಇದನ್ನು ಇಷ್ಟಕ್ಕೆ ಬಿಡಲು ಸಿದ್ದರಿಲ್ಲ. ಶತಾಯಗತಾಯ ತಂದೆಯ ಮೂಲ ಹುಡುಕಲು ಮುಂದಾಗಿರುವ ಇವರು, ಟಿವಿ9 ಮೂಲಕ ಜನರಲ್ಲೂ ಮನವಿ ಮಾಡಿದ್ದಾರೆ. ಈ ರೀತಿಯ ಘಟನೆ ಬಗ್ಗೆ ಯಾರಿಗಾದರೂ ಮಾಹಿತಿ ಇದ್ದರೆ ತಿಳಿಸಿ ಎಂದು. ಒಟ್ಟಾರೆ ದೂರ ಸ್ವೀಡನ್ ಮಹಿಳೆಯೊಬ್ಬರು ತನ್ನ ಬೇರನ್ನು ಹುಡುಕಿ ಬಂದಿರುವುದು ಮಾತ್ರವಲ್ಲ ಅದನ್ನು ತಿಳಿದಕೊಳ್ಳಲೇಬೇಕು ಎಂಬ ಧೃಡ ನಿರ್ಧಾರಕ್ಕೆ ಬಂದಿರೋದು ಅತ್ಯಂತ ಅಪರೂಪದಲ್ಲಿ ಅಪರೂಪವೇ ಸರಿ ಆಕೆಯ ಕನಸು ನನಸಾಗಲಿ ಆಕೆಗೆ ಆಕೆಯ ತಂದೆಯ ಮೂಲದ ಮಾಹಿತಿ ಸಿಗುವಂತಾಗಲಿ ಎನ್ನುವುದೇ ಟಿವಿ9 ಆಶಯ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ